ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವಿಶ್ವಸಂಸ್ಥೆಯಲ್ಲಿ ಕನ್ನಡ ಮಾರ್ದನಿ

ನವೆಂಬರ್ 1. ಕನ್ನಡ ನಾಡಿನ ಜನತೆಗೆ ರಾಜ್ಯೋತ್ಸವ ಸಂಭ್ರಮ. ಆದರೆ,...

Vishwanath S
Updated On : 18 Oct 2013, 12:03 pm

ಕನ್ನಡಪ್ರಭ ವಾರ್ತೆ, ಧಾರವಾಡ, ಅ.17-
ನವೆಂಬರ್ 1. ಕನ್ನಡ ನಾಡಿನ ಜನತೆಗೆ ರಾಜ್ಯೋತ್ಸವ ಸಂಭ್ರಮ. ಆದರೆ, ಅದಕ್ಕಿನ್ನೂ 20 ದಿನ ಬಾಕಿ ಇರುವಾಗಲೇ ಸ್ವಿಜರ್ಲೆಂಡ್‌ನ ಜಿನಿವಾದಲ್ಲಿ ನಡೆದ ವಿಶ್ವಸಂಸ್ಥೆ ಸಮಿತಿ ಸಭೆಯಲ್ಲಿ ಧಾರವಾಡ ತಾಲೂಕಿನ ರಾಮನಾಥಪುರ ಗ್ರಾಮದ ಬಾಲಕಿಯೊಬ್ಬಳು ಕನ್ನಡ ಡಿಂಡಿಮ ಬಾರಿಸಿದ್ದಾಳೆ!
ಸುಮಾರು ಒಂದು ಗಂಟೆ ಅಚ್ಚ ಕನ್ನಡದಲ್ಲೇ ಮಾತನಾಡಿ ಪ್ರಪಂಚದ ವಿವಿಧ ದೇಶಗಳಿಂದ ಆಗಮಿಸಿದ್ದ ನೂರಾರು ಜನರನ್ನು ಮಂತ್ರಮುಗ್ಧಗೊಳಿಸಿದ್ದಾಳೆ. ಮಕ್ಕಳ ಹಕ್ಕುಗಳು ಹಾಗೂ ರಕ್ಷಣೆ ಬಗ್ಗೆ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಸೈ ಎನಿಸಿಕೊಂಡಿದ್ದಾಳೆ. ವಿಶೇಷವೆಂದರೆ ಇವಳು ಮಂಡಿಸಿದ ವರದಿಯ ಮೇಲೆ ನೆರೆದಿದ್ದ ಹಿರಿಯರು ಸುಮಾರು ಮೂರು ಗಂಟೆಗಳ ಕಾಲ ವಿಸ್ತೃತವಾಗಿ ಚರ್ಚೆ ನಡೆಸಿದ್ದಾರೆ.
ಧಾರವಾಡ ತಾಲೂಕಿನ ರಾಮನಾಥಪುರ ಗ್ರಾಮದ ಮಂಜುಳಾ ಮುನವಳ್ಳಿ ಅ.10ರಂದು ಜಿನಿವಾದಲ್ಲಿ ನಡೆದ ಹಕ್ಕುಗಳ ಕುರಿತು ವಿಶ್ವಸಂಸ್ಥೆ ಸಮಿತಿ ಸಭೆ (ಯುಎನ್‌ಸಿಆರ್‌ಸಿ)ಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದಳು. ಇಂಗ್ಲಿಷ್ ಬಾರದ್ದರಿಂದ ಕನ್ನಡದಲ್ಲಿಯೇ ಮಾತನಾಡಲು ಅನುವು ಮಾಡಿಕೊಡಲಾಗಿತ್ತು. ಮೊದಲೇ ಸಿದ್ಧಪಡಿಸಿಕೊಂಡಿದ್ದ ವರದಿಯನ್ನು ಮಂಜುಳಾ ಸಭೆಯಲ್ಲಿ ಮಂಡಿಸಿದ್ದಾಳೆ.      
ಮುಂಬೈನ ಯುವ ಸಂಸ್ಥೆಯ ಮೇರಿ ಎಂಬವರು ಇದನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ. ಜಿನಿವಾದಿಂದ ಮರಳಿದ ಬಳಿಕ ಮಂಜುಳಾ 'ಕನ್ನಡಪ್ರಭ'ದೊಂದಿಗೆ ತಮ್ಮ ಅನುಭವ ಹಂಚಿಕೊಂಡರು. ಅದರ ವಿಸ್ತೃತರೂಪ ಇಲ್ಲಿದೆ.
ಸಾಮಾಜಿಕ ಚಟುವಟಿಕೆಗಳಲ್ಲಿ ಮಕ್ಕಳ ಭಾಗವಹಿಸುವಿಕೆಯು ಭಾರತ ದೇಶದಲ್ಲಿಯೇ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಅಂತೆಯೇ, ಉಳಿದ ರಾಜ್ಯಗಳಲ್ಲಿಯೂ ಸಮಾಜದ ಅನೇಕ ಸಂದರ್ಭದಲ್ಲಿ ಮಕ್ಕಳ ಸಹಭಾಗಿತ್ವ ಹೆಚ್ಚಿಸುವ ಕುರಿತು ಕೆಲಸವಾಗಬೇಕು. ಇದರಿಂದ ಮಕ್ಕಳ ಹಕ್ಕು, ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ದೊರೆಯುತ್ತದೆ. ಕರ್ನಾಟಕದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ, ನಾಯಕತ್ವ, ಸಾಮಾನ್ಯ ಪ್ರಜ್ಞೆ ಬೆಳವಣಿಗೆ ಹೀಗೆ ಅನೇಕ ಆಶಯಗಳನ್ನು ಮುಂದಿಟ್ಟುಕೊಂಡು ರಾಜ್ಯದ ಪ್ರತಿಯೊಂದು ಶಾಲೆಗಳಲ್ಲಿ ಸಂಸತ್‌ಗಳನ್ನು ರಚನೆ ಮಾಡಲಾಗುತ್ತಿದೆ.
ಅಲ್ಲದೆ, ರಾಜ್ಯದಲ್ಲಿ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕಿಡ್ಸ್‌ನಂಥ ಸ್ವಯಂ ಸೇವಾ ಸಂಸ್ಥೆಗಳು ಮಕ್ಕಳ ಹಕ್ಕು ಮತ್ತು ಸಮಸ್ಯೆಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿವೆ. ಈ ಕಾರ್ಯದಿಂದ ಸಾಕಷ್ಟು ಮಕ್ಕಳು ಜಾಗೃತಗೊಂಡಿದ್ದಾರೆ. ಮಕ್ಕಳ ಶ್ರೇಯೋಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಕ್ರಮ ಕೈಗೊಂಡಿವೆ. ಆದರೂ ಇನ್ನೂ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಸಮಾಜದ ಎಲ್ಲ ವರ್ಗಗಳಲ್ಲಿ ಇನ್ನೂ ಚಾಲ್ತಿಯಲ್ಲಿರುವ ಬಾಲ ಕಾರ್ಮಿಕ ಪದ್ಧತಿ ನಿಷೇಧವಾಗಬೇಕು. 18 ವರ್ಷದೊಳಗಿನ ಪ್ರತಿಯೊಬ್ಬರನ್ನು ಮಕ್ಕಳೆಂದು ಪರಿಗಣಿಸುವಂತೆ ಭಾರತದ ಸಂವಿಧಾನದಲ್ಲಿ ಅಳವಡಿಸಬೇಕು. ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯಗಳನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇನ್ನೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಂಜುಳಾ ವಿವರಿಸಿದ್ದಾರೆ.  ಈ ಎಲ್ಲ ಒತ್ತಾಸೆಗಳಿಗೆ ಯುಎನ್‌ಸಿಆರ್‌ಸಿ ಸಮಿತಿ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ. ಮಕ್ಕಳ ಹಕ್ಕುಗಳ ಕುರಿತು ಮಂಜುಳಾ ನೀಡಿದ ವರದಿಯನ್ನು ಭಾರತ ಹಾಗೂ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಮಕ್ಕಳಿಗೆ ಸಲ್ಲಬೇಕಾದ ಹಕ್ಕುಗಳನ್ನು ಕೊಡಿಸುವ ಭರವಸೆ ನೀಡಿದ್ದಾರೆ. ಭಾರತದಿಂದ ಇನ್ನೊಬ್ಬ ಪ್ರತಿನಿಧಿಯಾಗಿ ಮಂಜುಳಾ ಜತೆ ಜಿನಿವಾಗೆ ಗುಜರಾತ್‌ನ ಅಪ್ಸನಾ ಸಹ ಗುಜರಾತ್ ರಾಜ್ಯದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಉಲ್ಲಂಘನೆ ಕುರಿತು ವರದಿ ಒಪ್ಪಿಸಿದ್ದಾರೆ.

ಕೊಂಚ ಬೇಸರ
ತಂಪು ವಾತಾವರಣದಲ್ಲಿರುವ ಜಿನಿವಾ ನೋಡಲು ಆಕರ್ಷಕ, ಸ್ವಚ್ಛತೆಯಿಂದ ಕೂಡಿದೆ. ಅಲ್ಲಿನ ಸರ್ಕಾರ ಸ್ವಚ್ಛತೆಗಾಗಿ ಕೈಗೊಂಡ ಕ್ರಮಗಳನ್ನು ಭಾರತದಲ್ಲಿಯೂ ಕೈಗೊಳ್ಳಬೇಕೆಂಬ ಆಶಯ. ಅಲ್ಲಿನ ನಿಸರ್ಗ ಸೌಂದರ್ಯ ನಮಗೆ ಖುಷಿ ನೀಡಿತು. ಅಲ್ಲದೆ, ಭಾರತ ಸಹ ಯುಎನ್‌ಸಿಆರ್‌ಸಿ ಸದಸ್ಯ ರಾಷ್ಟ್ರವಾಗಿದ್ದರೂ ಸಭೆಯಲ್ಲಿ ಭಾರತದ ಸದಸ್ಯರೊಬ್ಬರೂ ಕಾಣದಿರುವುದು ನಮಗೆ ಕೊಂಚ ಬೇಸರ ಮೂಡಿಸಿತು.  
- ಮಂಜುಳಾ ಮುನವಳ್ಳಿ

- ಕಲ್ಮೇಶ ಪಟ್ಟಣದವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement