ಪ್ರಧಾನ ಸುದ್ದಿ

ಗಾಳಿಮಾತು ಕೇಳಿ 115 ಮಂದಿ ಬಲಿ

ದುರ್ಗಾ ಮಾತೆಯ ದರ್ಶನಕ್ಕೆಂದು ತೆರಳುತ್ತಿದ್ದವರು ದುರಂತ ಅಂತ್ಯ ಕಂಡರು... ಯಾರೋ ಮಾಡಿದ ತಪ್ಪು 115 ಜನರನ್ನು ಬಲಿ ತೆಗೆದುಕೊಂಡಿತು.

ಗ್ವಾಲಿಯರ್/ಭೋಪಾಲ್: ನವರಾತ್ರಿ ಸಂಭ್ರಮದಲ್ಲಿದ್ದ ಜನತೆಗೆ ದುರಂತದ ಆಘಾತ ಕಾದಿತ್ತು... ದುರ್ಗಾ ಮಾತೆಯ ದರ್ಶನಕ್ಕೆಂದು ತೆರಳುತ್ತಿದ್ದವರು ದುರಂತ ಅಂತ್ಯ ಕಂಡರು... ಯಾರೋ ಮಾಡಿದ ತಪ್ಪು 115 ಜನರನ್ನು ಬಲಿತೆಗೆದುಕೊಂಡಿತು.
ಹೌದು. ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯಲ್ಲಿ ಆಯುಧಪೂಜೆಯ ದಿನವಾದ ಭಾನುವಾರ ಸಂಭವಿಸಿದ ಕಾಲ್ತುಳಿತದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 115 ಮಂದಿ ಸಾವಿಗೀಡಾಗಿದ್ದಾರೆ. 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಯಾರೋ ಕಿಡಿಗೇಡಿಗಳು ಹಬ್ಬಿಸಿದ ವದಂತಿಯೊಂದು ಇಂತಹ ಭಾರಿ ಸಾವುನೋವಿಗೆ ಕಾರಣವಾಯಿತು. ಹಬ್ಬದ ಸಂಭ್ರಮದಲ್ಲಿದ್ದ ರಾಜ್ಯದಲ್ಲಿ ಸೂತಕದ ಛಾಯೆ ಮೂಡಿತು.

ನಾಗರಿಕರ ಆಕ್ರೋಶ
ಘಟನೆ ನಡೆದಾಗ ಹಲವರು ನದಿಗೆ ಹಾರಿದ್ದು ಅನೇಕರು ಕೊಚ್ಚಿಕೊಂಡು ಹೋಗಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಸಿಂಧು ನದಿಯಲ್ಲೂ ಶೋಧ ಕಾರ್ಯ ನಡೆಸಲಾಯಿತು. ಇದೇ ವೇಳೆ, ಸೇತುವೆಯಲ್ಲಿ ಬಿದ್ದಿದ್ದ ತಮ್ಮವರ ಮೃತದೇಹಗಳಿಗಾಗಿ ಕುಟುಂಬಸ್ಥರು ಹುಡುಕುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಒಂದು ಸಂದರ್ಭದಲ್ಲಿ ಜನರ ಆಕ್ರೋಶ ಮೇರೆಮೀರಿ ಪೊಲೀಸರತ್ತ ತಮ್ಮ ಕೋಪ ತೀರಿಸಿಕೊಂಡರು. ಗುಂಪೊಂದು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದು, ಹಲವು ಪೊಲೀಸರಿಗೆ ಗಾಯಗಳಾಗಿವೆ. ಬಳಿಕ ಅಲ್ಲಿ ಲಾಠಿಪ್ರಹಾರವೂ ನಡೆಯಿತು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಡಿಐಜಿ ಡಿ.ಕೆ. ಆರ್ಯ ತಿಳಿಸಿದ್ದಾರೆ.

ತಲಾ 1.5 ಲಕ್ಷ ಪರಿಹಾರ
ಮಧ್ಯಪ್ರದೇಶದಲ್ಲಿ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅನುಮತಿ ಕೋರಿ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಮೃತರ ಕುಟುಂಬಕ್ಕೆ ತಲಾ 1.5 ಲಕ್ಷ, ಗಂಭೀರ ಗಾಯಗೊಂಡವರಿಗೆ 50 ಸಾವಿರ ಹಾಗೂ ಅಲ್ಪ ಸ್ವಲ್ಪ ಗಾಯಗಳಾದವರಿಗೆ 25 ಸಾವಿರ ಪರಿಹಾರ ಘೋಷಿಸಿದೆ. ನೀತಿ ಸಂಹಿತೆ ಕಾರಣ ದುರಂತ ಸ್ಥಳಕ್ಕೆ ತೆರಳಬೇಕಾಗಿದ್ದ ಸಿಎಂ ಚೌಹಾಣ್ ತಮ್ಮ ಭೇಟಿ ರದ್ದುಗೊಳಿಸಿದ್ದಾರೆ.

ದುರಂತದಲ್ಲೂ ರಾಜಕೀಯ: ಅತ್ತ ದುರಂತದ ಆಘಾತದಲ್ಲಿ ನೂರಾರು ಜನ ದುಃಖದಲ್ಲಿದ್ದರೆ ರಾಜಕೀಯ ನಾಯಕರು ಮಾತ್ರ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಮಧ್ಯಪ್ರದೇಶ ಸರ್ಕಾರದ ಬೇಜವಾಬ್ದಾರಿತನವೇ ದುರಂತಕ್ಕೆ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದರೆ, ದುರಂತದಲ್ಲಿ ರಾಜಕೀಯ ಮಾಡುವುದೇ ಕಾಂಗ್ರೆಸ್‌ನ ಅಭ್ಯಾಸ ಎಂದು ಬಿಜೆಪಿ ದೂರಿದೆ. ವಾಹನಗಳಿಗೆ ನಿಷೇಧವಿದ್ದ ವಲಯದಲ್ಲೂ ಪೊಲೀಸರು ಟ್ರ್ಯಾಕ್ಟರ್‌ಗಳಿಂದ 200 ಪಡೆದು ಸಂಚಾರಕ್ಕೆ ಅವಕಾಶ ನೀಡುತ್ತಿದ್ದರು. ಹೀಗಾಗಿ ದಟ್ಟಣೆ ಜಾಸ್ತಿಯಾಗಿ ದುರಂತ ಸಂಭವಿಸಿತು. ಇದು ಮಾನವ-ನಿರ್ಮಿತ ದುರಂತ ಎಂದು ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ ಸಿಂಗ್ ಹಾಗೂ ಅಜಯ್ ಮಾಕನ್ ಆರೋಪಿಸಿದ್ದಾರೆ. ಈ ಹಿಂದೆ ಇಂತಹ ದುರಂತ ಸಂಭವಿಸಿದ್ದರೂ ಅದರಿಂದ ಸರ್ಕಾರ ಪಾಠ ಕಲಿತಿಲ್ಲ. ಘಟನೆಯ ನೈತಿಕ ಹೊಣೆ ಹೊತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ರಾಜಿನಾಮೆ ನೀಡಬೇಕು ಎಂದೂ ಆಗ್ರಹಿಸಿದ್ದಾರೆ.

ರಾಜಕೀಯ ಬೇಡ: ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಶಿವರಾಜ್‌ಸಿಂಗ್ ಚೌಹಾಣ್, ಯಾವುದೇ ದುರಂತದಲ್ಲೂ ರಾಜಕೀಯ ಮಾಡಬೇಡಿ. ಮುಂದೆ ಇಂತಹ ಘಟನೆ ನಡೆಯುವುದಂತೆ ತಡೆಯುವುದೇ ಮುಖ್ಯ ಎಂದಿದ್ದಾರೆ.

ತನಿಖಾ ಸಮಿತಿ ರಚನೆ: ದುರಂತದ ತನಿಖೆಗಾಗಿ 2 ದಿನಗಳೊಳಗಾಗಿ ತನಿಖಾ ಸಮಿತಿ ರಚಿಸುವುದಾಗಿ ಸಿಎಂ ಚೌಹಾಣ್ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, 2 ತಿಂಗಳ ಒಳಗೆ ತನಿಖಾ ಸಮಿತಿ ವರದಿ ನೀಡಲಿದೆ. ವರದಿ ಕೈ ಸೇರಿದ 15 ದಿನಗಳಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಅಮಾನತು: ಕಾಲ್ತುಳಿತ ಸಂಬಂಧ ದಾಟಿಯಾದ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಉಪವಿಭಾಗೀಯ ಮ್ಯಾಜಿಸ್ಟ್ರೇಟ್, ಉಪವಿಭಾಗೀಯ ಪೊಲೀಸ್ ಅಧಿಕಾರಿ, ಸೇವ್ಧಾ ಪೊಲೀಸ್ ಠಾಣೆಯ ಎಲ್ಲ ಸಿಬ್ಬಂದಿಯನ್ನೂ ಅಮಾನತು ಮಾಡುವಂತೆ ಮಧ್ಯಪ್ರದೇಶ ಸರ್ಕಾರ ಸಲ್ಲಿಸಿದ್ದ ಪ್ರಸ್ತಾಪವನ್ನು ಚುನಾವಣಾ ಆಯೋಗ ಅಂಗೀಕರಿಸಿ ಅಧಿಕಾರಿಗಳ ಅಮಾನತು ಆದೇಶ ಹೊರಡಿಸಿದೆ.

ಆಗಿದ್ದೇನು?
ದಾಟಿಯಾ ಜಿಲ್ಲೆಯ ರತ್ನಗಡದಲ್ಲಿರುವ ದುರ್ಗಾ ಮಾತೆಯ ದೇಗುಲಕ್ಕೆಂದು ಸಮೀಪದ ಗ್ರಾಮಸ್ಥರು ಹಾಗೂ ಉತ್ತರ ಪ್ರದೇಶದ ಲಕ್ಷಾಂತರ ಭಕ್ತರು ಆಗಮಿಸಿದ್ದರು.
ಸಿಂಧು ನದಿಯ ಮೇಲೆ ನಿರ್ಮಿಸಲಾದ ಸೇತುವೆಯಲ್ಲಿ ಭಕ್ತರು ಸಾಗುತ್ತಿದ್ದರು.
ಸೇತುವೆಯು ಕುಸಿಯುತ್ತಿದೆ ಎಂದು ಕಿಡಿಗೇಡಿಯೊಬ್ಬ ವದಂತಿ ಹಬ್ಬಿಸಿದ.
ಗಾಬರಿಗೊಂಡ ಜನತೆ ಓಡತೊಡಗಿದರು. ಹಲವರು ಸೇತುವೆಯಿಂದ ಕೆಳ ಹಾರಿ ಪ್ರಾಣಬಿಟ್ಟರೆ, ಕಾಲ್ತುಳಿತ ಉಂಟಾಗಿ ಇನ್ನಷ್ಟು ಮಂದಿ ಮೃತಪಟ್ಟರು.
ಇನ್ನೊಂದು ಮೂಲದ ಪ್ರಕಾರ, ಕೆಲ ಯುವಕರು ಸರತಿ ಸಾಲನ್ನು ಉಲ್ಲಂಘಿಸಿ ಮುಂದೆ ಹೋಗಲು ಹೊರಟಾಗ ಪೊಲೀಸರು ಲಾಠಿಚಾರ್ಜ್ ಮಾಡಿದರು. ಹೀಗಾಗಿ ನೂಕುನುಗ್ಗಲು ಸಂಭವಿಸಿತು.
2006ರಲ್ಲೂ ಇದೇ ಪ್ರದೇಶದಲ್ಲಿ ದುರಂತ ಸಂಭವಿಸಿ 56 ಮಂದಿ ಯಾತ್ರಾರ್ಥಿಗಳು ಸಾವಿಗೀಡಾಗಿದ್ದರು.

ದುರಂತದಿಂದ ಆಘಾತವಾಗಿದೆ. ಇದೊಂದು ದುರದೃಷ್ಟಕರ ಘಟನೆ. ಕಾಲ್ತುಳಿತಕ್ಕೆ ಸಂಬಂಧಿಸಿ ನ್ಯಾಯಾಂಗ ತನಿಖೆಗೆ ಆದೇಶಿಸುತ್ತೇನೆ.
-ಶಿವರಾಜ್‌ಸಿಂಗ್ ಚೌಹಾಣ್, ಮಧ್ಯಪ್ರದೇಶ ಸಿಎಂ

ನೋ ಟ್ರಾಫಿಕ್ ವಲಯದಲ್ಲಿ 200 ಲಂಚ ಪಡೆದು ಟ್ರ್ಯಾಕ್ಟರ್‌ಗಳನ್ನು ಪೊಲೀಸರು ಒಳಬಿಡುತ್ತಿದ್ದರು. ಹಣ ಸಂಗ್ರಹದ ಆಧಾರದಲ್ಲಿ ಕಲೆಕ್ಟರ್, ಎಸ್ಪಿಗಳ ನೇಮಕ ಮಾಡಲಾಗಿದೆ. ಇದೇನಾ ಮಧ್ಯಪ್ರದೇಶದ ಉತ್ತಮ ಆಡಳಿತ?
-ದಿಗ್ವಿಜಯ್ ಸಿಂಗ್, ಕಾಂಗ್ರೆಸ್ ನಾಯಕ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪರಿಹಾರಕ್ಕೆ ಯಾವುದೇ ಮಾರ್ಗಸೂಚಿ ಇಲ್ಲ': ಮಣಿಪುರದಲ್ಲಿ ಪ್ರಧಾನಿ ಮೋದಿ ಭಾಷಣದ ಬಗ್ಗೆ ಸ್ಥಳೀಯರ ಅಸಮಾಧಾನ

ಜಾತಿ ರಹಿತ ಸಮಾಜ ನಿರ್ಮಾಣವೇ ಸಂವಿಧಾನದ ಆಶಯ: ಸಿಎಂ ಸಿದ್ದರಾಮಯ್ಯ

ಸಂಚಾರ ದಂಡ ರಿಯಾಯಿತಿಯಿಂದ ಬರೋಬ್ಬರಿ 106 ಕೋಟಿ ಸಂಗ್ರಹ: 37.86 ಲಕ್ಷ ಪ್ರಕರಣ ಇತ್ಯರ್ಥ

AI ವೀಡಿಯೊ ಮೂಲಕ ಪ್ರಧಾನಿ ಮೋದಿ ಮತ್ತು ಅವರ ದಿವಂಗತ ತಾಯಿಯ ತೇಜೋವಧೆ: Congress, ಐಟಿ ಸೆಲ್ ವಿರುದ್ಧ ಎಫ್ಐಆರ್

ಯಾರೂ ಭಾರತ-ಪಾಕ್ ಪಂದ್ಯ ನೋಡಬೇಡಿ, TV ಆಫ್ ಮಾಡಿ: ಪಹಲ್ಗಾಮ್ ಬಲಿಪಶು ಶುಭಂ ದ್ವಿವೇದಿ ಪತ್ನಿ ಕರೆ

SCROLL FOR NEXT