ಮೂರು ಕ್ಷೇತ್ರಗಳೀಗ ಅನಾಥ!
ಬಳ್ಳಾರಿ: ಗಣಿಗಾರಿಕೆ ಅಕ್ರಮ ಕೇವಲ ಅಕ್ರಮ ಎಸಗಿದವರಿಗೆ ಮಾತ್ರ ಶಾಪವಾಗದೆ ಜಿಲ್ಲೆಯ ಮೂರು ಕ್ಷೇತ್ರದ ಜನರಿಗೆ ಶಾಪವಾಯಿತೇ? ಇಂತಹದ್ದೊಂದು ಪ್ರಶ್ನೆ ಈದೀಗ ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯದ ಜನತೆಯಲ್ಲಿ ಕಾಡುತ್ತಿದೆ. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಿಂದ ಜಿಲ್ಲೆಯ 3 ವಿಧಾನಸಭಾ ಕ್ಷೇತ್ರಗಳು ಅನಾಥವಾಗಿವೆ. ಇತಿಹಾಸದಲ್ಲಿ ಅಕ್ರಮ ಆರೋಪ ಹೊತ್ತು ಜಿಲ್ಲೆಯ ಮೂವರು ಶಾಸಕರು ಜೈಲಿಗೆ ಹೋಗಿರುವುದು ದೇಶದಲ್ಲಿ ಪ್ರಥಮ ಎನ್ನಬಹುದು. ಇದರಿಂದಾಗಿ ಜಿಲ್ಲೆಯ ಮೂರು ಕ್ಷೇತ್ರಗಳು ಅನಾಥವಾದರೂ, ಸರ್ಕಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರಕ್ಕೆ ಮಾತ್ರ ಶಾಸಕರಾಗಿದ್ದಾರೆ.
ಪುನರಾಯ್ಕೆಯಾಗಿದ್ದ 3 ಶಾಸಕರು
9 ವಿಧಾನಸಭಾ ಕ್ಷೇತ್ರಗಳನ್ನು ಗಣಿ ಜಿಲ್ಲೆ ಬಳ್ಳಾರಿ ಹೊಂದಿದೆ. ಅದರಲ್ಲಿ ಗಣಿಗಾರಿಕೆ ಮೂಲಕ ರಾಜ್ಯ ಹಾಗೂ ದೇಶದಲ್ಲಿ (ಕು)ಖ್ಯಾತಿಗೆ ಕಾರಣವಾಗಿದ್ದ ಜಿಲ್ಲೆಯಲ್ಲಿ ಬೇಲೆಕೇರಿ ಅದಿರು ಅಕ್ರಮಕ್ಕೆ ಸಂಬಂಧಿಸಿದಂತೆ ಒಂದೇ ಜಿಲ್ಲೆಯ ಮೂವರು ಶಾಸಕರು ಜೈಲು ಕಂಬಿ ಎಣಿಸುತ್ತಿದ್ದಾರೆ. ರಾಜ್ಯದಲ್ಲಿ ಅತ್ಯಂತ ಕಿರಿಯ ವಯಸ್ಸಿನ ಶಾಸಕ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ಕಂಪ್ಲಿ ಕ್ಷೇತ್ರದಲ್ಲಿ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದ ಶ್ರೀರಾಮುಲು ಅವರ ಅಳಿಯ ಟಿ.ಎಚ್. ಸುರೇಶ್ಬಾಬು, ಕೂಡ್ಲಿಗಿ ಕ್ಷೇತ್ರದಲ್ಲಿ 2ನೇ ಬಾರಿ ಶಾಸಕರಾಗಿ ಆಯ್ಕೆಯಾದ ಬಿ. ನಾಗೇಂದ್ರ ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 2ನೇ ಬಾರಿಗೆ ಶಾಸಕರಾದ ಮಾಜಿ ಸಚಿವ ಆನಂದ್ ಸಿಂಗ್ ಅವರೀಗ ಜೈಲು ಸೇರಿದ್ದಾರೆ. ಈಗಾಗಲೇ ಬಂಧಿತರಾಗಿರುವ ಮೂವರು ಶಾಸಕರ ಮೇಲೆ ಚುನಾವಣೆ ಪೂರ್ವದಲ್ಲೆ ಗಣಿಗಾರಿಕೆ ಆರೋಪ ಕೇಳಿ ಬರುತ್ತಿದ್ದರೂ ಕೂಡ ಪುನರಾಯ್ಕೆಯಾಗಿದ್ದರು.
ಶಿಷ್ಟಾಚಾರಕ್ಕೆ ಸೀಮಿತ ಶಾಸಕರು
ಬಳ್ಳಾರಿ ಜಿಲ್ಲೆಯ ಮೂವರು ಶಾಸಕರು ಜೈಲಿಗೆ ಹೋಗಿದ್ದರಿಂದ 3 ಕ್ಷೇತ್ರಗಳು ಅಕ್ಷರಶಃ ಅನಾಥವಾಗಿವೆ. ಶಾಸಕರಿದ್ದರೆ ಮಾತ್ರ ಅಭಿವೃದ್ಧಿಗೆ ಚುರುಕು ನೀಡಲು ಸಾಧ್ಯ, ಇನ್ನುಮುಂದೆ ಕ್ಷೇತ್ರದಲ್ಲಿ ಅಧಿಕಾರಿಗಳ ದರ್ಬಾರ್ ಇರುತ್ತದೆ. ಕ್ಷೇತ್ರದಲ್ಲಿ ಜಿಪಂ, ತಾಪಂ ಸದಸ್ಯರು ಇದ್ದಾರೆ. ಆದರೆ, ಶಾಸಕರ ಗತ್ತುಗಮ್ಮತ್ತು ಅವರಿಗೆ ಬರುವುದು ತೀರಾ ಕಷ್ಟ. ಇದೀಗ ಕ್ಷೇತ್ರದಲ್ಲಿ ಶಾಸಕರನ್ನು ಗೆಲ್ಲಿಸಲು ಕಾರಣರಾಗಿದ್ದ ಮತದಾರರು, ಅವರ ಬೆಂಬಲಿಗರು ಅನಾಥ. ಶಾಸಕರು ಜೈಲಿಗೆ ಹೋಗಿರುವುದಂತೂ ಅವರ ಬೆಂಬಲಿಗರಿಗೆ ತೀವ್ರ ಆತಂಕ ಮೂಡಿಸಿದೆ. ಅಲ್ಲದೆ, ಇವರು ಶಾಸಕರಾಗಿದ್ದರೂ ಸರ್ಕಾರಿ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರಕ್ಕೆ ಸೀಮಿತ ಶಾಸಕರಾಗಿದ್ದಾರೆ.
ಅನುದಾನ ಬಳಕೆ ಡೆಡ್
ಪ್ರತಿ ಶಾಸಕರಿಗೆ ಅವರ ಕ್ಷೇತ್ರಕ್ಕಾಗಿ ಪ್ರತಿವರ್ಷ 2 ಕೋಟಿ ಅನುದಾನ ಬರುತ್ತದೆ. ಶಾಸಕರ ಈ ಅನುದಾನದಿಂದಲೇ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಹುದು. ಆದರೆ, ಈ ಅನುದಾನದ ಬಳಕೆಗೆ ಶಾಸಕರು ಕಾಮಗಾರಿಗಳ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಬೇಕಾಗುತ್ತದೆ. ಜಿಲ್ಲೆಯ ಮೂವರು ಶಾಸಕರು ಜೈಲಿಗೆ ಹೋಗಿದ್ದರಿಂದ ಅವರ ಅನುದಾನ ಮಾತ್ರ ನಿಷ್ಕ್ರೀಯವಾಗಿ ಉಳಿಯುತ್ತದೆ. ಶಾಸಕರು ಜೈಲಿನಿಂದ ಹೊರ ಬರುವವರಿಗೆ ಅನುದಾನ ಬಳಕೆಯಾಗದೆ ಉಳಿಯುತ್ತದೆ. ಈಗಾಗಲೇ ಜಿಲ್ಲೆಯ ಬಹುತೇಕ ಶಾಸಕರು ಅನುದಾನ ಬಳಕೆಯಲ್ಲಿ ಹಿಂದೆ ಬಿದ್ದಿರುವುದನ್ನು ಇಲ್ಲಿ ಸ್ಮರಿಸಬಹುದು.
ಜನರ ಸಮಸ್ಯೆ ಕೇಳುವವರಾರು?
ಜನಸಾಮಾನ್ಯರ ಮಾತನ್ನು ಅಧಿಕಾರಿಗಳು ಕೇಳುವುದು ಕಷ್ಟ ಎಂಬ ಮಾತಿದೆ. ಆದರೆ, ಈ ಮಾತು ಎಲ್ಲಾ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ. ಬಹುತೇಕ ಅಧಿಕಾರಿಗಳು ಇದರಿಂದ ಹೊರತಾಗಿಲ್ಲ ಎಂಬುದೂ ಸತ್ಯ. ಈ ಸಂದರ್ಭದಲ್ಲಿ ಕ್ಷೇತ್ರದ ಮತದಾರ ಯಾವುದೇ ಸಮಸ್ಯೆ ಬಂದಾಗ ಕೊನೆಯದಾಗಿ ಶಾಸಕರ ಮನೆ ಬಾಗಿಲಿಗೋ ಅಥವಾ ಕ್ಷೇತ್ರದತ್ತ ಶಾಸಕರು ಬಂದಾಗ ಅವರ ಮುಂದೆ ತಮ್ಮ ಸಮಸ್ಯೆ ಹೇಳಿಕೊಂಡಾಗ, ಅಧಿಕಾರಿಗಳ ಮೂಲಕ ಕೆಲಸ ಮಾಡಿಸುತ್ತಿದ್ದರು. ಆದರೆ, ಇದೀಗ ಕ್ಷೇತ್ರದ ಮತದಾರರು, ಜನಸಾಮಾನ್ಯರು ಸಮಸ್ಯೆ ಬಂದಾಗ ಯಾರ ಹತ್ತಿರ ಹೋಗಬೇಕೆಂಬುದನ್ನು ಚಿಂತಿಸುವಂತಾಗಿದೆ.
ಹೊರ ಬರುವುದು ಸುಲಭವಲ್ಲ!
ಯಾವುದೋ ಒಂದು ಆರೋಪವಾಗಿದ್ದರೆ ಶಾಸಕರು ಆದಷ್ಟು ಬೇಗ ಜೈಲಿನಿಂದ ಹೊರ ಬರುತ್ತಿದ್ದರು ಎಂಬ ನಂಬಿಕೆ ಇರುತ್ತಿತ್ತು. ಆದರೆ, ಅಕ್ರಮ ಗಣಿಗಾರಿಕೆ ಆರೋಪ ಪ್ರಕರಣದಲ್ಲಿ ಇದುವರೆಗೆ ಇಬ್ಬರು ಹಿರಿಯ ನಿವೃತ್ತಿ ಐಎಎಸ್ ಅಧಿಕಾರಿಗಳಿಗೆ ಜಾಮೀನು ಕೊಟ್ಟಿದ್ದನ್ನು ಬಿಟ್ಟರೆ ಬೇರಾರಿಗೂ ಸಿಕ್ಕಿಲ್ಲ. ಇನ್ನು ಒಬ್ಬ ಇನ್ಸ್ಪೆಕ್ಟರ್ಗೆ ಜಾಮೀನು ಸಿಕ್ಕರೂ ಮತ್ತೊಂದು ಗಣಿ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಹಾಗೂ ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವವರಿಗೆ ಜಾಮೀನು ಸಿಗುವುದು ಕಷ್ಟ ಎಂಬ ಪರಿಸ್ಥಿತಿ ಇದೆ. ಹೇಳಿ ಕೇಳಿ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸುತ್ತಿದೆ. ತನಿಖೆಯ ಆಳ ವಿಸ್ತರವಾಗಿರುವುದರಿಂದ ಬೇಗನೆ ಆರೋಪ ಮುಕ್ತವಾಗುವುದು ಕಷ್ಟ.
-ಶಶಿಧರ ಮೇಟಿ