ಆನಂದ್ಸಿಂಗ್ ಸೆರೆ
ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣ ಸಂಬಂಧ ಮಾಜಿ ಸಚಿವ ಬಳ್ಳಾರಿ ವಿಜಯನಗರ ಶಾಸಕ ಆನಂದ್ ಸಿಂಗ್ ಅವರನ್ನು...
ಬೆಂಗಳೂರು: ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣ ಸಂಬಂಧ ಮಾಜಿ ಸಚಿವ ಬಳ್ಳಾರಿ ವಿಜಯನಗರ ಶಾಸಕ ಆನಂದ್ ಸಿಂಗ್ ಅವರನ್ನು ಸಿಬಿಐ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ತೆರಳಿದ್ದ ಆನಂದ್ಸಿಂಗ್ ಅವರು ಗುರುವಾರ ಬೆಳಿಗ್ಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಬಿಐಎಎಲ್) ಬಂದಿಳಿದಾಗ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಬೇಲೆಕೇರಿ ಅದಿರು ನಾಪತ್ತೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಅಧಿಕಾರಿಗಳು ಆನಂದ್ಸಿಂಗ್ ಅವರಿಗೆ ಕಳೆದ ತಿಂಗಳು ನೋಟಿಸ್ ಜಾರಿ ಮಾಡಿದ್ದರು. ಆದರೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಆನಂದ್ಸಿಂಗ್ ವಿರುದ್ಧ ಸಿಬಿಐ ಅಧಿಕಾರಿಗಳು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು.
ಗುರುವಾರ ಬೆಳಿಗ್ಗೆ ಆನಂದ್ಸಿಂಗ್ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅವರ ಪಾಸ್ಪೋರ್ಟ್ ಬಗ್ಗೆ ಪರಿಶೀಲನೆ ವೇಳೆ ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳು ಲುಕ್ ಔಟ್ ನೋಟಿಸ್ ಬಗ್ಗೆ ಮಾಹಿತಿ ಸಿಕ್ಕಿದೆ. ಈ ವಿಚಾರವನ್ನು ಸಿಬಿಐ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಎಸ್ಪಿ ಸುಬ್ರಮಣ್ಯೇಶ್ವರ್ ರಾವ್ ಅವರ ತಂಡ ವಿಮಾನ ನಿಲ್ದಾಣಕ್ಕೆ ತೆರಳಿ ಆನಂದ್ಸಿಂಗ್ ಅವರನ್ನು ಬಂಧಿಸಿದೆ. ಬಳಿಕ ಆನಂದ್ಸಿಂಗ್ ಅವರನ್ನು ಸಿಬಿಐ ಅಧಿಕಾರಿಗಳು ಅಂಬಾಸಿಡರ್ ಕಾರಿನಲ್ಲಿ ಬಿಐಎಎಲ್ನಿಂದ ವೈದ್ಯಕೀಯ ಪರೀಕ್ಷೆಗಾಗಿ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಮಧ್ಯಾಹ್ನ 3.10ರ ಸುಮಾರಿಗೆ ಹಾಜರುಪಡಿಸಲಾಯಿತು.
ಆನಂದ್ಸಿಂಗ್ ಅವರನ್ನು ಅ.26ರವರೆಗೆ ವಿಚಾರಣೆಗಾಗಿ ಸಿಬಿಐ ಅಧಿಕಾರಿಗಳ ವಶಕ್ಕೆ ಒಪ್ಪಿಸಿ ಸಿಬಿಐ ವಿಶೇಷ ನ್ಯಾಯಾಲಯದ ಪ್ರಭಾರಿ ನ್ಯಾಯಾಧೀಶ ಸೋಮರಾಜ ಅವರು ಆದೇಶ ನೀಡಿದರು. ಬಳಿಕ ಅವರನ್ನು ಗಂಗಾನಗರದಲ್ಲಿರುವ ಸಿಬಿಐ ಕಚೇರಿಗೆ ಕರೆದೊಯ್ಯಲಾಯಿತು. ಸಿಬಿಐ ಅಧಿಕಾರಿಗಳು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಇದರೊಂದಿಗೆ ಬೇಲೆಕೇರಿ ಅದಿರು ಕಳ್ಳಸಾಗಣೆ ಪ್ರಕರಣದಲ್ಲಿ ಆನಂದ್ ಸಿಂಗ್ ಅವರು ಸಿಬಿಐ ಅಧಿಕಾರಿಗಳಿಂದ ಬಂಧಿತರಾಗಿರುವ ನಾಲ್ಕನೇ ಶಾಸಕರಾಗಿದ್ದಾರೆ. ಈಗಾಗಲೇ ಕಂಪ್ಲಿ ಶಾಸಕ ಸುರೇಶ್ ಬಾಬು, ಕಾರವಾರ ಶಾಸಕ ಸತೀಶ್ ಸೈಲ್ ಹಾಗೂ ಕೂಡ್ಲಿಗಿ ಶಾಸಕ ನಾಗೇಂದ್ರ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಮೂವರನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ತಂದೆಯನ್ನು ನೋಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಅಕ್ಬೋಬರ್ 25ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಸಿಂಗಾಪುರದಲ್ಲಿ ಚಿಕಿತ್ಸೆ: ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಆನಂದ್ ಸಿಂಗ್ ಅವರು ಕಳೆದ ತಿಂಗಳು ಸಿಂಗಾಪುರಕ್ಕೆ ತೆರಳಿದ್ದರು. ಇದೇ ವೇಳೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು.
ಚಿಕಿತ್ಸೆಗಾಗಿ ವಿದೇಶದಲ್ಲಿರುವ ಕಾರಣ ತಾನು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಈ ಹಿಂದೆ ಇದೇ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳ ಮುಂದೆ ಪ್ರಕರಣದ ವಿಚಾರಣೆ ಎದುರಿಸಿದ್ದೇನೆ. ಹೀಗಾಗಿ ಅನಗತ್ಯವಾಗಿ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದಾರೆ. ಹೀಗಾಗಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕೆಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ವಕೀಲರ ಮೂಲಕ ಆನಂದ್ಸಿಂಗ್ ಅರ್ಜಿ ಸಲ್ಲಿಸಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಅ.7 ರಂದು ಆನಂದ್ಸಿಂಗ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿತ್ತು. ಇದರಿಂದಾಗಿ ಆನಂದ್ಸಿಂಗ್ ಅವರು ಬಂಧನ ಭೀತಿಯಲ್ಲಿದ್ದರು. ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಬಳಿಕವೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಆನಂದ್ ಸಿಂಗ್ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿ ಎಲ್ಲಾ ಠಾಣೆಗಳಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಅಧಿಕಾರಿಗಳು ಆನಂದ್ಸಿಂಗ್ ಆಗಮನದ ಬಗ್ಗೆ ಸಿಬಿಐ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಇಂಟರ್ಪೋಲ್ಗೆ ಬೆದರಿದರಾ?: ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸುತ್ತಿದ್ದಂತೆ ಶರಣಾಗುವಂತೆ ಆನಂದ್ಸಿಂಗ್ ಅವರಿಗೆ ವಕೀಲರು ಸೂಚನೆ ನೀಡಿದ್ದರು.
ಸಾಮಾನ್ಯವಾಗಿ ಭಯೋತ್ಪಾದಕರು ಹಾಗೂ ಕುಖ್ಯಾತ ಅಪರಾಧಿಗಳು, ದೇಶದ್ರೋಹಿಗಳ ವಿರುದ್ಧ ಮಾತ್ರ ಇದುವರೆಗೂ ಇಂಟರ್ಪೋಲ್ ಜಾರಿ ಮಾಡಲಾಗಿದೆ. ಆದರೆ ಜನಪ್ರತಿನಿಧಿಯೊಬ್ಬರ ವಿರುದ್ಧ ಇಂಟರ್ಪೋಲ್ ಜಾರಿ ಮಾಡಿದ್ದರೆ ಇತಿಹಾಸದಲ್ಲೆ ಮೊದಲ ವ್ಯಕ್ತಿ ಆಗುವುದರ ಜತೆಗೆ ಭವಿಷ್ಯದಲ್ಲಿ ಜಾಮೀನು ಪಡೆಯಲು ಆನಂದ್ಸಿಂಗ್ ಅವರಿಗೆ ಸಮಸ್ಯೆಯಾಗುವ ವಿಚಾರಗಳನ್ನು ವಕೀಲರು ಆನಂದ್ಸಿಂಗ್ ಅವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಆನಂದ್ಸಿಂಗ್ ಅವರು ಗುರುವಾರ ನ್ಯಾಯಾಲಯದ ಮುಂದೆ ಶರಣಾಗುವವರಿದ್ದರು ಎನ್ನಲಾಗಿದೆ. ಆದರೆ ಅಷ್ಟರಲ್ಲೇ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಅ.24ಕ್ಕೆ ಜಾಮೀನು ಅರ್ಜಿ: ಸಿಬಿಐ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗುತ್ತಿದ್ದಂತೆ ಆನಂದ್ಸಿಂಗ್ ಜಾಮೀನು ಅರ್ಜಿ ಸಲ್ಲಿಸಲು ಮುಂದಾದರು.
ಆದರೆ, ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶ್ರೀಶಾನಂದ ಅವರು ರಜೆಯಲ್ಲಿರುವ ಕಾರಣ ಅ.24ಕ್ಕೆ ಜಾಮೀನು ಅರ್ಜಿ ಸಲ್ಲಿಸಿ ಎಂದು ನ್ಯಾಯಾಲಯ ತಿಳಿಸಿತು. ಈ ಹಿನ್ನೆಲೆಯಲ್ಲಿ ಆನಂದ್ಸಿಂಗ್ ಅವರು ಅ.24ಕ್ಕೆ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.