ಮೆಕ್ಕೆಜೋಳ: ವಿದೇಶದಲ್ಲಿ ಬಂಪರ್, ರಾಜ್ಯದಲ್ಲಿ ಪಂಕ್ಚರ್
ಕ.ಪ್ರ.ವಾರ್ತೆ, ಕೊಪ್ಪಳ, ಅ. 17-
ಇತಿಹಾಸದಲ್ಲಿಯೇ ಈ ಬಾರಿ ರಾಜ್ಯದಲ್ಲಿ ಮೆಕ್ಕೆಜೋಳ ಅತ್ಯಧಿಕವಾಗಿ ಇಳುವರಿ ಬರುತ್ತಿದ್ದು, ರಾಜ್ಯದಲ್ಲಿ 30-40 ಲಕ್ಷ ಟನ್ ಉತ್ಪಾದನೆಯಾಗುವ ಸಾಧ್ಯತೆ ಇದೆ. ಆದರೆ, ನಮ್ಮ ರೈತರು ಬೆಳೆದ ಮೆಕ್ಕೆಜೋಳಕ್ಕಿಲ್ಲೀಗ ಬೇಡಿಕೆ.
ಪ್ರಪಂಚದ ಇತರೆ ದೇಶಗಳಲ್ಲೂ ಮೆಕ್ಕೆಜೋಳ ಬಂಪರ್ ಬೆಳೆ ಬಂದಿರುವುದರಿಂದ ರಫ್ತು ಮಾಡಲುವ ನಮ್ಮ ಮೆಕ್ಕೆಜೋಳಕ್ಕೆ ಬೆಲೆ ಇಲ್ಲದಂತಾಗಿದೆ. ಹಾಗಾಗಿ, ಈ ಬಾರಿ ಬೆಳೆದಿರುವ ಮೆಕ್ಕೆಜೋಳವನ್ನು ಬೆಂಬಲ ಬೆಲೆಗೆ ಖರೀದಿ ಮಾಡುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲ್ ಆಗಿದ್ದರೆ, ಅದನ್ನು ಸಂಗ್ರಹ ಮಾಡುವುದು ಮತ್ತೊಂದು ಸಮಸ್ಯೆಯಾಗಿದೆ. ಇನ್ನು ರಾಜ್ಯ ಸರ್ಕಾರ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಮಾಡುವುದಕ್ಕೆ ವಿಳಂಬವಾದರೆ, ಮೆಕ್ಕೆಜೋಳ ಬೆಳೆದ ರೈತರು ಬೀದಿಗೆ ಬೀಳುವುದಂತೂ ಗ್ಯಾರಂಟಿ.
ಬಂಪರ್ ಬೆಳೆ: ಪ್ರತಿ ವರ್ಷ 20ರಿಂದ 25 ಲಕ್ಷ ಟನ್ ಮೆಕ್ಕೆಜೋಳ ರಾಜ್ಯದಲ್ಲಿ ಉತ್ಪತ್ತಿಯಾಗುತ್ತಿತ್ತು. ಆದರೆ, ಈ ಬಾರಿ ಇದು ಡಬಲ್ ಆಗುವ ಸಾಧ್ಯತೆ ಇರುವುದು ಸಮಸ್ಯೆಗೆ ಕಾರಣವಾಗಿದೆ. ಇದೇ ವೇಳೆ ರಫ್ತಿಗೆ ಬೇಡಿಕೆ ಬಂದಿಲ್ಲವಾದ್ದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಇಷ್ಟೊಂದು ಮೆಕ್ಕೆಜೋಳ ಮಾರಾಟ ಮಾಡುವುದು ಅಸಾಧ್ಯ ಎಂದೇ ವಿಶ್ಲೇಷಣೆ ಮಾಡುತ್ತಾರೆ ಮೆಕ್ಕಜೋಳ ವ್ಯಾಪಾರಿ ಪ್ರಭು ಹೆಬ್ಬಾಳ.
ಇದುವರೆಗೂ ವಿದೇಶದಿಂದ ಒಂದು ಕಾಳಿಗೂ ಬೇಡಿಕೆ ಬಂದಿಲ್ಲ. ಡಿಸೆಂಬರ್ ಅಥವಾ ಜನವರಿಯಲ್ಲಿ ಬೇಡಿಕೆ ಬರುವ ಸಾಧ್ಯತೆ ಇದೆ ಎಂದೇ ಹೇಳುತ್ತಿದ್ದಾರೆ. ಹೀಗಾಗಿ, ಮಾರುಕಟ್ಟೆಯಲ್ಲಿ ಬಂದಿರುವ ಮೆಕ್ಕೆಜೋಳದ ದರ ಕುಸಿಯಲು ಕಾರಣವಾಗಿದೆ ಎಂದು ವಿವರಿಸುತ್ತಾರೆ.
ಕೊಪ್ಪಳ ಜಿಲ್ಲೆಯೊಂದರಲ್ಲಿಯೇ ಈ ಬಾರಿ 59 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದ್ದು, 2 ಲಕ್ಷ ಟನ್ಗೂ ಅಧಿಕ ಉತ್ಪಾದನೆಯಾಗುವ ಸಾಧ್ಯತೆ ಇದೆ. ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 15-20ರಷ್ಟು ಬಿತ್ತನೆ ಪ್ರಮಾಣ ಅಧಿಕವಾಗಿದೆ. ಹಿಂದೆಂದು ಇಷ್ಟೊಂದು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದ ಉದಾಹರಣೆ ಇಲ್ಲ ಎನ್ನುತ್ತದೆ ಕೃಷಿ ಇಲಾಖೆ ದಾಖಲೆ.
