ಕಡಲೆ ಕೃಷಿಗೆ ನಿಷೇಧಿತ ಕೀಟನಾಶಕ ಕೊಟ್ಟ ಸರ್ಕಾರ
ರಾಜ್ಯದ ಕರಾವಳಿ ಭಾಗದಲ್ಲಿ ಹಲವು ಜೀವಗಳನ್ನು ಬಲಿ ತೆಗೆದುಕೊಂಡ 'ಎಂಡೋಸಲ್ಫಾನ್'ನಷ್ಟೇ ಅಪಾಯಕಾರಿ...
ಕನ್ನಡಪ್ರಭ ವಾರ್ತೆ, ಬೆಂಗಳೂರು, ಅ. 8-
ರಾಜ್ಯದ ಕರಾವಳಿ ಭಾಗದಲ್ಲಿ ಹಲವು ಜೀವಗಳನ್ನು ಬಲಿ ತೆಗೆದುಕೊಂಡ 'ಎಂಡೋಸಲ್ಫಾನ್'ನಷ್ಟೇ ಅಪಾಯಕಾರಿ ಕೀಟನಾಶಕಗಳನ್ನು ಉತ್ತರ ಕರ್ನಾಟಕದ ರೈತರಿಗೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಉತ್ತರ ಕರ್ನಾಟಕದಲ್ಲೇ ಅತಿ ಹೆಚ್ಚು ಇರುವ ಕಡಲೆ ಬೆಳೆಗಾರರಿಗೆ ಇಂತಹ ವಿಷಕಾರಿ ಕೀಟನಾಶಕಗಳನ್ನು ಕೇಂದ್ರ ಸರ್ಕಾರದ ಯೋಜನೆಯಡಿ ಕಿಟ್ ಮೂಲಕ ಉಚಿತವಾಗಿ ನೀಡಲು ಸಮ್ಮತಿಸಿದೆ. ಈ ಕೀಟನಾಶಕಗಳನ್ನು ಕೇಂದ್ರ ಕೀಟನಾಶಕ ಮಂಡಳಿಯೇ ನಿರ್ಬಂಧಗೊಳಿಸಿದ್ದರೂ, ಅದನ್ನೇ ನೀಡಲು ಮುಂದಾಗಿದ್ದಾರೆ. ಈ ಕೀಟನಾಶಕಗಳಿಂದ ಪರಿಸರಕ್ಕೆ ಹಾನಿಯಾಗುವುದಷ್ಟೇ ಅಲ್ಲ, ಮಾನವನ ಆರೋಗ್ಯದ ಮೇಲೆ ಅತ್ಯಂತ ದುಷ್ಪರಿಣಾಮ ಉಂಟಾಗಲಿದೆ. ರೈತರಿಗೆ ಸಮೃದ್ಧ ಬೆಳೆಗೆ ಪೂರಕವಾದ ಕೀಟನಾಶಕ ನೀಡಬೇಕಾದ ಸರ್ಕಾರ, ಕೃಷಿ ವಿವಿ ಕುಲಪತಿ ಹಾಗೂ ತಾಂತ್ರಿಕ ತಜ್ಞರ ಶಿಫಾರಸಿಗೆ ವಿರುದ್ಧವಾಗಿ ಮಾರಕ ಕೀಟನಾಶಕಗಳನ್ನು ಕಡಲೆ ರೈತರಿಗೆ ನೀಡಲು ಹೆಜ್ಜೆ ಇರಿಸಿದೆ. ತಾಂತ್ರಿಕ ತಜ್ಞರ ಸಮಿತಿ ಅಧ್ಯಕ್ಷರ ವಿರೋಧದ ನಡುವೆಯೂ ಮಾರಕ ಕೀಟನಾಶಕ ನೀಡಲು ಟೆಂಡರ್ ಆಹ್ವಾನಿಸಲಾಗಿದೆ.
ಎಂಡೋಸಲ್ಫಾನ್‌ನಂತಹ ಮಾರಕ ಕೀಟನಾಶಕವನ್ನು ಕಡಲೆ ಬೆಳೆಗಾರರಿಗೆ ನೀಡಲಾಗುವ ಐಪಿಎಂ/ಐಎನ್‌ಎಂ ಕಿಟ್‌ನಲ್ಲಿ ಒದಗಿಸಲು ಕೃಷಿ ಸಚಿವಾಲಯ ಸಮ್ಮತಿಸಿದೆ. ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರೇ ಇಂತಹ ನಿರ್ಣಯಕ್ಕೆ ಸಹಿ ಮಾಡಿದ್ದಾರೆ.
ತಾಂತ್ರಿಕ ತಜ್ಞರ ಶಿಫಾರಸಿನಂತೆ ಎಲ್ಲವೂ ನಡೆದಿದ್ದರೆ ಪರಿಸರಸ್ನೇಹಿಯಾಗಿ ಭೂಮಿಗೆ ಪೋಷಕಾಂಶ ನೀಡುವ ಹಾಗೂ ಕಾಯಿಕೊರಕ ಕೀಟಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಪೋಷಕಾಂಶ ಹಾಗೂ ಕೀಟನಾಶಕ(ಐಪಿಎಂ/ಐಎನ್‌ಎಂ) ಕಿಟ್ ಕಡಲೆ ಬೆಳೆಗಾರರಿಗೆ ಈ ವೇಳೆಗೆ ತಲುಪಬೇಕಾಗಿತ್ತು. ಕೇಂದ್ರ ಸರ್ಕಾರವೇ ಸಂಪೂರ್ಣ ಹಣ ನೀಡುವ ವೇಗವರ್ಧಕ ದ್ವಿದಳ ಧಾನ್ಯ ಉತ್ಪಾದನೆ ಯೋಜನೆ (ಎ3ಪಿ) ವ್ಯಾಪ್ತಿಯ ಈ ಪ್ರಾತ್ಯಕ್ಷಿಕೆ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿ ಮಾತ್ರ ರಾಜ್ಯ ಸರ್ಕಾರದ್ದು.
ಆದರೆ, ಇನ್ನು 28 ಕೋಟಿ ವೆಚ್ಚದ ಈ ಯೋಜನೆಗೆ ಕೃಷಿ ಸಚಿವಾಲಯದ ತಾಂತ್ರಿಕತೆಯೇ ಗೊತ್ತಿಲ್ಲದ 'ವಿಶೇಷ ಅಧಿಕಾರಿ'ಗಳು ಅಡ್ಡಗಾಲು ಹಾಕಿದ್ದಾರೆ.
ಇಂತಹ ಅಧಿಕಾರಿಗಳಿಗೆ ಮಣೆ ಹಾಕಿರುವ ಕೃಷಿ ಸಚಿವ ಕೃಷ್ಣ ಬೈರೇಗೌಡ, ಕಡಲೆ ಬೆಳೆಗೆ ಮಾರಕವಾಗುವ ಹಾಗೂ ರೈತರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಕೇಂದ್ರ ಕೀಟನಾಶಕ ಮಂಡಳಿಯೇ ನಿರ್ಬಂಧಿಸಿರುವ ಕೀಟನಾಶಕವನ್ನು ನೀಡಲು ಸಮ್ಮತಿಸಿದ್ದಾರೆ.
ಪರಿಸರಕ್ಕೆ ಮಾರಕವಾಗುವ ಕೀಟನಾಶಕಗಳನ್ನು ತಾಂತ್ರಿಕ ತಜ್ಞರ ಸಮಿತಿ ಕೈಬಿಟ್ಟಿದ್ದರೂ, ಅದನ್ನು ಬಳಸುವುದು ಬೇಡ ಎಂದು ಹೇಳಿದ್ದರೂ, ಅದೇ ಕೀಟನಾಶಕಗಳನ್ನು ಕಿಟ್‌ನಲ್ಲಿ ನೀಡಲು ಮರು ಟೆಂಡರ್ ಕರೆಯಲು ಕೃಷಿ ಸಚಿವ ಕೃಷ್ಣ ಬೈರೇಗೌಡ ಸಹಿ ಹಾಕಿದ್ದಾರೆ.
ಕಡಲೆಯ ಹಿಂಗಾರು ಬೆಳೆಗಾಗಿ ಈ ವರ್ಷ ಐಎನ್‌ಎಂ/ಐಪಿಎಂ ಕಿಟ್ ನೀಡಲು ರಾಯಚೂರು ಕೃಷಿ ವಿವಿ ಕುಲಪತಿ ಡಾ. ಬಿ.ವಿ. ಪಾಟೀಲ್ ನೇತೃತ್ವದ ತಾಂತ್ರಿಕ ತಜ್ಞರ ಸಮಿತಿ ಆಗಸ್ಟ್ 7ರಂದು ಸಭೆ ನಡೆಸಿ, ಪರಿಸರ ಸ್ನೇಹಿ ಉತ್ಪನ್ನಗಳನ್ನು ಸೆಪ್ಟೆಂಬರ್ 3ನೇ ವಾರದೊಳಗೆ ವಿತರಿಸಬೇಕು ಎಂದು ಶಿಫಾರಸು ಮಾಡಿತ್ತು. ಅದರಂತೆ ಕೃಷಿ ಬೀಜ ನಿಗಮ ಟೆಂಡರ್ ಕೂಡ ಕರೆದಿತ್ತು. ಎಲ್ಲ ಪ್ರಕ್ರಿಯೆ ಮುಗಿದು ವಾಣಿಜ್ಯ ಬಿಡ್ ಮಾತ್ರ ಪೂರ್ಣಗೊಳ್ಳಬೇಕಿತ್ತು. ಸೆ.21ರಂದು ವಾಣಿಜ್ಯ ಬಿಡ್ ಸಭೆ ಮುಂದೂಡಲಾಗಿತ್ತು. ಇದನ್ನು ಸೆ.27ರಂದು ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಸಲಾಗಿದೆ. ಇದರಲ್ಲಿ ತಾಂತ್ರಿಕ ತಜ್ಞರ ಸಮಿತಿ ಶಿಫಾರಸು ಮಾಡಿರುವ ಕೀಟನಾಶಕಗಳನ್ನು ಹೊರತುಪಡಿಸಿ, ಮಾರಕ ಕೀಟನಾಶಕಗಳನ್ನೇ ಕಿಟ್‌ನಲ್ಲಿ ನೀಡಲು ನಿರ್ಣಯ ಕೈಗೊಳ್ಳಲಾಗಿದೆ. ಹಿಂದಿನ ಟೆಂಡರ್ ರದ್ದುಗೊಳಿಸಿ ಮರು ಟೆಂಡರ್ ಕರೆಯಲಾಗಿದೆ.
ಮರು ಟೆಂಡರ್ ಪ್ರಕಟಣೆ ಅ.3ರಂದು ಹೊರಬಿದ್ದಿದೆ. ಅದೇ ದಿನ ರಾಷ್ಟ್ರೀಯ ಆಹಾರ ಭದ್ರತೆ ಮಿಷನ್ ನಿರ್ದೇಶಕ ಡಾ. ಬಿ.ಕೆ. ಧರ್ಮರಾಜನ್, ರಾಯಚೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ ಹಾಗೂ ತಾಂತ್ರಿಕ ತಜ್ಞರ ಸಮಿತಿ ಅಧ್ಯಕ್ಷರೂ ಆಗಿರುವ ಡಾ. ಬಿ.ವಿ. ಪಾಟೀಲ್ ಪತ್ರ ಬರೆದು ಕಿಟ್‌ಗಳಲ್ಲಿ ನೀಡುವ ಉತ್ಪನ್ನದ ಮಾಹಿತಿ ನೀಡಿ ಅಭಿಪ್ರಾಯ ಕೋರಿದ್ದಾರೆ. ಇದನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಡಾ. ಬಿ.ವಿ. ಪಾಟೀಲ್, ಭೂಮಿ ಹಾಗೂ ರೈತನಿಗೆ ಮಾರಕವಾದ ಉತ್ಪನ್ನಗಳನ್ನು ನೀಡಲೇಬಾರದು ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಆದರೆ ಕೃಷಿ ಸಚಿವಾಲಯ ರೈತನಿಗೆ ಮಾರಕವಾಗುವ ಬಗ್ಗೆ ಯೋಜಿಸಿದಂತಿಲ್ಲ. ಅವರಿಗೆ 'ಪೂರಕ'ವಾದರೆ ಸಾಕು ಎಂಬ ಭಾವನೆಯಲ್ಲಿದ್ದಂತಿದೆ.
ರೆಡ್ ಲೇಬಲ್ ಕೀಟನಾಶಕ ಅತ್ಯಂತ ಮಾರಕ
ಕಡಲೆ ಬೆಳೆಗೆ ನೀಡಿರುವ 'ರೆಡ್ ಲೇಬಲ್' ಗುರುತಿನ ಕೀಟನಾಶಕಗಳು ಮಾನವ ಹಾಗೂ ಪರಿಸರಕ್ಕೆ ಅತ್ಯಂತ ಮಾರಕ. 'ಯೆಲ್ಲೋ ಲೇಬಲ್' ಗುರುತಿನ ಕೀಟನಾಶಕಗಳೂ ಮಾರಕ. ಬ್ಲೂ ಲೇಬಲ್ ಗುರುತಿನ ಕೀಟನಾಶಕ ಸುರಕ್ಷಿತ ಹಾಗೂ ಗ್ರೀನ್ ಲೇಬಲ್ ಮಾರ್ಕ್ ಕೀಟನಾಶಕಗಳು ಅತ್ಯಂತ ಸುರಕ್ಷಿತ.
ಈ ವಿಷಯವನ್ನು ಅತ್ಯಂತ ಸೂಕ್ಷ್ಮ ಹಾಗೂ ವಿವರವಾಗಿ ರಾಯಚೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ ಹಾಗೂ ಎ3ಪಿ ಕಾರ್ಯಕ್ರಮದ ತಾಂತ್ರಿಕ ತಜ್ಞರ ಸಮಿತಿ ಅಧ್ಯಕ್ಷರೂ ಆಗಿರುವ ಡಾ. ಬಿ.ವಿ. ಪಾಟೀಲ್ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಕಡಲೆ ರೈತರಿಗೆ ಐಎನ್‌ಎಂ/ಐಪಿಎಂ ಕಿಟ್‌ನಲ್ಲಿ ನೀಡಲು ತಾವು ನಿರ್ಧರಿಸಿರುವ ಮೀಥೈಲ್‌ಪ್ಯಾರಾಥಿಯಾನ್ 50 ಎಸ್‌ಸಿ ಅನ್ನು. ಕೇಂದ್ರ ಕೀಟನಾಶಕ ಮಂಡಳಿ ಇದು ಬಳಕೆಗೆ ಯೋಗ್ಯವಲ್ಲ ಎಂದು ನಿರ್ಬಂಧಿಸಿದೆ. ಮೀಥೋಮೈಲ್ 40 ಎಸ್‌ಪಿ 'ರೆಡ್ ಲೇಬಲ್' ಗುರುತು ಹೊಂದಿದ್ದು, ಅತ್ಯಂತ ಮಾರಕವಾಗಿದೆ. ಪ್ರೊಫೆನೊಫೋಸ್, ಕ್ವಿನೊಲ್‌ಫೋಸ್, ಇಂಡೊಕ್ಸ್‌ಕಾರ್ಬ್‌ಗಳು 'ಯೆಲ್ಲೊ ಲೇಬಲ್' ಗುರುತಿನ ಕೀಟನಾಶಕಗಳಿಗಿದ್ದು, ಇವೂ ಮಾರಕವಾಗಿವೆ. ಎಮಾಮೆಕ್ಟಿನ್ ಬೆಂಜೊಟ್, ಸ್ಪಿನೊಸ್ಯಾಡ್, ಅಸೆಫೇಟ್‌ಗಳು 'ಬ್ಲೂ ಲೇಬಲ್' ಗುರುತಿನ ಉತ್ಪನ್ನಗಳಾಗಿದ್ದು ಬಳಕೆಗೆ ಸೂಕ್ತ. ಇನ್ನು ಫ್ಲುಬೆಂಡಮೈಡ್ ಮತ್ತು ರೈಜೋಬಿಯಂ 'ಗ್ರೀನ್ ಲೇಬಲ್' ಗುರುತಿನ ಉತ್ಪನ್ನವಾಗಿ ಅತ್ಯಂತ ಸುರಕ್ಷಿತವಾಗಿವೆ.
