ಮಾಜಿ ಯೋಧರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಪ್ರಯತ್ನ: ಲೆಫ್ಟಿನೆಂಟ್ ಜನರಲ್ ಪಿಳ್ಳೈ
ಮಡಿಕೇರಿ: ರಾಷ್ಟ್ರ ರಕ್ಷಣೆಗಾಗಿ ಅಮೂಲ್ಯ ಕಾಣಿಕೆ ನೀಡಿರುವ ಮಾಜಿ ಯೋಧರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಆ ಮೂಲಕ ಅವರ ಬದುಕಿನಲ್ಲಿ ಭರವಸೆಯ ಬೆಳಕನ್ನು ಮೂಡಿಸುವ ಪ್ರಯತ್ನ ಭಾರತೀಯ ಭೂ ಸೇನೆಯಿಂದ ಸದಾ ನಡೆಯಲಿದೆ ಎಂದು ಆಂಧ್ರ, ತಮಿಳುನಾಡು, ಕರ್ನಾಟಕ ಮತ್ತು ಕೇರಳದ ಮುಖ್ಯಸ್ಥ, ಜನರಲ್ ಆಫೀಸರ್ ಕಮಾಂಡಿಂಗ್, ಲೆಫ್ಟಿನೆಂಟ್ ಜನರಲ್ ವಿ.ಕೆ. ಪಿಳ್ಳೈ ಹೇಳಿದರು. ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮಾಜಿ ಸೈನಿಕರ ಕಲ್ಯಾಣ ಮಂಡಳಿ, ಆರ್ಮಿ ಸರ್ವಿಸಸ್ ಕೋರ್, ಮಾಜಿ ಸೈನಿಕರ ಸಂಘ ಮತ್ತು ಜಿಲ್ಲಾಡಳಿತದ ಸಹಯೋಗದೊಂದಿಗೆ ನಡೆದ ಮಾಜಿ ಸೈನಿಕರ ಬೃಹತ್ ರ್ಯಾಲಿ ಉದ್ಘಾಟಿಸಿ ಅವರು ಮಾತನಾಡಿದರು. ಮಾಜಿ ಸೈನಿಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನಮ್ಮಿಂದ ನಿರಂತರ ಪ್ರಯತ್ನ ನಡೆಯುತ್ತಿದೆಯಾದರೂ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ಪಾತ್ರ ಇದರಲ್ಲಿ ಬಹುಮುಖ್ಯ ಎಂದು ಅಭಿಪ್ರಾಯಪಟ್ಟರು. ರಾಷ್ಟ್ರ ರಕ್ಷಣೆಗೆ ಅಭೂತಪೂರ್ವ ಕಾಣಿಕೆ ನೀಡಿ ತ್ರಿವರ್ಣ ಧ್ವಜ ಎತ್ತಿ ಹಿಡಿದ ಸೈನಿಕರ ಕೊಡುಗೆ ಸ್ಮರಿಸುವ ಮೂಲಕ ಯುವ ಸಮೂಹಕ್ಕೆ ಪ್ರೇರಣೆ ನೀಡುವ ಸಲುವಾಗಿ ರ್ಯಾಲಿ ಆಯೋಜಿಸಲಾಗುತ್ತಿದೆ ಎಂದರು. ಭಾರತೀಯ ಭೂ ಸೇನೆ ಮಾಜಿ ಯೋಧರಿಗೆ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ರಾಷ್ಟ್ರ ವ್ಯಾಪಿ 87 ಪಾಲಿ ಕ್ಲಿನಿಕ್ಗಳನ್ನು ಸ್ಥಾಪಿಸಿದೆ ಎಂದರು. ರಾಷ್ಟ್ರ ರಕ್ಷಣೆಯ ಸಂದರ್ಭಗಳಲ್ಲಿ ಹುತಾತ್ಮರಾದ ವೀರ ಯೋಧರ ಕುಟುಂಬದ ಸದಸ್ಯರಿಗೆ ಲೆ.ಜ. ವಿ.ಕೆ. ಪಿಳ್ಳೈ ಸ್ಮರಣಿಕೆಯನ್ನಿತ್ತು ಗೌರವಿಸಿದರು.