ಭೂ ಒತ್ತುವರಿ ನಿಜ: ಪ್ರಮಾಣ
ಬೆಂಗಳೂರು: ಸರ್ಕಾರಿ ಜಮೀನು ಒತ್ತುವರಿ ಕುರಿತು ನಿವೃತ್ತ ಐಎಎಸ್ ಅಧಿಕಾರಿ ಬಾಲಸುಬ್ರಮಣಿಯನ್ ಸಲ್ಲಿಸಿರುವ ವರದಿಯಲ್ಲಿನ ಅಂಶಗಳು ನಿಜ ಎಂದು ಸರ್ಕಾರ ಹೈಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿದೆ.
ಬಾಲಸುಬ್ರಮಣಿಯನ್ ಅವರ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಅನುಷ್ಠಾನಕ್ಕೆ ಈಗಾಗಲೇ ಉನ್ನತ ಮಟ್ಟದ ಸಮಿತಿ ರಚಿಸಿರುವುದಾಗಿ ಸರ್ಕಾರ ಪ್ರಮಾಣಪತ್ರದಲ್ಲಿ ತಿಳಿಸಿದೆ. ಇದರಿಂದ ಬಾಲಸುಬ್ರಮಣಿಯನ್ ವರದಿ ಕುರಿತು ಸರ್ಕಾರದ ಮಟ್ಟದಲ್ಲಿದ್ದ ಗೊಂದಲಗಳು ನಿವಾರಣೆಯಾಗಿದ್ದು, ವರದಿಯಲ್ಲಿನ ಶಿಫಾರಸುಗಳ ಕುರಿತು ಪ್ರಮಾಣಪತ್ರದಲ್ಲಿ ಯಾವುದೇ ಸಂಶಯ ವ್ಯಕ್ತಪಡಿಸದಿರುವುದು ವರದಿಯನ್ನು ಸರ್ಕಾರ ಅಂಗೀಕರಿಸಿರುವುದಕ್ಕೆ ಸಾಕ್ಷಿಯಾಗಿದೆ.
ತೆರವು ಕಾರ್ಯಾಚರಣೆ ಜಾರಿಯಲ್ಲಿ: ಎ.ಟಿ.ರಾಮಸ್ವಾಮಿ ಅವರ ವರದಿ ಅನುಸಾರ ಬೆಂಗಳೂರಿನಲ್ಲಿ 33,878 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು, ಇಲ್ಲಿಯವರೆಗೆ 14,255 ಎಕರೆ ಒತ್ತುವರಿ ತೆರವುಗೊಳಿಸಿ ಭೂಮಿಯನ್ನು ಸರ್ಕಾರದ ಸ್ವಾಧೀನಕ್ಕೆ ಪಡೆಯಲಾಗಿದೆ.
ಇದಲ್ಲದೆ, ರಾಜ್ಯಾದ್ಯಂತ 11.07 ಲಕ್ಷ ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂಬ ಬಾಲಸುಬ್ರಮಣಿಯನ್ ಅವರ ವರದಿಯ ಆಧಾರದ ಮೇಲೆ 65,958 ಎಕರೆ ಭೂ ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನುಳಿದ ಒತ್ತುವರಿ ತೆರವುಗೊಳಿಸುವ ಕಾರ್ಯ ಜಾರಿಯಲ್ಲಿದೆ ಎಂದು ಪ್ರಮಾಣಪತ್ರದಲ್ಲಿ ಸರ್ಕಾರ ಸ್ಪಷ್ಟಪಡಿಸಿದೆ.
ಸಾಲು ಸಾಲು ಸಮಿತಿಗಳ ರಚನೆ: ಎ.ಟಿ.ರಾಮಸ್ವಾಮಿ ಹಾಗೂ ಬಾಲಸುಬ್ರಮಣಿಯನ್ ಅವರ ವರದಿಗಳ ಅನುಷ್ಠಾನಕ್ಕೆ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಈ ಸಂಬಂಧ ಕ್ರಮ ಕೈಗೊಳ್ಳಲು ಕಂದಾಯ, ನಗರಾಭಿವೃದ್ಧಿ ಹಾಗೂ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ಕ್ರಮವಾಗಿ ಮೂರು ಸಮಿತಿಗಳನ್ನು ರಚಿಸಲಾಗಿದೆ. 2013ರ ಮೇ 30ರಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚನೆಯಾಗಿದೆ. ಮುಖ್ಯ ಕಾರ್ಯದರ್ಶಿಯ ನೇತೃತ್ವದಲ್ಲಿ ಮತ್ತೊಂದು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಕಂದಾಯ ಸಚಿವರ ನೇತೃತ್ವದಲ್ಲಿ ಭೂ ನೀತಿ ಪರಿಶೀಲಿಸಲು 2013ರ ಆಗಸ್ಟ್ 12ರಂದು ಪ್ರತ್ಯೇಕ ಸಮಿತಿ ರಚಿಸಲಾಗಿದೆ ಎಂದು ಸರ್ಕಾರ ಪ್ರಮಾಣಪತ್ರದಲ್ಲಿ ತಿಳಿಸಿದೆ.
