ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪೊಲೀಸ್ ಸರ್ಪಗಾವಲಿನ ನಡುವೆ ನಾಳೆ ರಂಭಾಪುರಿ ಶ್ರೀ ಅಡ್ಡಪಲ್ಲಕ್ಕಿ

Mainashree
Updated On : 12 Oct 2013, 9:54 am

ಗುಲ್ಬರ್ಗ: ದಸರಾ ದರ್ಬಾರ್ ನಿಮಿತ್ತ ನಡೆಯಲಿರುವ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಜೇವರ್ಗಿ ಪಟ್ಟಣದಲ್ಲಿ ಸಕಲ ಸಿದ್ಧತೆಗಳು ಸಾಗಿವೆ. ದಸರಾ ದರ್ಬಾರ್ ಆಚರಣೆಗೆಂದು ಅ.4ರಿಂದಲೇ ಜೇವರ್ಗಿಯಲ್ಲಿ ಬಿಡಾರ ಹೂಡಿರುವ ಶ್ರೀಗಳು ಅ.14ರ ವಿಜಯದಶಮಿ ದಿನ ಶಮೀ ಸೀಮೋಲ್ಲಂಘನ- ಸಿಂಹಾಸನಾರೋಹಣ ನಡೆಸಲಿದ್ದಾರೆ.
ಇದೇ ದಿನ ಪಟ್ಟಣದ ರಿಲಯನ್ಸ್ ಪೆಟ್ರೋಲ್ ಬಂಕ್‌ನಿಂದ ಶಹಾಪುರ ರಸ್ತೆ ಮುಖಾಂತರ ಎಪಿಎಂಸಿ ಯಾರ್ಡ್‌ದಲ್ಲಿ ನಿರ್ಮಿಸಿರುವ ಮಾನವ ಧರ್ಮ ಮಂಟಪದವರೆಗೂ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ.
ದಸರಾ ದರ್ಬಾರ್ ನಿಮಿತ್ತ ನಡೆಯುವ ಅಡ್ಡಪಲ್ಲಕ್ಕಿ ಉತ್ಸವ ಶೋಷಣೆಯ ಸಂಕೇತ, ಈ ಆಚರಣೆ ಬೇಡವೇಬೇಡ ಎಂದು ಬಸವಾದಿ ಶರಣರ ಬಳಗದಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಶರನ್ನವರಾತ್ರಿ ಆಚರಣೆಗೆ ಆರಂಭದಿಂದಲೂ ಪೊಲೀಸ್ ಕಾವಲು ನಿಯೋಜಿಸಲಾಗಿರುವ ಜೇವರ್ಗಿಯಲ್ಲಿ ಅ.14ರ ದಿನ ಇನ್ನೂ ಹೆಚ್ಚಿನ ಬಂದೋಬಸ್ತ್ ಇರಲಿದೆ.
ಜಿಲ್ಲಾಧಿಕಾರಿ- ಎಸ್ಪಿ ಖುದ್ದು ಉಸ್ತುವಾರಿ: ವಿವಾದಗಳ ಹಿನ್ನೆಲೆಯಲ್ಲಿ ಜೇವರ್ಗಿ ದಸರಾ ದರ್ಬಾರ್ ಹಾಗೂ ಶರಣರ ಉಪನ್ಯಾಸ ಕಾರ್ಯಕ್ರಮಗಳ ಸುತ್ತಲಿನ ಬೆಳವಣಿಗೆಗಳ ಮೇಲೆ ಖುದ್ದು ಜಿಲ್ಲಾಧಿಕಾರಿ ಡಾ. ಪ್ರಸಾದ್, ಜಿಲ್ಲಾ ಎಸ್ಪಿ ಅಮೀತ್ ಸಿಂಗ್ ಖುದ್ದು ನಿಗಾ ಇಟ್ಟಿದ್ದಾರೆ.
ಇದಲ್ಲದೆ ಸರ್ಕಾರ ಇಲ್ಲಿನ ಬೆಳವಣಿಗೆಗಳ ಕ್ಷಣಕ್ಷಣದ ಮಾಹಿತಿಗಾಗಿ 20 ವಿಶೇಷ ದಂಡಾಧಿಕಾರಿಗಳನ್ನು ನೇಮಕ ಮಾಡಿದ್ದು, ಕಳೆದೊಂದು ವಾರದಿಂದಲೇ ಈ ಅಧಿಕಾರಿಗಳ ತಂಡ ಜೇವರ್ಗಿಯಲ್ಲಿ ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿದೆ.
ಅ.12ರ ಶುಕ್ರವಾರವೂ ಪ್ರಗತಿಪರ ಕೂಟದಿಂದ ಸ್ವಾಮೀಜಿಗಳು ಅನೇಕರು ಬೆಂಗಳೂರಿಗೆ ಹೋಗಿ ಸಿಎಂ ಸಿದ್ದರಾಮಯ್ಯನವರನ್ನು ಕಂಡು ಅಡ್ಡಪಲ್ಲಕ್ಕಿ ಆಚರಣೆ ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುಲ್ಬರ್ಗದಲ್ಲಿಯೂ ಮತ್ತೆ ಜಿಲ್ಲಾಡಳಿತ ಉಭಯ ಗುಂಪುಗಳೊಂದಿಗೆ ಚರ್ಚೆ ನಡೆಸಿದೆ. ಆದಾಗ್ಯೂ ಅಡ್ಡಪಲ್ಲಕ್ಕಿ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ದಸರಾ ದರ್ಬಾರ್ ಸಂಘಟಕರು ಸ್ಪಷ್ಪಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement