ಎಸ್ಪಿ ಅಧ್ಯಕ್ಷಗಿರಿಯಿಂದ ಐಪಿಎಸ್ ಬಿದರಿ ಎತ್ತಂಗ್ಡಿ
ಸಮಾಜವಾದಿ ಪಕ್ಷದ ಕರ್ನಾಟಕ ಘಟಕದ ಸಾರಥಿಯಾಗಿ ನಿಯೋಜನೆಗೊಂಡಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಮಹಾದೇವ ಬಿದರಿ ಅವರನ್ನು ...
ನವದೆಹಲಿ: ಸಮಾಜವಾದಿ ಪಕ್ಷದ ಕರ್ನಾಟಕ ಘಟಕದ ಸಾರಥಿಯಾಗಿ ನಿಯೋಜನೆಗೊಂಡಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಮಹಾದೇವ ಬಿದರಿ ಅವರನ್ನು ಎಂಟೇ ವಾರದಲ್ಲಿ ಎತ್ತಂಗಡಿ ಮಾಡಲಾಗಿದೆ. ರಾಜ್ಯ ಘಟಕದ ನೂತನ ಸಾರಥ್ಯದ ಹೊಣೆ ಈಗ ರೈತ ನಾಯಕ, ಮಾಜಿ ಸಚಿವ ಬಾಬಾಗೌಡ ಪಾಟೀಲ್ ಅವರ ಹೆಗಲಿಗೆ ಬಿದ್ದಿದೆ.
ಸೋಮವಾರ ದೆಹಲಿಯಲ್ಲಿ ಸೈಕಲ್ ಏರಿದ ಬಾಬಾಗೌಡ ಪಾಟೀಲ್ ಅವರಿಗೆ ಕರ್ನಾಟಕದಲ್ಲಿ ಪಕ್ಷ ಮುನ್ನಡೆಸುವಂತೆ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಸೂಚಿಸಿದ್ದಾರೆ. ಕಾಂಗ್ರೆಸ್ ವಿರುದ್ಧ ಬಂಡೆದ್ದು ಸೈಕಲ್ ಏರಿದ್ದ ಶಂಕರ ಮಹಾದೇವ ಬಿದರಿ ಅವರನ್ನು ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಮುಖ್ಯ ಕಾರಣ ಈ ಮೊದಲು ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ, ಶಾಸಕ ಸಿ.ಪಿ. ಯೋಗೇಶ್ವರ್ ನಡುವೆ ಹೊಂದಾಣಿಕೆ ಕೊರತೆ. ಇತ್ತೀಚೆಗಷ್ಟೇ ಪೊಲೀಸ್ ಇಲಾಖೆ ಉನ್ನತಾಧಿಕಾರ ತೊರೆದಿದ್ದ ಬಿದರಿಗೆ ಯೋಗೇಶ್ವರ್ ಅವರೊಂದಿಗೆ ಹೊಂದಿಕೊಂಡು ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.