ಮತ್ತೇಳು ಬಂದರಿಗೆ ಸಿಬಿಐ ಲಂಗರು
ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಅದಿರು ರಫ್ತು ವಿಚಾರದ ಸಿಬಿಐ ತನಿಖೆಯನ್ನು ಮತ್ತಷ್ಟು ಆಳಕ್ಕಿಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಕನ್ನಡಪ್ರಭ ವಾರ್ತೆ , ಬೆಂಗಳೂರು , ಅ.17-
ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಅದಿರು ರಫ್ತು ವಿಚಾರದ ಸಿಬಿಐ ತನಿಖೆಯನ್ನು ಮತ್ತಷ್ಟು ಆಳಕ್ಕಿಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈಗಾಗಲೇ ಬೇಲೆಕೇರಿ ಬಂದರಿನಿಂದ ಅಕ್ರಮ ಅದಿರು ರಫ್ತು ಕುರಿತು ತನಿಖೆ ನಡೆಸುತ್ತಿರುವ ಸಿಬಿಐಗೆ ಇತರೆ ಏಳು ಬಂದರುಗಳ ಮೂಲಕ ರಾಜ್ಯದ ಅದಿರು ರಫ್ತಾಗಿರುವುದು ಹಾಗೂ ಜನಾರ್ದನರೆಡ್ಡಿ ಹಾಗೂ ಅವರ ಪತ್ನಿ ಲಕ್ಷ್ಮಿ ಅರುಣಾ ಒಡೆತನದ ಅಸೋಸಿಯೇಟೆಡ್ ಮೈನಿಂಗ್ ಕಂಪನಿಯ ಅಕ್ರಮ ಗಣಿಗಾರಿಕೆ ತನಿಖೆಗಳನ್ನು ವಹಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇದರ ಜತೆಗೆ ಅಕ್ರಮ ಅದಿರು ಗಣಿಗಾರಿಕೆ ನಡೆಸಿದ ಗಣಿ ಕಂಪನಿಗಳ ಇತರೆ ವಂಚನೆ ಕುರಿತಂತೆ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಲು ನಿರ್ಧರಿಸಲಾಗಿದ್ದು, ಈ ತನಿಖೆಯ ಉಸ್ತುವಾರಿಗೆ ಸಂಪುಟ ಉಪಸಮಿತಿ ರಚಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಅಲ್ಲದೆ, ಅಕ್ರಮ ಗಣಿಗಾರಿಕೆಯಿಂದ ಸಂಗ್ರಹಿಸಿ ಬೇರೆ ಬೇರೆ ಕಡೆ ಬಚ್ಚಿಟ್ಟಿರುವ ಮತ್ತು ಹೂಡಿಕೆ ಮಾಡಿರುವ ಪ್ರಕರಣವನ್ನು ಕೇಂದ್ರ ಸರ್ಕಾರದ ಮನಿ ಲಾಂಡ್ರಿಂಗ್ ಕಾಯ್ದೆಯಲ್ಲಿ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ ಮೂಲಕ ತನಿಖೆ ನಡೆಸಿ ಈ ಹಣವನ್ನು ಸರ್ಕಾರದ ವಶಕ್ಕೆ ಪಡೆಯಲೂ ತೀರ್ಮಾನಿಸಲಾಗಿದೆ.
ಅಕ್ರಮ ಗಣಿಗಾರಿಕೆ ಕುರಿತಂತೆ ಎಲ್ಲಾ ಪ್ರಕರಣಗಳ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಬಗ್ಗೆಯೂ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಈ ಕುರಿತು ವಿವರಣೆ ನೀಡಿದರು.
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಸಾವಿರಾರು ಕೋಟಿ ರುಪಾಯಿ ಲೂಟಿ ಮಾಡಿದವರನ್ನು ಪತ್ತೆಹಚ್ಚಿ ಶಿಕ್ಷಿಸುವುದರ ಜತೆಗೆ, ಈ ಹಣವನ್ನು ವಸೂಲಿ ಮಾಡಲಾಗುವುದು ಎಂದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಭರವಸೆ ನೀಡಲಾಗಿತ್ತು. ಅದರಂತೆ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ ಎಂದು ಹೇಳಿದರು.
ಲೋಕಾಯುಕ್ತರಿಂದ ವಿವರಣೆ ಬೇಕಾಗಿಲ್ಲ: ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಲೋಕಾಯುಕ್ತರು ಅಕ್ರಮ ಗಣಿಗಾರಿಕೆ ಕುರಿತಂತೆ ವರದಿ ನೀಡಿದ್ದರು. ಈ ವರದಿ ಜಾರಿ ಮಾಡುವ ಕುರಿತಂತೆ ಆಗಿನ ಸರ್ಕಾರ ಆಗ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಜೈರಾಜ್ ನೇತೃತ್ವದ ಸಮಿತಿ ರಚಿಸಿ ವರದಿ ಪಡೆದಿತ್ತು. ಈ ವರದಿಯಲ್ಲಿ ಅಕ್ರಮ ನಡೆಸಿದ ಗಣ್ಯರ ವಿರುದ್ಧ ಕ್ರಮ ಕೈಗೊಳ್ಳುವುದು ಹೇಗೆ ಎಂಬುದನ್ನು ನಿರ್ಧರಿಸಬೇಕಾಗಿದೆ ಎಂದು ತಿಳಿಸಲಾಗಿತ್ತು. ಆಗ ಲೋಕಾಯುಕ್ತ ಹುದ್ದೆ ಖಾಲಿಯಾಗಿದ್ದುದನ್ನು ಗಮನಿಸಿದ ಬಿಜೆಪಿ ಸರ್ಕಾರ, ಈ ಬಗ್ಗೆ ಲೋಕಾಯುಕ್ತರಿಂದಲೇ ವಿವರಣೆ ಪಡೆಯಲು ವರದಿಯನ್ನು ವಾಪಸ್ ಕಳುಹಿಸಿತ್ತು. ಇದರಿಂದಾಗಿ ಲೋಕಾಯುಕ್ತರ ವರದಿ ಜಾರಿಗೆ ತೊಡಕಾಗಿತ್ತು. ಇದನ್ನು ಪರಿಗಣಿಸಿದ ನಮ್ಮ ಸರ್ಕಾರ ಲೋಕಾಯುಕ್ತರಿಂದ ವಿವರಣೆ ಪಡೆಯುವ ಅಗತ್ಯವಿಲ್ಲ ಎಂಬುದನ್ನು ಮನಗಂಡು ವಿವರಣೆ ಮನವಿಯನ್ನು ವಾಪಸ್ ಪಡೆದು ವರದಿ ಜಾರಿಗೊಳಿಸಲು ಮುಂದಾಗಿದೆ ಎಂದು ಅವರು ತಿಳಿಸಿದರು.
ಪ್ರಸ್ತುತ ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ರಫ್ತಾಗಿರುವ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಮಂಗಳೂರು, ಕಾರವಾರ, ಗೋವಾ, ವಿಶಾಖಪಟ್ಟಣ, ಕಾಕಿನಾಡ ಸೇರಿದಂತೆ ಒಟ್ಟು ಏಳು ಬಂದರುಗಳಿಂದ ರಾಜ್ಯದ ಅದಿರು ಹೊರದೇಶಗಳಿಗೆ ರಫ್ತಾಗಿದ್ದು, ಇಲ್ಲೂ ಸಾಕಷ್ಟು ಅಕ್ರಮ ನಡೆದಿದೆ ಎಂಬ ಮಾತು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಏಳು ಬಂದರುಗಳಿಂದ ರಾಜ್ಯದ ಅದಿರು ರಫ್ತಾಗಿರುವ ಕುರಿತ ತನಿಖೆಯನ್ನು ಸಿಬಿಐಗೆ ವಹಿಸಲು ತೀರ್ಮಾನಿಸಲಾಗಿದೆ. ಇದಲ್ಲದೆ, ಅಕ್ರಮ ಗಣಿಗಾರಿಕೆ ನಡೆಸಿರುವುದರಲ್ಲಿ ಅಸೋಸಿಯೇಟೆಡ್ ಮೈನಿಂಗ್ ಕಂಪನಿಯ ಪಾತ್ರ ಪ್ರಮುಖವಾಗಿದೆ. ಈ ಕಾರಣದಿಂದ ಕಂಪನಿ ನಡೆಸಿದ ಅಕ್ರಮ ಗಣಿಗಾರಿಕೆ ಪ್ರಕರಣವನ್ನೂ ಸಿಬಿಐಗೆ ವಹಿಸಬೇಕು ಎಂದು ನಿರ್ಧರಿಸಲಾಗಿದೆ. ಜತೆಗೆ ಈ ಕಂಪನಿಗಳು ಅಕ್ರಮ ಗಣಿಗಾರಿಕೆ ನಡೆಸುವ ಸಂದರ್ಭದಲ್ಲಿ ಅರಣ್ಯ ಅಭಿವೃದ್ಧಿ ತೆರಿಗೆ ಪಾವತಿಸುವುದರಲ್ಲಿ ಸಾಕಷ್ಟು ವಂಚನೆಯಾಗಿದೆ. ಅದೇ ರೀತಿ ಅದಿರು ಸಾಗಣೆ ಸೇರಿದಂತೆ ಎಲ್ಲಾ ಹಂತಗಳಲ್ಲೂ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಲಾಗಿದೆ. ಇದರಲ್ಲಿ ಅಧಿಕಾರಿಗಳ ಪಾತ್ರವೂ ಇದ್ದು, ಆ ಕುರಿತಂತೆ ಸಿಐಡಿ ಪೊಲೀಸರ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸಲು ತೀರ್ಮಾನಿಸಿದ್ದು, ಈ ತನಿಖೆ ಸಚಿವ ಸಂಪುಟ ಉಪಸಮಿತಿಯ ಉಸ್ತುವಾರಿಯಲ್ಲಿ ನಡೆಯಲಿದೆ ಎಂದು ಅವರು ವಿವರಿಸಿದರು.
ಸಂಪುಟದ ಪ್ರಮುಖ ತೀರ್ಮಾನಗಳು
- ರಾಜ್ಯದಲ್ಲಿ ಅರಣ್ಯ ಪ್ರದೇಶದಿಂದ 100 ಮೀಟರ್ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ (ಜಲ್ಲಿ ಕ್ರಷರ್) ನಡೆಸಲು ಇದ್ದ ನಿಷೇಧ ತೆರವು
- ರಾಜ್ಯದ ಎಲ್ಲಾ ಕೆರೆಗಳ ಸಂರಕ್ಷಣೆ ಮತ್ತು ಒತ್ತುವರಿ ತೆರವಿಗೆ ಕಾನೂನು ಬಲ ಹೊಂದಿರುವ ಕೆರೆ ಪ್ರಾಧಿಕಾರ ರಚನೆ
- ಜವಳಿ ಉದ್ಯಮದ ಬೆಳವಣಿಗೆಗೆ ಪೂರಕವಾಗುವ ಹೊಸ ಜವಳಿ ನೀತಿ- 2013 ಜಾರಿ. ಐದು ವರ್ಷಗಳಲ್ಲಿ 1 ಸಾವಿರ ಕೋಟಿ ವೆಚ್ಚ
- ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವನ್ನು ವಿಶ್ವದಲ್ಲೇ ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ಅನುಕೂಲವಾಗುವಂತೆ ಹೊಸ ಮಾಹಿತಿ ತಂತ್ರಜ್ಞಾನ ನೀತಿ
- ನಾಗರಿಕ ಸೇವಾ ನಿಯಮಾವಳಿಗೆ ತಿದ್ದುಪಡಿ ತಂದು ಗ್ರೂಪ್ ಡಿ ಹುದ್ದೆಯ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಯ ವಿದ್ಯಾರ್ಹತೆ ದ್ವಿತೀಯ ಪಿಯುಸಿಗೆ ಹೆಚ್ಚಳ
- ಬಾಗಲಕೋಟೆ ಕೃಷ್ಣಾನದಿ ವ್ಯಾಪ್ತಿಯಲ್ಲಿ ನಡೆದ ಅಕ್ರಮ ಮರಳು ಗಣಿಗಾರಿಕೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಉಪಲೋಕಾಯುಕ್ತರು ಮಾಡಿದ್ದ ಶಿಫಾರಸು ತಿರಸ್ಕಾರ
- ಗುಲ್ಬರ್ಗದ ದಾಲ್ಮಿಯಾ ಸಿಮೆಂಟ್ಸ್ ವಿರುದ್ಧ ನಡೆದ ಹೋರಾಟದಲ್ಲಿ ರೈತರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯುವುದು
- ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಗಳಿಗೆ 1993 ಮತ್ತು 1998ರಲ್ಲಿ ನೇಮಕಗೊಂಡ 417 ಎಂಜಿನಿಯರ್ಗಳನ್ನು ಸೇವೆಯಲ್ಲಿ ಮುಂದುವರಿಸಿ, ಸೇವಾ ಭದ್ರತೆ ಒದಗಿಸಲು ವಿಶೇಷ ಕಾನೂನು
- ರಾಯಚೂರಿನ ರಾಜೀವ್ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಲು ಒಟ್ಟು 11.07 ಕೋಟಿ
- ಹೈಕೋರ್ಟ್ನಲ್ಲಿ ನ್ಯಾಯಮೂರ್ತಿಗಳ ಸಭಾಂಗಣದ ಹವಾನಿಯಂತ್ರಿತ ವ್ಯವಸ್ಥೆಗೆ 8 ಕೋಟಿ ವೆಚ್ಚ ಮಾಡಲು ಆಡಳಿತಾತ್ಮಕ ಅನುಮೋದನೆ
- ಹಾಸನ, ಬೆಳಗಾವಿ ಮತ್ತು ಬೀದರ್ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಸಿ.ಟಿ. ಸ್ಕ್ಯಾನ್ ಯಂತ್ರಗಳ ಖರೀದಿಗೆ 7.8 ಕೋಟಿ ಬಿಡುಗಡೆ
- ಗ್ರಾಮ ಪಂಚಾಯ್ತಿಗಳಲ್ಲಿ ಆಸ್ತಿ ನೋಂದಣಿ ಮಾಡುವ ನಿಯಮಗಳ ಪರಿವರ್ತನೆಗೆ ಅನುಮೋದನೆ
- ತಲಕಾಡು ಪಂಚಲಿಂಗದರ್ಶನ ರಸ್ತೆ ಅಭಿವೃದ್ಧಿಗೆ 46.75 ಕೋಟಿ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