ಕಡಲೆಯನ್ನು ರೈತರು ಮಾನವನ ಬಳಕೆಗಾಗಿ ಮಾರಾಟ ಮಾಡುವುದರಿಂದ ಸುರಕ್ಷತೆ ದೃಷ್ಟಿಯಿಂದ ಗ್ರೀನ್ ಲೇಬಲ್ ಉತ್ಪನ್ನಗಳನ್ನೇ ಬಳಸಬೇಕು ಹಾಗೂ ಬ್ಲೂ ಲೇಬಲ್ ಕೀಟನಾಶಕಗಳನ್ನು ಉಪಯೋಗಿಸಬೇಕು. ಈ ವರ್ಷದ ಹವಾಮಾನ ವೈಪರೀತ್ಯದಿಂದ 'ಕಾಳುಕೊರಕ'ದ ಹಾವಳಿ ಅತ್ಯಂತ ಹೆಚ್ಚಾಗುವ ಸಾಧ್ಯತೆ ಇದೆ. ಬೆಳೆ ಹಾಗೂ ಕೀಟಗಳ ತಜ್ಞರು ಕೂಡ ಗ್ರೀನ್ ಲೇಬಲ್ ಹಾಗೂ ಬ್ಲೂ ಲೇಬಲ್ ಉತ್ಪನ್ನಗಳನ್ನೇ ಶಿಫಾರಸು ಮಾಡಿದ್ದಾರೆ. ದಶಕಗಳ ಹಿಂದೆ ಉಪಯೋಗಿಸುತ್ತಿದ್ದ ಉತ್ಪನ್ನಗಳಿಗಿಂತ ಇವು ಅತ್ಯಂತ ಪರಿಣಾಮಕಾರಿ. ಆದ್ದರಿಂದ ಕರ್ನಾಟಕ ಕೃಷಿ ವಿವಿ ಹಾಗೂ ಭಾರತೀಯ ಕೃಷಿ ಸಂಶೋಧನಾ ಪರಿಷತ್ (ಐಸಿಎಆರ್)ನಂತಹ ವೈಜ್ಞಾನಿಕ ಸಂಸ್ಥೆಗಳು ಪರೀಕ್ಷಿಸಿರುವ ಕೀಟನಾಶಕಗಳನ್ನು ಮಾತ್ರ ಕಿಟ್‌ನಲ್ಲಿ ನೀಡಿದರೆ ರೈತರಿಗೆ ಭವಿಷ್ಯದಲ್ಲಿ ಉಂಟಾಗಬಹುದಾದ ಸಮಸ್ಯೆಗಳನ್ನು ನಿಯಂತ್ರಿಸಬಹುದು ಎಂದು ಡಾ. ಬಿ.ವಿ. ಪಾಟೀಲ್ ಅವರು ಕೃಷಿ ಇಲಾಖೆ ನಿರ್ದೇಶಕರಿಗೆ ಅ.4ರಂದು ಬರೆದಿರುವ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.
- ಕೆರೆ ಮಂಜುನಾಥ್