ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಾಜ್ಯದ ಸಕಾಲಕ್ಕೆ ಬೆರಗಾದ ಕೇಂದ್ರ

ನಿಗದಿತ ಅವಧಿಯೊಳಗೆ ಸರ್ಕಾರಿ ಸೇವೆ ಒದಗಿಸುವ ರಾಜ್ಯ ಸರ್ಕಾರದ ಸಕಾಲ ಯಶಸ್ಸಿಗೆ ಮತ್ತೊಂದು ಗರಿ...

Vishwanath S
Updated On : 16 Oct 2013, 1:02 am

ಕನ್ನಡಪ್ರಭ ವಾರ್ತೆ ,  ಬೆಂಗಳೂರು ,  ಅ.15
ನಿಗದಿತ ಅವಧಿಯೊಳಗೆ ಸರ್ಕಾರಿ ಸೇವೆ ಒದಗಿಸುವ ರಾಜ್ಯ ಸರ್ಕಾರದ ಸಕಾಲ ಯಶಸ್ಸಿಗೆ ಮತ್ತೊಂದು ಗರಿ.
ಯೋಜನೆ ಅನುಷ್ಠಾನ ಕುರಿತಂತೆ ಪ್ರಶಂಸಾ ಪತ್ರ ನೀಡಿರುವ ಕೇಂದ್ರ ಸರ್ಕಾರ ತಾನು ಜಾರಿಗೆ ತರಲು ಉದ್ದೇಶಿಸಿರುವ ನಾಗರಿಕ ಸೇವೆಗಳ ಖಾತರಿ ಕಾಯ್ದೆಗೆ ಸಕಾಲ ಅನುಷ್ಠಾನದ ಬಹುತೇಕ ಅಂಶಗಳನ್ನು ಪರಿಗಣಿಸಲು ಮುಂದಾಗಿದೆ.
ನಾಗರಿಕ ಸೇವೆಗಳ ಖಾತರಿ ಕಾಯ್ದೆ ರೂಪಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಈ ನಿಟ್ಟಿನಲ್ಲಿ ಈಗಾಗಲೇ ಸಕಾಲ ಸೇರಿದಂತೆ ಇತರೆ ರಾಜ್ಯಗಳಲ್ಲಿ ಜಾರಿಯಲ್ಲಿರುವ ನಾಗರಿಕ ಸೇವೆಗಳ ಖಾತರಿ ಕಾಯ್ದೆಗಳನ್ನು ಕೂಡ ಪರಿಶೀಲಿಸುತ್ತಿದೆ. ಆದರೆ, ಈ ಪೈಕಿ ಮೊದಲ ಆದ್ಯತೆ ರಾಜ್ಯದ ಸಕಾಲಕ್ಕೆ. ಇದಕ್ಕೆ ಕಾರಣ ಯೋಜನೆಯ ಪರಿಣಾಮಕಾರಿ ಜಾರಿಗೆ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳು.
ದೇಶದ 14 ರಾಜ್ಯಗಳಲ್ಲಿ ನಾಗರಿಕ ಸೇವೆಗಳ ಖಾತರಿ ಕಾಯ್ದೆ ಜಾರಿಯಲ್ಲಿದೆಯಾದರೂ ಅದರ ಅಡಿಯಲ್ಲಿ ಅತಿ ಹೆಚ್ಚು ಸೇವೆಗಳನ್ನು ನೀಡುತ್ತಿರುವುದು ಮತ್ತು ಈ ಯೋಜನೆಯನ್ನು ಪಾರದರ್ಶಕವಾಗಿ ಜಾರಿಗೆ ತಂದಿರುವುದು ರಾಜ್ಯ ಮಾತ್ರ. ಇತರೆ 13 ರಾಜ್ಯಗಳಿಗಿಂತ ತಡವಾಗಿ ಕರ್ನಾಟಕ ಈ ಯೋಜನೆ ಜಾರಿಗೆ ತಂದಿದ್ದರೂ ಹೆಚ್ಚು ಪರಿಣಾಮಕಾರಿಯಾಗಿ ಜಾರಿಮಾಡಿದೆ. ಈ ಕಾರಣದಿಂದಲೇ ಕೇಂದ್ರ ಸರ್ಕಾರ ಸಕಾಲ ಯೋಜನೆಯನ್ನು ತನ್ನ ಕಾಯ್ದೆಗೆ ಹೆಚ್ಚಿನ ಪ್ರಮಾಣದಲ್ಲಿ ಪರಿಗಣಿಸುತ್ತಿದೆ.          
ಕೇರಳ ಹೊರತುಪಡಿಸಿ ಇತರೆ ರಾಜ್ಯಗಳು ಕರ್ನಾಟಕಕ್ಕಿಂತ ಮೊದಲೇ ನಾಗರಿಕ ಸೇವೆಗಳ ಖಾತರಿ ಕಾಯ್ದೆ ಜಾರಿಗೆ ತಂದಿದ್ದರೂ ಅತಿ ಹೆಚ್ಚು ಸೇವೆಗಳನ್ನು ಒದಗಿಸುತ್ತಿರುವುದು ರಾಜ್ಯ ಸರ್ಕಾರ. 20 ಇಲಾಖೆಗಳ 375 ಸೇವೆಗಳನ್ನು ಸಕಾಲ ಯೋಜನೆಯಲ್ಲಿ ನೀಡಲಾಗುತ್ತಿದ್ದು, ಇನ್ನೂ 200 ಸೇವೆಗಳನ್ನು ಈ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ. ಇತರೆ ರಾಜ್ಯಗಳಲ್ಲಿ ಛತ್ತೀಸ್‌ಗಡದಲ್ಲಿ 251 ಸೇವೆಗಳಿದ್ದರೆ, ರಾಜಸ್ಥಾನದಲ್ಲಿ 108 ಸೇವೆಗಳನ್ನು ಈ ಕಾಯ್ದೆ ವ್ಯಾಪ್ತಿಗೆ ತರಲಾಗಿದೆ. ಉಳಿದ ರಾಜ್ಯಗಳಲ್ಲಿ ಸೇವೆಗಳ ಸಂಖ್ಯೆ 100ಕ್ಕಿಂತ ಕಡಿಮೆ ಇದೆ.
ಯಾತಕ್ಕಾಗಿ ಸಕಾಲ ಪರಿಗಣನೆ?: ಕೇಂದ್ರ ಸರ್ಕಾರ ಸಕಾಲ ಯೋಜನೆಯನ್ನು ಹೆಚ್ಚಾಗಿ ಅವಲಂಬಿಸಲು ಇದೊಂದೇ ಕಾರಣವಲ್ಲ. ಬದಲಾಗಿ ಅದರ ಜಾರಿಗೆ ಸರ್ಕಾರ ಕೈಗೊಂಡಿರುವ ಕ್ರಮ. ಈ ಕ್ರಮದಿಂದಾಗಿ ಅರ್ಜಿಗಳು ಇತ್ಯರ್ಥವಾಗುವ ಪ್ರಮಾಣ. 2011ರ ಮಾರ್ಚ್‌ನಲ್ಲಿ ಸಕಾಲ ಯೋಜನೆ ಜಾರಿಯಾಗಿದ್ದು, ಇದುವರೆಗೆ ಸಕಾಲದಲ್ಲಿ 3.57 ಕೋಟಿ ಅರ್ಜಿಗಳು ಸ್ವೀಕೃತವಾಗಿವೆ. ಈ ಪೈಕಿ 3.48 ಕೋಟಿಗೂ ಹೆಚ್ಚು ಅರ್ಜಿಗಳು ಇತ್ಯರ್ಥವಾಗಿವೆ. ಯೋಜನೆಯ ಒಟ್ಟಾರೆ ಪ್ರಗತಿ ಶೇ. 98ಕ್ಕಿಂತಲೂ ಹೆಚ್ಚಾಗಿದೆ.
ಇದಕ್ಕೆ ಕಾರಣ ಸಕಾಲ ಯೋಜನೆಯ ಗಣಕೀಕರಣ. ಇದರಿಂದ ಯೋಜನೆ ಜಾರಿಯಲ್ಲಿ ಪಾರದರ್ಶಕತೆ ಕಾಣಿಸಿಕೊಂಡಿದೆ. ಯಾರು ಬೇಕಾದರೂ ತಮ್ಮ ಅರ್ಜಿಯ ಸ್ಥಿತಿಗತಿಗಳನ್ನು ವೆಬ್‌ಸೈಟ್ ಮೂಲಕ ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲ, ಅರ್ಜಿಗಳ ಸ್ಥಿತಿಗತಿ ಬಗ್ಗೆ ನಾಗರಿಕರಿಗೆ ಎಸ್‌ಎಂಎಸ್ ಕಳುಹಿಸುವ ಸೌಲಭ್ಯವೂ ಇದೆ. ಜತೆಗೆ ವೆಬ್‌ಸೈಟ್ ಮೂಲಕ ಯೋಜನೆ ಅನುಷ್ಠಾನದ ಪ್ರಮಾಣವನ್ನು ತಿಳಿದುಕೊಳ್ಳುವ ವ್ಯವಸ್ಥೆ ಇದೆ. ನಾಗರಿಕರಿಗೆ ಕಂಪ್ಯೂಟರ್ ಜ್ಞಾನ ಇಲ್ಲದೇ ಇದ್ದರೆ ಕಾಲ್‌ಸೆಂಟರ್‌ಗೆ ಕರೆ ಮಾಡಿಯೂ ತಮ್ಮ ಅರ್ಜಿಯ ಬಗ್ಗೆ ತಿಳಿದುಕೊಳ್ಳಬಹುದು.
ಜತೆಗೆ ಸಕಾಲ ಜಾರಿಯಾಗುವ ಮುನ್ನ ಮತ್ತು ನಂತರದಲ್ಲಿ ಅದರಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಗೆ ಸರ್ಕಾರ ನೀಡಿದ ಅವಕಾಶ, ಜಾಹೀರಾತುಗಳು ಕೂಡ ಸಕಾಲ ಯಶಸ್ವಿಗೆ ಕಾರಣವಾಗಿದೆ.
ಇದಲ್ಲದೆ, ಸಕಾಲ ಕುರಿತಂತೆ ಜಾಗೃತಿ ಮೂಡಿಸಲು ಫೇಸ್‌ಬುಕ್, ಟ್ವಿಟರ್ ಮತ್ತಿತರ ಸಾಮಾಜಿಕ ತಾಣಗಳ ನೆರವನ್ನೂ ಪಡೆದುಕೊಳ್ಳಲಾಗುತ್ತಿದೆ. ಸರ್ಕಾರದ ಯೋಜನೆಯೊಂದರ ಬಗ್ಗೆ ಈ ರೀತಿ ಸಾಮಾಜಿಕ ತಾಣಗಳನ್ನು ಬಳಸಿಕೊಂಡಿದ್ದು ಇದೇ ಪ್ರಥಮ. ಸಕಾಲ ಯೋಜನೆ ಬಗ್ಗೆ ಅರಿವು ಮೂಡಿಸುವಲ್ಲಿ ಸರ್ಕಾರ ಮಾಡಿರುವ ಆಂದೋಲನ ವಿಶ್ವಬ್ಯಾಂಕ್ ಪ್ರಶಂಸೆಗೂ ಪಾತ್ರವಾಗಿದೆ.
ಈಗಾಗಲೇ ಸಕಾಲ ಯೋಜನೆ ಕುರಿತಂತೆ ರಾಜ್ಯಕ್ಕೆ ಪ್ರಶಂಸಾ ಪತ್ರ ನೀಡಿರುವ ಕೇಂದ್ರ ಸರ್ಕಾರ ತನ್ನ ಉದ್ದೇಶಿತ ನಾಗರಿಕ ಸೇವೆಗಳ ಖಾತರಿ ಕಾಯ್ದೆ ರೂಪಿಸಲು ಸಕಾಲದ ಬಹುತೇಕ ಅನುಷ್ಠಾನ ಕ್ರಮಗಳನ್ನು ಬಳಸಿಕೊಳ್ಳಲು ತೀರ್ಮಾನಿಸಿದೆ.
ಈಗಾಗಲೇ ಹಲವು ಸುತ್ತಿನ ಚರ್ಚೆ: ರಾಜ್ಯದಲ್ಲಿ ಸಕಾಲ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಕುರಿತಂತೆ ಕೇಂದ್ರ ಸರ್ಕಾರದ ಅಧಿಕಾರಿಗಳು ಹಲವು ಬಾರಿ ರಾಜ್ಯಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಅಷ್ಟೇ ಅಲ್ಲ, ರಾಜ್ಯದಿಂದ ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿಕೊಂಡು ಚರ್ಚೆ ನಡೆಸಿದ್ದಲ್ಲದೆ, ಪವರ್‌ಪಾಯಿಂಟ್ ಪ್ರೆಸೆಂಟೇಷನ್ ಮೂಲಕವೂ ಹೆಚ್ಚಿನ ವಿಚಾರ ತಿಳಿದುಕೊಂಡಿದ್ದಾರೆ. ಬಹುತೇಕ ಮುಂದಿನ ವರ್ಷದಿಂದ ಕೇಂದ್ರ ಸರ್ಕಾರ ನಾಗರಿಕ ಸೇವೆಗಳ ಖಾತರಿ ಕಾಯ್ದೆ ಜಾರಿಗೆ ತರಲಿದೆ.
ಸಕಾಲ ಮುಖ್ಯಮಂತ್ರಿಗಳ ಮಟ್ಟದ ಬದ್ಧತೆ. ಸರ್ಕಾರಿ ನೌಕರರ ಸಂಘವೂ ಇದನ್ನು ಪೂರಕವಾಗಿ ಪರಿಗಣಿಸಿ ಸಹಕರಿಸುತ್ತಿದ್ದಾರೆ. ಹಿಂದಿನ ಮತ್ತು ಈಗಿನ ಸರ್ಕಾರದ ಕಾನೂನು ಸಚಿವರು ಇದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರು. ಜತೆಗೆ ಎಲ್ಲಾ ಇಲಾಖೆಗಳನ್ನು ಒಂದೇ ವೇದಿಕೆಯಡಿ ತರುವ ಇ-ಆಡಳಿತದಿಂದಾಗಿ ಸಕಾಲ ರಾಜ್ಯದಲ್ಲಿ ಯಶಸ್ವಿಯಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಪ್ರಶಂಸಾ ಪತ್ರವೂ ಬಂದಿದೆ.
- ಶಾಲಿನಿ ರಜನೀಶ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ


-ಪ್ರದೀಪ್ ಕುಮಾರ್ ಎಂ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement