ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪ್ರತ್ಯೇಕ ದುರಂತ 9 ಮಂದಿ ಸಾವು

ಮಂಗಳವಾರ ಸಂಭವಿಸಿದ ರಸ್ತೆ ಅಪಘಾತ ಹಾಗೂ ಎರಡು ವಿದ್ಯುತ್ ಅವಘಡಲ್ಲಿ ಒಂದೇ ಕುಟುಂಬದ ಮೂವರು ಸೇರಿ ಒಟ್ಟು 9 ಜನರು...

Mainashree
Updated On : 9 Oct 2013, 11:40 am

ಬೆಂಗಳೂರು: ಮಂಗಳವಾರ ಸಂಭವಿಸಿದ ರಸ್ತೆ ಅಪಘಾತ ಹಾಗೂ ಎರಡು ವಿದ್ಯುತ್ ಅವಘಡಲ್ಲಿ ಒಂದೇ ಕುಟುಂಬದ ಮೂವರು ಸೇರಿ ಒಟ್ಟು 9 ಜನರು ಮೃತಪಟ್ಟಿದ್ದಾರೆ.  ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ಬಳಿ ಟ್ರ್ಯಾಕ್ಟರ್‌ನ ಹುಕ್ ಕಟ್ಟಾಗಿ ರಸ್ತೆಯ ಪಕ್ಕದ ಗುಂಡಿಗೆ ಬಿದ್ದ ಪರಿಣಾಮ ಐವರು ಮೃತಪಟ್ಟು, 25ರಿಂದ 30 ಜನರು ಗಾಯಗೊಂಡಿದ್ದಾರೆ.
ಅಪಘಾತ ನಡೆದ ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವದಿಂದ ಮೂವರು ಮೃತಪಟ್ಟಿದ್ದು, ಒಬ್ಬ ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮತ್ತೊಬ್ಬ ಬಾಗಲಕೋಟೆ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾನೆ.ಐವರೂ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚೆಲ್ಲಾಪುರ ಗ್ರಾಮದವರು. ಬಸಪ್ಪ ರಾಮಪ್ಪ(32), ಹುಚ್ಚಪ್ಪ ಹಾಡಿನ್(19), ಮೈಲಾರಪ್ಪ ಕುರಹಟ್ಟಿ(35), ಶಿವಪ್ಪ ರಾಮಪ್ಪ ಕುರಿ(55), ನಾಗಪ್ಪ(40) ಮೃತರು.     
ಚೆಲ್ಲಾಪುರದಿಂದ ಹೋಸಪೇಟೆ ಬಳಿ ಇರುವ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿಯ ದರ್ಶನಕ್ಕಾಗಿ ಟ್ರ್ಯಾಕ್ಟರ್‌ನಲ್ಲಿ ಸುಮಾರು 40 ಜನರು ತೆರಳುತ್ತಿದ್ದರು. ಮಂಗಳವಾರ ಬೆಳಗಿನ ಜಾವ 3.30ರ ಸುಮಾರಿಗೆ ಟ್ರಾಕ್ಟರ್ ಹುಕ್ ಕಟ್ಟಾಗಿ ರಸ್ತೆ ಪಕ್ಕದ ಗುಂಡಿಗೆ ಉರುಳಿ ಬಿದ್ದು ದುರ್ಘಟನೆ ಸಂಭವಿಸಿದೆ.

ಒಂದೇ ಕುಟುಂಬದ ಮೂವರ ಸಾವು: ವಿದ್ಯುತ್ ಅವಘಡದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯವಾದ ದಾರುಣ ಘಟನೆ ತಾಲೂಕಿನ ಯಂಕಚ್ಚಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ಭೀಮಶಿ ಗಡದೆ(55) ಹಾಗೂ ಅವರ ಮಕ್ಕಳಾದ ಜ್ಯೋತಿಬಾ ಗಡದೆ(35), ಮುತ್ತಣ್ಣ ಗಡದೆ (33) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಮಗ ಶಿವಪ್ಪ ಗಡದೆ(17) ಗಂಭೀರವಾಗಿ ಗಾಯಗೊಂಡು ಮಿರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಹೇಗಾಯ್ತು?: ಭೀಮಶಿ ಗಡದೆ ತಮ್ಮ ಮೂವರು ಮಕ್ಕಳೊಂದಿಗೆ ಮಂಗಳವಾರ ಕಬ್ಬಿನ ಹೊಲದಲ್ಲಿ ಕೃಷಿ ಕಾರ್ಯದಲ್ಲಿ ನಿರತರಾಗಿದ್ದರು. ಇದೇ ಸಂದರ್ಭದಲ್ಲಿ ಪಕ್ಕದಲ್ಲಿಯೇ ವಿದ್ಯುತ್ ಕಂಬದಿಂದ ಹಳೆಯದಾದ ವಿದ್ಯುತ್ ತಂತಿಯೊಂದು ಹರಿದು ಬೆಳೆಗಳ ಮಧ್ಯೆ ಬಿದ್ದಿತ್ತು.
ಕೆಲಸ ಮಾಡುವಾಗ ಈ ವಿದ್ಯುತ್ ತಂತಿ ತಂದೆಯಾದ ಭೀಮಶಿಗೆ ತಾಗಿದೆ. ವಿದ್ಯುತ್ ಆಘಾತದಿಂದ ಭೀಮಶಿ ನೆಲಕ್ಕೆ ಬಿದ್ದು ಹೊರಳಾಡಲು ಆರಂಭಿಸಿದ್ದಾರೆ. ಇದನ್ನು ನೋಡಿದ ಮಕ್ಕಳಾದ ಜ್ಯೋತಿಬಾ, ಮುತ್ತಣ್ಣ ಹಾಗೂ ಶಿವಪ್ಪ ಸಹ ಓಡಿ ಬಂದಿದ್ದಾರೆ. ಮೂವರು ಮಕ್ಕಳು ತಂದೆಗೆ ಏನೋ ಅನಾರೋಗ್ಯದ ಅಪಾಯವಾಗಿದೆ ಎಂದು ಕೈಹಿಡಿದು ಎಳೆದು ಕೂರಿಸಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಜ್ಯೋತಿಬಾ ಮತ್ತು ಮುತ್ತಣ್ಣ ಸಹ ವಿದ್ಯುತ್ ಪ್ರವಹಿಸಿ ಮೃತರಾಗಿದ್ದಾರೆ. ಇನ್ನೊಬ್ಬ ಮಗ ಶಿವಪ್ಪ ವಿದ್ಯುತ್ ಆಘಾತಕ್ಕೆ ಸಿಡಿದು ಬಿದ್ದಿದ್ದರಿಂದ ಗಂಭೀರವಾಗಿ ಗಾಯವಾಗಿದೆ.

ವಿದ್ಯುತ್ ತಗುಲಿ ಸಾವು: ಬಯಲು ಶೌಚಾಲಯಕ್ಕೆ ತೆರಳಿದ್ದ ಕಟ್ಟಡ ಕಾರ್ಮಿಕನೊಬ್ಬ ಹೈಟೆನ್ಶನ್ ವಿದ್ಯುತ್ ವೈರ್ ಸಂಪರ್ಕಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಸಹಕಾರ ನಗರ ರೇಲ್ವೆ ಸಮಾನಂತರ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ನಿವಾಸಿ ಪವನ್ (20) ಮೃತ ದುರ್ದೈವಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement