ಪರಿಶಿಷ್ಟರ ಕಾಲೋನಿಗಳ ಸುಧಾರಣೆಗೆ 234 ಕೋಟಿ
ಅನುದಾನ ಪೋಲಾಗದಂತೆ ನೋಡಿಕೊಳ್ಳಲು ತಜ್ಞರ ಪರಿಶೀಲನಾ ತಂಡ
ಕ.ಪ್ರ.ವಾರ್ತೆ, ಬೆಂಗಳೂರು, ಅ. 8-
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿಗಾಗಿ ನಿರ್ಮಿಸಿರುವ ಕಾಲನಿಗಳು ನಾಯಿ- ನರಿ ವಾಸ ಮಾಡುವ ಸ್ಥಳಗಳಿಗಿಂತ ಕೆಟ್ಟದಾಗಿದ್ದು, ಇವುಗಳ ಸುಧಾರಣೆಗಾಗಿ 234 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಈ ವಿಷಯ ತಿಳಿಸಿರುವ ಅವರು, ಸಮಾಜಕಲ್ಯಾಣ ಇಲಾಖೆಯ ಕ್ರೋಡೀಕೃತ ನಿಧಿಯಿಂದ ಈ ಅನುದಾನ ಬಿಡುಗಡೆ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ವ್ಯಕ್ತಿಗಳು ವಾಸಿಸುವ ಓಣಿ, ಕೇರಿ, ರಸ್ತೆಗಳ ಅಭಿವೃದ್ಧಿಗೆ ಈ ಹಣ ಬಳಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಲೋಪ ತಡೆಯುವುದಕ್ಕಾಗಿ ಹಾಗೂ ಹಣ ಪೋಲಾಗದಂತೆ ನೋಡಿಕೊಳ್ಳಲು ತಜ್ಞರ ಪರಿಶೀಲನಾ ತಂಡವನ್ನು ರಚಿಸಲಾಗುವುದು ಎಂದು ಹೇಳಿದರು. ರಾಜ್ಯದ 32 ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟರ ವಾಸಸ್ಥಳ ಸುಧಾರಣೆಗೆ ತಲಾ ರು. 1ಕೋಟಿ ನಿಗದಿಗೊಳಿಸಲಾಗಿದೆ. ಆಯಾ ಶಾಸಕರು ಕಾಮಗಾರಿ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ನಿಗದಿತ ಅವಧಿಯೊಳಗೆ ಸಲ್ಲಿಸಲು ಸೂಚಿಸಲಾಗಿದೆ. 30 ಸಾವಿರಕ್ಕಿಂತ ಹೆಚ್ಚು ಪರಿಶಿಷ್ಟ ಜಾತಿ ಜನಸಂಖ್ಯೆ ಹೊಂದಿರುವ 106 ಸಾಮಾನ್ಯ ವಿಧಾನಸಭಾ ಕ್ಷೇತ್ರಗಳಿಗೆ ತಲಾ 75 ಲಕ್ಷ, 30 ಸಾವಿರಕ್ಕಿಂತ ಕಡಿಮೆ ಪರಿಶಿಷ್ಟ ಜಾತಿ ಜನಸಂಖ್ಯೆ ಇರುವ 49 ವಿಧಾನಸಭಾ ಕ್ಷೇತ್ರಗಳಿಗೆ ತಲಾ 50 ಲಕ್ಷ ವೆಚ್ಚ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಈ ಮೂರು ವರ್ಗಗಳ ಕ್ಷೇತ್ರಗಳಿಗೆ ಒಟ್ಟಾರೆಯಾಗಿ 136 ಕೋಟಿಯನ್ನು ಪರಿಶಿಷ್ಟರ ವಾಸಸ್ಥಳಗಳ ಸಮಗ್ರ ಅಭಿವೃದ್ಧಿಗೆ ನೀಡಲಾಗುವುದು. ಆಯಾ ಕ್ಷೇತ್ರದ ಶಾಸಕರು ಹೆಚ್ಚು ಆಸಕ್ತಿ ವಹಿಸಿ ಕೆಲಸ ಮಾಡುವಂತೆ ಮನವಿ ಮಾಡಿದ್ದಾರೆ. ಅದೇ ರೀತಿ ಪರಿಶಿಷ್ಟ ವರ್ಗದ ಶಾಸಕರು ಇರುವ 15 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆ ವರ್ಗದ ಜನರ ವಾಸಸ್ಥಳ ಸುಧಾರಣೆಗೆ ತಲಾ 1 ಕೋಟಿ ಅನುದಾನ ನೀಡಲಾಗುವುದು. ಶೇ.20ಕ್ಕಿಂತ ಹೆಚ್ಚು ಪರಿಶಿಷ್ಟ ವರ್ಗದ ಜನರು ಇರುವ 83 ವಿಧಾನಸಭಾ ಕ್ಷೇತ್ರಗಳಿಗೆ ತಲಾ 60 ಲಕ್ಷ, ಶೇ.20ಕ್ಕಿಂತ ಕಡಿಮೆ ಪರಿಶಿಷ್ಟ ವರ್ಗದ ಜನರು ಇರುವ 85 ವಿಧಾನಸಭಾ ಕ್ಷೇತ್ರಗಳಿಗೆ ತಲಾ 40 ಲಕ್ಷ ಅನುದಾನ ನಿಗದಿಗೊಳಿಸಲಾಗಿದೆ. ಇಂಥ ಕ್ಷೇತ್ರಗಳಿಗೆ ಒಟ್ಟು 98.80 ಕೋಟಿ ಅನುದಾನ ನೀಡಲಾಗುವುದು ಎಂದು ಹೇಳಿದರು. ಅದೇ ರೀತಿ ಬ್ರಾಹ್ಮಣ ಹಾಗೂ ವೈಶ್ಯ ಜಾತಿಯಲ್ಲಿರುವ ಬಡವರಿಗೂ ಸರ್ಕಾರಿ ಸೌಲಭ್ಯ ನೀಡಲು ನಮ್ಮ ಸರ್ಕಾರ ನಿರ್ಧರಿಸಿದೆ. ಎಲ್ಲ ಜಾತಿಯ ಬಡವರಿಗೆ ನೆರವು ನೀಡುತ್ತಿರುವಾಗ ಈ ಎರಡು ಜಾತಿಯನ್ನು ಏಕೆ ಬಿಡಬೇಕು? ವಿದ್ಯಾಸಿರಿ ಯೋಜನೆ ಜಾರಿ ಸಂದರ್ಭದಲ್ಲೇ ಈ ವಿಚಾರ ಸ್ಪಷ್ಟಪಡಿಸಿದ್ದು, ಸದ್ಯದಲ್ಲೇ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.
ಟೋಪಿ ಹಾಕುವ ವರ್ಗವೇ ಬೇರೆ
ಈ ದೇಶದಲ್ಲಿ ಬಡವ ಸರ್ಕಾರಕ್ಕೆ ಟೋಪಿ ಹಾಕುವುದಿಲ್ಲ. ಟೋಪಿ ಹಾಕುವುದಕ್ಕೆಂದೇ ಬೇರೆ ವರ್ಗವಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅಭಿಪ್ರಾಯಪಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ ಈ ಪ್ರತಿಕ್ರಿಯೆ ನೀಡಿರುವ ಅವರು ನಮ್ಮ ಅಧ್ಯಕ್ಷರು ಟೋಪಿ ಹಾಕಿ ಎಂದು ಹೇಳಿಲ್ಲ. ಈ ಬಗ್ಗೆ ಅವರೇ ನೀಡಿದ ಪತ್ರಿಕಾ ಹೇಳಿಕೆ ಗಮನಿಸಿದ್ದೇನೆ. ಹೀಗಾಗಿ ಪ್ರತಿಕ್ರಿಯೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು. ಆದರೆ ದೇಶದ ಬಡವರು ಹಾಗೂ ಮಧ್ಯಮವರ್ಗದವರು ಎಂದೂ ಸರ್ಕಾರಕ್ಕೆ ಟೋಪಿ ಹಾಕಿಲ್ಲ. ಅದಕ್ಕಾಗಿ ಬೇರೆ ವರ್ಗವೇ ಇದೆ. ಲಕ್ಷಾಂತರ ರು. ವ್ಯವಹಾರ ನಡೆಸುವ ಬಹುರಾಷ್ಟ್ರೀಯ ಕಂಪನಿಗಳೇ ಟೋಪಿ ಹಾಕುವವರು. ಈ ದೇಶದ ಬಡವ ಸ್ವಾಭಿಮಾನಿ. ಆತ್ಮಗೌರವ ಹೊಂದಿದ್ದಾನೆ ಎಂದು ಹೇಳಿದರು.