16ರಿಂದ ರಾಜ್ಯದಲ್ಲಿ ಮೋದಿ ರ್ಯಾಲಿ ಶುರು
ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸುತ್ತಿರುವ ರಾಜ್ಯ ಬಿಜೆಪಿ, ಬೆಂಗಳೂರು ಸೇರಿದಂತೆ ರಾಜ್ಯದ 9 ಕಡೆ ಪಕ್ಷದ ಪ್ರಧಾನಿ ಅಭ್ಯರ್ಥಿ...
ಕನ್ನಡಪ್ರಭ ವಾರ್ತೆ, ಬೆಂಗಳೂರು, ಅ.7-
ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸುತ್ತಿರುವ ರಾಜ್ಯ ಬಿಜೆಪಿ, ಬೆಂಗಳೂರು ಸೇರಿದಂತೆ ರಾಜ್ಯದ 9 ಕಡೆ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರ್ಯಾಲಿ ಹಮ್ಮಿಕೊಳ್ಳಲು ನಿರ್ಧರಿಸಿದೆ. ನ. 16ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಮೊದಲ ರ್ಯಾಲಿ ನಡೆಯಲಿದೆ.
ಇದಾದ ಬಳಿಕ ಮುಂದಿನ ವರ್ಷದ ಜ.16ರೊಳಗೆ ರಾಜ್ಯದ ಇತರೆ ಎಂಟು ಕಡೆಗಳಲ್ಲಿ ರ್ಯಾಲಿ ಹಮ್ಮಿಕೊಳ್ಳಲಾಗುತ್ತದೆ. ಈ ರ್ಯಾಲಿಗಳ ಸ್ಥಳ ಮತ್ತು ದಿನಾಂಕ ನಿಗದಿ ಜವಾಬ್ದಾರಿಯನ್ನು ಪಕ್ಷದ ರಾಜ್ಯ ಘಟಕಕ್ಕೆ ವಹಿಸಲಾಗಿದೆ. ಈ ಮೂಲಕ ನರೇಂದ್ರ ಮೋದಿ ಅಲೆಯ ನೆರವು ಪಡೆದು ಕಳೆದ ವಿಧಾನಸಭೆ ಸೋಲಿನಿಂದ ತತ್ತರಿಸಿರುವ ರಾಜ್ಯ ಬಿಜೆಪಿ ಘಟಕಕ್ಕೆ ಪುನಶ್ಚೇತನ ನೀಡಲು ನಿರ್ಧರಿಸಲಾಗಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಬಲಾಢ್ಯವಾಗಿರುವುದರಿಂದ ಈ ರಾಜ್ಯಕ್ಕೆ ಹೆಚ್ಚು ಒತ್ತು ನೀಡಲು ಮೋದಿ ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತಮ್ಮ ನೇತೃತ್ವದಲ್ಲಿ ಹೆಚ್ಚು ರ್ಯಾಲಿಗಳನ್ನು ನಡೆಸಲು ಅವರು ಒಪ್ಪಿಕೊಂಡಿದ್ದಾರೆ.
10 ಪಾಸ್ ವಿತರಣೆ: ಬೆಂಗಳೂರಿನಲ್ಲಿ ನಡೆಯಲಿರುವ ನರೇಂದ್ರ ಮೋದಿ ಅವರ ರ್ಯಾಲಿಗೆ ಬರುವ ಕಾರ್ಯಕರ್ತರಿಗೆ 10 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಪಾಸ್‌ಗಳನ್ನು ವಿತರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಒಂದು ವೇಳೆ ರ್ಯಾಲಿಗೆ ಹಣ ಸಂಗ್ರಹಿಸಿದರೆ ಅದನ್ನು ಸಮಾಜಮುಖಿ ಕಾರ್ಯಕ್ಕೆ ಬಳಸಲು ನಿರ್ಧರಿಸಲಾಗಿದೆ. ನರೇಂದ್ರ ಮೋದಿ ಅವರ ರ್ಯಾಲಿಯ ಉಸ್ತುವಾರಿ ಹೊತ್ತಿರುವ ರಾಷ್ಟ್ರೀಯ ಬಿಜೆಪಿ ಮಾಜಿ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರ ನೇತೃತ್ವದಲ್ಲಿ ಪಕ್ಷದ ಕಚೇರಿಯಲ್ಲಿ ಸೋಮವಾರ ನಡೆದ ಮುಖಂಡರ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೆಂಕಯ್ಯ ನಾಯ್ಡು, ಲೋಕಸಭೆ ಚುನಾವಣೆ ಸಿದ್ಧತೆ ಮತ್ತು ಪ್ರಚಾರದ ಕುರಿತಂತೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ನ.16ರಂದು ಬೆಂಗಳೂರಿನಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಸದ್ಯದಲ್ಲೇ ಸ್ಥಳ ನಿಗದಿ ಮಾಡಲಾಗುವುದು. ಇದಾದ ಬಳಿಕ 2014ರ ಜ.16ರೊಳಗೆ ರಾಜ್ಯದ 8 ಕಡೆಗಳಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ರ್ಯಾಲಿಗಳನ್ನು ನಡೆಸಲಾಗುವುದು ಎಂದು ತಿಳಿಸಿದರು. ಇದರ ಜತೆಗೆ ನ.20ರಿಂದ ಡಿ.15ರ ಮಧ್ಯೆ ಎಲ್ಲಾ 28 ಲೋಕಸಭೆ ಕ್ಷೇತ್ರಗಳಲ್ಲಿ ಪಕ್ಷದ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ರಾಷ್ಟ್ರೀಯ ನಾಯಕರಾದ ಲಾಲ್‌ಕೃಷ್ಣ ಆಡ್ವಾಣಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಸೇರಿದಂತೆ ಅನೇಕರು ಈ ರ್ಯಾಲಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಈ ಮಧ್ಯೆ ಬೆಂಗಳೂರಿನಲ್ಲಿ ಎಲ್ಲಾ ರಾಜ್ಯಗಳ ಬಿಜೆಪಿ ನಾಯಕರ ಸೌಹಾರ್ದ ಕೂಟ ಏರ್ಪಡಿಸಲಾಗುವುದು. ಅಲ್ಲದೆ, ವೈದ್ಯರು, ಚಾರ್ಟಡ್ ಅಕೌಂಟೆಟ್ಸ್, ನಿವೃತ್ತ ಅಧಿಕಾರಿಗಳು ಸೇರಿದಂತೆ ಬುದ್ಧಿಜೀವಿಗಳ ಸಮ್ಮೇಳನಗಳನ್ನು ಎಲ್ಲಾ ಜಿಲ್ಲೆಗಳಲ್ಲಿ ಏರ್ಪಡಿಸಲಾಗುವುದು ಎಂದು ವಿವರಿಸಿದರು.
ಶೌಚಾಲಯ- ಮೋದಿ ಹೇಳಿಕೆ ಸಮರ್ಥನೆ: ದೇವಾಲಯಗಳ ಬದಲು ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂಬ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ವೆಂಕಯ್ಯ ನಾಯ್ಡು, ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ ಮೋದಿ ಮಾತನಾಡಿದ್ದಾರೆ. ಮೇಲಾಗಿ ದೇವಾಲಯಗಳನ್ನು ಖಾಸಗಿಯವರು ನಿರ್ಮಿಸುತ್ತಾರೆ. ಆದರೆ, ಶೌಚಾಲಯ ನಿರ್ಮಾಣ ಜವಾಬ್ದಾರಿ ಸರ್ಕಾರಗಳದ್ದು. ಇದನ್ನು ಗಮನದಲ್ಲಿಟ್ಟುಕೊಂಡು ನರೇಂದ್ರ ಮೋದಿ ಮಾತನಾಡಿದ್ದಾರೆ ಎಂದರು.