ರಾಜ್ಯದ ಮೆಕ್ಕೆಜೋಳ ಕೇಳುವವರೇ ಇಲ್ಲ: ಇದೇ ಮೊದಲ ಬಾರಿಗೆ ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ, ಚೀನಾ ಸೇರಿದಂತೆ ಸುಮಾರು ದೇಶಗಳಲ್ಲಿ ಮೆಕ್ಕೆಜೋಳ ಬೆಳೆ ಬಂಪರ್ ಬಂದಿದೆ. ಅಷ್ಟೇ ಅಲ್ಲ ಉತ್ಪಾದನಾ ವೆಚ್ಚ ಭಾರತಕ್ಕಿಂತಲೂ ಅತಿ ಕಡಿಮೆ. ಹೀಗಾಗಿ, ಕಡಿಮೆ ದರಕ್ಕೆ ಮೆಕ್ಕೆಜೋಳ ಲಭ್ಯವಾಗುತ್ತಿರುವುದರಿಂದ ಮೆಕ್ಕೆಜೋಳವನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದ ವಿಯಟ್ನಾಂ, ಇಂಡೋನೇಷಿಯಾ, ಬಾಂಗ್ಲಾದೇಶ ಸೇರಿದಂತೆ ಮೊದಲಾದ ದೇಶಗಳು ಈ ಬಾರಿ ಮೆಕ್ಕೆಜೋಳವನ್ನು ದಕ್ಷಿಣ ಅಮೆರಿಕದಿಂದ ಖರೀದಿ ಮಾಡುವುದಕ್ಕೆ ಮುಂದಾಗಿವೆ. ಈಗಾಗಲೇ ಆ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ ರಾಜ್ಯದ ಮೆಕ್ಕೆಜೋಳವನ್ನು ಕೇಳುವವರೇ ಇಲ್ಲದಂತೆ ಆಗಿದೆ. ಹೀಗಾಗಿ, ಮಾರುಕಟ್ಟೆಯಲ್ಲಿ ದಿನೇ ದಿನೇ ದರ ಕುಸಿಯುತ್ತಿರುವುದರಿಂದ ರೈತರು ಬೀದಿಗಿಳಿದು ಪ್ರತಿಭಟನೆಗೆ ಮುಂದಾಗುತ್ತಿದ್ದಾರೆ.
ರಾಜ್ಯ ಸೇರಿದಂತೆ ಭಾರತದಲ್ಲಿ ಮೆಕ್ಕೆಜೋಳ ಉತ್ಪಾದನೆಯ ಬೆಲೆ ಪ್ರತಿ ಕ್ವಿಂಟಲ್ಗೆ ಸಾವಿರ ರುಪಾಯಿ ಆಗುತ್ತಿದ್ದರೆ ಇದು ಹೊರದೇಶಗಳಲ್ಲಿ 600-700. ಅವರು ಲಾಭಾಂಶ ಸೇರಿಕೊಂಡು 1000-1100ಗೆ ಮಾರಾಟ ಮಾಡುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಕನಿಷ್ಠ 1300-1400ಗೆ ಮಾರಾಟ ಮಾಡಿದರೆ ಮಾತ್ರ ರೈತರಿಗೆ ಲಾಭ. ಹೀಗಾಗಿ, ಈ ಬಾರಿ ಮೆಕ್ಕೆಜೋಳ ಬೆಳೆದ ರೈತರು ಕೈಸುಟ್ಟುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದೇ ಹೇಳಲಾಗುತ್ತಿದೆ.
ನಾನಾ ದೇಶಗಳಲ್ಲಿ ಈ ಬಾರಿ ಮೆಕ್ಕೆಜೋಳ ಅಧಿಕ ಪ್ರಮಾಣದಲ್ಲಿ ಉತ್ಪಾದನೆಯಾಗಿದ್ದರಿಂದ ರಾಜ್ಯದ ಮೆಕ್ಕೆಜೋಳಕ್ಕೆ ಬೇಡಿಕೆ ಕುಸಿದಿದೆ. ಹೀಗಾಗಿ, ಇದುವರೆಗೂ ರಫ್ತು ಪ್ರಾರಂಭವಾಗಿಲ್ಲ, ಪ್ರಾರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಜನವರಿ ತಿಂಗಳವರೆಗೂ ಇದೇ ಸಮಸ್ಯೆ ಮುಂದುವರೆಯುತ್ತದೆ.
- ವಿಕಾಸ್ ಅಗರವಾಲ್, ರಫ್ತುದಾರ, ಬೆಂಗಳೂರು
ದಕ್ಷಿಣ ಅಮೆರಿಕ ಸೇರಿದಂತೆ ನಾನಾ ದೇಶಗಳಲ್ಲಿ ಮೆಕ್ಕೆಜೋಳ ಅಪಾರ ಪ್ರಮಾಣದಲ್ಲಿ ಉತ್ಪಾದನೆಯಾಗಿದ್ದರಿಂದ ನಮ್ಮ ರಾಜ್ಯದ ಮೆಕ್ಕೆಜೋಳಕ್ಕೆ ಬೇಡಿಕೆ ಬರುತ್ತಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ದರ ಕುಸಿತಕ್ಕೆ ಕಾರಣವಾಗಿದೆ. ಬೇರೆ ಬೇರೆ ದೇಶಗಳಿಂದ ಆಮದು ಬೇಡಿಕೆ ಬರದಿದ್ದರೆ ಇನ್ನು ಕಷ್ಟವಾಗುತ್ತದೆ.
- ಪ್ರಭು ಹೆಬ್ಬಾಳ, ಮೆಕ್ಕೆಜೋಳ ವ್ಯಾಪಾರಿ, ಕೊಪ್ಪಳ
- ಸೋಮರಡ್ಡಿ ಅಳವಂಡಿ