ನಿರಶನಕ್ಕೆ ಬ್ರೇಕ್
ತೆಲಂಗಾಣ ರಾಜ್ಯ ರಚನೆ ನಿರ್ಧಾರದಿಂದ ಸೀಮಾಂಧ್ರದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಅಂತ್ಯಗೊಳ್ಳುವ ಲಕ್ಷಣ ಗೋಚರಿಸಿದೆ.
ಹೈದರಾಬಾದ್: ತೆಲಂಗಾಣ ರಾಜ್ಯ ರಚನೆ ನಿರ್ಧಾರದಿಂದ ಸೀಮಾಂಧ್ರದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಅಂತ್ಯಗೊಳ್ಳುವ ಲಕ್ಷಣ ಗೋಚರಿಸಿದೆ. ಕಳೆದ ಐದು ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಸರ್ಕಾರಿ ನೌಕರರು ಸರ್ಕಾರದ ಜತೆಗಿನ ಮಾತುಕತೆ ಬಳಿಕ ಬುಧವಾರ ತಮ್ಮ ನಿಲುವು ಸಡಿಲಿಸುವ ಸುಳಿವು ನೀಡಿದ್ದಾರೆ. ಇದರ ಬೆನ್ನಲ್ಲೇ ತಡ ರಾತ್ರಿ ಕಾರ್ಯಾಚರಣೆ ನಡೆಸಿದ ಹೈದರಾಬಾದ್ ಪೊಲೀಸರು ಜಗನ್ ರೆಡ್ಡಿ ಉಪವಾಸಕ್ಕೆ ಬ್ರೇಕ್ ಹಾಕಿದ್ದಾರೆ.
ಪ್ರತ್ಯೇಕ ರಾಜ್ಯ ರಚನೆ ವಿರೋಧಿಸಿ 5 ದಿನಗಳಿಂದ ವೈಎಸ್ಸಾರ್ ಕಾಂಗ್ರೆಸ್ ಸಂಸದ ಜ್ಯುಬಿಲಿ ಹಿಲ್ಸ್‌ನಲ್ಲಿ ಉಪವಾಸ ನಿರತರಾಗಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಉಪವಾಸ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಜಗನ್ ಬೆಂಬಲಿಗರು ನಿರ್ಮಿಸಿದ್ದ ಬ್ಯಾರಿಕೇಡ್‌ಗಳನ್ನು ಧ್ವಂಸಗೊಳಿಸಿ ವೈಎಸ್ಸಾರ್ ಕಾಂಗ್ರೆಸ್ ಮುಖಂಡನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ಅವರನ್ನು ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇಂದು, ನಾಳೆ ತೀರ್ಮಾನ: ಈ ನಡುವೆ, ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಜತೆಗೆ ಮಾತುಕತೆ ನಡೆಸಿದ ಪತ್ರಾಂಕಿತೇತರ ನೌಕರರು ತಮ್ಮ ಹಿತಾಸಕ್ತಿ ಕಾಯುವ ಕುರಿತು ಕೇಂದ್ರದಿಂದ ಸ್ಪಷ್ಟ ಭರವಸೆ ನೀಡಬೇಕೆಂದು ಮನವಿ ಮಾಡಿದರು. ಈ ಸಂಬಂಧ ರಾಜ್ಯದ ಮುಖ್ಯ ಕಾರ್ಯದರ್ಶಿ ಜತೆ ಮಾತುಕತೆ ನಡೆಸಿದ ಬಳಿಕ ಅ.10 ಅಥವಾ 11ರಂದು ಮುಷ್ಕರ ಕೈಬಿಡುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸುಳಿವು ನೀಡಿದ್ದಾರೆ. ಆದರೆ, ಸಂಯುಕ್ತ ಆಂಧ್ರದ ವಿಚಾರಕ್ಕೆ ಸಂಬಂಧಿಸಿದ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನೌಕರರ ಸಂಘದ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ. ಇದೇ ವೇಳೆ, ವಿದ್ಯುತ್ ನೌಕರರು ಕೂಡ ಆದಷ್ಟು ಶೀಘ್ರ ಕೆಲಸಕ್ಕೆ ಹಾಜರಾಗುವ ಸೂಚನೆ ನೀಡಿದ್ದಾರೆ.
6 ಸಾವಿರ ಕೋಟಿ ನಷ್ಟ: ವಿದ್ಯುತ್ ವಿತರಣೆ ಹಾಗೂ ನಿರ್ಮಾಣ ಕಂಪನಿಗಳ ನೌಕರರ ಮುಷ್ಕರದಿಂದಾಗಿ ರಾಜ್ಯದ ಬಹುತೇಕ ಕೈಗಾರಿಕೆಗಳು ಮತ್ತು ಐಟಿ ಉದ್ಯಮಗಳ ಮೇಲೆ ಭಾರಿ ಹೊಡೆತ ನೀಡಿದೆ. ತಜ್ಞರ ಪ್ರಕಾರ, ಕಳೆದ 3 ದಿನಗಳಲ್ಲಿ ಒಟ್ಟು 6 ಸಾವಿರ ಕೋಟಿ ನಷ್ಟವಾಗಿದೆ.
ಆಂಧ್ರ ಮುಖ್ಯಮಂತ್ರಿ ಅಡ್ಡಿ
ಪ್ರತ್ಯೇಕ ರಾಜ್ಯ ರಚನೆಗೆ ಆಂಧ್ರ ಸಿಎಂ ಕಿರಣ್ ಕುಮಾರ್ ರೆಡ್ಡಿ ಅವರೇ ಬಹುದೊಡ್ಡ ಅಡ್ಡಿ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ದಿನೇಶ್ ರೆಡ್ಡಿ ಆರೋಪಿಸಿದ್ದಾರೆ. ಅವರು ಬೇಕೆಂದೇ ಹೊಸ ರಾಜ್ಯ ರಚನೆಗೆ ವಿರುದ್ಧವಾಗಿ ವರದಿ ನೀಡುವಂತೆ ಸೂಚಿಸಿದ್ದರು. ತೆಲಂಗಾಣ ರಚನೆಯಾದರೆ ನಕ್ಸಲರ ಸಮಸ್ಯೆ ಉಲ್ಬಣಗೊಳ್ಳಲಿದೆ ಎಂದು ವರದಿಯಲ್ಲಿ ತಿಳಿಸುವಂತೆ ಹೇಳಿದ್ದರು ಎಂದು ದಿನೇಶ್ ದೂರಿದ್ದಾರೆ. ಈ ನಡುವೆ, ನವದೆಹಲಿಯ ಆಂಧ್ರಭವನದಲ್ಲಿ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಅವರು ಅನುಮತಿಯಿಲ್ಲದೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ನಿರಶನದ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲ್ಲ ಎಂದು ಗೃಹ ಸಚಿವ ಶಿಂದೆ ಹೇಳಿದ್ದಾರೆ. ಅದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಶಿಂದೆ ತಿಳಿಸಿದ್ದಾರೆ. ಅನುಮತಿಯಿಲ್ಲದೆ ನಿರಶನ ನಡೆಸುತ್ತಿರುವ ಚಂದ್ರಬಾಬು ಅವರನ್ನು ಸ್ಥಳಾಂತರಿಸಲು ಕೇಂದ್ರ ಗೃಹ ಸಚಿವಾಲಯದ ನೆರವು ಕೋರಿ ಆಂಧ್ರ ಸರ್ಕಾರ ಪತ್ರಬರೆದಿತ್ತು.
ನಾಳೆ ಸಮಿತಿ ಸಭೆ
ಆಂಧ್ರವಿಭಜನೆಗೆ ಸಂಬಂಧಿಸಿ ಚರ್ಚೆ ನಡೆಸಲು ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ನೇತೃತ್ವದ ಕೇಂದ್ರ ಸಚಿವರ ಸಮಿತಿ ಶುಕ್ರವಾರ ದೆಹಲಿಯಲ್ಲಿ ಸಭೆ ಸೇರಲಿದೆ. ಸಭೆಯಲ್ಲಿ ಹೊಸ ರಾಜ್ಯದ ಗಡಿ ಹಾಗೂ ಸ್ವರೂಪದ ಕುರಿತು ಚರ್ಚೆ ನಡೆಯಲಿದೆ.
ಮರುಪರಿಶೀಲನೆ ಇಲ್ಲ
ತೆಲಂಗಾಣ ರಚನೆಯನ್ನು ಮರುಪರಿಶೀಲಿಸುವ ಪ್ರಶ್ನೆಯೇ ಇಲ್ಲ. ಸರ್ಕಾರ ಈಗ ಏನು ನಿರ್ಧಾರ ತೆಗೆದುಕೊಂಡಿದೆ ಅದೇ ಅಂತಿಮ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳ ಜತೆಗೆ ವಿಸ್ತೃತ ಚರ್ಚೆಯ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂಬರುವ ಲೋಕಸಭಾ ಚುನಾವಣೆಗೂ ಮೊದಲು ಪ್ರತ್ಯೇಕ ರಾಜ್ಯ ರಚನೆ ಮಾಡಲು ಸಾಧ್ಯವಾದ ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.