ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

2 ಕಿ.ಮೀ. ಓಡಿ ಪ್ರಾಣ ಉಳಿಸಿದ್ರು

ಹಳಿ ಇಲ್ಲದ ಜಾಗದಲ್ಲಿ ರೈಲು ಹೋಗಿದ್ದರೆ..? 600ಕ್ಕೂ ಅಧಿಕ ಪ್ರಯಾಣಿಕರಿದ್ದ ರೈಲು ಹಳಿ ಇಲ್ಲದ ಜಾಗದಲ್ಲಿ ಹೋಗಿದ್ದರೆ ಸಂಭವಿಸಬಹುದಾಗಿದ್ದ ಅನಾಹುತ ನಿರೀಕ್ಷಿಸಲೂ...

Mainashree
Updated On : 10 Oct 2013, 11:38 am

ಬೆಂಗಳೂರು: ಹಳಿ ಇಲ್ಲದ ಜಾಗದಲ್ಲಿ ರೈಲು ಹೋಗಿದ್ದರೆ..? 600ಕ್ಕೂ ಅಧಿಕ ಪ್ರಯಾಣಿಕರಿದ್ದ ರೈಲು ಹಳಿ ಇಲ್ಲದ ಜಾಗದಲ್ಲಿ ಹೋಗಿದ್ದರೆ ಸಂಭವಿಸಬಹುದಾಗಿದ್ದ ಅನಾಹುತ ನಿರೀಕ್ಷಿಸಲೂ ಸಾಧ್ಯವಿರಲಿಲ್ಲ. ರೇಲ್ವೆಯ ಇಬ್ಬರು ಸಿಬ್ಬಂದಿ ಸಂಭವಿಸಬಹುದಾಗಿದ್ದ ಅನಾಹುತವನ್ನು ತಮ್ಮ ಸಮಯಪ್ರಜ್ಞೆಯಿಂದ ತಪ್ಪಿಸಿದ್ದಾರೆ.  ರೇಲ್ವೆ ಗ್ಯಾಂಗ್‌ಮೇಟ್ ಹಾಗೂ ಟ್ರಾಲಿಮ್ಯಾನ್‌ಗಳ ಕರ್ತವ್ಯಪ್ರಜ್ಞೆಯಿಂದಾಗಿ ಬೆಂಗಳೂರು ವಿಭಾಗದ ಧರ್ಮಪುರಿ ಹಾಗೂ ಸೇಲಂ ಸೆಕ್ಷನ್ ನಡುವಿನ ಘಟ್ಟ ಪ್ರದೇಶದಲ್ಲಿ ಭಾರಿ ರೇಲ್ವೆ ಅನಾಹುತ ತಪ್ಪಿದೆ. ಗ್ಯಾಂಗ್ ಮೇಟ್ ಎಸ್. ಮುರುಗನ್ ಹಾಗೂ ಟ್ರಾಲಿಮ್ಯಾನ್ ಎಂ. ವೇಲು ಕರ್ತವ್ಯ ಪ್ರಜ್ಞೆ ಮೆರೆದ ಸಿಬ್ಬಂದಿ.  ಶಿವಾಡಿ- ತೋಪುರ್ ಘಟ್ಟದಲ್ಲಿ ಕೆಲಸ ಮಾಡಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಕೊಚ್ಚಿ ಹೋಗಿದ್ದ ಹಳಿಗಳನ್ನು ಗಮನಿಸಿದ್ದರು.       
ಈ ವೇಳೆ ಭಾರಿ ಮಳೆ ಸುರಿಯುತ್ತಿತ್ತು. ತಕ್ಷಣ ಅವರು ಮನೆಗೆ ಹೋಗುವ ಬದಲು ರೇಲ್ವೆ ಹಳಿಗಳ ಪರಿಶೀಲನೆಗೆ ತೆರಳಿದರು.
ಶಿವಾಡಿ- ತೋಪುರ್ ಘಟ್ಟ ಪ್ರದೇಶದ ನಡುವೆ ಇಬ್ಬರೂ ಕಾಲ್ನಡಿಗೆಯಲ್ಲೇ ಸೇತುವೆಗಳು, ಹಾಗೂ ಎತ್ತರದಲ್ಲಿರುವ ರೇಲ್ವೆ ಹಳಿಗಳ ಪರಿಶೀಲನೆ ನಡೆಸುತ್ತಿದ್ದರು. ರಾತ್ರಿ 8 ಗಂಟೆ ಸುಮಾರಿಗೆ 44/100 ಕಿಲೋ ಮೀಟರ್‌ನಲ್ಲಿ ಹಳಿಗಳ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತಿತ್ತು.
ಅಲ್ಲದೇ ಸ್ವಲ್ಪ ಸಮಯದಲ್ಲೇ ಈ ಮಾರ್ಗದಲ್ಲಿ 600ಕ್ಕೂ ಅಧಿಕ ಪ್ರಯಾಣಿಕರಿದ್ದ 56242 ಸಂಖ್ಯೆಯ ಯಶವಂತಪುರ- ಸೇಲಂ ಪ್ಯಾಸೆಂಜರ್ ರೈಲು ಬರುವುದಿತ್ತು. ಕೂಡಲೇ ಎಚ್ಚೆತ್ತ ಮುರುಗನ್ ಹಾಗೂ ವೇಲು ಅಲ್ಲಿಂದ 2 ಕಿಲೋ ಮೀಟರ್ ದೂರದಲ್ಲಿರುವ ಮುತ್ತಂಪಟ್ಟಿ ರೇಲ್ವೆ ನಿಲ್ದಾಣದವರೆಗೂ ಓಡಿ ಪ್ಯಾಸೆಂಜರ್ ರೈಲನ್ನು ಮುತ್ತಂಪಟ್ಟಿ ನಿಲ್ದಾಣದಲ್ಲಿ ನಿಲ್ಲಿಸಲು ಸೂಚಿಸಿದರು.  
ಬಳಿಕ ಇತರ ಸಿಬ್ಬಂದಿ ನೀರು ಹರಿಯುತ್ತಿದ್ದ ಸ್ಥಳಕ್ಕೆ ಹೋಗಿ ನೋಡಿದಾಗ ಕ್ಷಣಕಾಲ ಅವರ ಹೃದಯ ಬಡಿತವೇ ನಿಂತು ಹೋದ ಅನುಭವ ಆಗಿತ್ತು. ಏಕೆಂದರೆ ಅಲ್ಲಿ ಬರೋಬ್ಬರಿ 20 ಮೀಟರ್‌ನಷ್ಟು ಹಳಿ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಒಂದು ವೇಳೆ ರೈಲು ಏನಾದರೂ ಆ ಮಾರ್ಗದಲ್ಲಿ ಬಂದಿದ್ದರೆ ಭಾರಿ ದುರಂತ ಸಂಭವಿಸುತ್ತಿತ್ತು.
ಮುರುಗನ್ ಹಾಗು ವೇಲು ಸಮಯ ಪ್ರಜ್ಞೆಯನ್ನು ಕೊಂಡಾಡಿರುವ ನೈಋತ್ಯ ರೇಲ್ವೆ ವ್ಯವಸ್ಥಾಪಕ ಇಬ್ಬರಿಗೂ 5 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.
ಕೊಚ್ಚಿಕೊಂಡು ಹೋಗಿದ್ದ ಹಳಿಯನ್ನು ಸರಿಪಡಿಸಿದ ಬಳಿಕ ಬುಧವಾರ ಬೆಳಗಿನ ಜಾವ 3.15ಕ್ಕೆ ರೈಲುಗಳ ಸಂಚಾರಕ್ಕೆ ಮಾರ್ಗವನ್ನು ಅನುವು ಮಾಡಿಕೊಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement