ಕೊಂಕಣ ರೇಲ್ವೆಗೆ ಕರೆಂಟ್ ಕನೆಕ್ಷನ್
ಕ.ಪ್ರ.ವಾರ್ತೆ ಕಾರವಾರ ಅ. 12
ದೇಶದ ವಾಣಿಜ್ಯ ನಗರಿ ಮುಂಬೈ ಹಾಗೂ ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಕೊಂಕಣ ರೇಲ್ವೆ ಮಾರ್ಗದಲ್ಲಿ ಸದ್ಯದಲ್ಲಿಯೇ ಎಲೆಕ್ಟ್ರಿಕ್ ರೈಲುಗಳು ಓಡಲಿವೆ. ಜತೆಗೆ ಇನ್ನೊಂದು ರೇಲ್ವೆ ಟ್ರ್ಯಾಕ್ ಅಳವಡಿಸಲು ಕೊಂಕಣ ರೇಲ್ವೆ 15,000 ಕೋಟಿಯ ಯೋಜನೆ ಸಿದ್ಧಪಡಿಸಿದೆ.
ಸದ್ಯ ಕೊಂಕಣ ರೇಲ್ವೆ ಮಾರ್ಗದಲ್ಲಿ ಒಂದೇ ಟ್ರ್ಯಾಕ್ ಇದೆ. ಇದರಲ್ಲಿ 38 ಪ್ರಯಾಣಿಕರ ರೈಲುಗಳು ಓಡುತ್ತಿವೆ. ಹೀಗಾಗಿ ರೈಲಿನ ವೇಗದಲ್ಲಿ ಹೆಚ್ಚಳ ಮಾಡುವುದು ಹಾಗೂ ಉಳಿತಾಯ ಹೆಚ್ಚಿಸಲು ವಿದ್ಯುತ್ ಆಧಾರಿತ ರೈಲನ್ನು ಓಡಿಸುವುದು ನಿಗಮದ ಸದ್ಯದ ಗುರಿ. ರೇಲ್ವೆ ಮಾರ್ಗದ ವಿದ್ಯುದ್ದೀಕರಣಕ್ಕಾಗಿ ನಿಗಮ ಈಗಾಗಲೇ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಿ 600 ಕೋಟಿಯ ಯೋಜನೆ ಸಿದ್ಧಪಡಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ವಿದ್ಯುತ್ ರೈಲನ್ನು ಓಡಿಸಿದಲ್ಲಿ ನಿಗಮಕ್ಕೆ ಪ್ರತಿವರ್ಷ 100 ಕೋಟಿ ಉಳಿತಾಯ ಆಗಲಿದೆ. ಹೆಚ್ಚುತ್ತಿರುವ ಡೀಸೆಲ್ ಬೆಲೆಗಿಂತ ವಿದ್ಯುತ್ ಬಳಸಿ ರೈಲನ್ನು ಓಡಿಸಿದಲ್ಲಿ ಇಷ್ಟೊಂದು ಉಳಿತಾಯವಾಗಲಿದೆ. ಜತೆಗೆ ಡೀಸೆಲ್ಗಿಂತ ವಿದ್ಯುತ್ ರೈಲುಗಳು ವೇಗವಾಗಿ ಓಡಲಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಕೊಂಕಣ ರೇಲ್ವೆ ಈ ಪ್ರಸ್ತಾವನೆ ಸಲ್ಲಿಸಿದ್ದು, ಇದು 600 ಕೋಟಿಯ ಯೋಜನೆಯಾಗಿರುವುದರಿಂದ ಸದ್ಯದಲ್ಲಿಯೇ ಮಂಜೂರಾತಿಯೂ ದೊರೆಯುವ ನಿರೀಕ್ಷೆ ಇದೆ ಎಂದು ನಿಗಮದ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಲೆಕ್ಟ್ರಿಕ್ ರೈಲು ಓಡಿಸಲು ಹೆಚ್ಚುವರಿ ಟ್ರ್ಯಾಕ್ನ ಅವಶ್ಯಕತೆ ಇಲ್ಲ. ಇರುವ ಟ್ರ್ಯಾಕ್ನಲ್ಲಿಯೇ ಮೇಲ್ಗಡೆ ವಿದ್ಯುತ್ ಅಳವಡಿಸಲಾಗುತ್ತದೆ. ಹೀಗಾಗಿ ಇದು ಹೆಚ್ಚಿನ ಹೊರೆಯೂ ಆಗದು. ಆದರೆ, ಸಮರ್ಪಕ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಿಕೊಂಡರೆ ಸಾಕು ಎನ್ನುವುದು ಅಧಿಕಾರಿಗಳ ಅಂಬೋಣ.
15000 ಕೋಟಿಯ ಯೋಜನೆ: ಕೊಂಕಣ ರೇಲ್ವೆ ಮಾರ್ಗದಲ್ಲಿ ಇನ್ನು ಹೆಚ್ಚುವರಿ ರೈಲನ್ನು ಓಡಿಸುವುದು ಕಷ್ಟಕರವಾಗಿದೆ. ಏಕೆಂದರೆ ಒಂದೇ ಟ್ರ್ಯಾಕ್ನಲ್ಲಿ ಗರಿಷ್ಠ ಪ್ರಮಾಣದಲ್ಲಿ ರೈಲುಗಳು ಓಡುತ್ತಿವೆ. ಆದರೆ, ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಹೀಗಾಗಿ ಪ್ರಯಾಣಿಕರಿಗೆ ಹೆಚ್ಚಿನ ರೈಲು ಸೌಲಭ್ಯ ಕಲ್ಪಿಸಬೇಕಾದಲ್ಲಿ ಇನ್ನೊಂದು ಟ್ರ್ಯಾಕ್ ಅಳವಡಿಸಲೇಬೇಕಾಗಿದೆ. ಕೊಂಕಣ ರೇಲ್ವೆ ಇನ್ನೊಂದು ಟ್ರ್ಯಾಕ್ ಅಳವಡಿಸಲು ಈಗಾಗಲೆ ಸಮೀಕ್ಷೆ ನಡೆಸಿ ಒಟ್ಟು 15,000 ಕೋಟಿಯ ಬೃಹತ್ ಯೋಜನೆ ಸಿದ್ಧಪಡಿಸಿದೆ. ಇದಕ್ಕಾಗಿ ಸದ್ಯದಲ್ಲಿಯೇ ಪ್ರಸ್ತಾವನೆಯನ್ನೂ ಸಲ್ಲಿಸಲು ನಿರ್ಧರಿಸಿದೆ. ಆದರೆ, ಇದು ಬೃಹತ್ ಯೋಜನೆಯಾಗಿರುವುದರಿಂದ ಸದ್ಯದಲ್ಲಿ ಈ ಯೋಜನೆಗೆ ಮಂಜೂರಾತಿ ದೊರೆಯುವುದು ಕಷ್ಟಕರ. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ.
ಸುರಂಗ ಇರುವಲ್ಲಿ ಮಾತ್ರ ಭೂಸ್ವಾಧೀನ: ಕೊಂಕಣ ರೇಲ್ವೆ ಮಾರ್ಗದಲ್ಲಿ ಇನ್ನೊಂದು ಟ್ರ್ಯಾಕ್ ಅಳವಡಿಸಲು ಎಲ್ಲೆಡೆ ಭೂಸ್ವಾಧೀನದ ಅವಶ್ಯಕತೆ ಇಲ್ಲ. ಏಕೆಂದರೆ ನಿಗಮ ಈಗಾಗಲೇ ಭೂಸ್ವಾಧೀನ ಮಾಡಿಕೊಂಡಿದೆ. ಆದರೆ, ಸುರಂಗ ಇರುವಲ್ಲಿ ಮಾತ್ರ ಭೂಸ್ವಾಧೀನ ಮಾಡಿಕೊಳ್ಳುವುದು ಅನಿವಾರ್ಯ ಎಂದು ನಿಗಮ ಹೇಳಿದೆ. ಈಗಿರುವ ಸುರಂಗದಲ್ಲೇ ಇನ್ನೊಂದು ಟ್ರ್ಯಾಕ್ ಅಳವಡಿಸಲು ಸಾಧ್ಯವಿಲ್ಲ. ಹೀಗಾಗಿ ಇನ್ನೊಂದೆಡೆ ಸುರಂಗ ಮಾಡಬೇಕಾಗಿದೆ. ಇದಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕೊಂಕಣ ರೇಲ್ವೆ ಸಾಧನೆ
1999-2000ರಲ್ಲಿ ಸಂಚಾರ ಆರಂಭಿಸಿದ ರೇಲ್ವೆ ಆ ವರ್ಷ ಕೇವಲ 33 ಕೋಟಿ ಲಾಭ ಗಳಿಸಿತ್ತು. ಅದೇ 2011-12ರಲ್ಲಿ ಸರಕು ಸಾಗಣೆಯಿಂದ 320 ಕೋಟಿ ಹಾಗೂ ಪ್ರಯಾಣಿಕರ ಸಂಚಾರದಿಂದ 330 ಕೋಟಿ ಲಾಭ ಗಳಿಸಿದೆ. ಲಾರಿಗಳನ್ನು ರೈಲಿನ ಮೂಲಕ ಸಾಗಾಟ ಮಾಡುವ ರೋರೋ ಸರ್ವೀಸ್ ಯಶಸ್ವಿಯಾಗಿದೆ. ಇದರಿಂದ ಪ್ರತಿವರ್ಷ 43 ಲಕ್ಷ ಲೀಟರ್ ಡೀಸೆಲ್ ಉಳಿತಾಯವಾಗುತ್ತಿದೆ. ಅಪಘಾತ ತಡೆಗೆ ಎಂಟಿ ಕೊಲ್ಯುಷನ್ ಡಿವೈಸ್ ಅನ್ನು ಅಭಿವೃದ್ಧಿಪಡಿಸಿದೆ. ಆದರೆ ಮಹಾತ್ವಾಕಾಂಕ್ಷಿ ಯೋಜನೆಯಾದ ಸ್ಕೈಬಸ್ ಮಾತ್ರ ಯಶಸ್ವಿಯಾಗಿಲ್ಲ.
ವಸಂತಕುಮಾರ್ ಕತಗಾಲ