ಉಗ್ರರ ವಿಚಾರಣೆಗೆ ತಮಿಳುನಾಡಿಗೆ ತೆರಳಿದ ಪೊಲೀಸರ ವಿಶೇಷ ತಂಡ
ಬೆಂಗಳೂರು: ತಮಿಳುನಾಡು ಹಾಗೂ ಆಂಧ್ರಪ್ರದೇಶ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿತರಾದ ಅಲ್-ಉಮಾ ಸಂಘಟನೆ ಶಂಕಿತ ಉಗ್ರರ ವಿಚಾರಣೆ ನಡೆಸಲು ಬೆಂಗಳೂರು ಪೊಲೀಸರ ವಿಶೇಷ ತಂಡ ತಮಿಳುನಾಡಿಗೆ ತೆರಳಿದೆ.
ಮಲ್ಲೇಶ್ವರ ಬಿಜೆಪಿ ಕಚೇರಿ ಬಳಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಪೊಲೀಸ್ ಫಕ್ರುದ್ದೀನ್, ಬಿಲಾಲ್ ಮಲೀಕ್ ಹಾಗೂ ಪನ್ನಾ ಇಸ್ಮಾಯಿಲ್ ವಿಚಾರಣೆಗಾಗಿ ಒಂದು ವಿಶೇಷ ತಂಡ ತಮಿಳುನಾಡಿಗೆ ತೆರಳಿರುವ ವಿಷಯವನ್ನು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಬಂಧಿತರ ಪೈಕಿ ಪೊಲೀಸ್ ಫಕ್ರುದ್ದೀನ್ನನ್ನು ತಮಿಳುನಾಡು ಪೊಲೀಸರು ವಿಚಾರಣೆಗೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಬಿಲಾಲ್ ನ್ಯಾಯಾಂಗ ವಶದಲ್ಲಿದ್ದಾನೆ. ಬಂಧನ ಕಾರ್ಯಾಚರಣೆ ವೇಳೆ ಗುಂಡೇಟಿನಿಂದ ಗಾಯಗೊಂಡಿರುವ ಪನ್ನಾ ಇಸ್ಮಾಯಿಲ್ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಮಿಳುನಾಡು ಪೊಲೀಸರ ವಶದಲ್ಲಿರುವ ಪೊಲೀಸ್ ಫಕ್ರುದ್ದೀನ್ನನ್ನು ಅಲ್ಲಿನ ಪೊಲೀಸರೊಂದಿಗೆ ಬೆಂಗಳೂರಿನ ವಿಶೇಷ ತಂಡ ವಿಚಾರಣೆಗೆ ನಡೆಸುವ ಸಾಧ್ಯತೆ ಇದೆ. ಬಿಜೆಪಿ ವರಿಷ್ಠರಾದ ಎಲ್.ಕೆ.ಆಡ್ವಾಣಿ ಹಾಗೂ ತಮಿಳುನಾಡಿನ ಬಿಜೆಪಿ ಮುಖಂಡರಾದ ವಿ.ರಮೇಶ್ ಹಾಗೂ ವೆಳ್ಳಿಯಪ್ಪನ್ ಕೊಲೆ ಪ್ರಕರಣದಲ್ಲಿ ಬಂಧಿತ ಮೂವರ ಕೈವಾಡ ಇರುವ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ಮೊದಲು ವಿಚಾರಣೆಗೆ ಒಳಪಡಿಸಲಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಸಂಬಂಧ ವಿಚಾರಣೆ ನಡೆಸಲು ಬಾಡಿ ವಾರೆಂಟ್ ಆಧಾರದ ಮೇಲೆ ಮೂವರನ್ನು ನಗರಕ್ಕೆ ಕರೆ ತಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ.