ಬಿದರಿ ಸೈಕಲ್ ಬಿಟ್ ಇಳಿದ್ರಿ
ರಾಜಕೀಯ ಹಿತೈಷಿಗಳ ಜತೆ ಚರ್ಚಿಸಿ ಅ.21ರ ಬಳಿಕ ಮುಂದಿನ ನಡೆ ಸ್ಪಷ್ಟಪಡಿಸುತ್ತೇನೆ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಹೇಳಿದ್ದಾರೆ.ಸಮಾಜವಾದಿ...
ಬೆಂಗಳೂರು: ರಾಜಕೀಯ ಹಿತೈಷಿಗಳ ಜತೆ ಚರ್ಚಿಸಿ ಅ.21ರ ಬಳಿಕ ಮುಂದಿನ ನಡೆ ಸ್ಪಷ್ಟಪಡಿಸುತ್ತೇನೆ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಹೇಳಿದ್ದಾರೆ.
ಸಮಾಜವಾದಿ ಪಕ್ಷಕ್ಕೆ ಅಧಿಕೃತವಾಗಿ ಶನಿವಾರ ವಿದಾಯ ಹೇಳಿರುವ ಬಿದರಿ, ಶಾಸಕ ಸಿ.ಪಿ.ಯೋಗೇಶ್ವರ್ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಸಮಾಜವಾದಿ ಪಕ್ಷದ ನಿಯಂತ್ರಕರಾಗಿರುವ ಯೋಗೇಶ್ವರ್ ಅವರ ಮಾತು ಕೇಳಿ ಮತ್ತೊಬ್ಬ ವ್ಯಕ್ತಿಯನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂರಿಸಲಾಗಿದೆ. ಕರ್ನಾಟಕದಲ್ಲಿ ಪಕ್ಷ ಕಟ್ಟುವ ಆಸೆ ಇರುವ ನನ್ನನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರನ್ನಾಗಿಸಿರುವುದು ಬೇಸರ ತರಿಸಿದೆ. ಹೊಸ ಪಕ್ಷ ಸ್ಥಾಪಿಸುವ ನಿರ್ಧಾರ ಮಾಡಿ ಅ.14ರಂದು ಘೋಷಿಸುವ ಇರಾದೆಯಲ್ಲಿದ್ದೆ. ಆದರೆ ಹಿತೈಷಿಗಳ ಮಾತು ಕೇಳಿ ನಿರ್ಧಾರದ ದಿನವನ್ನು ಮುಂದೂಡಿದ್ದೇನೆ.
ಯಾವ ಪಕ್ಷ ಸೇರುತ್ತೇನೆ ಅಥವಾ ಹೊಂದಾಣಿಕೆ ಮಾಡಿಕೊಳ್ಳುತ್ತೇನೆ ಎಂಬುದನ್ನು ಅ.21ರ ನಂತರ ಪ್ರಕಟಿಸುತ್ತೇನೆ ಎಂದು ಅವರು ನಗರದಲ್ಲಿ ಶನಿವಾರ ನಡೆದ ಹಿತೈಷಿಗಳ ಸಭೆ ಬಳಿಕ ತಿಳಿಸಿದರು. ಬಾಬಾಗೌಡ ಪಾಟೀಲ್ ಅವರನ್ನು ಪಕ್ಷಕ್ಕೆ ಕರೆತರಲು ನಾನೇ ಪ್ರಯತ್ನಿಸಿದ್ದೆ. ಆದರೆ ನನಗೆ ಗೊತ್ತಿಲ್ಲದಂತೆ ಚನ್ನಪಟ್ಟಣದ ಶಾಸಕರ ಕುತಂತ್ರದಿಂದ ಪಾಟೀಲ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಈಗ ಕಾಂಗ್ರೆಸ್ ಹಾಗೂ ಸಮಾಜವಾದಿಯಂತಹ ಪಕ್ಷವನ್ನು ನೋಡಿ ಹೊರಬಂದಿದ್ದೇನೆ. ಈ ಪಕ್ಷಗಳಿಗೆ ಹೋಗಿಬಂದ ಮೇಲೆ ಇನ್ಯಾವ ಪಕ್ಷವು ನನಗೆ ಮೈಲಿಗೆಯಾಗಲಾರದು ಎಂದರು.
ನಾನು ಆತುರದ ವ್ಯಕ್ತಿ!: ನಾಲ್ಕು ದಶಕಗಳ ಕಾಲ ಪೊಲೀಸ್ ಅಧಿಕಾರಿಯಾಗಿ ಸ್ವಲ್ಪ ಆತುರದಿಂದ ವರ್ತಿಸಿದೆ. ರಾಜಕೀಯ ಜೀವನದ ಒಂದೇ ವರ್ಷದಲ್ಲಿ ಎರಡು ಪಕ್ಷ ಬದಲಿಸಿದ್ದಕ್ಕೆ ಮುಜುಗರವಾಗಿದೆ. ಕಾರ್ಯಕರ್ತರಿಗೂ ಬೇಸರವಾಗಿದೆ. ಆತುರದ ನಿರ್ಧಾರಗಳೇ ಇದಕ್ಕೆ ಕಾರಣ. ಮತ್ತೆ ಇಂತಹ ಸಮಸ್ಯೆಯಾಗಬಾರದೆಂದು ನಿರ್ಧಾರದ ದಿನವನ್ನು ಮುಂದೂಡಲಾಗಿದೆ. ರಾಷ್ಟ್ರೀಯ ಹಿತಾಸಕ್ತಿಗೆ ಗೌರವ ಕೊಡುವ ಪಕ್ಷದೊಂದಿಗೆ ಕೈಜೋಡಿಸಲಾಗುವುದು ಎಂದು ಶಂಕರ್ ಬಿದರಿ ಹೇಳಿದರು.