65 ಕಂಪನಿಗಳಿಗೆ ಅರಣ್ಯ ತೆರಿಗೆ ಕಂಟಕ
ಕ.ಪ್ರ.ವಾರ್ತೆ, ಬಳ್ಳಾರಿ, ಅ. 9-
ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಪ್ರಮಾಣ ಹೆಚ್ಚಾಗಿದೆ. ಇದು ರಾಜ್ಯಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಸಮಸ್ಯೆಯನ್ನು ಇತ್ಯರ್ಥಗೊಳಿಸುವುದು ಸುಲಭದ ಮಾತಲ್ಲ.
ಇದೀಗ ಆಂಧ್ರಪ್ರದೇಶದ ಸಚಿವರೇ ಪ್ರವಾಹ ಕಾಲುವೆ ನಿರ್ಮಾಣ, ಕಾಲುವೆಗಳ ಆಧುನೀಕರಣದ ಮಾತುಕತೆಗೆ ಸಿದ್ಧವಾಗುವ ಮೂಲಕ ಸಮಸ್ಯೆಗೆ ಇತಿಶ್ರೀ ಹಾಡಲು ಮುಂದಾಗಿದ್ದು, ರಾಜ್ಯ ಸರ್ಕಾರ ನಿಟ್ಟುಸಿರು ಬಿಡುವಂತಾಗಿದೆ. ಮಾತುಕತೆ ಸಾಕಾರಗೊಂಡರೆ ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆಗೆ ಬಗೆಹರಿಯಲಿದೆ.
ಬಳ್ಳಾರಿ, ಕೊಪ್ಪಳ, ರಾಯಚೂರು ಸೇರಿದಂತೆ ಆಂಧ್ರಪ್ರದೇಶದ ಕೆಲವು ಜಿಲ್ಲೆಗಳಿಗೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯವೇ ಜೀವನಾಡಿ. ಮಳೆ ಸರಿಯಾಗಿ ಬಾರದಿದ್ದರೂ, ರೈತರ ಬಾಳಿಗೆ ಆಶಾಕಿರಣ. 133 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ ಹೂಳು ಹೆಚ್ಚಾಗಿದ್ದರಿಂದ 100.855 ಟಿಎಂಸಿಗೆ ಬಂದಿರುವುದು ರೈತರಲ್ಲಿ ಆತಂಕ ಮೂಡಿಸಿತ್ತು. ಜಲಾಶಯದ ಹೂಳನ್ನು ತೆಗೆಯಲಾಗುತ್ತದೆ ಎಂದು ಹಿಂದಿನ ಬಿಜೆಪಿ ಸರ್ಕಾರ ನೀಡಿದ ಭರವಸೆಯನ್ನು ಈಡೇರಿಸಲಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ ಹೂಳೆತ್ತುವ ಭರವಸೆ ನೀಡಿದ ಬೆನ್ನಲ್ಲೇ ಆಂಧ್ರ ಸರ್ಕಾರದ ಸಚಿವರು ಮಾತುಕತೆಗೆ ಮುಂದಾಗಿದ್ದಾರೆ.
ಆಂಧ್ರ ಸಚಿವರಿಂದ ಪಾಟೀಲ್ಗೆ ಪತ್ರ: ಆಂಧ್ರಪ್ರದೇಶದ ಅನಂತಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ. ಎನ್. ರಘುವೀರಾ ರೆಡ್ಡಿ ಅವರು ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಪತ್ರ ಬರೆದಿದ್ದಾರೆ. ಟಿಬಿ ಬೋರ್ಡ್ ಎಚ್ಎಲ್ ಕಾಲುವೆಯ ನೀರು ಹಂಚಿಕೆ ಹಾಗೂ ಟಿಬಿ ಬೋರ್ಡ್ ಪ್ರವಾಹ ನೀರಿನ ಕಾಲುವೆಗಳ ಅಗಲೀಕರಣ ಹಾಗೂ ಆಧುನೀಕರಣದ ಕುರಿತು ಚರ್ಚಿಸಲು ಆಂಧ್ರ ಸರ್ಕಾರ ಸಿದ್ಧವಿದೆ. ಅ.20ರಿಂದ 25ರೊಳಗಾಗಿ ಸಭೆ ನಿಗದಿ ಮಾಡಿದರೆ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಲು ಸಿದ್ಧ ಎಂದು ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ.
ಎಚ್ಚೆತ್ತುಕೊಳ್ಳುವುದು ಅಗತ್ಯ: ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಹೂಳು ತೆಗೆಯುವುದು ಸಾಧ್ಯವಾಗದ ಕೆಲಸ. ಪರ್ಯಾಯ ವ್ಯವಸ್ಥೆಗೆ ಚಿಂತಿಸಿರುವ ರಾಜ್ಯ ಸರ್ಕಾರಕ್ಕೆ ಇದೀಗ ಆಂಧ್ರವೇ ಮಾತುಕತೆಗೆ ಆಹ್ವಾನಿಸಿರುವುದರಿಂದ ಕೂಡಲೇ ರಾಜ್ಯ ಸರ್ಕಾರ ಪ್ರತಿಕ್ರಿಯೆ ನೀಡಬೇಕಿದೆ. ಜಲಾಶಯವು ಎರಡು ರಾಜ್ಯಗಳಿಗೆ ಸಂಬಂಧಿಸಿದ್ದರಿಂದ ಜಲಾಶಯದ ಕುರಿತಾಗಿ ಯಾವುದೇ ನಿರ್ಣಯಗಳು ಕೈಗೊಳ್ಳಬೇಕಾದರೆ ಎರಡು ರಾಜ್ಯಗಳ ಸಂಬಂಧಪಟ್ಟ ಸಚಿವರು, ಅಧಿಕಾರಿಗಳು ಚರ್ಚಿಸಿ ಕ್ರಮಕ್ಕೆ ಮುಂದಾಗಬೇಕು.
ಜಲಾಶಯದ ಹೂಳೆತ್ತುವುದು ಕಷ್ಟ. ಅತ್ತ ಜಲಾಶಯದ ಎತ್ತರ ಹೆಚ್ಚಿಸುವುದು ತೀರಾ ಕಷ್ಟದ ಕೆಲಸ. ಪರ್ಯಾಯವೆಂಬಂತೆ ಪ್ರವಾಹ ಕಾಲುವೆ ನಿರ್ಮಾಣ ಅಥವಾ ಸಮಾಂತರ ಜಲಾಶಯ ನಿರ್ಮಿಸುವ ಅಗತ್ಯವಿದೆ. ಇದೀಗ ಆಂಧ್ರಪ್ರದೇಶದ ಸಚಿವರ ಮನವಿಯಂತೆ ಸಭೆಯ ದಿನಾಂಕ ನಿರ್ಧರಿಸಿ, ಚರ್ಚಿಸಿ, ಚರ್ಚೆಯಲ್ಲಿ ಸಕಾರಾತ್ಮಕ ನಿರ್ಧಾರಕ್ಕೆ ಬಂದರೆ, ಜಲಾಶಯದ ಹೂಳಿನ ಸಮಸ್ಯೆಗೆ ಪರಿಹಾರ ಸಿಕ್ಕಂತೆಯೇ ಸರಿ.
- ಶಶಿಧರ ಮೇಟಿ