ಯಾದಗಿರಿ ಜಿಲ್ಲೆಯಲ್ಲಿ ಶಿಶು, ತಾಯಂದಿರ ಜೀವಕ್ಕಿಲ್ಲ ಬೆಲೆ
ಯಾದಗಿರಿ: ರಾಜ್ಯದ 30ನೇ ಜಿಲ್ಲೆಯಾಗಿ ಉದಯವಾಗಿರುವ ಯಾದಗಿರಿಯಲ್ಲಿ ತಾಯಿ ಹಾಗೂ ಶಿಶುಗಳ ಜೀವಕ್ಕೆ ಬೆಲೆಯೇ ಇಲ್ಲ. ಸೂಕ್ತ ಚಿಕಿತ್ಸೆ ಇಲ್ಲದೇ ಕಳೆದ ಮೂರು ವರ್ಷಗಳಲ್ಲಿ 1456 ಶಿಶುಗಳು, ನಾಲ್ಕು ವರ್ಷಗಳಲ್ಲಿ 254 ತಾಯಂದಿರು ಮೃತಪಟ್ಟಿದ್ದಾರೆ.
ಇಂಥ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು ಜಿಲ್ಲಾ ಆರೋಗ್ಯ ಇಲಾಖೆಯ ಅಂಕಿ ಅಂಶಗಳಿಂದ. ಶಹಾಪುರ, ಯಾದಗಿರಿ, ಸುರಪುರ ಸೇರಿದಂತೆ ಮೂರು ತಾಲೂಕುಗಳ ಪೈಕಿ ಒಬ್ಬರೂ ಮಕ್ಕಳ ತಜ್ಞರಿಲ್ಲ. ಇಡೀ ಜಿಲ್ಲೆಗೆ ಶಹಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾತ್ರ ಒಬ್ಬರು ಪ್ರಸೂತಿ ತಜ್ಞರಿದ್ದಾರೆ.
ಹೆರಿಗೆ ಸಂದರ್ಭದಲ್ಲಿ ಅರವಳಿಕೆ ಮದ್ದು ನೀಡುವ ಅನಸ್ತೇಶಿಯಾ ತಜ್ಞರು ಜಿಲ್ಲಾಸ್ಪತ್ರೆ ಹೊರತುಪಡಿಸಿದರೆ ಉಳಿದ ಯಾವ ಆಸ್ಪತ್ರೆಗಳಲ್ಲೂ ಇಲ್ಲ. ಫಿಸಿಷಿಯನ್ ಹುದ್ದೆಯೂ ಖಾಲಿಯಿದ್ದು, ಸ್ತ್ರೀಯರು ಮತ್ತು ಮಕ್ಕಳಿಗೆ ಆರೋಗ್ಯ ಸೇವೆ ಇಲ್ಲಿ ಮರೀಚಿಕೆಯಾಗಿದೆ.
ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ಮಂಜೂರಾಗಿರುವ 106 ವೈದ್ಯರ ಹುದ್ದೆಗಳ ಪೈಕಿ ಸದ್ಯ 57 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. 31 ತಜ್ಞ ವೈದ್ಯರಿರಬೇಕಾದ ಜಾಗದಲ್ಲಿ 24 ಜನರಿದ್ದಾರೆ. ಜಿಲ್ಲೆಯಲ್ಲಿನ 5 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರೇ ಇಲ್ಲ.
ತಜ್ಞ ವೈದ್ಯರ ಕೊರತೆಯಿಂದ 2009-10ರಲ್ಲಿ 166, 2010-11ರಲ್ಲಿ 26, 2011-12ರಲ್ಲಿ 34 ಹಾಗೂ 2012-13ರಲ್ಲಿ 28 ತಾಯಂದಿರು ಮೃತಪಟ್ಟಿದ್ದಾರೆ. ಇನ್ನು ಶಿಶು ಮರಣವಂತೂ ಗಾಬರಿ ಹುಟ್ಟಿಸುತ್ತದೆ. 2010-11ರಲ್ಲಿ 602, 2011-12ರಲ್ಲಿ 452 ಹಾಗೂ 2012-13ರಲ್ಲಿ 402 ಶಿಶುಗಳು ಮೃತಪಟ್ಟಿವೆ.
ಲಕ್ಷಕ್ಕೆ 213 ತಾಯಂದಿರ ಮರಣ: ರಾಜ್ಯದಲ್ಲಿ ಹೆರಿಗೆ ವೇಳೆ ತಾಯಂದಿರ ಮರಣ ಪ್ರಮಾಣ ಸರಾಸರಿ ಒಂದು ಲಕ್ಷಕ್ಕೆ 130ರಷ್ಟಿದೆ. ಆದರೆ ಜಿಲ್ಲೆಯಲ್ಲಿ ಮಾತ್ರ ಇದು ಸರಾಸರಿಗಿಂತ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಒಂದು ಲಕ್ಷ ಹೆರಿಗೆಯಲ್ಲಿ 213 ತಾಯಂದಿರು ಸಾವನ್ನಪ್ಪುತ್ತಿದ್ದಾರೆ. ಇದನ್ನು ಕನಿಷ್ಠ 150ಕ್ಕೆ ಇಳಿಸಬೇಕು ಎನ್ನುವುದು ಸರ್ಕಾರದ ಸೂಚನೆ. ಆದರೆ ಆ ಸೂಚನೆ ಪಾಲಿಸಲು ವೈದ್ಯರ ಕೊರತೆ ಅಡ್ಡಿಯಾಗುತ್ತಿದೆ.
ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಖಾಲಿ ಹುದ್ದೆಗಳೇ ಹೆಚ್ಚಾಗಿವೆ. ವೈದ್ಯರು ಮತ್ತು ಇತರ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ತುಂಬಿಕೊಳ್ಳಲು ಅವಕಾಶವಿದ್ದರೂ ಯಾರೊಬ್ಬರೂ ಜಿಲ್ಲೆಗೆ ಬರುತ್ತಿಲ್ಲ. 177 ಮಹಿಳಾ ಕಿರಿಯ ಅರೋಗ್ಯ ಸಹಾಯಕರಲ್ಲಿ 112 ಹುದ್ದೆ ಮಾತ್ರ ಭರ್ತಿಯಾಗಿದೆ.
81 ಶುಶ್ರೂಷಕಿಯರಲ್ಲಿ ಕೇವಲ 53 ಜನರಿದ್ದಾರೆ. 26 ಮಹಿಳಾ ಅರೋಗ್ಯ ಸಹಾಯಕರಲ್ಲಿ 15 ಹುದ್ದೆ ಮಾತ್ರ ಭರ್ತಿಯಾಗಿದೆ. 52 ಪ್ರಥಮ ದರ್ಜೆ ಸಹಾಯಕ ಹುದ್ದೆಗಳಲ್ಲಿ ಕೇವಲ 14 ಜನರಿದ್ದಾರೆ. 244 ಗ್ರೂಪ್ ಡಿ ಹುದ್ದೆಗಳಲ್ಲಿ 153 ಸಿಬ್ಬಂದಿ ಕೊರತೆ ಇದೆ.
ತುರ್ತು ಚಿಕಿತ್ಸೆಗೆ ಅನ್ಯ ಜಿಲ್ಲೆಯೇ ಗತಿ
ತುರ್ತು ಆರೋಗ್ಯ ಸೇವೆ ಬೇಕಾದಲ್ಲಿ ಜಿಲ್ಲೆಯ ಜನ ವೈದ್ಯರಿಗಾಗಿ ಪರದಾಡಬೇಕಿದೆ. ಏಕೈಕ ಸ್ತ್ರೀತಜ್ಞರಿರುವುದರಿಂದ ಹೆರಿಗೆ ಸಂದರ್ಭದಲ್ಲಿ ಜನತೆ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಗೆ ಅಥವಾ ದೂರದ ರಾಯಚೂರು ಅಥವಾ ಗುಲ್ಬರ್ಗ ಆಸ್ಪತ್ರೆಗೆ ಹೋಗಬೇಕು. ಆದರೆ ಗ್ರಾಮೀಣ ಭಾಗದ ಬಡ ಜನರಿಗೆ ಹೀಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಕವಚ 108ರಲ್ಲೇ ಹತ್ತಾರು ಗರ್ಭಿಣಿಯರು ಹೆರಿಗೆಯಾಗಿರುವ ಉದಾಹರಣೆ ಜಿಲ್ಲೆಯಲ್ಲಿ ಸಾಕಷ್ಟಿವೆ. ವೈದ್ಯರ ಕೊರತೆ ಇಲ್ಲಿಯ ತಾಯಂದಿರ ಜೀವಕ್ಕೇ ಕುತ್ತು ತರುತ್ತಿದೆ. ಅಷ್ಟೇ ಅಲ್ಲದೇ ಬ್ಲಡ್ ಬ್ಯಾಂಕ್ ಕೂಡ ಜಿಲ್ಲೆಯಲ್ಲಿ ಆರಂಭವಾಗದ್ದರಿಂದ ಹೆರಿಗೆ ಸಂದರ್ಭದಲ್ಲಿ ರಕ್ತಸ್ರಾವದಿಂದಾಗಿ ತಾಯಂದಿರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಮೃತಪಟ್ಟ ತಾಯಂದಿರು
2009-10: 166
2010-11: 26
2011-12: 34
2012-13: 28
ಮರಣ ಹೊಂದಿದ ಶಿಶುಗಳು
2010-11: 602
2011-12: 452
2012-13: 402
ಒಟ್ಟು : 1456
ಹಿಂದಿನ ವರ್ಷಗಳಿಗೆ ಹೋಲಿಸಿದರೆ ತಾಯಂದಿರ ಮರಣ ಪ್ರಮಾಣದಲ್ಲಿ ಇಳಿಕೆಯಾಗಿದೆ. ಜನರಲ್ಲಿ ಜಾಗೃತಿ ಬಂದಿರುವುದರಿಂದ ಆಸ್ಪತ್ರೆಗಳಲ್ಲಿನ ಹೆರಿಗೆ ಪ್ರಮಾಣ ಹೆಚ್ಚಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಸೂತಿ, ಮಕ್ಕಳ ತಜ್ಞರು, ಅರವಳಿಕೆ ಹಾಗೂ ಫಿಜಿಷಿಯನ್ ತಜ್ಞರ ತಂಡ ಇದ್ದರೆ ಮಾತ್ರ ತಾಯಿ, ಮಗುವಿಗೆ ಉತ್ತಮ ಸೇವೆ ನೀಡಬಹುದು. ಆದರೆ ನಮ್ಮಲ್ಲಿ ತಜ್ಞ ವೈದ್ಯರ ಕೊರತೆ ಹೆಚ್ಚಿದೆ.
-ಡಾ.ಮಲ್ಲಿಕಾರ್ಜುನ ಮುಕ್ಕಾ, ಜಿಲ್ಲಾ ಆರೋಗ್ಯಾಧಿಕಾರಿ
-ನಾರಾಯಣ ಹೆಗಡೆ