ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

16ರಿಂದ ಪಾದಯಾತ್ರೆ

ಕಾಲುಬಾಯಿ ರೋಗಕ್ಕೆ ಬಲಿಯಾಗಿರುವ ಹಸುಗಳ ಸಾಕಣೆದಾರರಿಗೆ ಮತ್ತು ತೆಂಗು-ಅಡಕೆ ಬೆಳೆ ಕಳೆದುಕೊಂಡಿರುವ ರೈತರಿಗೆ ಅ.15ರೊಳಗೆ ಸರ್ಕಾರ ...

Rashmi Kasaragodu
Updated On : 8 Oct 2013, 12:34 pm

ಕನ್ನಡಪ್ರಭ ವಾರ್ತೆ,  ಬೆಂಗಳೂರು, ಅ.7-
ಕಾಲುಬಾಯಿ ರೋಗಕ್ಕೆ ಬಲಿಯಾಗಿರುವ ಹಸುಗಳ ಸಾಕಣೆದಾರರಿಗೆ ಮತ್ತು ತೆಂಗು-ಅಡಕೆ ಬೆಳೆ ಕಳೆದುಕೊಂಡಿರುವ ರೈತರಿಗೆ ಅ.15ರೊಳಗೆ ಸರ್ಕಾರ ಪರಿಹಾರ ನೀಡದಿದ್ದರೆ 16ರಿಂದ ಪಾದಯಾತ್ರೆ ಕೈಗೊಳ್ಳುವುದಾಗಿ ಪ್ರತಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಸಿದ್ದಾರೆ. ಕಾಲುಬಾಯಿ ರೋಗಕ್ಕೆ ಬಲಿಯಾಗಿರುವ ಹಸುಗಳಿಗೆ ಪರಿಹಾರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಈ ಹಿಂದೆಯೇ ಮನವಿ ಮಾಡಿಕೊಂಡಿದ್ದೆ. ಇನ್ನೂ ಅದಕ್ಕೆ ಪ್ರತಿಕ್ರಿಯೆ ಬಂದಿಲ್ಲ. ಅಲ್ಲದೆ, ಹಸು ಕಳೆದುಕೊಂಡು ಚನ್ನಪಟ್ಟಣದ  ನುಣ್ಣೂರು ಗ್ರಾಮದ ಲಕ್ಷ್ಮಮ್ಮ ಎಂಬುವವರು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ. ದಪ್ಪ ಚರ್ಮದ ಈ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಹೋರಾಟ ಮಾಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಅವರು ತಿಳಿಸಿದರು.   
ಹಸು ಕಳೆದುಕೊಂಡವರಿಗೆ ಕೂಡಲೇ ತಲಾ 25 ಸಾವಿರ ಪರಿಹಾರ ಘೋಷಿಸಬೇಕು. ಇದಕ್ಕೆ ಅ.15ರವರೆಗೆ ಗಡುವು ನೀಡುತ್ತೇನೆ. ಅದರೊಳಗೆ ಪರಿಹಾರ ನೀಡದಿದ್ದರೆ ಶ್ರೀರಂಗಪಟ್ಟಣದಿಂದ ಬೆಂಗಳೂರುವರೆಗೆ ಪಾದಯಾತ್ರೆ ಮಾಡುತ್ತೇನೆ ಎಂದು ಹೇಳಿದರು. ರೈತರು ಈಗಾಗಲೇ ಸಾಕಷ್ಟು ಸಾಲ ಮಾಡಿಕೊಂಡು ಪರಿತಪಿಸುತ್ತಿದ್ದಾರೆ. ಹಸುಗಳಿಗೆ ಪಡೆದಿರುವ ಸಾಲವನ್ನೂ ತೀರಿಸಿಲ್ಲ. ಈಗ ಹಸುಗಳನ್ನು ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿರುವಾಗ ಅವರಿಗೆ ಪರಿಹಾರ ನೀಡದಿದ್ದರೆ ಸಾಲ ತೀರಿಸುವ ಬಗೆ ಹೇಗೆ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
ರಾಮನಗರ, ಮಂಡ್ಯ, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಕಾಲುಬಾಯಿ ರೋಗಕ್ಕೆ ಅತಿಹೆಚ್ಚು ಹಸುಗಳು ಬಲಿಯಾಗಿದ್ದು, ಈ ಜಿಲ್ಲೆಗಳಲ್ಲಿ ಹಸು ಕಳೆದುಕೊಂಡವರಿಗೆ ತಲಾ ಐದು ಸಾವಿರ ರುಪಾಯಿಗಳನ್ನು ಜೆಡಿಎಸ್ ಪಕ್ಷದ ವತಿಯಿಂದ ನೀಡಲಾಗುತ್ತದೆ. ಇದರಿಂದ ನಮ್ಮ ಪಕ್ಷಕ್ಕೆ ಸುಮಾರು ಒಂದು ಕೋಟಿ ರುಪಾಯಿ ಹೊರೆಯಾಗುತ್ತದೆ ಎಂದರು.
ಪಶುಸಂಗೋಪನೆ ಸಚಿವರು 600 ಹಸುಗಳು ಮಾತ್ರ ಸಾವಿಗೀಡಾಗಿವೆ ಎನ್ನುತ್ತಾರೆ. ಪಶುಸಂಗೋಪನೆ ಇಲಾಖೆ ವರದಿ ಪ್ರಕಾರ 2060 ಹಸುಗಳು ಸತ್ತಿವೆ. ನನಗೆ ಬಂದಿರುವ ಮಾಹಿತಿ ಪ್ರಕಾರ ಸುಮಾರು ಐದು ಸಾವಿರ ಹಸುಗಳು ಸತ್ತಿವೆ. ಹಸು ಕಳೆದುಕೊಂಡ ರೈತರಿಗೆ ಆತ್ಮಸ್ಥೈರ್ಯ ನೀಡುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿಲ್ಲ. ನಮ್ಮ ಪಕ್ಷದ ವತಿಯಿಂದ ಆ ಕೆಲಸ ಮಾಡಲು ಮುಂದಾಗಿದ್ದೇವೆ ಎಂದರು.
ಸರ್ಕಾರ 25 ಸಾವಿರ ರುಪಾಯಿ ಪರಿಹಾರ ನೀಡಿದರೆ ಸುಮಾರು ಐದು ಕೋಟಿ ಅಷ್ಟು ವೆಚ್ಚವಾಗಬಹುದು. ಇಷ್ಟು ನೀಡಲು ಸಾಧ್ಯವಿಲ್ಲದಷ್ಟು ದಾರಿದ್ರ್ಯವೇ ಎಂದು ಪ್ರಶ್ನಿಸಿದ ಎಚ್.ಡಿ.ಕುಮಾರಸ್ವಾಮಿ, 50-60 ಸಾವಿರ ವೆಚ್ಚ ಮಾಡಿ ಖರೀದಿಸಿ, ಹಸು ಸಾಕಿರುತ್ತಾರೆ. ಅವುಗಳಿಗೆ ಸೂಕ್ತ ಲಸಿಕೆ ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸುಮಾರು 800 ಪಶು ವೈದ್ಯರ ಕೊರತೆ ಇದೆ. ಇಲಾಖೆಗಳಲ್ಲಿ ಖಾಲಿ ಹುದ್ದೆಗಳನ್ನು ಸರ್ಕಾರ ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಡೆಂಘೀ ಜ್ವರದಿಂದ ಮೃತಪಟ್ಟ ಕುಟುಂಬಕ್ಕೆ 2 ಲಕ್ಷ ಪರುಹಾರ ನೀಡುವುದಾಗಿ ಹೇಳಲಾಗಿತ್ತು. ಕನಕಪುರ ತಾಲೂಕಿನ ಅಣ್ಣೆದೊಡ್ಡಿ ಗ್ರಾಮದ ಸ್ನೇಹ, ಕಾವ್ಯ ಎಂಬುವವರೂ ಡೆಂಘೀಯಿಂದ ಜುಲೈನಲ್ಲಿ ಮರಣ ಹೊಂದಿದ್ದರು. ಆ ಕುಟುಂಬಗಳಿಗೆ ಈವರೆಗೂ ಪರಿಹರ ತಲುಪಿಲ್ಲ ಎಂದರು.

ರೈತರೇ ಸಾಲಕ್ಕೂ 'ಟೋಪಿ' ಹಾಕಿಸುತ್ತಾರೆ!
ಅಲ್ಪಸಂಖ್ಯಾತರು ಸಾಲ ಮರು ಪಾವತಿ ಮಾಡದಿದ್ದರೆ ಪರವಾಗಿಲ್ಲ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ರೈತರು ಸಾಲ ತೀರಿಸದಿದ್ದರೂ ಸರ್ಕಾರಕ್ಕೆ 'ಟೋಪಿ' ಹಾಕಿಸುತ್ತಾರೆ. ಹೀಗಾಗಿ ರೈತರು ಪರಿತಪಿಸಬೇಕಾಗಿಲ್ಲ ಎಂದು ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಪರಮೇಶ್ವರ್ ಅವರು ದೇಶದಲ್ಲಿ ಸಾಕಷ್ಟು ಲೂಟಿ ಮಾಡಲಾಗಿದೆ ಎಂದು ಸತ್ಯ ಹೇಳಿದ್ದಾರೆ. 50 ವರ್ಷದಿಂದ ಕಾಂಗ್ರೆಸ್ ಮಾಡಿರುವ ಲೂಟಿಯನ್ನು ಅವರು ಧೈರ್ಯವಾಗಿ ಹೇಳಿಕೊಂಡಿದ್ದಾರೆ. ಲೂಟಿಯಲ್ಲಿ ಕಾಂಗ್ರೆಸ್ ಗಿನ್ನಿಸ್ ದಾಖಲೆಯನ್ನೇ ಮಾಡಿದೆ ಎಂದು ಟೀಕಿಸಿದರು.
ಅಲ್ಪಸಂಖ್ಯಾತರ ಸಾಲ ಏಕೆ, ಎಲ್ಲ ರೈತರ ಸಾಲವನ್ನೂ ಸರ್ಕಾರಕ್ಕೆ 'ಟೋಪಿ' ಹಾಕಿಸುತ್ತಾರೆ. ಏಕೆಂದರೆ 50 ವರ್ಷದಿಂದ ಟೋಪಿ ಹಾಕಿಸುವಲ್ಲಿ ಕಾಂಗ್ರೆಸಿಗರು ನಿಸ್ಸೀಮರು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement