ಕಳಸಾ ಬಂಡೂರಿ ವಿವಾದ: ಆಪಾದನೆ ಹಿಂಪಡೆದ ಗೋವಾ ಸರ್ಕಾರ
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಮಹದಾಯಿ ನ್ಯಾಯಾಧಿಕರಣದ ಆದೇಶದ ಹಿನ್ನೆಲೆಯಲ್ಲಿ, ಕಳಸಾ- ಬಂಡೂರಿ ಕಾಮಗಾರಿ ನಿಲ್ಲಿಸಲಾಗುವುದು ಎಂದು ತಾನೇ ನೀಡಿದ್ದ ಮುಚ್ಚಳಿಕೆಯನ್ನು ಕರ್ನಾಟಕ ಉಲ್ಲಂಘಿಸುತ್ತಿದೆ ಎಂದು ದುರುದ್ದೇಶದ ಆಪಾದನೆಯನ್ನು ಗೋವಾ ಸರ್ಕಾರ ಬುಧವಾರ ಹಿಂದಕ್ಕೆ ಪಡೆದುಕೊಂಡಿದೆ.
ಗೋವಾ ಸರ್ಕಾರ ಆಧಾರ ರಹಿತ ಆಪಾದನೆ ಮಾಡಿರುವುದನ್ನು ಕರ್ನಾಟಕವು ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ತನ್ನ ಆಪಾದನೆ ವಾಪಸು ಪಡೆಯಲು ನ್ಯಾಯಾಧಿಕರಣವು ಗೋವಾಕ್ಕೆ ಒಂದು ದಿನದ ಗಡುವು ನೀಡಿತ್ತು. ದುರುದ್ದೇಶಪೂರಿತ ಆಪಾದನೆ ಹಿಂತೆಗೆದುಕೊಳ್ಳದೆ ಹೋದರೆ ನಿಯಮಾನುಸಾರ ತಾನೇ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಎಂದು ನ್ಯಾಯಾಧಿಕರಣ ಎಚ್ಚರಿಸಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಗೋವಾ ಸರ್ಕಾರ ತನ್ನ ಆಪಾದನೆಯನ್ನು ಹಿಂದಕ್ಕೆ ಪಡೆದಿದೆ.
ಸ್ಥಳಕ್ಕೆ ಭೇಟಿ ನೀಡಲು ಒಪ್ಪಿಗೆ: ಈ ನಡುವೆ, ಕಳಸಾ - ಬಂಡೂರಿ ಯೋಜನೆಯ ಪರಿಶೀಲನೆಗೆಂದು ನ್ಯಾಯಾಧಿಕರಣದ ಅಧ್ಯಕ್ಷ, ನ್ಯಾಯಮೂರ್ತಿ ಪಾಂಚಾಲ್ ಅವರು ತಮ್ಮ ಇಬ್ಬರು ಸದಸ್ಯರೊಂದಿಗೆ ಸದ್ಯದಲ್ಲೇ ಸ್ಥಳಕ್ಕೆ ಭೇಟಿ ನೀಡಲು ಒಪ್ಪಿದ್ದಾರೆ. ಕಳಸಾ- ಬಂಡೂರಿ ಯೋಜನೆಯಿಂದ ಮಹದಾಯಿ ನದಿ ವ್ಯವಸ್ಥೆ ಹಾನಿಯಾಗಲಿದೆ ಎಂದು ದೂರಿದ್ದ ಗೋವಾ, ರಾಜ್ಯದಲ್ಲಿನ ನದಿ ಕಣಿವೆಗೂ ಭೇಟಿ ನೀಡಿ ಪರಿಶೀಲಿಸಬೇಕು ಎಂಬ ರಾಜ್ಯದ ಅಹವಾಲನ್ನು ನ್ಯಾಯಾಧಿಕರಣ ಒಪ್ಪಿಕೊಂಡಿದೆ. ಗುರುವಾರ ಪ್ರವಾಸದ ವಿವರ ಪ್ರಕಟವಾಗುವ ನಿರೀಕ್ಷೆ ಇದೆ.
ಹುಬ್ಬಳ್ಳಿ- ಧಾರವಾಡ ಮಹಾನಗರ ಮತ್ತು ಸುತ್ತಮುತ್ತಲ ಪ್ರದೇಶದ ಜನರಿಗೆ ಕುಡಿಯುವ ನೀರು ಒದಗಿಸಲು ಮಹದಾಯಿ ನದಿಯಿಂದ 7.5 ಟಿಎಂಸಿ ಬಳಸಿಕೊಳ್ಳಲು ಕಳಸಾ- ಬಂಡೂರಿ ಯೋಜನೆ ರೂಪಿಸಲಾಗಿದೆ. ಕಳಸಾ- ಬಂಡೂರಿ ಕಾಮಗಾರಿ ತಡೆ ಹಿಡಿಯುವುದಾಗಿ ನ್ಯಾಯಾಧಿಕರಣದ ಮುಂದೆ ಕರ್ನಾಟಕದ ಹೇಳಿಕೆಯ ಉಲ್ಲಂಘನೆಯಾಗಿದೆ. ಕಾಮಗಾರಿ ಮುಂದುವರೆದಿದೆ. ಆದ್ದರಿಂದ ನ್ಯಾಯಾಧಿಕರಣ ಸ್ಥಳಕ್ಕೆ ಭೇಟಿ ನೀಡಿ, ಖುದ್ದು ಪರಿಶೀಲನೆ ನಡೆಸಬೇಕು ಎಂದು ಗೋವಾ ಸರ್ಕಾರ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದೆ.
ಮುಂದಿನ ಸಭೆ ನಡೆಯುವವರೆಗೆ ನೀರು ಬಳಕೆ ಮಾಡುವುದಿಲ್ಲ ಎಂದು ತಾನು ಈ ಹಿಂದೆ ನ್ಯಾಯಾಧಿಕರಣಕ್ಕೆ ತಿಳಿಸಿದಷ್ಟೆ ಹೊರತು ಕಾಮಗಾರಿ ತಡೆ ಹಿಡಿಯುವುದಾಗಿ ಎಲ್ಲಿಯೂ ತಿಳಿಸಿಲ್ಲ ಎಂದು ಕರ್ನಾಟಕ ಸರ್ಕಾರ ಮಂಗಳವಾರ ನ್ಯಾಯಾಧಿಕರಣದ ಮುಂದೆ ತೀವ್ರ ಆಕ್ಷೇಪ ಪ್ರಕಟಿಸಿತ್ತು. ಯೋಜನೆಯನ್ನು ಪರಿಶೀಲಿಸಲು ಸ್ಥಳಕ್ಕೆ ಭೇಟಿ ನೀಡುವುದಕ್ಕೆ ತನ್ನ ಆಕ್ಷೇಪ ಇಲ್ಲವೇ ಇಲ್ಲ ಎಂಬ ಅಂಶವನ್ನು ರಾಜ್ಯ ಸರ್ಕಾರ ತನ್ನ ಪ್ರಮಾಣ ಪತ್ರದಲ್ಲಿ ಸ್ಪಷ್ಟಪಡಿಸಿತ್ತು.
ನೀರು ಬಳಸಲ್ಲ: ನ್ಯಾಯಾಧಿಕರಣದ ಮುಂದಿನ ಸಭೆ ನಡೆಯುವವರೆಗೆ ಕಳಸಾ- ಬಂಡೂರಿ ಯೋಜನೆ ನೀರು ಬಳಕೆ ಮಾಡುವುದಿಲ್ಲ ಮತ್ತು ಮತ್ಯಾವುದೇ ಯೋಜನೆಗೆ ತಿರುಗಿಸಿಕೊಳ್ಳುವುದಿಲ್ಲ ಎಂದು 2012ರ ಅಕ್ಟೋಬರ್ 16ರಂದು ಕರ್ನಾಟಕ ನ್ಯಾಯಾಧಿಕರಣದ ಮುಂದೆ ತಿಳಿಸಿತ್ತು. ಈ ಹೇಳಿಕೆಯನ್ನು ಗೋವಾ ಪರ ವಕೀಲರು ತಮ್ಮ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ಒಪ್ಪಿಕೊಂಡಿದ್ದಾರೆ ಎಂದು ನ್ಯಾಯಾಧಿಕರಣ ತನ್ನ ಲಿಖಿತ ಆದೇಶದಲ್ಲಿ ದಾಖಲಿಸಿದೆ. ಈ ಆದೇಶವನ್ನು ಗೋವಾ ತಪ್ಪಾಗಿ ಅರ್ಥೈಸುವ ಪ್ರಮೇಯ ಇಲ್ಲ. ಆದರೂ ಗೋವಾ ಸರ್ಕಾರ ಹೇಳಿಕೆಯನ್ನು ತಿರುಚಿದೆ ಎಂದು ಕರ್ನಾಟಕ ಆಕ್ಷೇಪಿಸಿತ್ತು.