ಬಿರ್ಲಾಗೆ ಮಸಿ
ಬಹುಕೋಟಿ ಕಲ್ಲಿದ್ದಲು ಹಗರಣ ಮಂಗಳವಾರ ಮಹತ್ವದ ತಿರುವು ಪಡೆದಿದೆ. ಹಗರಣದ ಮಸಿ ಈಗ ಬಿರ್ಲಾ ಸಮೂಹಕ್ಕೂ ತಟ್ಟಿದೆ...
ಪಿಟಿಐ , ನವದೆಹಲಿ , ಅ.15
ಬಹುಕೋಟಿ ಕಲ್ಲಿದ್ದಲು ಹಗರಣ ಮಂಗಳವಾರ ಮಹತ್ವದ ತಿರುವು ಪಡೆದಿದೆ. ಹಗರಣದ ಮಸಿ ಈಗ ಬಿರ್ಲಾ ಸಮೂಹಕ್ಕೂ ತಟ್ಟಿದೆ. ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಬಿರ್ಲಾ ಉದ್ದಿಮೆ ಸಮೂಹದ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ ವಿರುದ್ಧ ಎಫ್ಐಆರ್ ದಾಖಲಿಸಿದೆ. ಕಲ್ಲಿದ್ದಲು ಹಂಚಿಕೆ ಬಗ್ಗೆ ನಡೆದ ಪ್ರಾಥಮಿಕ ತನಿಖೆಯ ಬಳಿಕ ದಾಖಲಾದ ಮೊದಲ ಎಫ್ಐಆರ್ ಇದಾಗಿದೆ.
ಬಿರ್ಲಾ ಜತೆಗೆ ಕಲ್ಲಿದ್ದಲು ಇಲಾಖೆ ನಿವೃತ್ತ ಕಾರ್ಯದರ್ಶಿ ಪಿ.ಸಿ.ಪಾರೇಖ್ ವಿರುದ್ಧವೂ ಕೇಂದ್ರ ತನಿಖಾ ದಳ ಎಫ್ಐಆರ್ ದಾಖಲಿಸಿದೆ. ಅದಕ್ಕೆ ಪೂರಕವಾಗಿ ದೇಶದ ಆರು ಪ್ರಮುಖ ಸ್ಥಳಗಳಲ್ಲಿ ಸಿಬಿಐ ತಂಡ ಶೋಧ ಕಾರ್ಯಾಚರಣೆ ನಡೆಸಿದೆ.
ಬಿರ್ಲಾ ವಿರುದ್ಧ ಎಫ್ಐಆರ್: 2005ರ ನ.10ರಂದು ಒಡಿಶಾದ ತಲಬಿರಾದಲ್ಲಿ ಬಿರ್ಲಾ ಸಮೂಹ ಸಂಸ್ಥೆಗೆ 2 ಕಲ್ಲಿದ್ದಲು ಬ್ಲಾಕ್ಗಳನ್ನು ಹಂಚಿಕೆ ಮಾಡಲಾಗಿತ್ತು. ಸಾರ್ವಜನಿಕ ಸ್ವಾಮ್ಯದ ಕಂಪನಿಗಳಿಗೆ ಮೀಸಲಾಗಿ ಇರಿಸಲಾಗಿದ್ದ ಈ ಕಲ್ಲಿದ್ದಲು ಬ್ಲಾಕ್ಗಳನ್ನು ಬಿರ್ಲಾ ಸಮೂಹಕ್ಕೆ ಸೇರಿದ ಹಿಂಡಾಲ್ಕೋಗೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಕಲ್ಲಿದ್ದಲು ಖಾತೆ ಕಾರ್ಯದರ್ಶಿಯಾಗಿದ್ದ ಪಿ.ಸಿ.ಪಾರೇಖ್ ಹಾಗೂ ಹಿಂಡಾಲ್ಕೋ ಪ್ರತಿನಿಧಿ ಜತೆಗಿನ 'ಭೇಟಿ' ಬಳಿಕ ಒಡಿಶಾದಲ್ಲಿನ ಬ್ಲಾಕ್ಗಳು ಹಿಂಡಾಲ್ಕೋ ತೆಕ್ಕೆಗೆ ಬಿದ್ದಿತ್ತು.
ಕೇಂದ್ರ ತನಿಖಾ ದಳ ಪ್ರಕರಣ ಕೈಗೆತ್ತಿಕೊಂಡ ಬಳಿಕ ದಾಖಲಿಸಿರುವ 14ನೇ ಎಫ್ಐಆರ್ ಇದಾಗಿದೆ. ಸಿಬಿಐ ದಾಖಲಿಸಿಕೊಂಡಿರುವ ಎಫ್ಐಆರ್ನಲ್ಲಿ ಕುಮಾರಮಂಗಲಂ ಬಿರ್ಲಾ ಅವರನ್ನು ಆದಿತ್ಯ ಬಿರ್ಲಾ ಸಮೂಹದ ಪ್ರತಿನಿಧಿ ಎಂದು ಹೆಸರಿಸಲಾಗಿದೆ.
ಏನೇನು ಆರೋಪ?
ಕುಮಾರಮಂಗಲಂ ಬಿರ್ಲಾ, ಪಾರೇಖ್ ಮತ್ತು ಹಿಂಡಾಲ್ಕೋ ಕಂಪನಿ ಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್ ಸಂಚು, ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಲಾಗಿದೆ.
ಶೀಘ್ರ ಕರೆ
ಕುಮಾರಮಂಗಲಂ ಬಿರ್ಲಾ, ಪಿ.ಸಿ.ಪಾರೇಖ್ರನ್ನು ಶೀಘ್ರವೇ ವಿಚಾರಣೆಗಾಗಿ ಕರೆಸಿಕೊಳ್ಳುವ ಸಾಧ್ಯತೆ ಇದೆ ಎಂದು ಸಿಬಿಐ ವಕ್ತಾರ ಕಾಂಚನ್ ಪ್ರಸಾದ್ ತಿಳಿಸಿದ್ದಾರೆ.
ಪಾತಾಳಕ್ಕೆ ಷೇರುಗಳ ಮೌಲ್ಯ
ಕುಮಾರಮಂಗಲಂ ಬಿರ್ಲಾ ನೇತೃತ್ವದ ಕಂಪನಿ ಮತ್ತು ಸ್ವತಃ ಬಿರ್ಲಾ ವಿರುದ್ಧವೇ ಕಲ್ಲಿದ್ದಲು ಹಗರಣದಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಿಕೊಂಡ ತಕ್ಷಣ ಬಾಂಬೆ ಷೇರು ಪೇಟೆಯಲ್ಲಿ ಬಿರ್ಲಾ ಸಮೂಹ ಸಂಸ್ಥೆಗಳು ವಿಶೇಷವಾಗಿ ಹಿಂಡಾಲ್ಕೋ ಕಂಪನಿಯ ಷೇರುಗಳು ಇಳಿಕೆ ಕಂಡವು. ಇದೇ ವೇಳೆ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ಗೆ ಲಿಖಿತ ಹೇಳಿಕೆ ನೀಡಿದ ಹಿಂಡಾಲ್ಕೋ 'ಕಲ್ಲಿದ್ದಲು ಹಂಚಿಕೆಯಲ್ಲಿ ನಮ್ಮ ಸಂಸ್ಥೆ ಯಾವುದೇ ಕಾನೂನು ಉಲ್ಲಂಘಿಸಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿದ ನಿಯಮಗಳನ್ನು ಪಾಲಿಸಿದ್ದೇವೆ. ಅದಕ್ಕೆ ಅನುಸಾರವಾಗಿ ನಮಗೆ ಕಲ್ಲಿದ್ದಲು ಬ್ಲಾಕ್ಗಳು ಹಂಚಿಕೆಯಾಗಿವೆ' ಎಂದು ತಿಳಿಸಿದೆ. ಇದೇ ವೇಳೆ ಸಿಬಿಐ ಅಧಿಕಾರಿಗಳು ಮುಂಬೈ, ದೆಹಲಿ, ಹೈದರಾಬಾದ್, ಭುವನೇಶ್ವರ ಹಾಗೂ ಸಿಕಂದರಾಬಾದ್ ಮತ್ತು ಹೈದರಾಬಾದ್ಗಳಲ್ಲಿರುವ ಪಾರೇಖ್ ನಿವಾಸ, ಹಿಂಡಾಲ್ಕೋ ಕಂಪನಿಯ ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಿದರು.
ಪಾರೇಖ್ ವಿರುದ್ಧ ಏನು ಆರೋಪ?
ಕಲ್ಲಿದ್ದಲು ಖಾತೆಯ ನಿವೃತ್ತ ಕಾರ್ಯದರ್ಶಿ ಪಿ.ಸಿ.ಪಾರೇಖ್ ವಿರುದ್ಧ ಕ್ರಿಮಿನಲ್ ಸಂಚು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೇರಿದಂತೆ ಇತರ ಪ್ರಕರಣಗಳ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ಗೆ ಮೀಸಲಾಗಿಟ್ಟ ಕಲ್ಲಿದ್ದಲು ಗಣಿ ಪಡಕೊಂಡ ಆರೋಪ
ನಮಗೆ ಎಫ್ಐಆರ್ ಪ್ರತಿ ಕೈ ಸೇರಿಲ್ಲ. ನಮ್ಮ ವಿರುದ್ಧ ಹೊರಿಸಲಾಗಿರುವ ಆರೋಪ ಸುಳ್ಳು
- ಬಿರ್ಲಾ ಸಮೂಹ ಸಂಸ್ಥೆಯ ಹೇಳಿಕೆ