ಆನಂದಕ್ಕೆ ಉರುಳಾಯ್ತು ಗಣಿ!
ಮಾಜಿ ಸಚಿವ ಆನಂದ್ ಸಿಂಗ್ ಅವರ ಕುಟುಂಬ ಐದಾರು ದಶಕಗಳಿಂದ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರೂ ಆನಂದ್ ಸಿಂಗ್ ...
ಬಳ್ಳಾರಿ: ಮಾಜಿ ಸಚಿವ ಆನಂದ್ ಸಿಂಗ್ ಅವರ ಕುಟುಂಬ ಐದಾರು ದಶಕಗಳಿಂದ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರೂ ಆನಂದ್ ಸಿಂಗ್ ಮಾತ್ರ ಸಾರಿಗೆ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಗಣಿ ಉದ್ಯಮಿಯಾಗಿ ಹೆಚ್ಚಾಗಿ ಕಾಣಿಸಿಕೊಂಡಿದ್ದು ಇತ್ತೀಚಿನ ಏಳೆಂಟು ವರ್ಷಗಳಿಂದ ಮಾತ್ರ. ಈ ಅವಧಿಯಲ್ಲಿ ಮಾಡಿದ ಗಣಿಗಾರಿಕೆಯೇ ಅವರಿಗೆ ಉರುಳಾಗಿ ಪರಿಣಿಮಿಸಿದೆ. ಆನಂದ್ ಸಿಂಗ್ ಗಣಿ ಉದ್ಯಮಿ ಎಂದು ವಿಜಯನಗರ ಕ್ಷೇತ್ರದಲ್ಲಿ ಹೆಸರು ಮಾಡದೆ ಎಸ್‌ವಿಕೆ ಬಸ್‌ಗಳ ಮೂಲಕ ಹಾಗೂ ಹಲವು ಸಮಾಜ ಸೇವೆಗಳ ಮೂಲಕ ಆನಂದ್ ಅವರ ಹೆಸರಿತ್ತು. ಗಣಿ ಉದ್ಯಮಿಯಾಗಿ ಇದೀಗ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿದಂತಾಗಿದೆ.
ಸಾರಿಗೆಯಿಂದ ಗಣಿಗೆ ಜಂಪ್
ಬಳ್ಳಾರಿ ಅದಿರಿಗೆ ಚಿನ್ನದ ಬೆಲೆ ಬರುವ ಪೂರ್ವದಲ್ಲಿ ಆನಂದ್ ಸಿಂಗ್ ಅವರು ಎಸ್‌ವಿಕೆ (ಶ್ರೀ ಲಕ್ಷ್ಮಿ ವೆಂಕಟೇಶ್ವರ ಕೃಪಾ) ಹೆಸರಿನಲ್ಲಿ ಖಾಸಗಿ ಬಸ್‌ಗಳನ್ನು ಆರಂಭಿಸಿ, ಸಾರಿಗೆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಎಸ್‌ವಿಕೆ ಬಸ್‌ಗಳನ್ನು ಓಡಿಸುತ್ತಿದ್ದರು. ಅಲ್ಲದೇ ಅನೇಕ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಆನಂದ್ ಸಿಂಗ್ ಹೆಸರು ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿತ್ತು. ಸಾರಿಗೆ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಆನಂದ್ ಸಿಂಗ್ 2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಕಾಲಕ್ಕೆ ವ್ಯಾಸನಕೆರೆಯಲ್ಲಿದ್ದ ಎಸ್‌ಬಿ(ಎಸ್‌ವಿಕೆ) ಮಿನರಲ್ಸ್ ಗಣಿ ಗುತ್ತಿಗೆಯನ್ನು ನವೀಕರಿಸಿ ಗಣಿಗಾರಿಕೆ ನಡೆಸಲು ಆರಂಭಿಸಿದ್ದರು.
ಸಿಂಗ್ ಮೇಲೆ ಯಾವ ಆರೋಪ?
ಅರಣ್ಯ ಭೂಮಿ ಹಾಗೂ ಇತರ ಗಣಿ ಕಂಪನಿಗಳ ಪ್ರದೇಶಗಳಲ್ಲಿ ದುಶ್ಯಂತ್ ರೆಡ್ಡಿ ತೆಗೆದ ಅದಿರನ್ನು ಟ್ರಾನ್ಸ್‌ಪೋರ್ಟ್‌ರ್ ಆಗಿದ್ದ ಜೀವರೆಡ್ಡಿ ಆನಂದ್ ಸಿಂಗ್‌ಗೆ ಸೇರಿದ ಸ್ಟಾಕ್‌ಯಾರ್ಡ್‌ಗಳಲ್ಲಿ ಸಂಗ್ರಹ ಮಾಡುತ್ತಿದ್ದರು. ಹೀಗೆ ಅಕ್ರಮವಾಗಿ ತೆಗೆದು ಲಕ್ಷಾಂತರ ಮೆಟ್ರಿಕ್ ಟನ್ ಅದಿರನ್ನು ಆನಂದ್ ಸಿಂಗ್ ಅವರ ವೈಷ್ಣವಿ ಮಿನರಲ್ಸ್‌ನಿಂದ ಸ್ಥಳೀಯ ಕಂಪನಿಗಳ ಮೂಲಕ ಹಾಗೂ ಬೇಲೆಕೇರಿ ಬಂದರಿನ ಮೂಲಕ ವಿದೇಶಕ್ಕೆ ರಫ್ತಾಗುತ್ತಿತ್ತು ಎಂಬ ಆರೋಪವಿದೆ. ಎಸ್‌ಬಿ ಲಾಜಿಸ್ಟಿಕ್, ಡ್ರೀಮ್ ಲಾಜಿಸ್ಟಿಕ್, ಮಲ್ಲಿಕಾರ್ಜುನ ಶಿಫ್ಪಿಂಗ್, ಐಎಲ್‌ಸಿ ಮೂಲಕ 10 ಲಕ್ಷ ಮೆಟ್ರಿಕ್ ಟನ್ ಅದಿರು ಅಕ್ರಮವಾಗಿ ರಫ್ತು ಮಾಡಿದ್ದಾರೆ ಎಂಬ ಆರೋಪ, ಲಕ್ಷ್ಮಿನಾರಾಯಣ ಮೈನಿಂಗ್ ಕಂಪನಿಯಲ್ಲಿ ಕೂಡ ಗಣಿಗಾರಿಕೆ ಮಾಡಿದ್ದಾರೆ ಎನ್ನುವ ಆರೋಪ ಆನಂದ್ ಸಿಂಗ್ ಮೇಲಿದೆ.
2 ದೋಣಿಯಲ್ಲಿ ಕಾಲಿಟ್ಟರು
2006ರಿಂದಲೇ ಗಣಿಗಾರಿಕೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡ ಇವರು, ಸಾರಿಗೆ ಉದ್ಯಮ ಹಾಗೂ ಗಣಿ ಉದ್ಯಮ ಎರಡಲ್ಲೂ ತೊಡಗಿಕೊಂಡಿದ್ದರಿಂದ ಹಣ ಬರುತ್ತಿತ್ತು. ನಂತರ 2008ರಲ್ಲಿ ರಾಜಕೀಯಕ್ಕೆ ಬರುವ ಮನಸ್ಸು ಮಾಡಿದರು. ಇದಕ್ಕೂ ಮೊದಲು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಆನಂದ್ ಸಿಂಗ್, ವಿದ್ಯಾರ್ಥಿಗಳಿಗೆ ಪುಸ್ತಕಗಳ ವಿತರಣೆ, ನೀರಿನ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಸೇರಿದಂತೆ ಇತರೆ ಸಾಮಾಜಿಕ ಸೇವಾ ಕಾರ್ಯಕ್ರಮದಲ್ಲಿ ಮುಳುಗಿದ್ದರು. ಹೀಗಾಗಿಯೇ ವಿಜಯನಗರ ಕ್ಷೇತ್ರದಲ್ಲಿ ಅವರ ಹೆಸರು