ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಫೈಲಿನ್ ಬಲೆ ಭಯದ ಅಲೆ

ಪೂರ್ವಕರಾವಳಿಗೆ ಕಾಲಿಡುವ ಮೊದಲೇ ಏಳು ಜೀವಗಳನ್ನು ಬಲಿಪಡೆದ ವಿನಾಶಕಾರಿ ಚಂಡಮಾರುತ 'ಫೈಲಿನ್‌' ಶನಿವಾರ ರಾತ್ರಿ 9.10ಕ್ಕೆ ಒಡಿಶಾದ ಗೋಪಾಲಪುರದ...

ಒಡಿಶಾ ಗೋಪಾಲಪುರದ ಛತ್ರಾಪುರದಲ್ಲಿ ಶನಿವಾರ ಕಂಡು ಬಂದ ಬಿರುಗಾಳಿಯ ಅಬ್ಬರ.
Mainashree
Updated On : 12 Oct 2013, 10:29 am

ಸಾಗರದಲ್ಲಿ ರಕ್ಕಸ ಅಲೆಗಳನ್ನು ಸೃಷ್ಟಿಸುತ್ತಾ ಗಂಟೆಗೆ 200 ಕಿ.ಮೀ. ವೇಗದಲ್ಲಿ ನುಗ್ಗಿದ ಫೈಲಿನ್ ಪೂರ್ವ ಕರಾವಳಿಯಲ್ಲಿ ರುದ್ರರರ್ತನ ನಡೆಸಿತು. ಎದುರು ಸಿಕ್ಕ ಮರ, ಗಿಡಗಳು ತರೆಗೆಲೆಗಳಂತಾದವು... ಶೆಡ್ಡಿನ ಮನೆಗಳು ಬೆಂಕಿಪೆಟ್ಟಿಗೆಯಾದವು,.. ಚಂಡಿಯಂತಾದ ಚಂಡಮಾರುತ ಅವುಗಳನ್ನು ಕಿ.ಮೀ. ದೂರ ಹೊತ್ತೊಯ್ದಿತು. ಇದರ ಬೆನ್ನಹಿಂದೆಯೇ ಆಕಾಶ ಬಾಯ್ಬಿರಿದಂತೆ ಸುರಿದ ಮಹಾಮಳೆ...



ಭುವನೇಶ್ವರ/ಶ್ರೀಕಾಕುಳಂ: ಪೂರ್ವಕರಾವಳಿಗೆ ಕಾಲಿಡುವ ಮೊದಲೇ ಏಳು ಜೀವಗಳನ್ನು ಬಲಿಪಡೆದ ವಿನಾಶಕಾರಿ ಚಂಡಮಾರುತ 'ಫೈಲಿನ್‌' ಶನಿವಾರ ರಾತ್ರಿ 9.10ಕ್ಕೆ ಒಡಿಶಾದ ಗೋಪಾಲಪುರದ ಸಮೀಪ ಅಪ್ಪಳಿಸಿತು. ನಿರೀಕ್ಷೆಗಿಂತ ಒಂದು ಗಂಟೆ ತಡವಾಗಿ ಕರಾವಳಿಗೆ ಕಾಲಿಟ್ಟ ಫೈಲಿನ್ ಗಂಟೆಗೆ 200 ಕಿ.ಮೀ. ವೇಗದಲ್ಲಿ ಮುನ್ನುಗ್ಗಿತು. ನಂತರ 10ರಿಂದ 20 ಕಿ.ಮೀ. ವೇಗವೃದ್ಧಿಸಿಕೊಂಡಿತು ಎಂದು ಭಾರತೀಯ ಹವಾಮಾನ ಇಲಾಖೆ ಮಹಾ ನಿರ್ದೇಶಕ ಎಲ್.ಎಸ್. ರಾಥೋಡ್ ಮಾಹಿತಿ ನೀಡಿದ್ದಾರೆ.
ಸಮುದ್ರದಲ್ಲಿ 3.5 ಮೀಟರ್‌ಗಿಂತಲೂ ಎತ್ತರದ ರಕ್ಕಸಗಾತ್ರದ ಅಲೆಗಳನ್ನು ಸೃಷ್ಟಿಸುತ್ತಲೇ ಭೂಪ್ರದೇಶದತ್ತ ಧಾವಿಸಿದ ಈ ಚಂಡಮಾರುತ ಒಡಿಶಾ, ಆಂಧ್ರ ಕರಾವಳಿಯಲ್ಲಿ ವಿರಾಟ ರೂಪ ಪ್ರದರ್ಶಿಸಿತು. ಎದುರಿಗೆ ಸಿಕ್ಕಿದ್ದನ್ನೆಲ್ಲ ಮುಕ್ಕುತ್ತಲೇ ಮುನ್ನುಗ್ಗಿತು. ಈ ವಿನಾಶಕಾರಿ ಚಂಡಮಾರುತದ ಆಗಮನದ ಸೂಚನೆಯೇನೋ ಎಂಬಂತೆ ಸಂಜೆಯ ವೇಳೆ ಒಡಿಶಾದಲ್ಲಿ ಮರಬಿದ್ದು 7 ಮಂದಿ ಕೊನೆಯುಸಿರೆಳೆದರು. ಹಲವು ಮಂದಿ ಗಾಯಗೊಂಡರು. ಸಾವಿರಾರು ಮರಗಳು, ಮನೆಗಳು ಧರಾಶಾಹಿಯಾದವು. ಒಡಿಶಾ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆ ಸುರಿಯಿತು.
ಒಂದು ಗಂಟೆ ವಿಳಂಬ: ಈ ಹಿಂದೆ 6ರಿಂದ 8 ಗಂಟೆ ನಡುವೆ ಈ ಚಂಡಮಾರುತ ಗೋಪಾಲಪುರವನ್ನು ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ, ಫೈಲಿನ್ ಕಾಲಿಟ್ಟಿದ್ದು ಒಂದು ಗಂಟೆ ತಡವಾಗಿ. 1999ರಲ್ಲಿ ಒಡಿಶಾದಲ್ಲಿ 15 ಸಾವಿರ ಜೀವ ಬಲಿಪಡೆದಿದ್ದ ಚಂಡಮಾರುತದಷ್ಟೇ ಭಯಂಕರ ಎಂದೇ ಭಾವಿಸಲಾಗಿರುವ ಫೈಲಿನ್ ಸೃಷ್ಟಿಸುವ ಅನಾಹುತವನ್ನು ಎದುರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಕಲ ಸಿದ್ಧತೆ ಮಾಡಿಕೊಂಡಿವೆ. ಸೇನೆಯ ಮೂರೂ ದಳಗಳೂ ತುರ್ತು ಪರಿಸ್ಥಿತಿಗಾಗಿ ಸನ್ನದ್ಧವಾಗಿ ನಿಂತಿವೆ.    
ದೊಡ್ಡಮಟ್ಟದ ಸನ್ನದ್ಧತೆ: ಚಂಡಮಾರುತದಿಂದುಂಟಾಗುವ ಸಾವು ನೋವಿನ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡದ್ದು ವಿಶೇಷ. 6 ಲಕ್ಷಕ್ಕಿಂತಲೂ ಹೆಚ್ಚು ಮಂದಿಯನ್ನು ಚಂಡಮಾರುತ ಪೀಡಿತ ಪ್ರದೇಶಗಳಿಂದ ಸ್ಥಳಾಂತರಿಸಲಾಗಿತ್ತು.
ಆಂಧ್ರದಲ್ಲಿ...: ಆಂಧ್ರದಲ್ಲಿ ಆಂಧ್ರದಲ್ಲಿ ಶ್ರೀಕಾಕುಳಂನ ಬೆಂಡಿಗೆ ಚಂಡಮಾರುತ ಅಪ್ಪಳಿಸಿತು. ಶ್ರೀಕಾಕುಳಂ ಕಡಲ ತೀರದಲ್ಲಿ 3.5 ಮೀಟರ್‌ಗಿಂತಲೂ ಎತ್ತರದ ಅಲೆಗಳು ಕಡತ ತೀರವನ್ನು ಈ ವೇಳೆ ಅಪ್ಪಳಿಸಿದವು.
ಸಿದ್ಧತಾ ವ್ಯವಸ್ಥೆ ಪರಿಶೀಲನೆ: ಸಚಿವ ಸಂಪುಟ ಕಾರ್ಯದರ್ಶಿ ಅಜಿತ್ ಸೇಠ್ ಪರಿಹಾರ ಕಾರ್ಯಾಚರಣೆ ನೇತೃತ್ವ ವಹಿಸಿಕೊಂಡಿದ್ದಾರೆ. ಫೈಲಿನ್ ಅಪ್ಪಳಿಸುವ ಕೆಲವೇ ಗಂಟೆಗಳ ಮೊದಲು ಸಭೆ ನಡೆಸಿ ಪರಿಹಾರ ಕಾರ್ಯಕ್ಕಾಗಿ ನಿಯೋಜಿತ ಕೇಂದ್ರ ತಂಡಗಳ ಸಿದ್ಧತಾ ಕಾರ್ಯ ಪರಿಶೀಲಿಸಿದ್ದಾರೆ. ಗೃಹ, ರಕ್ಷಣಾ, ಪೆಟ್ರೋಲಿಯಂ, ಟೆಲಿಕಾಂ, ಆರೋಗ್ಯ, ರೇಲ್ವೆ ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಸಚಿವಾಲಯಗಳ ಅಧಿಕಾರಿಗಳು ಹಾಗೂ ಫೈಲಿನ್‌ನ ಪ್ರಭಾವಕ್ಕೆ ಒಳಗಾಗುವ ರಾಜ್ಯಗಳ ಪ್ರತಿನಿಧಿಗಳೂ ಸಭೆಯಲ್ಲಿ ಪಾಲ್ಗೊಂಡಿದ್ದರು.


ಆರಂಭದ 6 ಗಂಟೆ ಪರಿಣಾಮ ಗಂಭೀರ
ಚಂಡಮಾರುತ ಅಪ್ಪಳಿಸಿದ ಆರಂಭದ 6ರಿಂದ 8 ಗಂಟೆ ಕಾಲ ಹೆಚ್ಚು ಅನಾಹುತ ಸೃಷ್ಟಿಸಿತು. 220 ಕಿ.ಮೀ. ವೇಗದಲ್ಲಿ ಬೀಸುವ ಬಿರುಸಾದ ಗಾಳಿ ಎದುರು ಸಿಗುವ ಅನೇಕ ಮರಗಳು, ವಿದ್ಯುತ್ ಕಂಬಗಳನ್ನು ಬುಡಸಮೇತ ಅಡಿಮೇಲು ಮಾಡಿತು. ಸಣ್ಣ ಮನೆಗಳನ್ನು ತರಗೆಲೆಗಳಂತೆ ಎತ್ತಿ ಎಸೆಯಬಲ್ಲುದು. ಇದರ ಬೆನ್ನಲ್ಲೇ ಕರಾವಳಿಯಾದ್ಯಂತ ಬಿರು ಮಳೆ ಸುರಿಯಿತು. ಸಮುದ್ರದಲ್ಲಿ ಹಲವು ಮೀಟರ್ ಎತ್ತರದ ಅಲೆಗಳು ಸೃಷ್ಟಿಯಾಗಿದ್ದರಿಂದ ಕಡಲ ನೀರು 300ರಿಂದ 600 ಮೀಟರ್‌ನಷ್ಟು ಒಳನುಗ್ಗಿತು. ಒಡಿಶಾ, ಆಂಧ್ರಪ್ರದೇಶಗಳಲ್ಲದೆ ಛತ್ತೀಸ್‌ಗಡ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶದಲ್ಲೂ ಭಾರಿ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 ಸತ್ತರೆ ಇಲ್ಲೇ ಸಾಯ್ತೇವೆ...!
ನಾವು ಹುಟ್ಟಿದ್ದು ಇಲ್ಲೆ. ಸಾಯುವುದಾದರೆ ಇಲ್ಲೇ ಸಾಯುತ್ತೇವೆ...
- ಭಾರಿ ಪ್ರಮಾಣದಲ್ಲಿ ಹಾನಿ ಮಾಡುವ ಸಾಧ್ಯತೆಯಿದ್ದರೂ ಆಂಧ್ರದ ಡೊಂಕುರು ಗ್ರಾಮದ ಕೆಲ ಮಂದಿ ಹೇಳಿದ್ದು ಪ್ರತಿಕ್ರಿಯಿಸಿದ್ದು ಹೀಗೆ. ಸ್ಥಳಾಂತರಕ್ಕಾಗಿ ಸರ್ಕಾರ ಬಸ್ ಸೌಲಭ್ಯ ಒದಗಿಸಿದ ಹೊರತಾಗಿಯೂ ಇವರು ಗ್ರಾಮದಲ್ಲೇ ಉಳಿಯಲು ನಿರ್ಧರಿಸಿದ್ದಾರೆ. ಸಣ್ಣ ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಹೋಗುವುದಾದರೂ ಎಲ್ಲಿ ಎಂದು ಅವರು ಪ್ರಶ್ನಿಸುತ್ತಾರೆ.

 ಇಂದು ಉಳಿದೆಡೆ ಭಾರಿ ಮಳೆ
ಚಂಡಮಾರುತವು ಒಡಿಶಾದ ಒಳನಾಡು ಮತ್ತು ಕರಾವಳಿ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಕಡೆಗೆ ಭಾನುವಾರ ಬೆಳಗ್ಗೆ ವ್ಯಾಪಿಸಲಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಅಂದು ಭಾರಿ ಮಳೆಯಾಗಲಿದೆ.

ಹೆದ್ದಾರಿ ಬಂದ್, ಪವರ್ ಕಟ್
ಭುವನೇಶ್ವರ-ಗೋಪಾಲಪುರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ, ಭುವನೇಶ್ವರವನ್ನು ಸಂಪರ್ಕಿಸುವ ರಾಜ್ಯಹೆದ್ದಾರಿಗಳಲ್ಲಿ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ. ಒಡಿಶಾದ ಗೋಪಾಲಪುರ, ಆಂಧ್ರದ ಶ್ರೀಕಾಕುಳಂನಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
- ಒಡಿಶಾ, ಆಂಧ್ರ, ಛತ್ತೀಸ್‌ಗಡ ಮತ್ತು ಪಶ್ಚಿಮ ಬಂಗಾಳದಲ್ಲಿ ಪ್ರವಾಹದ ಎಚ್ಚರಿಕೆ

ಇದೇ ಮೊದಲು ಸ್ಥಳಾಂತರ
ಒಡಿಶಾ ಮತ್ತು ಆಂಧ್ರಪ್ರದೇಶದ ತಗ್ಗುಪ್ರದೇಶಗಳಿಂದ ಸುಮಾರು 6 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳಿಸಲಾಗಿದೆ. ಒಡಿಶಾವೊಂದರಿಂದಲೇ 5 ಲಕ್ಷಕ್ಕೂ ಹೆಚ್ಚು ಹಾಗೂ ಆಂಧ್ರದಿಂದ 1 ಲಕ್ಷ ಮಂದಿ ಈಗಾಗಲೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ. ಕಳೆದ 23 ವರ್ಷಗಳಲ್ಲಿ ಇಷ್ಟು ಪ್ರಮಾಣದಲ್ಲಿ ಜನರನ್ನು ಸ್ಥಳಾಂತರಗೊಳಿಸಿದ್ದು ಇದೇ ಮೊದಲ ಬಾರಿ. 1999ರಲ್ಲಿ 6 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿತ್ತು.

500 ವಿಶೇಷ ಕೇಂದ್ರ
ಸ್ಥಳಾಂತರಗೊಂಡ ಬಹುತೇಕ ಮಂದಿಯನ್ನು ಎರಡೂ ರಾಜ್ಯಗಳಲ್ಲಿ ವಿಶೇಷವಾಗಿ ನಿರ್ಮಿಸಿದ 500 ಚಂಡಮಾರುತ ಸಂತ್ರಸ್ತ ಕೇಂದ್ರಗಳಿಗೆ ರವಾನಿಸಲಾಗಿದೆ. ಪ್ರತಿ ಕೇಂದ್ರಗಳು 1500 ಮಂದಿಗೆ ಉಳಿದುಕೊಳ್ಳಲು ಅವಕಾಶವಿದೆ. ಈ ಕೇಂದ್ರಗಳಲ್ಲಿ ಜಾನುವಾರುಗಳಿಗೂ ಸ್ಥಳಾವಕಾಶ ಕಲ್ಪಿಸಲಾಗಿದೆ.


