ಜಲಾಪಘಾತಕ್ಕೆ 11 ಮಂದಿ ಸಾವು
ಭಾನುವಾರ ಅಕ್ಷರಶಃ ಸೂತಕ ದಿನವಾಗಿ ಪರಿಣಮಿಸಿತು. ಒಂದೆಡೆ ಗಗನಚುಕ್ಕಿ ಜಲಪಾತಕ್ಕೆ..
ಮಂಗಳೂರು/ಕೊಳ್ಳೇಗಾಲ/ದೊಡ್ಡಬಳ್ಳಾಪುರ: ಭಾನುವಾರ ಅಕ್ಷರಶಃ ಸೂತಕ ದಿನವಾಗಿ ಪರಿಣಮಿಸಿತು. ಒಂದೆಡೆ ಗಗನಚುಕ್ಕಿ ಜಲಪಾತಕ್ಕೆ ಬಿದ್ದು ನಾಲ್ವರು ಮೃತಪಟ್ಟರೆ, ಮತ್ತೊಂದೆಡೆ ನದಿಯಲ್ಲಿ ಸ್ನಾನಕ್ಕಿಳಿದು ಐವರು ಬಾಲಕರು ನೀರುಪಾಲಾಗಿದ್ದರೆ. ಇನ್ನೊಂದೆಡೆ ಕೆರೆಗೆ ತಾಯಿ, ಮಗಳು ಬಲಿಯಾಗಿದ್ದಾರೆ. ಹೀಗೆ ಒಟ್ಟು 11 ಜನರು ನೀರು ಪಾಲಾಗಿದ್ದಾರೆ.
ಮಂಗಳೂರು ನಗರದ ತಣ್ಣೀರುಬಾವಿಯ ಬಜ್ಜೋಡಿ ಕುದ್ರುವಿನಲ್ಲಿ ಸ್ನಾನಕ್ಕೆಂದು 8 ಬಾಲಕರು ಹೋಗಿದ್ದರು. ಇವರ ಪೈಕಿ ಐವರು ನದಿ ಪಾಲಾಗಿದ್ದಾರೆ. ಮೃತ ಬಾಲಕರನ್ನು ಸ್ಥಳೀಯರಾದ ಖಲಂದರ್(16), ರಾಜೇಶ್(17), ರಕ್ಷಿತ್(14), ಯಕ್ಷಿತ್(14) ಹಾಗೂ ಪ್ರಜ್ವಲ್(17) ಎಂದು ಗುರುತಿಸಲಾಗಿದೆ. ಇವರಲ್ಲಿ ಖಲಂದರ್, ಪ್ರಜ್ವಲ್ ಹಾಗೂ ಇನ್ನೊಬ್ಬನ ಶವ ನದಿ ಕಿನಾರೆಯಲ್ಲಿ ರಾತ್ರಿ ಪತ್ತೆಯಾಗಿದೆ. 8 ಬಾಲಕರು ನದಿ ಕಿನಾರೆಯಲ್ಲಿ ಸಂಜೆ ಹುಲಿ ವೇಷ ಕುಣಿತದ ಪ್ರಾಕ್ಟೀಸ್ ಮಾಡುತ್ತಿದ್ದರು. ಬಳಿಕ ಸ್ನಾನ ಮಾಡಲೆಂದು ನದಿ ನೀರಿಗೆ ಇಳಿದಿದ್ದರು. ಈ ಸಂದರ್ಭದಲ್ಲಿ ನದಿಯಲ್ಲಿನ ಸುಳಿ 8 ಮಂದಿಯನ್ನು ಸೆಳೆದಿದೆ. ಆಗ ನೀರಿಗಿಳಿದಿದ್ದವರ ಪೈಕಿ ಜಗದೀಶ್, ಮಾರಿಮುತ್ತು ಹಾಗೂ ಇನ್ನೊಬ್ಬ ಈಜಿ ದಡ ಸೇರಿದ್ದಾರೆ. ಉಳಿದವರು ನೀರುಪಾಲಾಗಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರ ತಂಡ ಆಗಮಿಸಿದೆ. ರಾತ್ರಿ 7.30ರ ವರೆಗೆ ಅಗ್ನಿಶಾಮಕದಳ ನೀರಿನಲ್ಲಿ ಕಣ್ಮರೆಯಾದವರ ಹುಡುಕಾಟ ನಡೆಸಿದೆ. ರಾತ್ರಿಯಾದ ಹಿನ್ನೆಲೆಯಲ್ಲಿ ಸೋಮವಾರ ಮುಂಜಾನೆ 5.30ಕ್ಕೆ ಕಾರ್ಯಾಚರಣೆ ಮುಂದುವರಿಸಲಿದೆ.
ಗಗನಚುಕ್ಕಿ ಜಲಪಾತಕ್ಕೆ ನಾಲ್ವರು ಬಲಿ: ವಿಹಾರಕ್ಕಾಗಿ ಆಗಮಿಸಿದ 3 ಯುವಕರು, ಮಹಿಳೆ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಕೊಳ್ಳೇಗಾಲ ತಾಲೂಕಿನ ದರ್ಗಾದ ಗಗನಚುಕ್ಕಿ ಜಲಪಾತದಲ್ಲಿ ಮಧ್ಯಾಹ್ನ ಜರುಗಿದೆ.
ಮೃತರು ಚಾಮರಾಜನಗರ ಜಿಲ್ಲೆಯ ಕೆಸ್ತೂರು ಗ್ರಾಮದ ಹೇಮಂತ(18), ವಸಂತ (20) ಹಾಗೂ ಹೊಂಗನೂರು ಗ್ರಾಮದ ಚಂದ್ರಕಾಂತ(22). ಈ ಮೂವರು ಸಂಬಂಧಿಗಳಾಗಿದ್ದು ಹೊಂಗನೂರು ಗ್ರಾಮದಿಂದ ಗಗನಚುಕ್ಕಿ ಜಲಪಾತ ವೀಕ್ಷಣೆಗೆ ಆಗಮಿಸಿ, ನದಿ ದಾಟುವಾಗ ಈ ದುರಂತ ಸಂಭವಿಸಿದೆ. ಬೆಂಗಳೂರಿನ ಮಹಿಳೆ ಸಾವು: ಇದೇ ವೇಳೆ, ಇಲ್ಲಿನ ದರ್ಗಾಕ್ಕೆ ಬಂದು ಪೂಜೆ ಸಲ್ಲಿಸಿ ಗಗನಚುಕ್ಕಿ ಜಲಪಾತದ ಸಮೀಪದಲ್ಲಿ ಕುಳಿತಿದ್ದಾಗ ಕಾಲು ಜಾರಿ ಬೆಂಗಳೂರಿನ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಗಾಂಧಿನಗರ ನಿವಾಸಿ ಹಸೀಶಾ (32) ಮೃತರಾದವರು. ದರ್ಗಾಕ್ಕೆ ತಮ್ಮ ಪತಿಯೊಂದಿಗೆ ಪೂಜೆಗೆ ಬಂದಿದ್ದಾಗ ಈ ದುರ್ಘಟನೆ ಸಂಭವಿಸಿದೆ. ನುರಿತ ಈಜು ತಜ್ಞರಿಂದ ನಾಲ್ಕು ಶವಗಳ ಪತ್ತೆಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆರೆಗೆ ಜಾರಿ ಬಿದ್ದು ತಾಯಿ-ಮಗಳ ಸಾವು: ದೊಡ್ಡಬಳ್ಳಾಪುರ ತಾಲೂಕಿನ ಕೆಸ್ತೂರು ಗ್ರಾಮದ ಕೆರೆಯಲ್ಲಿ ಭಾನುವಾರ ಬೆಳಗ್ಗೆ ನಾಗಮಣಿ(36) ಮತ್ತು ಮಗಳಾದ ರಶ್ಮಿ(16) ಬಟ್ಟೆ ತೊಳೆಯಲು ಹೋಗಿದ್ದರು. ಈ ಸಂದರ್ಭಧಲ್ಲಿ ನೀರಿನಲ್ಲಿ ಬಿದ್ದ ಸೀರೆಯನ್ನು ಎತ್ತಿಕೊಳ್ಳುವ ಭರದಲ್ಲಿ ಮುಂದೆ ಸಾಗಿ ಹೋದ ನಾಗಮಣಿ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ತಾಯಿಯನ್ನು ಹಿಡಿದುಕೊಳ್ಳಲು ಹೋದ ರಶ್ಮಿ ಕೂಡ ನೀರಿನಲ್ಲಿ ಆಯತಪ್ಪಿ ಬಿದ್ದಿದ್ದು ಇಬ್ಬರಿಗೂ ಈಜು ಬಾರದ ಕಾರಣ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಘಟನೆ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಗ್ರಾಮಸ್ಥರು ಈಜು ಬರುವವರನ್ನು ಕರೆತಂದು ಕೆರೆಯಲ್ಲಿ ಹುಡುಕಾಡಿ ನಾಗಮಣಿ ಶವವನ್ನು ಮೇಲೆತ್ತಿದ್ದಾರೆ. 3 ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ರಶ್ಮಿ ಶವ ಕೂಡ ಪತ್ತೆಯಾಗಿದೆ. ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಸಹಯೋಗದಲ್ಲಿ ಮೃತದೇಹಗಳನ್ನು ಪತ್ತೆ ಹಚ್ಚಲಾಯಿತು.