ಜನಜನಿತವಾಗಿತ್ತು. ಈ ಜನಪ್ರಿಯತೆ ಕಂಡಿದ್ದ ಮಾಜಿ ಸಚವ ಗಾಲಿ ಜನಾರ್ದನ ರೆಡ್ಡಿ ಆನಂದ್ ಸಿಂಗ್‌ರನ್ನು ಬಿಜೆಪಿಗೆ ಕರೆತಂದು, 2008ರಲ್ಲಿ ಬಿಜೆಪಿಯಿಂದ ಗೆಲ್ಲಿಸಿದರು. ಅಲ್ಲಿಂದ ಆನಂದ್ ಸಿಂಗ್‌ಗೆ ರೆಡ್ಡಿ ಸಖ್ಯ ಬೆಳೆಯಿತು. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಆನಂದ್ ಸಿಂಗ್ ಅವರು ಕೂಡ ಒಬ್ಬ ಆರೋಪಿಯಾಗಿದ್ದರಿಂದ ಇದೀಗ ಸಿಬಿಐ ಬಂಧಿಸಿದೆ. ಗಣಿ ವ್ಯವಹಾರದಲ್ಲಿ ಆನಂದ್ ಸಿಂಗ್ ಹಾಗೂ ಸುರೇಶ್‌ಬಾಬು ಅವರ ನಡುವೆ ವೈಮನಸ್ಸು ಉಂಟಾಗಿತ್ತು. ಇದರಿಂದಾಗಿ ಜನಾರ್ದನ ರೆಡ್ಡಿಯಿಂದ ದೂರ ಸರಿಯುವ ಪ್ರಯತ್ನವನ್ನು ಆನಂದ್ ಸಿಂಗ್ ಮಾಡಿ ಶ್ರೀರಾಮುಲು ಪಕ್ಷ ಬಿಟ್ಟು ಹೋದಾಗ ಆನಂದ್ ಸಿಂಗ್ ಬಿಜೆಪಿಯಲ್ಲೇ ಉಳಿದರು. ನಂತರ ಬಿಜೆಪಿ ಸರ್ಕಾರದಲ್ಲಿ ಪ್ರವಾಸೋದ್ಯದ ಸಚಿವರಾದರು. 2013ರ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆಯುತ್ತಾರೆ ಎಂಬ ಸುದ್ದಿ ನಡುವೆಯೂ ಬಿಜೆಪಿಯಿಂದಲೇ ಸ್ಪರ್ಧಿಸಿ, ಗಣಿ ಆರೋಪದ ನಡುವೆಯೂ ಗೆಲವು ಸಾಧಿಸಿದರು ಎಂಬುದು ಈಗ ಇತಿಹಾಸ.
ಬಂಧನಕ್ಕೆ ಕಾರಣವಾಗಿದ್ದೇನು?
ಆನಂದ್ ಸಿಂಗ್ ಆಪ್ತ ಆಸ್ಗರ್‌ಖಾನ್ ಹಾಗೂ ಆಂಧ್ರಪ್ರದೇಶ ಮೂಲದ ದುಶ್ಯಂತ್ ರೆಡ್ಡಿ ವಿಚಾರಣೆ ವೇಳೆ ನೀಡಿದ ಮಾಹಿತಿಯನ್ನಾಧರಿಸಿ ಆನಂದ್ ಸಿಂಗ್‌ಗೆ ಸಿಬಿಐ ಉರುಳು ಮತ್ತಷ್ಟು ಬಿಗಿಗೊಳ್ಳಲು ಕಾರಣವಾಯಿತು ಎಂದೇ ಹೇಳಬಹುದು. ವ್ಯಾಸನಕೆರೆ ಎಸ್‌ಬಿ ಮಿನಲರ್ಸ್, ವೈಷ್ಣವಿ ಮಿನರಲ್ಸ್ ಟ್ರೇಡಿಂಗ್ ಗಣಿ ಕಂಪನಿಯನ್ನು ಆನಂದ್ ಸಿಂಗ್ ಹೊಂದಿದ್ದರು. ಇನ್ನು ಐಎಲ್‌ಸಿ ಕಂಪನಿಯಲ್ಲಿ ಆನಂದ್ ಸಿಂಗ್ ಪಾಲುದಾರನಾಗಿದ್ದ ಎಂದು ಹೇಳಲಾಗುತ್ತಿದೆ.