ಪರೀಕ್ಷೆಗೆ ನೀತಿ ಸಂಹಿತೆ
ಚುನಾವಣೆ ನೀತಿ ಸಂಹಿತೆಯಂತೆ ಪರೀಕ್ಷಾ ನೀತಿ ಸಂಹಿತೆಯೂ ಜಾರಿಗೆ ಬರಲಿದೆ! ಚುನಾವಣೆ ವೇಳೆ ಮುನ್ನೆಚ್ಚರಿಕೆ ಕ್ರಮವಾಗಿ...
ಕನ್ನಡಪ್ರಭ ವಾರ್ತೆ, ಬೆಂಗಳೂರು, ಅ.23-
ಚುನಾವಣೆ ನೀತಿ ಸಂಹಿತೆಯಂತೆ ಪರೀಕ್ಷಾ ನೀತಿ ಸಂಹಿತೆಯೂ ಜಾರಿಗೆ ಬರಲಿದೆ!
ಚುನಾವಣೆ ವೇಳೆ ಮುನ್ನೆಚ್ಚರಿಕೆ ಕ್ರಮವಾಗಿ ರೌಡಿಗಳನ್ನು ಬಂಧಿಸುವಂತೆ, ಪರೀಕ್ಷೆ ಸಮಯದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವವರನ್ನು ಪೊಲೀಸರ ವಶಕ್ಕೆ ನೀಡಲಾಗುತ್ತದೆ.
ಕಳೆದ ಎರಡು ವರ್ಷಗಳಿಂದ ಸತತವಾಗಿ ಪ್ರಶ್ನೆ ಪತ್ರಿಕೆ ಬಹಿರಂಗ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಈ ನಿರ್ಧಾರ ಕೈಗೊಂಡಿದೆ.
2012 ಮತ್ತು ಈ ವರ್ಷದ ಮಾರ್ಚ್ ತಿಂಗಳಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆ ಪ್ರಶ್ನೆ ಪತ್ರಿಕೆ ಬಯಲಾಗಿದ್ದವು. ಈ ಕುರಿತಂತೆ ಸಿಐಡಿ ತನಿಖೆ ನಡೆದಿದ್ದರೂ ಯಾವುದೆ ಪ್ರಯೋಜನವಾಗಿರಲಿಲ್ಲ. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕಳೆದ 10 ವರ್ಷಗಳಿಂದ ಸಿಗುತ್ತಿರುವ ಆರೋಪಿಗಳಲ್ಲಿ ಸಾಮ್ಯತೆಗಳಿವೆ. ಪರೀಕ್ಷೆ ಬಳಿಕ ಒಂದು ವಾರಗಳ ಕಾಲ ಜೈಲಿನಲ್ಲಿರುವ ಈ ಆರೋಪಿಗಳು ಜಾಮೀನು ಪಡೆದು ಮುಂದಿನ ಪರೀಕ್ಷೆ ಸಂದರ್ಭದಲ್ಲಿ ಮತ್ತೆ ಕಾರ್ಯನಿರತರಾಗುತ್ತಿದ್ದರು. ಇದರಿಂದ ಪದವಿಪೂರ್ವ ಶಿಕ್ಷಣ ಇಲಾಖೆಗೆ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.
ಚುನಾವಣೆ ರೀತಿಯಲ್ಲಿ ಕಾರ್ಯತಂತ್ರ: ರಾಜ್ಯದಲ್ಲಿ ಕಳೆದೊಂದು ದಶಕದಲ್ಲಿ ಪಿಯುಸಿ ಸೇರಿ ಇತರ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಮಲ್ಲೇಶ್ವರ ಮೂಲದ ಜಾಲಗಳಿಂದಲೇ ಬಯಲಾಗುತ್ತಿವೆ. ಇಲ್ಲಿಂದ ಕೋಲಾರ, ತುಮಕೂರು, ಮೈಸೂರು, ಬಿಜಾಪುರ ಹಾಗೂ ಹುಬ್ಬಳ್ಳಿಯಲ್ಲಿನ ಜಾಲಗಳಿಗೆ ತಲುಪುತ್ತಿವೆ. ಈ ರೀತಿ ಪ್ರಶ್ನೆ ಪತ್ರಿಕೆಗಳನ್ನು ಹಂಚುವ ಜಾಲದ ಬಗ್ಗೆ ಪ್ರತಿ ಜಿಲ್ಲಾಡಳಿತಕ್ಕೂ ಸ್ಪಷ್ಟ ಮಾಹಿತಿಯಿದೆ. ಇದೇ ಜಾಡಿನ ಮೇಲೆಯೇ ಕಳೆದ ವರ್ಷ ತುಮಕೂರಿನಲ್ಲಿ ಜಾಲವೊಂದನ್ನು ಭೇದಿಸಲಾಗಿತ್ತು. ಇದಾದ ಬಳಿಕ ಮಲ್ಲೇಶ್ವರದಲ್ಲಿರುವ ಶಿವಕುಮಾರ್ಸ್ವಾಮಿ ಎಂಬಾತನನ್ನು ಬಂಧಿಸಲಾಗಿತ್ತು. ಈತ ಪಿಯುಸಿಯಲ್ಲದೇ ಕೆಎಎಸ್, ಸ್ನಾತಕೋತ್ತರ ಪ್ರವೇಶ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಯನ್ನೂ ಸೋರಿಕೆ ಮಾಡುತ್ತಿದ್ದ.
ಪರೀಕ್ಷೆಗೆ ಒಂದು ತಿಂಗಳ ಸಮಯವಿರುವಾಗ ಅಂದರೆ ಫೆಬ್ರವರಿ ತಿಂಗಳ ಪ್ರಾರಂಭದಲ್ಲಿಯೇ ತಪ್ಪಿತಸ್ಥರನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುವುದರಿಂದ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಬಹುದು ಎಂಬುದು ಇಲಾಖೆ ಲೆಕ್ಕಾಚಾರವಾಗಿದೆ.
ಇದಲ್ಲದೇ ಕೆಲವೊಮ್ಮೆ ನೈಜ ಪ್ರಶ್ನೆ ಪತ್ರಿಕೆಯಾಗಿರದಿದ್ದರೂ ವಿದ್ಯಾರ್ಥಿಗಳಿಗೆ ಈ ಜಾಲವು ಮೋಸ ಮಾಡುವ ಸಾಧ್ಯತೆ ಇರುತ್ತದೆ. ಅಲ್ಲದೇ ಅನವಶ್ಯಕ ಗೊಂದಲಗಳಿಗೂ ಕಾರಣವಾಗುತ್ತದೆ. ಅನುಮಾನ ಇದ್ದವರನ್ನು ಫೆಬ್ರವರಿ ತಿಂಗಳಲ್ಲಿ ಬಂಧಿಸಿ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ಬಳಿಕ ಬಿಡುಗಡೆಮಾಡುವ ಬಗ್ಗೆ ಇಲಾಖೆಯು ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠರೊಂದಿಗೆ ಚರ್ಚೆ ಆರಂಭಿಸಿದೆ.
ಇತರ ವಿಭಾಗಗಳಿಗೂ ಮಾದರಿ: ಪದವಿಪೂರ್ವ ಶಿಕ್ಷಣ ಇಲಾಖೆಯು ಸತತ ಎರಡು ವರ್ಷಗಳ ಕಾಲ ಪಾಲಕರಿಂದ ಟೀಕೆಗೆ ಗುರಿಯಾದ ಬಳಿಕ ಈ ನಿರ್ಧಾರಕ್ಕೆ ಬಂದಿದೆ. ರಾಜ್ಯದ ಕೆಲ ವಿಶ್ವವಿದ್ಯಾಲಯ ಹಾಗೂ ಸ್ನಾತಕೋತ್ತರ ಪ್ರವೇಶ ಪರೀಕ್ಷೆಗಳ ಸಂದರ್ಭದಲ್ಲಿಯೂ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ನಡೆಯುತ್ತಿದೆ. ಪಿಯು ಇಲಾಖೆಯು ಈಗ ಚಿಂತಿಸಿರುವಂತೆ ಇತರ ವಿಭಾಗಗಳು ಮುಂದಾದರೆ ಪರೀಕ್ಷಾ ಅಕ್ರಮಕ್ಕೆ ಅಲ್ಪಮಟ್ಟಿಗೆ ಕಡಿವಾಣ ಹಾಕಬಹುದು.
ಸಮಯ ಇಳಿಕೆ?: ಪ್ರಾಯೋಗಿಕ ಪರೀಕ್ಷೆ ಇರುವ ವಿಷಯಗಳ ಲಿಖಿತ ಪರೀಕ್ಷೆ ಅಂಕವನ್ನು ಇಲಾಖೆ 70ಕ್ಕೆ ಇಳಿಸಿದೆ. ಆದರೆ ಪರೀಕ್ಷಾ ಅವಧಿಯನ್ನು ಮಾತ್ರ ಮೂರುಕಾಲು ಗಂಟೆಗೇ ಸೀಮಿತಗೊಳಿಸಲಾಗಿದೆ. ಮತ್ತೊಂದೆಡೆ ಅನವಶ್ಯಕವಾಗಿ ಪರೀಕ್ಷಾ ಕೊಠಡಿಯಲ್ಲಿ ಸುಮಾರು ಒಂದು ತಾಸುಗಳ ಕಾಲ ಕೂರಬೇಕಾದ ಅನಿವಾರ್ಯತೆಯಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷಾ ಅವಧಿಯನ್ನು ಅರ್ಧ ಗಂಟೆಯಿಂದ ಮುಕ್ಕಾಲು ಗಂಟೆಗಳ ಕಾಲ ಇಳಿಸುವ ಚಿಂತನೆಯನ್ನು ಇಲಾಖೆ ಮಾಡಿದೆ.
ಕಳ್ಳರಿಗೆ ಮೂಗುದಾರ ಎಂದು?
ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಕೇವಲ ಇಂತಹ ಆರೋಪಿಗಳನ್ನು ಬಂಧಿಸುವುದರಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಇಲಾಖೆಯಲ್ಲಿನ ಅಧಿಕಾರಿಗಳ ನೆರವಿಲ್ಲದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಸಾಧ್ಯವೇ ಇಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಮಲ್ಲೇಶ್ವರ ಕಚೇರಿಯಲ್ಲಿನ ಅಧಿಕಾರಿಗಳು ನೆರವು ನೀಡಿದ್ದಾರೆ, ಬೇರೆಡೆ ವರ್ಗಾಯಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಅವರ ಕಚೇರಿಯೇ ಇಲಾಖೆಗೆ ವರದಿ ನೀಡಿದೆ. ಈ ಬಗ್ಗೆ ಯಾವುದೆ ಕ್ರಮ ತೆಗೆದುಕೊಂಡಿಲ್ಲ. ಪರೀಕ್ಷಾ ಸುಧಾರಣೆಗೆ ಮುಂದಾಗಿರುವ ನೂತನ ನಿರ್ದೇಶಕರು ಇಲಾಖೆಯೊಳಗಿನ ಕಳ್ಳರಿಗೂ ಮೂಗುದಾರ ಹಾಕಲು ಮುಂದಾಗಬೇಕಿದೆ.
ಸಾಕಷ್ಟು ಸುಧಾರಣೆ ಬಳಿಕವೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪರೀಕ್ಷೆಗೂ ಮುನ್ನ ಆರೋಪಿಗಳನ್ನೇ ಬಂಧಿಸಲು ನಿರ್ಧರಿಸಲಾಗಿದೆ. ಈ ಮೂಲಕ ಪರೀಕ್ಷಾ ಅಕ್ರಮಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ ಎಂಬ ನಂಬಿಕೆಯಿದೆ.
- ಡಾ.ರಾಮೇಗೌಡ ಪದವಿಪೂರ್ವ ಶಿಕ್ಷಣ ಇಳಾಖೆ ನಿರ್ದೇಶಕರು
-ರಾಜೀವ ಹೆಗಡೆ