ಅಕಾಡೆಮಿಗಳ ಹೆಸರಿಗೆ ಲೆಕ್ಕ; ಆದರಿಲ್ಲ ಪಕ್ಕಾ
ಬ್ಯಾರಿ ಅಕಾಡೆಮಿಯಿಂದ ಪಾವತಿಸಬೇಕಾದ ಬಹುತೇಕ ಮೊಬಲಗುಗಳು ಅಕಾಡೆಮಿ ಅಧ್ಯಕ್ಷರು ಮತ್ತು ರಿಜಿಸ್ಟ್ರಾರ್ ಖಾಸಗಿ ಖಾತೆಗೆ ಜಮೆಯಾಗಿದ್ದರೆ, ತುಳು...
ಕನ್ನಡಪ್ರಭ ವಾರ್ತೆ, ಬೆಂಗಳೂರು, ಅ.9-
ಬ್ಯಾರಿ ಅಕಾಡೆಮಿಯಿಂದ ಪಾವತಿಸಬೇಕಾದ ಬಹುತೇಕ ಮೊಬಲಗುಗಳು ಅಕಾಡೆಮಿ ಅಧ್ಯಕ್ಷರು ಮತ್ತು ರಿಜಿಸ್ಟ್ರಾರ್ ಖಾಸಗಿ ಖಾತೆಗೆ ಜಮೆಯಾಗಿದ್ದರೆ, ತುಳು ಅಕಾಡೆಮಿಯಲ್ಲಿ ಸಂಸ್ಥೆಗಳ ಬದಲಿಗೆ ವ್ಯಕ್ತಿಗಳಿಗೇ ಹಣ ಪಾವತಿಸಲಾಗಿದೆ!
ಇನ್ನು ತುಳು ಅಕಾಡೆಮಿಯ ಕಾರ್ಯಕ್ರಮವೊಂದರ ಭೋಜನ ವ್ಯವಸ್ಥೆಗೆ ಕೊಟೇಶನ್ ಒಬ್ಬರದ್ದು, ಬಿಲ್ ಇನ್ನೊಬ್ಬರದ್ದು, ಪಾವತಿಸಿದ್ದು ಮತ್ತೊಬ್ಬರ ಹೆಸರಿಗೆ!
ವಿಶೇಷವಾಗಿ ಕೊಂಕಣಿ ಮತ್ತು ಬ್ಯಾರಿ ಅಕಾಡೆಮಿಗಳು ಲೆಕ್ಕದ ವಿಷಯದಲ್ಲಿ ಮಾತ್ರ ಎಲ್ಲ ನಿಯಮಗಳನ್ನು ಮಂಗಳೂರಿನ ಸಮುದ್ರದ ಗಾಳಿಗೆ ತೂರಿಬಿಟ್ಟಿವೆ. ಸಚಿವರು, ಹಿರಿಯ ಅಧಿಕಾರಿಗಳ ಬೆಂಬಲ ಬೇರೆ? ಕೊಂಕಣಿ ಅಕಾಡೆಮಿ ಅಧ್ಯಕ್ಷರು ಸಿನಿಮಾ ಕ್ಷೇತ್ರದ ನಂಟಿರುವ ಕಾಸರಗೋಡು ಚಿನ್ನ. ಅವರಿಗೆ ಸಚಿವೆ ಉಮಾಶ್ರೀ ಆಪ್ತರಂತೆ!
ಇದರ ಪರಿಣಾಮವಾಗಿ ಪ್ರತಿ ತಿಂಗಳು ವೇತನ, ತಿರುಗಾಟ ವೆಚ್ಚದ ಜತೆಗೆ ಸರಿ ಸುಮಾರು 1 ಲಕ್ಷವನ್ನು ಪ್ರತಿ ತಿಂಗಳೂ ಅಕಾಡೆಮಿಯಿಂದ ಪಡೆಯುತ್ತಿದ್ದಾರೆ. ಅಧ್ಯಕ್ಷರಾದಾಗಿನಿಂದಲೂ ಇದು ಚಾಲ್ತಿಯಲ್ಲಿದೆ. ಯಾರಾದರೂ ಪ್ರಶ್ನೆ ಮಾಡಿದರೆ 'ಉಮಾಶ್ರೀ' ಹೆಸರು ಹೇಳ್ತಾರಂತೆ!
ತುಳು ಅಕಾಡೆಮಿ ಲೆಕ್ಕಪರಿಶೋಧನಾ ವರದಿ ಪ್ರಕಾರ ನಿಗದಿತ ಅನುದಾನಕ್ಕಿಂತ 16.63 ಲಕ್ಷ ಹೆಚ್ಚು ಹಣವನ್ನು ವೆಚ್ಚ ಮಾಡಿದೆ! 2011- 12ರಲ್ಲಿ ತುಳು ಅಕಾಡೆಮಿಗೆ ಮುಂಗಡಪತ್ರದಲ್ಲಿ 53 ಲಕ್ಷ ಅನುದಾನ ನೀಡಲಾಗಿದೆ. ಆದರೆ ತುಳು ಅಕಾಡೆಮಿ 69.63 ಲಕ್ಷ ಖರ್ಚು ಮಾಡಿದೆ! ತುಳು ಅಕಾಡೆಮಿ ಒಂದು ಕಾರ್ಯಕ್ರಮ ಆಯೋಜಿಸಿತ್ತು. ಅಲ್ಲಿ ಊಟದ ವ್ಯವಸ್ಥೆಗೆಂದು ವೆಂಕಟ್ರಮಣ ಭಟ್ ಎಂಬವರಿಂದ ಕೊಟೇಶನ್ ಪಡೆದಿದೆ. ಕುಂಟಿನಿ ಕ್ಯಾಟರಿಂಗ್ ಅವರಿಂದ ಸ್ವೀಕೃತಿ ಪತ್ರ ಪಡೆದಿದೆ. ಹಾಗೆಯೇ ಹಣವನ್ನು ಪಾವತಿ ಮಾಡಿದ್ದು ಸೀತಾರಾಮ ರೈ ಅವರಿಗೆ! ಒಟ್ಟು ಮೊತ್ತ 4.86 ಲಕ್ಷ. ಆದರೂ ಸರ್ಕಾರದ ನಿಯಮದಂತೆ ಟೆಂಡರ್ ಕರೆಯದೇ ಗುತ್ತಿಗೆ ನೀಡಲಾಗಿದೆ.
ಅಧ್ಯಕ್ಷರ ಖಾತೆಗೇ ಹಣ: ಬ್ಯಾರಿ ಅಕಾಡೆಮಿ ಕತೆ ಇನ್ನೂ ಚೆನ್ನಾಗಿದೆ. ಅಕಾಡೆಮಿಯ ಕೆಲಸ ಕಾರ್ಯಗಳಿಗೆ ನಾನು ಕೈಯಿಂದ ಹಣ ಹಾಕಿದ್ದೇನೆ. ಆದ್ದರಿಂದ ಈ ಮೊತ್ತವನ್ನು ನನಗೇ ನೀಡಿ ಎಂದು ಅಧ್ಯಕ್ಷರು ಅವರ ಬ್ಯಾಂಕ್ ಖಾತೆಗೇ ಹಣ ಪಡೆದುಕೊಂಡಿದ್ದಾರೆ.
ಹೀಗೆ ಪಡೆದುಕೊಂಡ ಮೊತ್ತ 26 ಸಾವಿರ ದಾಟಿದೆ! ಸರ್ಕಾರದ ನಿಯಮಗಳ ಪ್ರಕಾರ ಯಾವುದೇ ಕೆಲಸಕ್ಕೆ 10,000 ವರೆಗೆ ಮುಂಗಡ ಪಡೆಯಲು ಅವಕಾಶವಿದೆ. ಆದರೆ ಬ್ಯಾರಿ ಅಕಾಡೆಮಿಯಲ್ಲಿ 40,000 ವರೆಗೆ ಮುಂಗಡ ಪಡೆಯಲಾಗಿದೆ.
ಲೆಕ್ಕ ಇಲ್ಲ ಪಕ್ಕಾ: ಅಕಾಡೆಮಿಗಳು ಯಾವುದೇ ಕಾರ್ಯಕ್ರಮ ನಡೆಸಿದರೆ ಅಥವಾ ಕಾರ್ಯಕ್ರಮ ಪ್ರಾಯೋಜಿಸಿದರೆ ಅದಕ್ಕೆ ಹಣವನ್ನು ಸಂಸ್ಥೆಗಳಿಗೆ ಚೆಕ್ ರೂಪದಲ್ಲಿ ನೀಡಬೇಕು. ಇದು ಕಡ್ಡಾಯ. ಆದರೆ ತುಳು ಮತ್ತು ಬ್ಯಾರಿ ಅಕಾಡೆಮಿಗಳಲ್ಲಿ ಹಣವನ್ನು ಖಾಸಗಿ ವ್ಯಕ್ತಿಗಳಿಗೆ ನೀಡಲಾಗಿದೆ. ಕಾರ್ಯಕ್ರಮದ ಪ್ರಾಯೋಜಕತ್ವ, ಊಟ, ವಸತಿ ವ್ಯವಸ್ಥೆ ಮುಂತಾದ ಎಲ್ಲ ಕೆಲಸಗಳಿಗೂ ವ್ಯಕ್ತಿಗಳಿಗೆ ಹಣ ನೀಡಲಾಗಿದೆ. ಇದು ಸಂಪೂರ್ಣ ಕಾನೂನು ಬಾಹಿರ.
ಅಕಾಡೆಮಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇರಬೇಕು. ಆದರೆ ಕೊಂಕಣಿ ಅಕಾಡೆಮಿ ಪ್ರಾಯೋಜಿತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಪ್ರತಿನಿಧಿಗಳಿಂದ 250 ಶುಲ್ಕ ಪಡೆಯಲಾಗಿದೆ.
ಬ್ಯಾರಿ ಅಕಾಡೆಮಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಊಟಕ್ಕೆ ಭರ್ಜರಿ ವೆಚ್ವಾಗುತ್ತಿದೆ.
ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಷ್ಟು ಎಂಬ ಬಗ್ಗೆ ಅಕಾಡೆಮಿಯಲ್ಲಿ ಯಾವುದೇ ಲೆಕ್ಕ ಅಥವಾ ದಾಖಲೆ ಇಲ್ಲ!
- ವಿಶೇಷ ವರದಿ