ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ದಸರಾ ಸಂಭ್ರಮಕ್ಕೆ ಕಂಬಾರ ಚಾಲನೆ

ಹತ್ತು ದಿನಗಳ ಕಾಲ ನಡೆಯುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಶನಿವಾರ ಚಾಮುಂಡಿಬೆಟ್ಟದಲ್ಲಿ ವರ್ಣರಂಜಿತ ಚಾಲನೆ ದೊರೆಯಿತು.ಚಾಮುಂಡೇಶ್ವರಿ...

Mainashree
Updated On : 5 Oct 2013, 10:43 am

ಕನ್ನಡಪ್ರಭ ವಾರ್ತೆ  ಮೈಸೂರು  ಅ.5
ಹತ್ತು ದಿನಗಳ ಕಾಲ ನಡೆಯುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಶನಿವಾರ ಚಾಮುಂಡಿಬೆಟ್ಟದಲ್ಲಿ ವರ್ಣರಂಜಿತ ಚಾಲನೆ ದೊರೆಯಿತು.
ಚಾಮುಂಡೇಶ್ವರಿ ದೇವಸ್ಥಾನದ ಎಡಪಾರ್ಶ್ವದಲ್ಲಿ ನಿರ್ಮಿಸಲಾಗಿದ್ದ ವೇದಿಕೆಯ ಪಕ್ಕದ ಬೆಳ್ಳಿ ರಥದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಬೆಳಗ್ಗೆ 10.44ರಿಂದ 11.07 ಗಂಟೆಯೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಪುಷ್ಪಾರ್ಚನೆ ಮಾಡಿ, ದೀಪ ಬೆಳಗಿಸುವ ಮೂಲಕ 403ನೇ ದಸರೆಗೆ ವಿದ್ಯುಕ್ತ ಚಾಲನೆ ನೀಡಿದರು.
ಜಿಲ್ಲೆಯವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವುದು, ಈ ಬಾರಿ ಮಳೆಯಾಗಿ ಎಲ್ಲ ಜಲಾಶಯಗಳು ಭರ್ತಿಯಾಗಿರುವುದರಿಂದ ಆಡಳಿತಾರೂಢ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಮೇರೆ ಮೀರಿದ ಸಡಗರ ಕಾರ್ಯಕ್ರಮ ಕಳೆಗಟ್ಟುವಂತೆ ಮಾಡಿತ್ತು.  ದಸರೆ ಉತ್ಸವದಲ್ಲೂ ಅವರು ಪಟಾಕಿ ಸಿಡಿಸುವ ಮೂಲಕ ಅದನ್ನು ವ್ಯಕ್ತಪಡಿಸಿದರು.

ಕಂಬಾರರ ಕಿವಿಮಾತು
ಬದಲಾವಣೆಯ ಭರಾಟೆಯಲ್ಲಿ ಇಂದು ಅನಗತ್ಯವಾದುದರ ಜತೆಗೆ ಸಾರ್ವಕಾಲಿಕ ಮೌಲ್ಯಗಳುಳ್ಳ ಗತದ ಅನರ್ಘ್ಯ ಅಂಶಗಳು ಅಳಿದು ಹೋಗದಂತೆ ಎಚ್ಚರ ವಹಿಸುವುದೂ ಬಲು ಮುಖ್ಯ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಹೇಳಿದರು.
ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿ, ಹಾಗೆಯೇ ಹೊಸತರಲ್ಲೂ ಇರುವ ನಮ್ಮ ಏಳಿಗೆಗೆ ಅನುಕೂಲವಾದದ್ದನ್ನು ಆಯ್ದು ಕೊಳ್ಳಬೇಕೇ ಹೊರತು ಮಾರಕವಾದುದನ್ನಲ್ಲ. ಈ ವಿವೇಕ ಸಾಮೂಹಿಕವಾಗಿ ನಮಗಿಲ್ಲದಿದ್ದರೆ ನಾವು ಯಾವುದೋ ಒಂದು ಕುರುಡು ಶಕ್ತಿಯ ಕೈಗೊಂಬೆಗಳಾಗಿ ಬಿಡುತ್ತೇವೆ ಎಂದರು. ಹಲವು ವರ್ಷಗಳ ಕಾಲ ಅಸ್ಥಿರ ಸರ್ಕಾರಗಳಿದ್ದ ಪರಿಣಾಮವಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಇತ್ತೀಚೆಗೆ ಜನತೆಯ ಸಾಮೂಹಿಕ ಇಚ್ಛಾಶಕ್ತಿಯಂತೆ ಮೈಸೂರಿನವರಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದು ಈ ವರ್ಷದ ದಸರಾ ಮಹೋತ್ಸವಕ್ಕೆ ಹೆಚ್ಚಿನ ಮಹತ್ವವನ್ನೂ, ಕಳೆಯನ್ನೂ ತಂದಿದೆ. ಹಳತು ಹೊಸತುಗಳ ಶ್ರೇಷ್ಠ ಮೌಲ್ಯಗಳ ಕೂಡಲಸಂಗಮವಾದ ಈ ವರ್ಷದ ಮಹೋತ್ಸವವು ಜನತೆ ಮತ್ತು ಸರ್ಕಾರವೆರಡಕ್ಕೂ ಮಂಗಳ ಪರಂಪರೆಗಳ ಶುಭಾರಂಭವಾಗಲೆಂದು ಹಾರೈಸುತ್ತೇನೆ ಎಂದರು.


10 ದಿನಗಳ ಪ್ರದರ್ಶನಹಬ್ಬ
ದಸರೆಗೆ ಚಾಲನೆ ಸಿಕ್ಕ ನಂತರ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಹಾರ ಮೇಳ, ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿ, ದೊಡ್ಡಕೆರೆ ಮೈದಾನದಲ್ಲಿ ವಸ್ತು ಪ್ರದರ್ಶನ, ಕಲಾ ಮಂದಿರದಲ್ಲಿ ಚಿತ್ರೋತ್ಸವ, ಕರ್ಜನ್ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ, ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಕ್ರೀಡಾಕೂಟ, ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಜಾಯ್ ರೈಡಿಂಗ್, ವಿದ್ಯುತ್ ದೀಪಾಲಂಕಾರಗಳಿಂದ ಝಗಮಗಿಸುವ ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಪ್ರವಾಸೋದ್ಯಮ ಕಾರ್ಯಕ್ರಮಗಳು ಆರಂಭವಾದವು.


ಖಾಸಗಿ ದರ್ಬಾರ್
ಅರಮನೆಯ ಅಂಬಾವಿಲಾಸದಲ್ಲಿ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ರತ್ನಖಚಿತ ಸಿಂಹಾಸನಾರೂಢರಾಗುವ ಮೂಲಕ ಒಂಬತ್ತು ದಿನಗಳ ನವರಾತ್ರಿ ಖಾಸಗಿ ದರ್ಬಾರ್‌ಗೆ ಚಾಲನೆ ದೊರೆಯಿತು. ಅರಮನೆಯಲ್ಲಿ ಗುರುಗಳ ಸಾನ್ನಿಧ್ಯದಲ್ಲಿ ಬೆಳಗ್ಗೆಯಿಂದ ಶುಭ ಕಾರ್ಯಕ್ರಮಗಳು ಆರಂಭವಾದವು. ಬೆಳಗಿನ ಜಾವ 5.30ಕ್ಕೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಎಣ್ಣೆಶಾಸ್ತ್ರ, ಮಂಗಳಸ್ನಾನ ಪೂರೈಸಿ ಚಾಮುಂಡಿ ತೊಟ್ಟಿಯಲ್ಲಿ ಕಂಕಣ ಧಾರಣೆ ಸ್ವೀಕರಿಸಿದರು. ವಾಣಿವಿಲಾಸ ದೇವರ ಮನೆಯಲ್ಲಿ ಶ್ರೀ ಪ್ರಮೋದಾದೇವಿ ಒಡೆಯರ್ ಅವರು ದೇವರಿಗೆ ನಮಿಸಿ ಕಂಕಣ ಧಾರಣೆ ಸ್ವೀಕರಿಸಿದರು.

 ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement