ಮಲಾಲಾಗೆ ಸಿಕ್ತು ಒಬಾಮ ಮೆಚ್ಚುಗೆ
ವಾಷಿಂಗ್ಟನ್: ಪಾಕಿಸ್ತಾನದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸುಫ್ಝಾಯ್ ಶನಿವಾರ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಪತ್ನಿ ಮಿಶೆಲ್ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾಳೆ. ವೈಟ್ಹೌಸ್ಗೆ ಆಗಮಿಸುವಂತೆ ಮಲಾಲಾಗೆ ಆಹ್ವಾನ ನೀಡಿದ್ದ ಒಬಾಮ ದಂಪತಿ, ಆಕೆ ಆಗಮಿಸುತ್ತಿದ್ದಂತೆಯೇ ಆಕೆಯನ್ನು ಆತ್ಮಿಯವಾಗಿ ಸ್ವಾಗತಿಸಿದರು. ಜತೆಗೆ ಆಕೆಯ ಧೈರ್ಯವನ್ನು ಹಾಡಿ ಹೊಗಳಿದರು. ಪಾಕ್ನಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡುತ್ತಿರುವ ಮಲಾಲಾಳಿಗೆ ಅಭಿನಂದನೆ ಸಲ್ಲಿಸಿದರು. ಹೆಣ್ಣುಮಕ್ಕಳ ಶಿಕ್ಷಣದಲ್ಲಿ ಮಾಡುವ ಹೂಡಿಕೆ ನಾವು ಮಾಡುವ ಅತ್ಯುತ್ತಮ ಕಾರ್ಯ. ಇದು ಕೇವಲ ನಮ್ಮ ಮಕ್ಕಳು, ಮೊಮ್ಮಕ್ಕಳಿಗಷ್ಟೇ ಅಲ್ಲ, ಇತರರ ಕುಟುಂಬ, ರಾಷ್ಟ್ರಗಳಿಗೂ ಸಹಕಾರಿ ಎಂದು ಮಿಶೆಲ್ ನುಡಿದರು.