2 ಸಾವಿರ ಸಿಬ್ಬಂದಿ
ಫೈಲಿನ್‌ನ ಬಾಹುವಿನಲ್ಲಿ ನೇರವಾಗಿ ಸಿಲುಕುವ ಒಡಿಶಾ, ಆಂಧ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಕೇಂದ್ರದಿಂದ 2 ಸಾವಿರ ಎನ್‌ಡಿಆರ್‌ಎಫ್ ತಂಡ ಕಳುಹಿಸಿಕೊಡಲಾಗಿದೆ. ಒಡಿಶಾದಲ್ಲಿ 29, ಆಂಧ್ರದಲ್ಲಿ 19 ಮತ್ತು ಪಶ್ಚಿಮ ಬಂಗಾಳದಲ್ಲಿ 7 ತಂಡಗಳನ್ನು ನಿಯೋಜಿಸಲಾಗಿದೆ.

ಕಂಟ್ರೋಲ್ ರೂಂ
 ಪರಿಸ್ಥಿತಿ ನಿಯಂತ್ರಿಸಲು ದಿನದ 24್ಢ7 ಕಂಟ್ರೋಲ್ ರೂಂ ಸ್ಥಾಪನೆ
ರಿಟೇಲ್ ಔಟ್‌ಲೆಟ್‌ಗಳಲ್ಲಿ ಕನಿಷ್ಠ ಮೂರು ದಿನಗಳಿಗಾಗುವಷ್ಟು ಡೀಸೆಲ್, ಎಲ್‌ಪಿಜಿ ಮತ್ತು ಪೆಟ್ರೋಲ್ ಸಂಗ್ರಹ
 ಹಲವೆಡೆ ಗಂಜಿಕೇಂದ್ರ ಸ್ಥಾಪನೆ
 ಜನ ಮಾತ್ರವಲ್ಲದೆ ಜಾನುವಾರುಗಳನ್ನೂ ಸುರಕ್ಷಿತ ಪ್ರದೇಶಕ್ಕೆ ರವಾನೆ
 ವಾಯುಪಡೆಯ 40 ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಕ್ಕೆ ಸನ್ನದ್ಧ

9.10- ಗೋಪಾಲಪುರ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ

200-ಕಿ.ಮೀ./  ಗಂಟೆ ಫೈಲಿನ್ ಚಂಡಮಾರುತದ ವೇಗ

15  -ಕಿ.ಮೀ. /ಗಂಟೆ ಗಾಳಿ ಪಡೆದುಕೊಂಡ ವೇಗ

1.27  -ಕೋಟಿ ಜನರಿಗೆ ಭೀಕರ ಚಂಡಮಾರುತದಿಂದ ಹಾನಿ ಸಾಧ್ಯತೆ

07- ಒಡಿಶಾದಲ್ಲಿ ಬಿರುಗಾಳಿಗೆ ಸಿಕ್ಕಿಕೊಂಡು ಅಸುನೀಗಿದವರು

30 -ಶ್ರೀಕಾಕುಳಂನಲ್ಲಿ ಸಿಲುಕಿಕೊಂಡು ಇರುವ
ನಾವಿಕರು

186- ಆಂಧ್ರ ಪ್ರದೇಶ, ಒಡಿಶಾಗಳಲ್ಲಿ ರೈಲುಗಳ ಸಂಚಾರ ರದ್ದು

22 - ರೈಲುಗಳ ಸಂಚಾರ ಭಾಗಶಃ ರದ್ದು

26- ಮಾರ್ಗ ಬದಲಾಗಿರುವರೈಲುಗಳು
ಸಂಖ್ಯೆ

3.5 - ಮೀಟರ್- ಸಮುದ್ರದಲ್ಲಿ ಉಂಟಾದ ಅಲೆಯ ಎತ್ತರ

14  -ವರ್ಷಗಳ ಇತಿಹಾಸದಲ್ಲಿ ಭೀಕರ ಚಂಡಮಾರುತ





Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement