ಟಿಬಿಡ್ಯಾಂ ನೀರು ಹಸಿರು ಬಣ್ಣಕ್ಕೆ!
ಕ.ಪ್ರ.ವಾರ್ತೆ, ಮುನಿರಾಬಾದ್, ಅ. 8-
ವಿಪರೀತ ರಾಸಾಯನಿಕ ಮಿಶ್ರಣದಿಂದ ತುಂಗಭದ್ರಾ ಜಲಾಶಯದ ನೀರು ಸಂಪೂರ್ಣವಾಗಿ ಹಸಿರು ಬಣ್ಣಕ್ಕೆ ತಿರುಗಿದೆ. ಇದರಿಂದ ಜಲಾಶಯದ ನೀರನ್ನು ಶುದ್ಧೀಕರಿಸದೆ ಬಳಸುವುದರಿಂದ ಜನ, ಜಾನುವಾರುಗಳು ಹಾಗೂ ಜಲಚರ ಜೀವಿಗಳ ಮೇಲೆ ವ್ಯಾಪಕ ಪರಿಣಾಮ ಬೀರುವ ಸಾಧ್ಯತೆಗಳಿವೆ.
2008ರಲ್ಲಿ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗಿದಾಗ ಹೊಸಪೇಟೆಯ ನಗರಸಭೆ ಅಧಿಕಾರಿಗಳು ನೀರಿನ ಸ್ಯಾಂಪಲ್ ಅನ್ನು ಪರೀಕ್ಷೆಗಾಗಿ ಧಾರವಾಡದ ಪರಿಸರ ನಿಯಂತ್ರಣ ಮಂಡಳಿಗೆ ಕಳುಹಿಸಿದ್ದರು. ಮಂಡಳಿಯು ಜಲಾಶಯದ ನೀರು ಶುದ್ಧೀಕರಿಸದೆ ಕುಡಿಯಲು ಯೋಗ್ಯವಲ್ಲ ಎಂಬ ವರದಿ ನೀಡಿತು. ವರದಿ ಬಂದ ನಂತರ ನಗರಸಭೆ ಹಾಗೂ ಜಿಲ್ಲಾಡಳಿತ ಸುಮ್ಮನೆ ಕುಳಿತವು. ನೀರನ್ನು ಶುದ್ಧೀಕರಿಸದ ಕಾರಣ ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ, ಬೈಲುವದ್ದಿಗೇರಿ, ಗಾದಿಗನೂರಿನ ಗ್ರಾಮದ ಜನರು ವಾಂತಿ-ಭೇದಿಯಿಂದ ನರಳಿದರು. ಇದೇ ನೀರಿನ ಬಳಕೆಯಿಂದ ಅಲ್ಲದೇ ಗಾದಿಗನೂರಿನಲ್ಲಿ 4 ವರ್ಷದ ಮಗುವೊಂದು ರೋಗಕ್ಕೆ ತುತ್ತಾಗಿ ತೀರಿಕೊಂಡಿತು. ಮೀನುಗಳು ಸತ್ತವು.
ಬತ್ತದ ಗದ್ದೆಗಳಿಗೆ ಕುಲಷಿತ ನೀರು: ಅಚ್ಚುಕಟ್ಟು ಪ್ರದೇಶದ ಬಳ್ಳಾರಿ, ಕೊಪ್ಪಳ, ರಾಯಚೂರು, ಕರ್ನೂಲ್, ಕಡಪ ಹಾಗೂ ಆನಂತಪುರ ಜಿಲ್ಲೆಗಳಲ್ಲಿ ಸುಮಾರು 20 ಲಕ್ಷ ಎಕರೆ ಪ್ರದೇಶದಲ್ಲಿ ಬತ್ತ ಬೆಳೆಯಲಾಗುತ್ತಿದೆ. ಈ ಆರು ಜಿಲ್ಲೆಗಳ ಲಕ್ಷಾಂತರ ರೈತರ ಗದ್ದೆಗಳಿಗೆ ಹಸಿರು ಬಣ್ಣಕ್ಕೆ ತಿರುಗಿದ ನೀರು (ಕುಲಷಿತ ನೀರನ್ನು) ಪೂರೈಸಲಾಗುತ್ತಿದೆ. ಇಂಥ ನೀರಿನಿಂದ ಬೆಳೆಗೆ ಯಾವುದೇ ಹಾನಿ ಇಲ್ಲ. ಮನುಷ್ಯರು ಮಾತ್ರ ನೀರನ್ನು ಸಂಸ್ಕರಿಸದೇ ಕುಡಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ನಿರ್ಲಕ್ಷ್ಯ: ಪರಿಸರವನ್ನು ರಕ್ಷಿಸಬೇಕಾದ ಹೊಣೆ ರಾಜ್ಯ ಪರಿಸರ ನಿಯಂತ್ರಣ ಮಂಡಳಿಯ ಮೇಲಿದ್ದು, ತುಂಗಭದ್ರಾ ಜಲಾಶಯದ ನೀರು ಸುಮಾರು 3 ಬಾರಿ ಹಸಿರು ಬಣ್ಣಕ್ಕೆ ತಿರುಗಿದೆ. ಆದರೂ ಪರಿಸರ ಮಂಡಳಿ ಮಾತ್ರ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಎರಡು ರಾಜ್ಯಗಳ ಹಿತವನ್ನು ಕಾಯಬೇಕಾಗಿದ್ದು, ತುಂಗಭದ್ರಾ ಮಂಡಳಿಯೂ ಪರಿಸರ ನಿಯಂತ್ರಣ ಮಂಡಳಿ ದಾರಿಯನ್ನೇ ಅನುಸರಿಸಿದೆ. ಇದು ಈ ಭಾಗದ ರೈತರಲ್ಲಿ ತೀವ್ರ ಆಕೋಶಕ್ಕೆ ಕಾರಣವಾಗಿದೆ.
ಆತಂಕಕಾರಿ ಅಂಶ ಬಹಿರಂಗ
2008ರಲ್ಲಿ ಡ್ಯಾಂನ ನೀರು ಹಸಿರಾದಾಗ ಸ್ಯಾಂಪಲ್ ಅನ್ನು ಪರೀಕ್ಷಿಸಿದ ಪರಿಸರ ನಿಯಂತ್ರಣ ಮಂಡಳಿ ನೀಡಿದ ವರದಿಯು ಈ ಭಾಗದ ಜನರನ್ನು ಆತಂಕಗೊಳ್ಳುವಂತೆ ಮಾಡಿತ್ತು. ಜಲಾಶಯದಲ್ಲಿ ಸಿಒಡಿ (ಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್) ಹಾಗೂ ಡಿಒಡಿ (ಬಯೊಲಾಜಿಕ್ ಆಕ್ಸಿಜನ್ ಡಿಮ್ಯಾಂಡ್) ಪ್ರಮಾಣ 3 ಮಿ.ಗ್ರಾಂ ಇರಬೇಕು. ಆದರೆ, ಜಲಾಶಯದಲ್ಲಿ ಸಿಒಡಿ ಪ್ರಮಾಣ 1125 ಮಿ.ಗ್ರಾಂ.ನಷ್ಟಿತ್ತು. ಹಾಗೂ ಬಿಒಡಿ 200 ಮಿ.ಗ್ರಾಂ.ನಷ್ಟಿತ್ತು. 2009ರಲ್ಲಿ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗಿದಾಗಿ ಕೊಪ್ಪಳದ ಪರಿಸರ ನಿಯಂತ್ರಣ ಮಂಡಳಿ ಜಲಾಶಯದ ನಾಲ್ಕು ಕಡೆಯಿಂದ (ತುಂಗಭದ್ರಾ ಜಲಾಶಯದ ಬಲಗಡೆ, ಎಡಗಡೆ, ಇಂದ್ರಭವನ ಹಾಗೂ ಅತಿಥಿ ಗೃಹದ) ಹಸಿರು ಬಣ್ಣಕ್ಕೆ ತಿರುಗಿದ ನೀರನ್ನು ಸಂಗ್ರಹಿಸಿ ಅದನ್ನು ರಾಯಚೂರಿನಲ್ಲಿರುವ ಪರಿಸರ ನಿಯಂತ್ರಣ ಮಂಡಳಿ ಕಚೇರಿಗೆ ಕಳುಹಿಸಿತು. ಆಗಿನ ವರದಿ ಮತ್ತಷ್ಟು ಆತಂಕಕಾರಿಯಾಗಿತ್ತು. ಇಂದ್ರ ಭವಾನ್ ಹಾಗೂ ಅತಿಥಿ ಗೃಹದ ಸಮೀಪ ಸಂಗ್ರಹಿಸಿದ ನೀರಿನಲ್ಲಿ ಸಿಒಡಿ ಪ್ರಮಾಣ 10,712 ಎಂ.ಜಿ. ಹಾಗೂ ಡಿಒಡಿ ಪ್ರಮಾಣ 3,300 ಎಂ.ಜಿ. ಇತ್ತು! ಪರಿಸರ ನಿಗಮದ ವೈಜ್ಞಾನಿಕ ಅಧಿಕಾರಿಗಳನ್ನು ಇದನ್ನು ದೃಢೀಕರಿಸಿದ್ದಾರೆ.
- ಎಸ್.ನಾರಾಯಣ್