ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೊನೆಗೂ ಪ್ರೊ.ಜಿ.ಎಚ್.ನಾಯಕರಿಗೆ ಸರ್ಕಾರದಿಂದ ಪಂಪ ಪ್ರಶಸ್ತಿ ಪ್ರದಾನ

Mainashree
Updated On : 7 Oct 2013, 11:29 am

ಕ.ಪ್ರ.ವಾರ್ತೆ  ಮೈಸೂರು  ಅ. 6-
ನಾಡಿನ ಪ್ರಸಿದ್ಧ ವಿಮರ್ಶಕ ಪ್ರೊ. ಜಿ.ಎಚ್. ನಾಯಕ ಅವರಿಗೆ ರಾಜ್ಯ ಸರ್ಕಾರ ಕೊನೆಗೂ ಪಂಪ ಪ್ರಶಸ್ತಿಯನ್ನು ಭಾನುವಾರ ಪ್ರದಾನ ಮಾಡಿ, ಗೌರವಿಸಿತು. ಸರಸ್ವತಿಪುರಂನಲ್ಲಿರುವ ಜಿ.ಎಚ್. ನಾಯಕರ ನಿವಾಸಕ್ಕೆ ತೆರಳಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಪ್ರಶಸ್ತಿ ಫಲಕ, ನಾಟ್ಯ ಸರಸ್ವತಿ ವಿಗ್ರಹ ಹಾಗೂ 3 ಲಕ್ಷ ಚೆಕ್ ನೀಡಿ ಸನ್ಮಾನಿಸಿದರು.
ನಂತರ ಮಾತನಾಡಿದ ಸಚಿವೆ ಉಮಾಶ್ರೀ, 'ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಜಿ.ಎಚ್. ನಾಯಕರು ಅತ್ಯುತ್ತಮ ಸೇವೆ  ಸಲ್ಲಿಸಿದ್ದಾರೆ. ಅವರ ಮೌಲ್ಯಯುತ ಜೀವನಕ್ಕೆ ಗೌರವ ಕೊಡಬೇಕು. ಬಹಳ ದಿನಗಳ ಹಿಂದೆಯೇ ಪ್ರಶಸ್ತಿ ಪ್ರದಾನ ಕಾರ್ಯ ನಡೆಯಬೇಕಿತ್ತು. ಯಾಕೆ ವಿಳಂಬವಾಯಿತು ಎನ್ನುವುದಕ್ಕೆ ನಮ್ಮ ಸರ್ಕಾರದ ಬಳಿ ಉತ್ತರವಿಲ್ಲ. ನಾಯಕರಿಗೆ ತೃಪ್ತಿ ನೀಡುವಂಥ ರೀತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದೇವೆ' ಎಂದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ. ನಾಯಕ ಅವರು, ಪ್ರಶಸ್ತಿಗೆ ಇರಬೇಕಾದ ಎಲ್ಲ ಆರ್ಹತೆಗಳಿಗೂ ನಾನು ಯೋಗ್ಯನಾಗಿದ್ದೇನೆ ಎಂದು ಭಾವಿಸಿದ್ದೇನೆ. ಸರ್ಕಾರ ಯಾರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿದೆಯೋ ಅವರಿಗೆ ಹಾಗೂ ಪ್ರಶಸ್ತಿ ಘೋಷಿಸಿದವರಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದರು. ಬೇರೆಡೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸುವುದಕ್ಕಿಂತ, ನಮ್ಮ ಮನೆಯಲ್ಲಿ ಆಪ್ತರ ಬಳಗದ ಮುಂದೆ ಪ್ರಶಸ್ತಿ ಸ್ವೀಕರಿಸಿದ್ದು ತೃಪ್ತಿ ತಂದಿದೆ ಎಂದರು.

'ಕನ್ನಡಪ್ರಭ' ವರದಿ ಮಾಡಿತ್ತು
ಪ್ರೊ. ಜಿ.ಎಚ್. ನಾಯಕರಿಗೆ 'ಪಂಪ ಪ್ರಶಸ್ತಿ' ನೀಡುವಲ್ಲಿ ಸರ್ಕಾರ ವಿಳಂಬ ಮಾಡುತ್ತಿರುವ ಬಗ್ಗೆ ಆ.24 ರಂದು 'ಕನ್ನಡಪ್ರಭ' ಮುಖಪುಟದಲ್ಲಿ 'ಪಂಪ ಪ್ರಶಸ್ತಿಗೆ ನಾಯಕತ್ವ ಯಾವಾಗ?' ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ವರದಿಯೊಂದನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತ. ಅಂದಿನಿಂದ ಅಧಿಕಾರಿಗಳು ಕಾರ್ಯಕ್ರಮದ ಆಯೋಜನೆಗೆ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಅಲ್ಲದೇ ಉಮಾಶ್ರೀ ಅವರೂ ಈ ಸಂಬಂಧವಾಗಿ ನಾಯಕರ ಮನಗೆ ಭೇಟಿ ನೀಡಿದ್ದರು. ದಸರಾ ಸಮಾರಂಭದಲ್ಲಿ ರಾಜ್ಯ ವಿದ್ವಾನ್ ಪ್ರಶಸ್ತಿಯ ಜತೆಗೆ ಪಂಪ ಪ್ರಶಸ್ತಿ ಪ್ರದಾನ ಮಾಡಲು ಸರ್ಕಾರ ಬಯಸಿತ್ತು. ಆದರೆ ದಸರಾ ಆಚರಣೆಗೆ ತಮ್ಮ ವಿರೋಧ ಇರುವುದರಿಂದ ದಸರೆ ಸಮಾರಂಭದಲ್ಲಿ ಸ್ವೀಕರಿಸುವುದಿಲ್ಲ ಎಂದು ಪ್ರೊ. ನಾಯಕರು ನಿರಾಕರಿಸಿದ್ದರು. ಹೀಗಾಗಿ ಅವರ ಮನೆಗೇ ತೆರಳಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement