'ಸಿ' ಕೆಟಗರಿಯ 51 ಕಂಪನಿಗಳಿಗೆ ಮತ್ತೊಂದು ಶಾಕ್!
ಕ.ಪ್ರ.ವಾರ್ತೆ ಬಳ್ಳಾರಿ ಅ. 10-
ಈಗಾಗಲೇ ಗಣಿ ಗುತ್ತಿಗೆ ರದ್ದಾದ ಆತಂಕದಲ್ಲಿರುವ 'ಸಿ' ಕೆಟಗರಿಯ 51 ಗಣಿ ಕಂಪನಿ ಮಾಲೀಕರಿಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಿದೆ.
ಕೇಂದ್ರ ಉನ್ನತಾಧಿಕಾರ ಸಮಿತಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ವರದಿಯಲ್ಲಿ ಕೇವಲ 'ಬಿ' ಕೆಟಗರಿ ಗಣಿ ಕಂಪನಿಗಳಿಗೆ ಅಕ್ರಮ ಹಣದ ವಸೂಲಾತಿಗೆ ಶಿಫಾರಸು ಮಾಡಿ, 'ಸಿ' ಕೆಟಗರಿ ಕಂಪನಿಗಳ ಗುಣಿ ಗುತ್ತಿಗೆ ರದ್ಧತಿಗೆ ಮಾತ್ರ ಶಿಫಾರಸು ಮಾಡಿತ್ತು. ಆದರೆ, ನಷ್ಟ ವಸೂಲಾತಿಗೆ ಶಿಫಾರಸು ಮಾಡಿರಲಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 'ಸಿ' ಕೆಟಗರಿಯ 51 ಗಣಿ ಕಂಪನಿಗಳನ್ನು ಈಗಾಗಲೇ ರದ್ಧುಪಡಿಸಿರುವ ರಾಜ್ಯ ಸರ್ಕಾರ ಇದೀಗ ಕಂಪನಿಗಳಿಂದ ಆಗಿರುವ ನಷ್ಟ ಹಾಗೂ ದಂಡ ವಸೂಲಿ ಮಾಡಲು ಮುಂದಾಗಿದೆ.
ಅಧಿಕಾರಿಗಳ ಸಭೆಯಲ್ಲಿ ಚರ್ಚೆ: ಸರ್ಕಾರದ ಮುಖ್ಯಕಾರ್ಯದರ್ಶಿ ಎಸ್.ವಿ. ರಂಗನಾಥ್, ಕೇಂದ್ರದ ಗಣಿ ಇಲಾಖೆ ಕಾರ್ಯದರ್ಶಿ ಆರ್.ಎಚ್. ಖ್ವಾಜಾ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ತುಷಾರಾ ಗಿರಿನಾಥ್, ಉಪಕಾರ್ಯದರ್ಶಿ ಪಿ.ಎಸ್. ಕಾಂತರಾಜ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಶಂಕರನಾರಾಯಣ ಸೇರಿದಂತೆ 26 ಅಧಿಕಾರಿಗಳು 'ಸಿ' ಕೆಟಗರಿ ಗಣಿಗಾರಿಕೆ ಕಂಪನಿಗಳ ಕುರಿತು ಚರ್ಚಿಸಿದ್ದಾರೆ. ಪೆನಾಲ್ಟಿ ಮತ್ತು ಈ ಕಂಪನಿಗಳನ್ನು ಮೈಸೂರ್ ಮಿನರಲ್ಸ್ ಲಿಮಿಟೆಡ್ (ಎಂಎಂಎಲ್)ಗೆ ವಹಿಸಿಕೊಡುವ ವಿಷಯ ಚರ್ಚಿಸಿ 56 ಪುಟಗಳ ಕ್ಯಾಬಿನೆಟ್ ನೋಟ್ ತಯಾರಿಸಿ, ಕ್ಯಾಬಿನೆಟ್ನಲ್ಲಿ ಒಪ್ಪಿಗೆ ಪಡೆಯಲು ಮುಂದಾಗಿದ್ದಾರೆ.
ದಂಡ ವಸೂಲಿ: ಸಿಇಸಿ ಫೆ.3, 2012ರಂದು ತನ್ನ ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದು, ಅದರಲ್ಲಿ 'ಬಿ' ಕೆಟಗರಿ ಕಂಪನಿಗಳ ಅಕ್ರಮದಿಂದಾದ ನಷ್ಟ ವಸೂಲಿ ಮಾಡಲು ತಿಳಿಸಿತ್ತು. ಗಣಿ ಗುತ್ತಿಗೆ ಪ್ರದೇಶದಿಂದ ಹೊರಗಡೆ ಗಣಿಗಾರಿಕೆ ಮಾಡಿದ್ದರೆ ಪ್ರತಿ ಹೆಕ್ಟೇರ್ಗೆ 5 ಕೋಟಿ, ಗಣಿ ಗುತ್ತಿಗೆ ಹೊರಗಡೆ ವೇಸ್ಟ್ ಹಾಕಿದ್ದರೆ ಪ್ರತಿ ಹೆಕ್ಟೇರ್ಗೆ 1 ಕೋಟಿ ದಂಡ ಕೊಡಬೇಕೆಂದು ಹೇಳಿತ್ತು. ಅಲ್ಲದೆ, 'ಸಿ' ಕೆಟಗರಿ ಕಂಪನಿಗಳ ಗಣಿ ರದ್ಧತಿಗೂ ಶಿಫಾರಸು ಮಾಡಿತ್ತು. ಆದರೆ, ಇದೀಗ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಏ.18, 2013ರಂದು ನೀಡಿದ ಆದೇಶದಂತೆ ಸೆ.12ರಂದು 'ಸಿ' ಕೆಟಗರಿಯ 51 ಗಣಿ ಗುತ್ತಿಗೆ ರದ್ಧು ಮಾಡಿ, 51 ಗಣಿ ಕಂಪನಿಗಳಿಂದ ನಷ್ಟ ಹಾಗೂ ದಂಡ ವಸೂಲಿ ಮಾಡಲು ಹೊರಟಿದೆ.
ಸರ್ಕಾರಿ ಸ್ವಾಮ್ಯದ ಕಂಪನಿ ಪಾಲಿಗೆ: 'ಸಿ' ಕೆಟಗರಿ ಗಣಿ ಕಂಪನಿಗಳು ಅಕ್ರಮವಾಗಿ ಎಷ್ಟು ಅದಿರನ್ನು ಹೊರ ತೆಗೆದಿವೆ ಎಂಬುದನ್ನು ಗಣನೆಗೆ ತೆಗೆದುಕೊಂಡು ದಂಡ ಹಾಗೂ ನಷ್ಟ ವಸೂಲಿ ಮಾಡಲು ಸರ್ಕಾರ ಮುಂದಾಗಿದೆ. ಇನ್ನು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ 'ಸಿ' ಕೆಟಗರಿಯ 51 ಗಣಿ ಕಂಪನಿಗಳನ್ನು ಜಾಗತಿಕ ಹರಾಜು ಮಾಡಬೇಕು ಅಥವಾ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ವಹಿಸಿಕೊಡಲು ತಿಳಿಸಿರುವುದರಿಂದ, ಮಿನರಲ್ ಕನ್ಸೇಷನ್ ರೂಲ್ಸ್ 1960ರ 58 (2) ಅಡಿ ಹಾಗೂ ಎಂಎಂಆರ್ಡಿ 1957ರ ನಿಯಮಗಳಡಿ ವಿನಾಯ್ತಿ ಪಡೆದು ಎಂಎಂಎಲ್ಗೆ ವಹಿಸಿಕೊಡಲು ಚಿಂತಿಸಿ, ಕ್ಯಾಬಿನೆಟ್ ನೋಟ್ನಲ್ಲಿ ಪ್ರಸ್ತಾಪಿಸಿದೆ. ಇನ್ನು ಕೇಂದ್ರ ಸರ್ಕಾರ ಸ್ವಾಮ್ಯದ ಎನ್ಎಂಡಿಸಿ ಹಾಗೂ ಕೆಐಒಸಿಎಲ್ (ಕುದುರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್) ತಮಗೂ 51 ಗಣಿ ಕಂಪನಿಗಳಲ್ಲಿ ಕೆಲವನ್ನು ವಹಿಸಿಕೊಡುವಂತೆ ಮನವಿ ಮಾಡಿದ್ದು, ಇದಕ್ಕೆ ರಾಜ್ಯ ಸರ್ಕಾರ ಸಮ್ಮತಿಸಿದೆ.
ಮತ್ತೊಂದು ಕಂಟಕ: ಇನ್ನು 'ಸಿ' ಕೆಟಗರಿಯ 51 ಗಣಿ ಕಂಪನಿಗಳಲ್ಲಿ ಎಚ್.ಜಿ. ರಂಗನಗೌಡ, ತುಂಗಭದ್ರಾ ಮಿನರಲ್ಸ್, ಎಸ್ಬಿ ಮಿನರಲ್ಸ್ ವ್ಯಾಸನಕೆರೆ, ಶಾಂತಲಕ್ಷ್ಮೀ ಜಯರಾಂ ಸೇರಿದಂತೆ ಇತರೆ 15 ಕಂಪನಿಗಳು ಉತ್ಕೃಷ್ಟ ಕಬ್ಬಿಣದ ಅದಿರನ್ನು ಹೊಂದಿರುವುದರಿಂದ ಇಂಥ ಗಣಿ ಕಂಪನಿಗಳಿಂದ ವಾರ್ಷಿಕ 5 ಲಕ್ಷ ಮೆಟ್ರಿಕ್ ಟನ್ನಿಂದ 6 ಲಕ್ಷ ಮೆಟ್ರಿಕ್ ಟನ್ ಅದಿರು ಉತ್ಪಾದಿಸಬಹುದು ಎಂಬುದು ಸರ್ಕಾರದ ಚಿಂತನೆ. ಈಗಾಗಲೇ ಗಣಿ ಕಂಪನಿಗಳು ರದ್ಧತಿ, ಅರಣ್ಯ ಅಭಿವೃದ್ಧಿ ತೆರಿಗೆ ಪಾವತಿಸುವ ಕಂಟಕದೊಂದಿಗೆ ಇದೀಗ ಅಕ್ರಮ ಮಾಡಿರುವ ಬಗ್ಗೆ ನಷ್ಟ ವಸೂಲಾತಿ ಕುರಿತು ಅಧಿಕಾರಿಗಳು ತಯಾರಿಸಿರುವ ಅಂಶಗಳಿಗೆ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದರೆ 'ಸಿ' ಕೆಟಗರಿ ಕಂಪನಿಗಳು ಮತ್ತಷ್ಟು ಆತಂಕ ಎದುರಿಸುವಂತಾಗುತ್ತದೆ.
ಸಿ ಕೆಟಗರಿ ಕಂಪನಿಗಳಲ್ಲಿ ಜನಾರ್ದನ ರೆಡ್ಡಿ, ಅನಿಲ್ ಲಾಡ್, ಸಂತೋಷ್ ಲಾಡ್, ಆನಂದ್ ಸಿಂಗ್ ಸೇರಿದಂತೆ ಹಲವರ ಒಡೆತನದ ಕಂಪನಿಗಳಿವೆ.
- ಶಶಿಧರ ಮೇಟಿ