ಅಕ್ರಮ ಗಣಿ ಕಂಪನಿಗಳ ವಿರುದ್ಧ ಕೇಸ್
ಬೆಂಗಳೂರು: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಗಣಿ ಕಂಪನಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸರ್ಕಾರ ಚಿಂತನೆ ನಡೆಸಿದೆ.
ಆದರೆ, ಇದು ಸಿ ಕೆಟಗರಿ ಗಣಿ ಕಂಪನಿಗಳಿಗೆ ಅನ್ವಯವಾಗುವುದಿಲ್ಲ. ಬದಲಾಗಿ ಎ ಮತ್ತು ಬಿ ಕೆಟಗರಿ ಗಣಿ ಕಂಪನಿಗಳ ವಿರುದ್ಧ ಮಾತ್ರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿಯುವ ಬಗ್ಗೆ ಸರ್ಕಾರ ಯೋಚಿಸಿದೆ.
ಸಿ ಕೆಟಗರಿ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ ಹಿನ್ನೆಲೆಯಲ್ಲಿ ಈ ವರ್ಗದ ಎಲ್ಲಾ ಗಣಿ ಕಂಪನಿಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ. ಹೀಗಾಗಿ ಇವರಿಗೆ ಎರಡೆರಡು ಶಿಕ್ಷೆ ಬೇಡ ಎಂಬ ಕಾರಣಕ್ಕೆ ಕ್ರಿಮಿನಲ್ ಮೊಕದ್ದಮೆಯಿಂದ ಸಿ ಕೆಟಗರಿ ಗಣಿ ಕಂಪನಿಗಳನ್ನು ಹೊರಗಿಡಬೇಕು ಎಂಬುದು ಸರ್ಕಾರದ ಆಲೋಚನೆ.
ಅಕ್ರಮ ಗಣಿಗಾರಿಕೆ ಕುರಿತಂತೆ ನೀಡಿರುವ ಲೋಕಾಯುಕ್ತ ವರದಿಯಲ್ಲಿ ಸಿ ಕೆಟಗರಿ ಮಾತ್ರವಲ್ಲದೆ ಎ ಮತ್ತು ಬಿ ಕೆಟಗರಿ ಗಣಿ ಕಂಪನಿಗಳೂ ಅಕ್ರಮ ನಡೆಸಿರುವ ಬಗ್ಗೆ ಹೇಳಲಾಗಿತ್ತು. ಜತೆಗೆ ಈ ಕಂಪನಿಗಳ ಮೇಲೂ ಕ್ರಮಕ್ಕೆ ಶಿಫಾರಸು ಮಾಡಲಾಗಿತ್ತು.
ಅದರಂತೆ ಅಕ್ರಮ ಎಸಗಿರುವ ಗಣಿ ಕಂಪನಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದರ ಜತೆಗೆ, ನಷ್ಟವಾಗಿರುವ ಖನಿಜದ ಮೌಲ್ಯವನ್ನು ವಸೂಲಿ ಮಾಡುವ ಬಗ್ಗೆ ಶುಕ್ರವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ.