ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೈವಶಕ್ಕೆ ಜೆಡಿಎಸ್ ಕಚೇರಿ

ಜಾತ್ಯತೀತ ಜನತಾದಳ ಕಚೇರಿ ಇರುವ ಕಟ್ಟಡ ಮತ್ತು ಅದರ ಜಾಗ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು ಎಂದು ಹೈಕೋರ್ಟ್ ತೀರ್ಪು ನೀಡಿದೆ.

Mainashree
Updated On : 12 Oct 2013, 12:50 pm

ಬೆಂಗಳೂರು: ಜಾತ್ಯತೀತ ಜನತಾದಳ ಕಚೇರಿ ಇರುವ ಕಟ್ಟಡ ಮತ್ತು ಅದರ ಜಾಗ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.  ಜೊತೆಗೆ ಕಟ್ಟಡ ಮತ್ತು ಜಾಗವನ್ನು ಕಾಂಗ್ರೆಸ್ ಪಕ್ಷಕ್ಕೆ ಹಿಂದಿರುಗಿಸುವಂತೆ ಅಧೀನ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಜೆಡಿಎಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾ.ಎನ್.ಕುಮಾರ್ ಹಾಗೂ ನ್ಯಾ.ಸೂರಿ ಅಪ್ಪಾರಾವ್ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ.
ಕಟ್ಟಡವನ್ನು ಮೂರು ತಿಂಗಳಲ್ಲಿ ತೆರವುಗೊಳಿಸಬೇಕು. ಅಲ್ಲದೆ, ಸುತ್ತಮುತ್ತ ನಿರ್ಮಿಸಿರುವ ಮಳಿಗೆಗಳಿಂದ ಪಡೆಯುತ್ತಿದ್ದ ಬಾಡಿಗೆ ಹಾಗೂ ಗುತ್ತಿಗೆ ಹಣವನ್ನು ಕಾಂಗ್ರೆಸ್‌ಗೆ ಮರಳಿಸಬೇಕು. ಅಲ್ಲದೆ, ನ್ಯಾಯಾಲಯದ ವ್ಯಾಜ್ಯ ಶುಲ್ಕವನ್ನು ಕೂಡ ಪಾವತಿಸಬೇಕು ಎಂದು ಜೆಡಿಎಸ್ ಪಕ್ಷಕ್ಕೆ ನ್ಯಾಯಪೀಠ ಆದೇಶಿಸಿದೆ.

31 ವರ್ಷಗಳ ಹೋರಾಟ: ಜೆಡಿಎಸ್ ಆಕ್ರಮಿಸಿಕೊಂಡಿರುವ ಕಟ್ಟಡ ಮತ್ತು ಜಾಗ ತಮಗೆ ಸೇರಿದ್ದು ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಮುಖಂಡರು ಕಳೆದ 31 ವರ್ಷಗಳಿಂದ ನಡೆಸುತ್ತಿದ್ದ ಕಾನೂನು ಹೋರಾಟ ಇದರೊಂದಿಗೆ ತಾರ್ಕಿಕ ಅಂತ್ಯ ಕಂಡಿದೆ.
ಬೆಂಗಳೂರು ನಗರ ಕಾಂಗ್ರೆಸ್ ಸಮಿತಿಗೆ ರಂಗಸ್ವಾಮಿ ಎಂಬುವರು ಕಟ್ಟಡ ಇರುವ ಜಾಗವನ್ನು ಕೊಡುಗೆಯಾಗಿ ನೀಡಿದ್ದರು. ಈ ಸ್ಥಳದಲ್ಲಿ ಕಾಂಗ್ರೆಸ್ ಪಕ್ಷ 1954ರಲ್ಲಿ ಕಟ್ಟಡ ನಿರ್ಮಿಸಿತ್ತು.       
1969ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಇಬ್ಭಾಗವಾಗಿ ನಿಜಲಿಂಗಪ್ಪ ಅವರ ನೇತೃತ್ವದ ಕಾಂಗ್ರೆಸ್(ಒ) ಹಾಗೂ ಜಗಜೀವನ್‌ರಾಂ ನೇತೃತ್ವದ ಕಾಂಗ್ರೆಸ್(ಜೆ) ಎಂಬ ಪಕ್ಷಗಳು ರೂಪುಗೊಂಡವು.
ಇದರಲ್ಲಿ ಕಾಂಗ್ರೆಸ್(ಒ) ಪಕ್ಷವನ್ನು ಮೂಲ ಕಾಂಗ್ರೆಸ್ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿತ್ತು. ಇದನ್ನು ಸುಪ್ರೀಂಕೋರ್ಟ್ ಕೂಡ ಮಾನ್ಯ ಮಾಡಿತ್ತು.
ಈ ನಡುವೆ, ದೇವರಾಜ್ ಅರಸು ಅವರ ಅಳಿಯನ ನೇತೃತ್ವದ ತಂಡ ಕಟ್ಟಡದ ಜಾಗವನ್ನು ಅತಿಕ್ರಮಿಸಿಕೊಂಡಿತ್ತು. ಈ ಸಂಬಂಧ ವಿವಾದ ಉಂಟಾದಾಗ ಸರ್ಕಾರ ಆ ಜಾಗವನ್ನು ನಿಷೇಧಾಜ್ಞೆ ಘೋಷಿಸಿ ಸ್ವಾಧೀನಪಡಿಸಿಕೊಂಡಿತ್ತು. ನಂತರ ಕಾಂಗ್ರೆಸ್(ಒ) ಗೆ ಹಿಂದಿರುಗಿಸಿತ್ತು.
1977ರಲ್ಲಿ ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹಿಂಪಡೆದ ನಂತರ ನಡೆದ ಚುನಾವಣೆಯಲ್ಲಿ ಜನತಾ ಪರಿವಾರ, ಕಾಂಗ್ರೆಸ್ (ಒ), ಜನಸಂಘ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದವು. ಈ ಸಂದರ್ಭದಲ್ಲಿ ಜನತಾ ಪಕ್ಷ ಕಾಂಗ್ರೆಸ್ ಕಚೇರಿಯನ್ನು ಆಕ್ರಮಿಸಿಕೊಂಡಿತ್ತು. ನಂತರ 1981ರಲ್ಲಿ ಜನತಾ ಪಕ್ಷ ಈ ಕಚೇರಿಯ ಜಾಗವನ್ನು ತಮ್ಮ ಹೆಸರಿಗೆ ಖಾತೆ ಮಾಡುವಂತೆ ಬೆಂಗಳೂರು ನಗರ ಪಾಲಿಕೆಯ ಮೊರೆ ಹೋಗಿತ್ತು. ಈ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿತ್ತು. ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್ ಅವರಿಗೆ ಕಚೇರಿ ಜಾಗವನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು.
ಅದರಂತೆ ಕಾಂಗ್ರೆಸ್ ಪಕ್ಷ ಕಾನೂನು ಹೋರಾಟಕ್ಕೆ ಮುಂದಾಗಿತ್ತು. ಕಚೇರಿಯ ಪ್ರದೇಶದ ಸ್ವಾಧೀನ ಕೋರಿ 1982ರಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ 2005ರಲ್ಲಿ ಕಚೇರಿ ಜಾಗ ಕಾಂಗ್ರೆಸ್‌ಗೆ ಸೇರಿದ್ದು ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಜೆಡಿಎಸ್ ಮೇಲ್ಮನವಿ ಸಲ್ಲಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement