ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಲೈಸನ್ಸ್ ಇಲ್ಲದೆ 3.04 ಕೋಟಿ ಮೆಟ್ರಿಕ್ ಟನ್ ಅದಿರು ರಫ್ತು

Mainashree
Updated On : 12 Oct 2013, 12:51 pm

ಕ.ಪ್ರ.ವಾರ್ತೆ, ಬಳ್ಳಾರಿ, ಅ. 11-
ಜಿಲ್ಲೆಯಲ್ಲಿ ಅದಿರನ್ನು ಅಕ್ರಮವಾಗಿ ಹೊರ ತೆಗೆಯುವುದಲ್ಲದೆ 2003-04ರಿಂದ 2009-10ರವರೆಗೆ ಪರವಾನಗಿ ಇಲ್ಲದೆ ರಫ್ತು ಮಾಡಿದ ಕುಖ್ಯಾತಿ ರಾಜ್ಯದ ಅದಿರು ಗಣಿಗಾರಿಕೆಗಿದೆ. ಈ ಅವಧಿಯಲ್ಲಿ 3.04 ಕೋಟಿ ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ರಫ್ತು ಮಾಡುವ ಮೂಲಕ ಗಣಿಗಾರಿಕೆ ತನ್ನ ಪ್ರಭಾವ ಮೆರೆದಿದೆ. ಇದು ಸಿಇಸಿ ವರದಿಯಿಂದ ವೇದ್ಯವಾಗುತ್ತದೆ.
ಗಣಿಗಾರಿಕೆಗೆ 220 ವರ್ಷಗಳ ಇತಿಹಾಸವಿದ್ದರೂ ಗಣಿಗಾರಿಕೆ ಎಂಬ ಕಲ್ಪನೆ ಜನರಲ್ಲಿ ಇರಲಿಲ್ಲ. ಆದರೆ, 2000ದಿಂದ ಈಚೆಗೆ ಗಣಿಗಾರಿಕೆ ಮಹತ್ವ ಪಡೆದಿತ್ತು. ಅಲ್ಲಿಂದಲೆ ಹಣದ ಆಸೆ ನೋಡಿದ ಕೆಲವು ಗಣಿ ಮಾಲೀಕರು, ತಮ್ಮ ಅಕ್ರಮ ಚಟುವಟಿಕೆ ಆರಂಭಿಸಿದರು. ಕೇವಲ ಅದಿರು ಹೊರ ತೆಗೆಯುವಲ್ಲಿ, ಅರಣ್ಯ ಒತ್ತುವರಿಯಲ್ಲಿ, ನಿಯಮಗಳ ಉಲ್ಲಂಘಿಸುವಲ್ಲಿ ಮಾತ್ರ ಕರಾಮತ್ತು ಮೆರೆಯದೆ, ಭೂಮಿಯಿಂದ ಹೊರತೆಗೆದ ಅದಿರನ್ನು ವಿದೇಶಕ್ಕೆ ಸಾಗಿಸುವಲ್ಲಿಯೂ ತಮ್ಮ ಪ್ರಭಾವ ಮೆರೆದಿದ್ದಾರೆ. ಹೀಗಾಗಿ, ಪರವಾನಗಿ ಪಡೆಯದೆ ಅದಿರು ರಫ್ತು ಮಾಡಿರುವ ಖ್ಯಾತಿ ಗಣಿ ವಲಯ ಪಡೆದುಕೊಂಡಿದೆ.

ಎಗ್ಗಿಲ್ಲದೆ ಸಾಗಿದ್ದ ಅದಿರು ರಫ್ತು: ಕೇವಲ ಅಧಿಕಾರಿಗಳ ಕಣ್ಣಿಗೆ ಮಣ್ಣೆರೆಚಿ ಗಣಿ ಗುಡ್ಡದಲ್ಲಿ ಅದಿರನ್ನು ಅಕ್ರಮವಾಗಿ ಹೊರ ತೆಗೆದು, ಸಾರಿಗೆ, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಗಣಿ ಲಾಬಿ ತನ್ನ ಪ್ರಭಾವ ಬಳೆಸಿ ಅದಿರನ್ನು ವಿವಿಧ ಬಂದರುಗಳಿಗೆ ಸಾಗಿಸುವಲ್ಲಿ ಯಶಸ್ವಿಯಾಗಿದೆ. ಇಂಥ ಸಾಗಾಣಿಕೆ ಕೇವಲ 2-3 ವರ್ಷಗಳಿಂದ ಆಗಿದ್ದಲ್ಲ. 9 ವರ್ಷಗಳಿಂದಲೂ ಅಕ್ರಮ ಸಾಗಾಣೆ ಚಾಲ್ತಿಯಲ್ಲಿತ್ತು ಎಂಬುದನ್ನು ಸಿಇಸಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ವರದಿಯಲ್ಲಿ 2003-04ರಿಂದ ಪರವಾನಗಿ ಇಲ್ಲದೆ ಅದಿರು ರಫ್ತು ಮಾಡಿರುವ ವಿಷಯವನ್ನು ತಿಳಿಸಿದೆ.

3.04 ಕೋಟಿ ಮೆಟ್ರಿಕ್ ಟನ್ ಅದಿರು:
2003-04ರಿಂದ 2009-10ರ ವರೆಗೆ 3,04,90,729 ಮೆಟ್ರಿಕ್ ಅದಿರನ್ನು ಪರವಾನಗಿ ಇಲ್ಲದೆ ವಿವಿಧ ಬಂದರುಗಳ ಮೂಲಕ ರಫ್ತು ಮಾಡಲಾಗಿದೆ. ಈ ಏಳು ವರ್ಷಗಳ ಅವಧಿಯಲ್ಲಿ ಕೇವಲ 4,70,43,196 ಮೆಟ್ರಿಕ್ ಟನ್ ಅದಿರಿಗೆ ಮಾತ್ರ ಪರವಾನಗಿ ಪಡೆದಿದ್ದಾರೆ. ಆದರೆ, 7,75,33,925 ಮೆಟ್ರಿಕ್ ಟನ್ ಅದಿರನ್ನು ವಿವಿಧ ಬಂದರುಗಳ ಮೂಲಕ ರಫ್ತು ಮಾಡಿದ್ದಾರೆ. ಅಂದರೆ ಸುಮಾರು 3,04,90,729 ಮೆಟ್ರಿಕ್ ಟನ್ ಅದಿರು ಪರವಾನಗಿ ಇಲ್ಲದೆ ರಫ್ತಾಗಿದೆ. ಕದ್ದುಮುಚ್ಚಿ ಅದಿರು ಸಾಗಿಸಲು ಇದೇನು ಸಣ್ಣ ವಸ್ತುವಲ್ಲ. ಲಾರಿಗಳಲ್ಲಿ ಅದಿರನ್ನು ಸಾಗಿಸುವಾಗ ಸಂಬಂಧಪಟ್ಟ ಅಧಿಕಾರಿಗಳ ಕಣ್ಣಿಗೆ ಕಾಣದಿರುವುದು ಮಾತ್ರ ಆಶ್ಚರ್ಯಕ್ಕೆ ಕಾರಣವಾಗಿದೆ.

ವರ್ಷವಾರು ಮಾಹಿತಿ: 2003-04ರಲ್ಲಿ 25,27,001 ಟನ್ ರಫ್ತಿಗೆ ಪರವಾನಗಿ ನೀಡಿದ್ದರೆ, 45,76,964 ಮೆಟ್ರಿಕ್ ಟನ್ ಅದಿರು ರಫ್ತಾಗಿದೆ. ಅಂದರೆ, 20,49,963 ಮೆಟ್ರಕ್ ಟನ್ ಅದಿರು ಪರವಾನಗಿ ಇಲ್ಲದೆ ಹೊರ ಹೋಗಿದೆ. 2004-05ರಲ್ಲಿ 64,51,665 ಮೆ.ಟನ್ಗೆ ಪರವಾನಗಿ ಪಡೆದು, 1,16,91,183 ಮೆ.ಟನ್ ರಫ್ತು ಮಾಡಿದ್ದು, 52,39,518 ಮೆ.ಟನ್ ಅದಿರು ಅಕ್ರಮ ರಫ್ತಾಗಿದ್ದರೆ, 2005-06ರಲ್ಲಿ 92,99,600 ಮೆ.ಟನ್ ಅದಿರು ಪರವಾನಗಿ ಪಡೆದು, 1,14,71,092 ಮೆ.ಟನ್ ಅದಿರು ರಫ್ತು ಮಾಡಿದ್ದು, 21,71,492 ಮೆ.ಟನ್ ಪರವಾನಗಿ ಇಲ್ಲದೆ ರಫ್ತು ಮಾಡಲಾಗಿದೆ. 2006-07ರಲ್ಲಿ 60,55,833 ಮೆ.ಟನ್ ಅದಿರಿಗೆ ಪರವಾನಗಿ ನೀಡಿದ್ದರೆ, 1,08,00,478 ಮೆ.ಟನ್ ರಫ್ತು ಮಾಡಿದ್ದು, 47,44,645 ಮೆ.ಟನ್ ಪರವಾನಗಿ ಇಲ್ಲದೆ ಸಾಗಿಸಲಾಗಿದೆ.
2007-08ರಲ್ಲಿ 89,73,490 ಮೆ.ಟನ್ ಅದಿರು ರಫ್ತಿಗೆ ಪರವಾನಗಿ ನೀಡಿದ್ದರೆ, 1,47,34,538 ಮೆ.ಟನ್ ರಫ್ತು ಮಾಡಿದ್ದಾರೆ. 57,61,048 ಮೆ.ಟನ್ ಅದಿರು ಪರವಾನಗಿ ಇಲ್ಲದೆ ರಫ್ತು ಮಾಡಿದ್ದಾರೆ, 2008-09ರಲ್ಲಿ 76,64,125 ಮೆ.ಟನ್ ಅದಿರು ಪರವಾನಗಿ ನೀಡಿದ್ದರೆ, 1,10,60,251 ಮೆ.ಟನ್ ರಫ್ತು ಮಾಡಿದ್ದು, 33,96,126 ಮೆ.ಟನ್ ಪರವಾನಗಿ ಇಲ್ಲದೆ ರಫ್ತು ಮಾಡಲಾಗಿದೆ. ಇನ್ನು 2009-10ರಲ್ಲಿ 60,71,482 ಮೆ.ಟನ್ ರಫ್ತಿಗೆ ಪರವಾನಗಿ ಪಡೆದು 1,31,99,419 ಮೆ.ಟನ್ ಅದಿರು ರಫ್ತು ಮಾಡುವ ಮೂಲಕ 71,27,937 ಮೆ.ಟನ್ ಅದಿರು ಪರವಾನಗಿ ಇಲ್ಲದೆ ರಫ್ತು ಮಾಡಿರುವುದು ವರದಿಯಿಂದ ತಿಳಿದುಬಂದಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ನಷ್ಟವಾಗಿದೆ.
ಈ ಮೂಲಕ ಗಣಿಗಾರಿಕೆ ಎಂಬುದು ಎಲ್ಲ ಆಯಾಮಗಳಿಂದ ಸಂಪೂರ್ಣ ಅಕ್ರಮವಾಗಿ ನಡೆದಿದೆ ಎಂದು ತಿಳಿಯುತ್ತದೆ. ಇದಕ್ಕೆ ಆಯಾ ಇಲಾಖೆಗಳ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತುಕೊಳ್ಳುವ ಮೂಲಕ ಸಹಕಾರ ನೀಡಿದ್ದು ಮಾತ್ರ ಅಕ್ಷಮ್ಯ ಅಪರಾಧವೇ ಸರಿ.

- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement