ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

'ಬೇಲಿ' ಹಾರಿದ ಖಾಕಿ ಬೆನ್ನು ಗೀರಿದ ಸಿಬಿಐ!

Mainashree
Updated On : 12 Oct 2013, 9:53 am

ಕ.ಪ್ರ.ವಾರ್ತೆ  ಬಳ್ಳಾರಿ  ಅ. 12
ಇದುವರೆಗೂ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಸುತ್ತ ಸುತ್ತುತ್ತಿದ್ದ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಪೊಲೀಸ್ ಇಲಾಖೆಗೂ ತಳಕು ಹಾಕಿಕೊಂಡಿದೆ.
ಈಗಾಗಲೇ ಲೋಕಾಯುಕ್ತ ವರದಿಯಲ್ಲಿ ಹೆಸರು ಪ್ರಸ್ತಾಪವಾಗಿರುವ ಅರಣ್ಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಮೇಲೆ ರಾಜ್ಯ ಸರ್ಕಾರ ಸಂಬಂಧಪಟ್ಟ ಇಲಾಖೆಯಿಂದ ಇಲಾಖಾವಾರು ವಿಚಾರಣೆ ನಡೆದಿದೆ. ಇದರ ಬೆನ್ನಲ್ಲೇ ಸಿಬಿಐ ಬೇಲೆಕೇರಿ ಅದಿರು ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲೆಯ ಗಣಿ ವಲಯದಲ್ಲಿ ಕಾರ್ಯನಿರ್ವಹಿಸಿದ್ದ ಡಿವೈಎಸ್ಪಿ, ಇನ್ಸ್‌ಪೆಕ್ಟರ್‌ಗಳಿಗೆ ನೋಟಿಸ್ ಜಾರಿ ಮಾಡಿ, ಕಳೆದ ಐದು ದಿನಗಳಿಂದ ವಿಚಾರಣೆಗೆ ಒಳಪಡಿಸುತ್ತಿದೆ.
ಸರ್ಕಾರ ಲೋಕಾಯುಕ್ತ ವರದಿ ಅನುಷ್ಠಾನ ಮಾಡಿದರೆ ನೂರಾರು ಅಧಿಕಾರಿಗಳಿಗೆ ಕಂಟಕ ಎದುರಾಗುತ್ತದೆ ಎಂದೇ ಹೇಳಲಾಗುತ್ತಿತ್ತು. ಇದೀಗ ಸಿಬಿಐ ಅಧಿಕಾರಿಗಳು ಬೇಲೆಕೇರಿ ಅದಿರು ಪ್ರಕರಣ ಕೈಗೆತ್ತಿಕೊಂಡಿರುವುದರಿಂದ ಈ ಸಂದರ್ಭದಲ್ಲಿ ಬಳ್ಳಾರಿಯಿಂದ ಪರವಾನಗಿ ಇಲ್ಲದೆ ಅದಿರು ಸಾಗಾಣಿಕೆ ಮಾಡಿರುವ ಬಗ್ಗೆ ಹಾಗೂ ಜಿಲ್ಲಾಧಿಕಾರಿ ಟಾಸ್ಕ್‌ಪೋರ್ಸ್ ರಚನೆ ಮಾಡಿದ್ದರೂ ಆ ವೇಳೆ ಕಾರ್ಯನಿರ್ವಹಿಸಿದ್ದ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದಾರೆ ಎಂಬ ವಿಷಯದ ಕುರಿತು ವಿಚಾರಣೆ ಮಾಡಲು ಸಿಬಿಐ ಅಧಿಕಾರಿಗಳು ಮುಂದಾಗಿದ್ದಾರೆ.
ಬಳ್ಳಾರಿಯಲ್ಲಿ ಅದಿರು ಸಾಗಾಣಿಕೆ ವೇಳೆ ಅದರಲ್ಲೂ ಬಳ್ಳಾರಿ, ಹೊಸಪೇಟೆ, ಸಂಡೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ಸಿಬಿಐ ತನಿಖೆ ಕಣ್ಣು ಬಿದ್ದಿದೆ. ಇಷ್ಟೆಲ್ಲ ಅಕ್ರಮವಾಗಿ ಅದಿರು ಸಾಗಾಣಿಕೆ ಮಾಡುತ್ತಿದ್ದರೂ ಪೊಲೀಸ್ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂಬ ವಿಷಯ ಕುರಿತು ಸಿಬಿಐ ತನಿಖೆ ಸಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಕಾರ್ಯನಿರ್ವಹಿಸಿ ಡಿವೈಎಸ್ಪಿ, ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್‌ಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಿದ್ದು, ಕಳೆದ ಐದು ದಿನಗಳಿಂದ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಇದರಿಂದಾಗಿ ಪೊಲೀಸ್ ಅಧಿಕಾರಿಗಳಿಗೆ ನಡುಕ ಶುರುವಾಗಿದೆ.
ಅಧಿಕಾರಿಗಳ ವಿಚಾರಣೆ: ನೋಟಿಸ್ ಜಾರಿಯಾಗಿರುವುದರಿಂದ ಈಗಾಗಲೇ ಕೆಲವು ಪೊಲೀಸ್ ಅಧಿಕಾರಿಗಳು ಸಿಬಿಐ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಈ ಹಿಂದೆ ಬಳ್ಳಾರಿ ಗ್ರಾಮೀಣ ಡಿವೈಎಸ್ಪಿಯಾಗಿದ್ದ, ಇದೀಗ ದಾವಣಗೆರೆ ಹೆಚ್ಚುವರಿ ಎಸ್ಪಿಯಾಗಿರುವ ರವಿನಾರಾಯಣ, ಬಳ್ಳಾರಿ ಗ್ರಾಮೀಣ ಡಿವೈಎಸ್ಪಿಯಾಗಿದ್ದ, ಇದೀಗ ಬೀದರ್ ಹೆಚ್ಚುವರಿ ಎಸ್ಪಿಯಾಗಿರುವ ಸಂಗೀತಾ, ಜಿಲ್ಲೆಯಲ್ಲಿ ಡಿವೈಎಸ್ಪಿಯಾಗಿದ್ದು, ಇದೀಗ ರಾಯಚೂರು ಡಿವೈಎಸ್ಪಿಯಾಗಿರುವ ತುರಾಯಿ, ಇನ್ನು ಬಳ್ಳಾರಿ ಗ್ರಾಮೀಣ ಹಾಗೂ ಜಿಲ್ಲೆಯ ವಿವಿಧ ಠಾಣೆಗಳಲ್ಲಿ, ಡಿಸಿಐಬಿಯಲ್ಲಿ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದ, ಇದೀಗ ಬಸವಕಲ್ಯಾಣದಲ್ಲಿ ಇನ್ಸ್‌ಪೆಕ್ಟರಾಗಿರುವ ಹುಲ್ಲೂರು ಶನಿವಾರ (ಅ.12)ರಂದು ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಇನ್ನು ಬಳ್ಳಾರಿಯ ಗ್ರಾಮೀಣ ಡಿವೈಎಸ್ಪಿ ಆಗಿದ್ದ, ಇದೀಗ ನಿವೃತ್ತಿಯಾಗಿರುವ ಬಾಬು ಕೊಳೆಕೇರ್, ಕೊಪ್ಪಳ ಡಿವೈಎಸ್ಪಿಯಾಗಿದ್ದ ವಿಜಯ ಡಂಬಾಳ್, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ಇನ್‌ಸ್ಪೆಕ್ಟರಾಗಿದ್ದ ಇದೀಗ ಉಲ್ಲಾಳದಲ್ಲಿ ಇನ್‌ಸ್ಪೆಕ್ಟರ್ ಆಗಿರುವ ಧಮೇಂದ್ರ, ಬಳ್ಳಾರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದ ಇದೀಗ ಚೆಳ್ಳಕೇರಿ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರಾಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ್, ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪಿಎಸ್‌ಐ ಆಗಿದ್ದ ದೇವೇಂದ್ರ ಅವರನ್ನು ಕೂಡ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಪರವಾನಗಿ ಇಲ್ಲದೆ ಗಣಿ ಲಾರಿಗಳು, ಬೇಲೆಕೇರಿಗೆ ಅದಿರು ಸಾಗಿಸುತ್ತಿದ್ದರೂ ಪೊಲೀಸರು ಯಾವ ಕ್ರಮ ಕೈಗೊಂಡಿದ್ದರು ಎನ್ನುವ ಕುರಿತು ಎಲ್ಲ ಪೊಲೀಸ್ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.


ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement