ಕಡಲೆಗೆ ನಿಷೇಧಿತ ಕೀಟನಾಶಕ ಇಲ್ಲ
ಬೆಂಗಳೂರು: ಕಡಲೆ ಬೆಳೆಗಾರರಿಗೆ ನೀಡಲಾಗುವ ಕಿಟ್ನಲ್ಲಿ ನಿಷೇಧಿತ ಮತ್ತು ಅಪಾಯಕಾರಿ ಕೀಟನಾಶಕಗಳನ್ನು ತೆಗೆದುಹಾಕಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದಾರೆ. 'ಕಡಲೆ ಕೃಷಿಗೆ ನಿಷೇಧಿತ ಕೀಟನಾಶಕ ಕೊಟ್ಟ ಸರ್ಕಾರ' ಶೀರ್ಷಿಕೆಯಡಿ 'ಕನ್ನಡಪ್ರಭ'ದಲ್ಲಿ ಬುಧವಾರ ಪ್ರಕಟವಾದ ಲೇಖನ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ತಾಂತ್ರಿಕ ತಜ್ಞರ ಸಮಿತಿ ಹಾಗೂ ಕೇಂದ್ರ ಕೀಟನಾಶಕ ಮಂಡಳಿ ಶಿಫಾರಸು ಮಾಡಿರುವ ಕೀಟನಾಶಕಗಳನ್ನೇ ಕಡಲೆ ರೈತರಿಗೆ ಕಿಟ್ ಮೂಲಕ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಕಡಲೆ ಬೆಳೆಗೆ ಪೋಷಕಾಂಶ ಹಾಗೂ ಕೀಟನಾಶಕ ಕಿಟ್ ನೀಡುವ ಸಂಬಂಧ ಕರೆದಿದ್ದ ಪ್ರಥಮ ಟೆಂಡರ್ನಲ್ಲಿ ಒಬ್ಬರು ಮಾತ್ರ ಭಾಗವಹಿಸಿದ್ದರು. ಅಲ್ಲದೆ, ತಾಂತ್ರಿಕ ತಜ್ಞರ ಸಮಿತಿಯ ಅಧ್ಯಕ್ಷ ಕುಲಪತಿ ಡಾ. ಬಿ.ವಿ. ಪಾಟೀಲ್ ಅವರ ಸಮಿತಿ ನೀಡಿದ್ದ ವರದಿಯಲ್ಲಿ ಕೆಲವೇ ಉತ್ಪನ್ನಗಳು ನಮೂದಾಗಿದ್ದವು. ಆದ್ದರಿಂದ ಅವರು ನೀಡಿರುವ ಉತ್ಪನ್ನ ಸೇರಿದಂತೆ ಇತರೆ ಉತ್ಪನ್ನಗಳನ್ನೂ ಸೇರಿಸಿ ಮರು ಟೆಂಡರ್ ಕರೆಯಲು ಸೂಚಿಸಲಾಗಿತ್ತು. ಮರು ಟೆಂಡರ್ನಲ್ಲೂ ಪರಿಸರಕ್ಕೆ ಮಾರಕ ಹಾಗೂ ಅಪಾಯಕಾರಿ ಕೀಟನಾಶಕಗಳು ಇರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ವಿವರ ನೀಡಿದರು. ಡಾ. ಬಿ.ವಿ. ಪಾಟೀಲ್ ಅವರು ಅ.4ರಂದು ಬರೆದಿರುವ ಪತ್ರ ನನ್ನ ಗಮನಕ್ಕೆ ಬಂದಿಲ್ಲ. ಅ.7ರಂದು ಅವರು ನನ್ನ ಜತೆಯಲ್ಲೇ ಇದ್ದರು. ಅವರು ಈ ವಿಚಾರ ಪ್ರಸ್ತಾಪಿಸಿರಲಿಲ್ಲ. ಆ ಪತ್ರವನ್ನು ಪರಿಶೀಲಿಸುತ್ತೇನೆ. ತಾಂತ್ರಿಕ ತಜ್ಞರ ಸಮಿತಿ ಶಿಫಾರಸು ಹಾಗೂ ಕೇಂದ್ರ ಕೀಟನಾಶಕ ಮಂಡಳಿ ಸೂಚಿಸಿರುವ ಕೀಟನಾಶಕಗಳನ್ನು ಮಾತ್ರ ನೀಡಲಾಗುತ್ತದೆ ಎಂದು ಆಶ್ವಾಸನೆ ನೀಡಿದರು. ಕಿಟ್ನಲ್ಲಿ ಪೋಷಕಾಂಶ ಹಾಗೂ ಕೀಟನಾಶಕಗಳು ಇವೆ. ಪೋಷಕಾಂಶ ನೀಡುವುದಕ್ಕೆ ವಿಳಂಬವಾಗುತ್ತದೆ ಎಂಬ ಮಾತು ಸರಿ ಇದೆ. ಆದಷ್ಟು ಬೇಗ ಕಿಟ್ಗಳನ್ನು ನೀಡುವ ಪ್ರಕ್ರಿಯೆ ಪೂರ್ಣಗೊಳಿಸುತ್ತೇನೆ ಎಂದರು.
ಪ್ರತಿ ಜಿಲ್ಲೆಯಲ್ಲಿ 'ಪರಿಶೀಲನಾ ಸಭೆ'
ಮಂಗಳೂರು: ಮಹಿಳೆಯರು, ಮಕ್ಕಳು, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಕುಂದುಕೊರತೆ ಆಲಿಸಲು, ಇಲಾಖೆಗಳು ಕೈಗೊಂಡಿರುವ ಕ್ರಮ ಪರಿಶೀಲಿಸಲು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಪ್ರತಿ ಜಿಲ್ಲೆಗೆ ಭೇಟಿ ನೀಡಿ 'ಪರಿಶೀಲನಾ ಸಭೆ' ನಡೆಸಲಿದೆ ಎಂದು ಸಮಿತಿ ಅಧ್ಯಕ್ಷೆ, ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು. ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿರುವ ಕಾರ್ಯಕ್ರಮ, ಯೋಜನೆಗಳು ರಾಜ್ಯದ ಉದ್ದಗಲಕ್ಕೂ ತಳಮಟ್ಟದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಂಡಿದೆಯೇ ಹಾಗೂ ಅನುಷ್ಠಾನಗೊಳ್ಳುತ್ತಿದೆಯೇ ಎಂಬುದನ್ನು ಪರಿಶೀಲಿಸಲಿದೆ. ಮಹಿಳೆಯರ ಮೇಲೆ ನಡೆದ ವಿವಿಧ ದೌರ್ಜನ್ಯಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಕೈಗೊಂಡ ಕ್ರಮಗಳನ್ನು ಅಧಿಕಾರಿ ಹಾಗೂ ಸಿಬ್ಬಂದಿ ಸಮಕ್ಷಮ ಪರಿಶೀಲಿಸಲಿದೆ. ಇದಕ್ಕಾಗಿ ಎಲ್ಲ ಜಿಲ್ಲೆಗಳನ್ನು ವಿಭಾಗವಾರು ವಿಂಗಡಿಸಿ ಪ್ರತಿ ವಿಭಾಗಕ್ಕೂ ಕನಿಷ್ಠ ಒಂದು ತಿಂಗಳ ಮುಂಚೆ ಸಮಿತಿಯ ಪ್ರಶ್ನೋತ್ತರ ರವಾನಿಸಲಾಗುತ್ತದೆ ಎಂದರು.