ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಲ್ಲೇಶ್ವರಂ ಸ್ಫೋಟ ಶಂಕಿತರ ಸೆರೆ

ಆಡ್ವಾಣಿ ಪೈಪ್ ಬಾಂಬ್ ಪ್ರಕರಣ, ಬೆಂಗಳೂರು ಬಿಜೆಪಿ ಕಚೇರಿ ಸ್ಫೋಟ, ಬಿಜೆಪಿ ಮತ್ತು ಸಂಘಪರಿವಾರ ನಾಯಕರ ಹತ್ಯೆ ಮತ್ತಿತರ ಪ್ರಕರಣಗಳಿಗೆ ಸಂಬಂಧಿಸಿದ...

Mainashree
Updated On : 5 Oct 2013, 10:44 am

ಚೆನ್ನೈ: ಆಡ್ವಾಣಿ ಪೈಪ್ ಬಾಂಬ್ ಪ್ರಕರಣ, ಬೆಂಗಳೂರು ಬಿಜೆಪಿ ಕಚೇರಿ ಸ್ಫೋಟ, ಬಿಜೆಪಿ ಮತ್ತು ಸಂಘಪರಿವಾರ ನಾಯಕರ ಹತ್ಯೆ ಮತ್ತಿತರ ಪ್ರಕರಣಗಳಿಗೆ ಸಂಬಂಧಿಸಿದ ಇಬ್ಬರು ಉಗ್ರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಂಧ್ರದ ಚಿತ್ತೂರು ಜಿಲ್ಲೆಯ ಪುತ್ತೂರಿನಲ್ಲಿ ಶನಿವಾರ ಬರೋಬ್ಬರಿ 12 ಗಂಟೆಗೂ ಹೆಚ್ಚು ಕಾಲ ನಡೆದ ಗುಂಡಿನ ಚಕಮಕಿ ಬಳಿಕ ತಮಿಳುನಾಡು ಮತ್ತು ಆಂಧ್ರ ಪೊಲೀಸರ ತಂಡ ಈ ಉಗ್ರರನ್ನು ಬಂಧಿಸಿದೆ.
ಪನ್ನಾ ಇಸ್ಮಾಯಿಲ್ ಹಾಗೂ ಬಿಲಾಲ್ ಮಲಿಕ್ ಬಂಧಿತ ಉಗ್ರರು. ಈ ಮೂಲಕ ನಾಲ್ವರು ಶಂಕಿತರಲ್ಲಿ ಮೂವರನ್ನು ಬಂಧಿಸಿದಂತಾಗಿದೆ. ಒಬ್ಬ ಮಾತ್ರ ನಾಪತ್ತೆಯಾಗಿದ್ದಾನೆ ಎಂದು ತಮಿಳುನಾಡು ಡಿಜಿಪಿ ಕೆ. ರಾಮಾನುಜಂ ತಿಳಿಸಿದ್ದಾರೆ.
ಬಾಡಿಗೆ ಮನೆಯಲ್ಲಿ ಅವಿತಿದ್ದರು: ಶುಕ್ರವಾರವಷ್ಟೇ ಫಕ್ರುದ್ದೀನ್ ಎಂಬಾತನನ್ನು ತಮಿಳು ನಾಡು ಪೊಲೀಸರು ಬಂಧಿಸಿದ್ದರು.  11
ತಿರುಪತಿ ಟಾರ್ಗೆಟ್?
ಉಗ್ರರು ಅವಿತಿದ್ದ ಸ್ಥಳವು ತಿರುಪತಿ ದೇವಾಲಯದಿಂದ ಕೇವಲ 40 ಕಿ.ಮೀ. ದೂರದಲ್ಲಿತ್ತು. ವೆಂಕಟೇಶ್ವರ ದೇವಸ್ಥಾನದ ವಾರ್ಷಿಕ ಉತ್ಸವವಾದ ಬ್ರಹ್ಮೋತ್ಸವಕ್ಕೆ ಶನಿವಾರ ಚಾಲನೆ ದೊರೆತಿದೆ. ಹಾಗಾಗಿ ತಿರುಪತಿಯ ದೇವಸ್ಥಾನವು ಉಗ್ರರ ಟಾರ್ಗೆಟ್ ಆಗಿತ್ತೇ ಎಂಬ ಭೀತಿ ಅಲ್ಲಿನ ಜನರಲ್ಲಿ ಆವರಿಸಿದೆ. ಆದರೆ ಇದು ವಿಚಾರಣೆ ಬಳಿಕ ಗೊತ್ತಾಗಲಿದೆ ಎಂದು ಆಂಧ್ರ ಪೊಲೀಸರು ಹೇಳಿದ್ದಾರೆ.

ಈತ ನೀಡಿದ ಸುಳಿವಿನ ಮೇರೆಗೆ ಪೊಲೀಸರು ಶನಿವಾರ ಪುತ್ತೂರಿನಲ್ಲಿದ್ದ ಮನೆಯೊಂದನ್ನು ಸುತ್ತುವರಿದರು. ಒಂದು ತಿಂಗಳ ಹಿಂದಷ್ಟೇ ಉಗ್ರರು ಇಲ್ಲಿನ ಮನೆಯೊಂದನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಪೊಲೀಸರು ಮನೆಯನ್ನು ಸುತ್ತುವರಿಯುತ್ತಿದ್ದಂತೆ ಮನೆಯೊಳಗೆ ಅವಿತಿದ್ದ ಉಗ್ರರು ಒಂದೇ ಸಮನೆ ಪೊಲೀಸರತ್ತ ಗುಂಡು ಹಾರಿಸತೊಡಗಿದರು. 12 ಗಂಟೆಗಳ ಕಾಲ ಈ ಚಕಮಕಿ ಮುಂದುವರಿಯಿತು. ಇದೇ ವೇಳೆ, ಮನೆಯೊಳಗೆ ಮಲಿಕ್‌ನ ಪತ್ನಿ ಮತ್ತು ಮೂವರು ಮಕ್ಕಳೂ ಇದ್ದಾರೆ ಎಂಬುದು ತಿಳಿದು, ಅವರನ್ನು ಹೊರಕ್ಕೆ ಕಳುಹಿಸುವಂತೆ ಸೂಚಿಸಲಾಯಿತು. ಸ್ವಲ್ಪ ಹೊತ್ತಿನ ಬಳಿಕ ಅವರು ಸುರಕ್ಷಿತವಾಗಿ ಹೊರಬಂದರು. ಈ ವೇಳೆ ಕಾರ್ಯಾಚರಣೆಯಲ್ಲಿ ತಮಿಳುನಾಡು ಪೊಲೀಸರಿಗೆ ಆಂಧ್ರ ಪೊಲೀಸರೂ ನೆರವಾದರು.
ಇನ್ಸ್‌ಪೆಕ್ಟರ್ ಗಂಭೀರ: ಕಾರ್ಯಾಚರಣೆ ಬಳಿಕ ಇಬ್ಬರನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾದರು. ಪೊಲೀಸರ ಗುಂಡಿಗೆ ಪನ್ನಾ ಇಸ್ಮಾಯಿಲ್‌ಗೆ ಗಾಯವಾಗಿದೆ. ಇದೇ ವೇಳೆ ಉಗ್ರರು ಹಾರಿಸಿದ ಗುಂಡಿನಿಂದಾಗಿ ಪೊಲೀಸ್ ಇನ್ಸ್‌ಪೆಕ್ಟರ್‌ವೊಬ್ಬರಿಗೆ ಗಂಭೀರ ಗಾಯವಾಗಿದ್ದು ಅವರು ರಾಮಚಂದ್ರ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುರ್ತು ಚಿಕಿತ್ಸಾ ಘಟಕದಲ್ಲಿರುವ ಅವರ ಸ್ಥಿತಿ ಗಂಭೀರವಾಗಿದ್ದರೂ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
 ಇದೇ ವೇಳೆ, ಉಗ್ರರು ಅಡಗಿದ್ದ ಮನೆಯ ಹಿಂಭಾಗದಲ್ಲಿ ಬಿಲಾಲ್ ಮಲಿಕ್‌ನ ಸಂಬಂಧಿಯ ಮನೆಯಿದ್ದು, ಅಲ್ಲಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ, ಯಾವ ರೀತಿಯ ಶಸ್ತ್ರಾಸ್ತ್ರಗಳು ಎಂಬ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ.
ಬಿಜೆಪಿ ಕಚೇರಿ ಸ್ಫೋಟದಲ್ಲೂ ಭಾಗಿ: ಏಪ್ರಿಲ್ 17ರಂದು ಬೆಂಗಳೂರಿನ ಬಿಜೆಪಿ ಕಚೇರಿ ಸಮೀಪ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲೂ ಭಾಗಿಯಾಗಿರುವ ಆರೋಪ ಫಕ್ರುದ್ದೀನ್, ಬಿಲಾಲ್ ಮಲಿಕ್, ಪನ್ನಾ ಇಸ್ಮಾಯಿಲ್ ಮೇಲಿದೆ. ಇನ್ನಿತರ ಆರೋಪಿಗಳಾದ ತಮಿಳುನಾಡಿನ ಕೆ.ಪೀರ್ ಮೊಯ್ದೀನ್, ಜೆ. ಬಶೀರ್ ಅಹ್ಮದ್, ಸೈಯದ್ ಮೊಹಮ್ಮದ್ ಬುಹಾರಿ ಅಲಿಯಾಸ್ ಕಿಚನ್ ಬುಹಾರಿಯನ್ನು ಈಗಾಗಲೇ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.
ಸಂಘಪರಿವಾರ, ಬಿಜೆಪಿ ನಾಯಕರ ಹತ್ಯೆಗೈದಿದ್ದರು: ಬಿಜೆಪಿ ನಾಯಕ ವಿ. ರಮೇಶ್ ಅವರ ಹತ್ಯೆ, ಹಿಂದೂ ಮುನ್ನಾನಿ ನಾಯಕ ವೆಳ್ಳೈಯಪ್ಪನ್ ಹಾಗೂ ತಮಿಳುನಾಡಿನ ಸಂಘಪರಿವಾರದ ಇತರೆ ನಾಯಕರ ಹತ್ಯೆ ಸಂಬಂಧ ಫಕ್ರುದ್ದೀನ್, ಪನ್ನಾ, ಬಿಲಾಲ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇವರನ್ನು ಪತ್ತೆಹಚ್ಚಲು ವಿಫಲರಾಗಿದ್ದ ಪೊಲೀಸರು ಉಗ್ರರ ಬಗ್ಗೆ ಮಾಹಿತಿ ನೀಡಿದವರಿಗೆ  5 ಲಕ್ಷ ನಗದು ಬಹುಮಾನ ಘೋಷಿಸಿ ಒಂದು ಲಕ್ಷ ಪೋಸ್ಟರ್‌ಗಳನ್ನು ಅಂಟಿಸಿದ್ದರು.
ಏನಿದು ಆಡ್ವಾಣಿ ಪೈಪ್ ಬಾಂಬ್ ಪ್ರಕರಣ?: 2011ರಲ್ಲಿ ಆಡ್ವಾಣಿ ಅವರು ಮಧುರೆಯಲ್ಲಿ 'ಜನ ಚೇತನ ಯಾತ್ರೆ' ಕೈಗೊಂಡಿದ್ದರು. ಆಡ್ವಾಣಿ ಯಾತ್ರೆ ಸಾಗುವ ದಾರಿಯಲ್ಲಿ ಅಂದರೆ ಆಲಂ ಪಟ್ಟಿ ಎಂಬಲ್ಲಿನ ಸೇತುವೆಯ ಕೆಳಗೆ ಉಗ್ರರು ಪೈಪ್ ಬಾಂಬ್‌ಗಳನ್ನು ಇಟ್ಟಿದ್ದರು. ಅದೃಷ್ಟವಶಾತ್ ಯಾತ್ರೆಯು ಸೇತುವೆಯ ಬಳಿ ಬರುವ ಮುನ್ನವೇ ಪೊಲೀಸರು ಈ ಪೈಪ್ ಬಾಂಬ್‌ಗಳನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದ್ದರು. ಈ ಪ್ರಕರಣ ಸಂಬಂಧ 10 ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿತ್ತು. ಅವರಲ್ಲಿ ಶನಿವಾರ ಬಂಧಿತರಾದ ಉಗ್ರರೂ ಸೇರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement