'ಸಚಿನ್ ಆಯ್ಕೆ ಅಷ್ಟು ಸುಲಭವಾಗಿರಲಿಲ್ಲ'
1989ರಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿ ಮೂಲಕವೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸಚಿನ್ ಕಾಲಿಟ್ಟಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಆ ಸರಣಿಗೆ ಸಚಿನ್ ...
ನವದೆಹಲಿ: 1989ರಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿ ಮೂಲಕವೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸಚಿನ್ ಕಾಲಿಟ್ಟಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಆ ಸರಣಿಗೆ ಸಚಿನ್ ಆಯ್ಕೆಯಾಗುವುದು ಅನುಮಾನವಾಗಿತ್ತು ಎಂದರೆ ಅಚ್ಚರಿಯಾಗುವುದೇ. ಹೌದೆನ್ನುತ್ತಾರೆ ಅಂದಿನ ಭಾರತ ಕ್ರಿಕೆಟ್ ತಂಡದ ಆಯ್ಕೆ ಮಂಡಳಿ ಸದಸ್ಯರಾಗಿದ್ದ ಆಕಾಶ್ ಲಾಲ್.
ಪಾಕಿಸ್ತಾನ ಸರಣಿಗಾಗಿ ಭಾರತ ತಂಡವನ್ನು ಆಯ್ಕೆ ಮಾಡಲು ಆಯ್ಕೆ ಮಂಡಳಿ ಸಭೆ ಸೇರಿದ್ದಾಗ, ಸಚಿನ್ ಅವರ ಹೆಸರು ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಆದರೆ, ಆಗ ಸಚಿನ್‌ಗೆ ಕೇವಲ 16 ವರ್ಷ ಆಗಿದ್ದರಿಂದ ಅವರನ್ನು ಸರಣಿಗೆ ಆಯ್ಕೆ ಮಾಡಲು ಆಯ್ಕೆ ಮಂಡಳಿಯ ಕೆಲ ಸದಸ್ಯರು ಹಿಂಜರಿದಿದ್ದರು ಎನ್ನುತ್ತಾರೆ ಆಕಾಶ್.
ಅವರ ಪ್ರಕಾರ, ಆ ಸರಣಿಗೆ ಸಚಿನ್ ಆಯ್ಕೆ ಸರ್ವಸಮ್ಮತವಾಗಿರಲಿಲ್ಲ. ರಾಜ್ ಸಿಂಗ್ ದುಂಗಾರ್ಪುರ್ ಅವರು ಆಯ್ಕೆ ಮಂಡಳಿಯ ಮುಖ್ಯಸ್ಥರಾಗಿದ್ದರು. ಅವರ ಜೊತೆಯಲ್ಲಿ, ಆಕಾಶ್ ಲಾಲ್, ರಮೇಶ್ ಸೆಕ್ಸೇನಾ, ಗುಂಡಪ್ಪ ವಿಶ್ವನಾಥ್ ಹಾಗೂ ನರೇನ್ ತಮ್ಹಾನೆ ಅವರೂ ಇದ್ದರು. ಆದರೆ, ಎಲ್ಲಾ ಸದಸ್ಯರೂ ಸಚಿನ್ ಅವರನ್ನು ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಆಡಿಸಲು ಒಪ್ಪಿರಲಿಲ್ಲ.
ಸಚಿನ್ ಆಯ್ಕೆ ಬಗ್ಗೆ ಸಾಕಷ್ಟು ಚರ್ಚೆ ನಡೆದ ಮೇಲೆ, ಸಭೆಯಲ್ಲಿನ ಸದಸ್ಯರ ಅನುಮೋದನೆಗೆ ಇದನ್ನು ಬಿಡಲಾಯಿತು. ಐದು ಸದಸ್ಯರುಳ್ಳ ಆಯ್ಕೆ ಮಂಡಳಿ ಸಭೆಯಲ್ಲಿ 3-2ರ ಅನುಮೋದನೆ ಸಚಿನ್ ಅವರಿಗೆ ಲಭ್ಯವಾದ ಹಿನ್ನೆಲೆಯಲ್ಲಿ, ಅವರು ಪಾಕಿಸ್ತಾನ ವಿರುದ್ಧದ ಸರಣಿಗೆ ಆಯ್ಕೆಯಾದರು ಎಂದು ಆಕಾಶ್ ತಿಳಿಸಿದ್ದಾರೆ.
ಈಗ ಆಕಾಶ್ ಅವರಿಗೆ 73 ವರ್ಷ. ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಸಚಿನ್ ಅವರು ವಿದಾಯ ಘೋಷಿಸಿದ ಬೆನ್ನಲ್ಲೇ ಆಕಾಶ್,ಅವರು ಮೊದಲ ಟೆಸ್ಟ್ ಸರಣಿಯ ಹಿಂದಿನ ಕೆಲ ಕುತೂಹಲದ ಅಂಶಗಳನ್ನು ಹೊರಗೆಡವಿದ್ದಾರೆ.
ಪಂದ್ಯಗಳು ಗಳಿಸಿದ ರನ್
198 ಟೆಸ್ಟ್‌ಗಳು
15,837 ರನ್
463 ಏಕದಿನ
18,426 ರನ್
96 ಟಿ20 ಪಂದ್ಯ
2,797 ರನ್
ಸಚಿನ್ ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ. ವಿಂಡೀಸ್ ವಿರುದ್ಧದ ಸರಣಿ ಮುನ್ನ ಈ ನಿರ್ಧಾರ ಘೋಷಿಸಿರುವುದು ಸಂತಸ ತಂದಿದೆ. ಸಚಿನ್ ಆಡಲಿರುವ ಟೆಸ್ಟ್ ಪಂದ್ಯಗಳು ಮುಂಬೈ ಅಥವಾ ಕೊಲ್ಕತಾದಲ್ಲೇ ನಡೆಯಲಿ. ಅಭಿಮಾನಿಗಳು ಬಂದು ಪಂದ್ಯ ವೀಕ್ಷಿಸಿ ಈ ಆಟಗಾರನಿಗೆ ಗೌರವಿಸಬೇಕು.
- ಸೌರವ್ ಗಂಗೂಲಿ, ಭಾರತ ತಂಡದ ಮಾಜಿ ನಾಯಕ
ಯಾವುದೋ ಸಂದರ್ಭದಲ್ಲಿ ಈ ನಿರ್ಧಾರ ಹೊರಬರಬೇಕಿತ್ತು. ಇದೊಂದು ಅತ್ಯದ್ಭುತ ವೃತ್ತಿ ಜೀವನ. 24 ವರ್ಷಗಳಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 50 ಸಾವಿರ ರನ್ ಗಳಿಸಿದ್ದಾರೆ. ಅವರಲ್ಲಿ ಇನ್ನೂ ರನ್ ಹಸಿವಿದೆ. ಇದು ಅವರ ವರ್ಣರಂಜಿತ ವೃತ್ತಿ ಜೀವನವನ್ನು ಸಂಭ್ರಮದಿಂದ ಆಚರಿಸುವ ಕ್ಷಣವಾಗಿದೆ ಎನ್ನುವುದು ನನ್ನ ಅಭಿಪ್ರಾಯ.
- ಅನಿಲ್ ಕುಂಬ್ಳೆ, ಭಾರತ ತಂಡದ ಮಾಜಿ ನಾಯಕ
ಸಚಿನ್ ತೆಂಡೂಲ್ಕರ್ ಬುಚ್ಚಿಬಾಬು ಪಂದ್ಯವನ್ನು ಆಡಲು ಚೆನ್ನೈಗೆ ಆಗಮಿಸಿದಾಗಲಿಂದ ಅವರ ಆಟವನ್ನು ಉತ್ಸುಕತೆಯಿಂದ ನೋಡುತ್ತಿದ್ದೆ. ಸಚಿನ್ ಭಾರತ ಕ್ರಿಕೆಟ್‌ಗೆ ಸಲ್ಲಿಸಿದಷ್ಟು ಸೇವೆಯನ್ನು ಯಾರು ಸಲ್ಲಿಸಿಲ್ಲ. ಸಚಿನ್ ಇಲ್ಲದ ಭಾರತ ತಂಡವನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅವರ ನಿರ್ಧಾರವನ್ನು ನಾವು ಗೌರವಿಸಬೇಕು.
- ಎನ್.ಶ್ರೀನಿವಾಸನ್, ಬಿಸಿಸಿಐ ಅಧ್ಯಕ್ಷ