ರಾಜ್ಯದಲ್ಲಿ ಹಳ್ಳ ಹಿಡಿದ ಕೆಜಿಬಿವಿ ಯೋಜನೆ
ಶೈಕ್ಷಣಿಕವಾಗಿ ಹಿಂದುಳಿದ ಭಾಗದ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹೆಣ್ಣುಮಕ್ಕಳನ್ನೇ ಕೇಂದ್ರೀಕರಿಸಿ ಕೇಂದ್ರ ಸರ್ಕಾರದಿಂದ ಆರಂಭಗೊಂಡ...
ಶಿವಮೊಗ್ಗ: ಶೈಕ್ಷಣಿಕವಾಗಿ ಹಿಂದುಳಿದ ಭಾಗದ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹೆಣ್ಣುಮಕ್ಕಳನ್ನೇ ಕೇಂದ್ರೀಕರಿಸಿ ಕೇಂದ್ರ ಸರ್ಕಾರದಿಂದ ಆರಂಭಗೊಂಡ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದ ಉದ್ದೇಶ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ. ಈ ಕುರಿತು ಕೇಂದ್ರ ಸರ್ಕಾರವೇ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕೂಡಲೇ ತಪ್ಪನ್ನು ತಿದ್ದಿಕೊಳ್ಳುವಂತೆ ಸಲಹೆ ನೀಡಿದೆ.
ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ 71 ಬ್ಲಾಕ್‌ಗಳಲ್ಲಿ ಶಾಲೆಯಿಂದ ಹೊರಗುಳಿದ ಹೆಣ್ಣು ಮಕ್ಕಳಿಗಾಗಿ ಕೆಜಿಬಿವಿ(ವಸತಿ ಸಹಿತ) ಶಾಲೆ ಪ್ರಾರಂಭಿಸಲಾಗಿದೆ. ದಾಖಲಾತಿ ನಿಯಮಾನುಸಾರ ಎಲ್ಲ ಕೆಜಿವಿಬಿ ವಸತಿ ಶಾಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಅರ್ಹ ಮಕ್ಕಳ ದಾಖಲಾತಿ ಸಾಧಿಸಿ ಯೋಜನೆ ಸದುಪಯೋಗಪಡಿಸಿಕೊಳ್ಳಲು ಸೂಚಿಸಲಾಗಿತ್ತಾದರೂ ಅದು ಅನುಷ್ಟಾನಕ್ಕೆ ಬಂದಿಲ್ಲ.
ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕರು ಹಾಗೂ ರಾಜ್ಯ ಯೋಜನಾ ಕಚೇರಿಯ ಜಿಲ್ಲಾ ನೋಡೆಲ್ ಅಧಿಕಾರಿಗಳು ಜಿಲ್ಲಾ ಪ್ರಗತಿ ಪರಿಶೀಲನಾ ಸಂದರ್ಭದಲ್ಲಿ ಕೆಜಿವಿಬಿಗೆ ಭೇಟಿ ನೀಡಿದಾಗ ಬಹುತೇಕ ಶಾಲೆಗೆ ನಿರಂತರವಾಗಿ ಹೋಗುತ್ತಿದ್ದ ವಿದ್ಯಾರ್ಥಿನಿಯರನ್ನು ದಾಖಲೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ.
ಪ್ರಮುಖವಾಗಿ ಪ್ರಾಥಮಿಕ ಹಂತದಲ್ಲಿ 10ರಿಂದ 14 ವಯಸ್ಸಿನ ಶಾಲೆಯಿಂದ ಹೊರಗುಳಿದ, ಶಾಲೆ ಬಿಟ್ಟ, ನಿರ್ಗತಿಕ, ಸಿಂಗಲ್ ಪೇರೆಂಟ್ ಬಾಲಕಿಯರಿಗೆ ಕೆಜಿಬಿವಿಯಲ್ಲಿ ಪ್ರಥಮ ಆದ್ಯತೆ ನೀಡಬೇಕು. ಹಾಗೆಯೇ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಹೆಣ್ಣು ಮಕ್ಕಳಿಗೆ ಶೇ.75ರಷ್ಟು ಮತ್ತು ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವವರಿಗೆ ಶೇ.25ರಷ್ಟು ಮೀಸಲಾತಿ ನೀಡಬೇಕು. ಆದರೆ, ರಾಜ್ಯದ ಬಹುತೇಕ ಕಡೆ ಈ ದಾಖಲಾತಿ ನಿಯಮದ ಉಲ್ಲಂಘನೆಯಾಗಿದೆ.
ವಿಶೇಷವಾಗಿ ಮುಸ್ಲಿಂ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿನಿಯರ ದಾಖಲಾತಿಯು ಜನಸಂಖ್ಯೆ ಪ್ರಮಾಣಕ್ಕೆ ಹೋಲಿಸಿದರೆ ಕಡಿಮೆ ಇದ್ದು ಅವರ ದಾಖಲಾತಿಗೆ ವಿಶೇಷ ಗಮನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಂಗವಿಕಲತೆಯಿಂದಾಗಿ ಶಾಲೆಯಿಂದ ಹೊರಗೆ ಉಳಿದಿರುವ ಹೆಣ್ಣುಮಕ್ಕಳಿಗೂ ಈ ಶಾಲೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ.
ರಾಜ್ಯದ 71 ಕೆಜಿಬಿವಿಗಳಲ್ಲಿ ಒಟ್ಟು 8300 ವಿದ್ಯಾರ್ಥಿನಿಯರಿಗೆ ವ್ಯಾಸಂಗ ಮಾಡಲು ಅವಕಾಶವಿದೆ. ಆದರೆ, ಆಗಸ್ಟ್ ಪ್ರಗತಿ ವರದಿಯಂತೆ ಇನ್ನೂ 440 ವಿದ್ಯಾರ್ಥಿನಿಯರಿಗೆ ದಾಖಲಾತಿಗೆ ಅವಕಾಶವಿದೆ.
ದಾಖಲಾತಿ ನಿಯಮಗಳ ಉಲ್ಲಂಘನೆಗೆ ಜಿಲ್ಲೆಯ ಅಧಿಕಾರಿಗಳೇ ಹೊಣೆ ಎಂದು ಸರ್ವ ಶಿಕ್ಷಣ ಅಭಿಯಾನ ಎಚ್ಚರಿಸಿದೆ. ದಾಖಲಾತಿ ನಿಯಮಗಳ ಅನುಸಾರ ಪೂರ್ಣ ಪ್ರಮಾಣದ ದಾಖಲಾತಿ ಸಾಧಿಸಬೇಕು. ಕೆಜಿಬಿವಿಗಳಲ್ಲಿ ವಿವಿಧ ಚಟುವಟಿಕೆಗಳಿಗೆ ನಿಗದಿಪಡಿಸಿರುವ ಅನುದಾನವನ್ನು ಸಂಪೂರ್ಣವಾಗಿ ನಿಯಮಾನುಸಾರ ಬಳಸಿಕೊಳ್ಳಬೇಕು. ಈ ಬಗ್ಗೆ ಜಿಲ್ಲಾ ಮತ್ತು ತಾಲೂಕಿನ ಅಧಿಕಾರಿಗಳು ವಿಶೇಷ ಗಮನ ನೀಡುವಂತೆ ಸರ್ವ ಶಿಕ್ಷಣ ಅಭಿಯಾನದ ಜಂಟಿ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.
- ಶ್ರೀಕಾಂತ ಭಟ್