ವರದಿಯೇನು?
2009ರಲ್ಲಿ ರಚನೆಯಾಗಿದ್ದ ಬಾಲಸುಬ್ರಮಣಿಯನ್ ನೇತೃತ್ವದ ಕಾರ್ಯಪಡೆ 2011ರಲ್ಲಿ ಒತ್ತುವರಿ ಕುರಿತು ವರದಿ ನೀಡಿತ್ತು. ವರದಿ ಪ್ರಕಾರ, ರಾಜ್ಯದಲ್ಲಿ ಬರೋಬ್ಬರಿ 11.97 ಲಕ್ಷ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು, ಅದರಲ್ಲಿ 9.23 ಲಕ್ಷ ಎಕರೆ ಕಂದಾಯ, 1.65 ಲಕ್ಷ ಎಕರೆ ಅರಣ್ಯ ಹಾಗೂ 17,610 ಎಕರೆ ಭೂಮಿ ಇತರೆ ಇಲಾಖೆಗಳಿಗೆ ಸೇರಿದೆ. ಇವುಗಳ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂಬ ಶಿಫಾರಸು ಮಾಡಲಾಗಿತ್ತು. ಆದರೆ, ಇಲ್ಲಿಯವರೆಗೆ ಸರ್ಕಾರ ವರದಿಯ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬದಲಿಗೆ, ವರದಿಯ ಲೋಪದೋಷಗಳ ಕುರಿತು ಮಾತ್ರ ಉಲ್ಲೇಖಿಸುತ್ತಿದೆ ಎಂದು ಆರೋಪಿಸಿ ಸಮಾಜ ಪರಿವರ್ತನಾ ಸಮುದಾಯ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಸಮುದಾಯದ ಪರವಾಗಿ ವಕೀಲರಾದ ಧನಂಜಯ್ ವಾದ ಮಂಡಿಸುತ್ತಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಸರ್ಕಾರ ಈ ಪ್ರಮಾಣಪತ್ರ ಸಲ್ಲಿಸಿದ್ದು, ಮಂಗಳವಾರ ವಿಚಾರಣೆಗೆ ಬರಲಿದೆ.
ವ್ಯಾಜ್ಯಗಳೇ ತೊಡಕು
ಒತ್ತುವರಿ ತೆರವುಗೊಳಿಸಲು ಸರ್ಕಾರವೇನೋ ಮುಂದಾಗಿದೆ. ಆದರೆ, ನ್ಯಾಯಾಲಯಗಳೇ ಅಡ್ಡಿ ಬರುತ್ತಿವೆ... ಇದು ಸರ್ಕಾರದ ಆರೋಪ. ಒತ್ತುವರಿ ತೆರವಿಗೆ ನೋಟಿಸ್ ನೀಡಿದಂತೆಲ್ಲಾ ಒತ್ತುವರಿದಾರರು ನ್ಯಾಯಾಲಯದ ಮೆಟ್ಟಿಲೇರಿ ಎಲ್ಲಾ ಹಂತದ ಕಾರ್ಯಾಚರಣೆಗಳಿಗೂ ತಡೆಯಾಜ್ಞೆ ಪಡೆಯುತ್ತಿದ್ದಾರೆ. ಇದರಿಂದ ಒಟ್ಟು 1,707.29 ಎಕರೆ ಭೂಮಿ ಕಾನೂನು ವ್ಯಾಜ್ಯದಲ್ಲಿದೆ. ಸದ್ಯ ಹೈಕೋರ್ಟ್ನಲ್ಲಿ 992.04 ಎಕರೆ, ಸಿವಿಲ್ ನ್ಯಾಯಾಲಯದಲ್ಲಿ 655.07 ಎಕರೆ ಹಾಗೂ ಕರ್ನಾಟಕ ಮೇಲ್ಮನವಿ ಪ್ರಾಧಿಕಾರದಲ್ಲಿ 60.18 ಎಕರೆ ಭೂಮಿಯ ತೆರವು ವಿವಾದ ವಿಚಾರಣಾ ಹಂತದಲ್ಲಿದೆ ಎಂದು ಸರ್ಕಾರ ಹೇಳಿದೆ.
- ಸುಪ್ರೀತಾ ಹೆಬ್ಬಾರ್