ಸುಮ್ನಿರಿ, ಇಲ್ದಿದ್ರೆ...
ಹದ್ದು ಮೀರಿದರೆ ರೆಕ್ಕೆ ಕತ್ತರಿಸಿಬಿಟ್ಟೇವು ಹುಷಾರ್...ಇದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಅವರ ಎಚ್ಚರಿಕೆಯ ನುಡಿ...
ನವದೆಹಲಿ/ವಾಷಿಂಗ್ಟನ್: ಹದ್ದು ಮೀರಿದರೆ ರೆಕ್ಕೆ ಕತ್ತರಿಸಿಬಿಟ್ಟೇವು ಹುಷಾರ್...
ಇದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಅವರ ಎಚ್ಚರಿಕೆಯ ನುಡಿ.
ಪದೇ ಪದೆ ಅಂತಾರಾಷ್ಟ್ರೀಯ ರೇಖೆ ದಾಟಿ ಭಾರತದೊಳಗೆ ಬಂದು, ಇಲ್ಲಿನ ಔಟ್‌ಪೋಸ್ಟ್‌ಗಳ ಮೇಲೆ ದಾಳಿ ಮಾಡುತ್ತಿರುವ ಪಾಕಿಸ್ತಾನಕ್ಕೆ ಖಡಕ್ಕಾಗಿಯೇ ಶಿಂದೆ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆವರೆಗೆ ಪಾಕಿಸ್ತಾನದ ಸೈನಿಕರು 50 ಔಟ್‌ಪೋಸ್ಟ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಒಬ್ಬ ಬಿಎಸ್‌ಎಫ್ ಹೆಡ್‌ಕಾನ್‌ಸ್ಟೇಬಲ್ ಮೃತಪಟ್ಟಿದ್ದರೆ, ಏಳು ಮಂದಿ ಯೋಧರು ಗಾಯಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಶಿಂದೆ ಅವರು, ಪಾಕಿಸ್ತಾನ ವಿರುದ್ಧ ಖಡಕ್ಕಾಗಿ ಮಾತನಾಡಿದ್ದಾರೆ. ನೆರೆಯ ದೇಶ ಪದೇ ಪದೆ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ನಮ್ಮ ಸಹನೆಗೂ ಒಂದು ಮಿತಿಯಿದೆ. ಆ ದೇಶಕ್ಕೆ ತಕ್ಕ ಉತ್ತರವನ್ನೇ ನೀಡುತ್ತೇವೆ ಎಂದಿದ್ದಾರೆ. ಅಲ್ಲದೆ ಗಡಿಗೆ ಹೆಚ್ಚುವರಿ ಬಿಎಸ್‌ಎಫ್ ಯೋಧರನ್ನು ಕಳುಹಿಸುತ್ತಿರುವುದಾಗಿ ಹೇಳಿದ್ದಾರೆ.
ಕಾಮಗಾರಿ ಸ್ಥಗಿತ
ಪಾಕ್ ಆಕ್ಷೇಪದ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಕೇರನ್ ವಲಯದಲ್ಲಿ ಭಾರತ ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿದೆ. ಎಲ್‌ಓಸಿಯಿಂದ 150 ಮೀಟರ್ ಅಂತರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಸುವಂತಿಲ್ಲ ಎಂಬ ಅಂತಾರಾಷ್ಟ್ರೀಯ ಒಪ್ಪಂದವಿದ್ದು, ಈ ಕಾಮಗಾರಿಯಿಂದ ಇದರ ಉಲ್ಲಂಘನೆಯಾಗಿದೆ ಎಂಬುದು ಪಾಕಿಸ್ತಾನದ ಆಕ್ಷೇಪ. ಹೀಗಾಗಿ ಪಾಕ್ ಸೈನಿಕರು ಲೌಡ್ ಸ್ಪೀಕರ್ ಮೂಲಕ ಘೋಷಣೆ ಕೂಗಿ ಕಾಮಗಾರಿ ಸ್ಥಗಿತಗೊಳಿಸುವಂತೆ ಹೇಳಿದ್ದಾರೆ. ಈ ಸ್ಥಳದಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮಕ್ಕಳ ಪಾರ್ಕ್ ಮತ್ತು ಶಾಲೆಯೊಂದನ್ನು ಅಭಿವೃದ್ಧಿಪಡಿಸಲು ಮುಂದಾಗಿತ್ತು. ಈ ಸಂಬಂಧ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿತ್ತು.
ದಾಳಿಗೆ ಕಯಾನಿ ಕಾರಣ?
ಮುಂದಿನ ತಿಂಗಳು ಪಾಕ್ ಸೇನಾ ಮುಖ್ಯಸ್ಥ ಜ. ಅಶ್ಫಾಕ್ ಪರ್ವೇಜ್ ಕಯಾನಿ ನಿವೃತ್ತಿಯಾಗಲಿದ್ದಾರೆ. ಹೀಗಾಗಿ ತಮ್ಮ 'ಪವರ್' ತೋರಲು ಪಾಕಿಸ್ತಾನ ಸರ್ಕಾರದ ಆದೇಶಗಳನ್ನೂ ಮೀರಿ ಅಂತಾರಾಷ್ಟ್ರೀಯ ಗಡಿ(ಇದು ಎಲ್‌ಓಸಿಯಲ್ಲ, ವಿವಾದದಲ್ಲಿರುವ ಗಡಿ)ಯಲ್ಲಿ ದಾಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನಲಾಗಿದೆ.
ರಾತ್ರಿಯಿಡೀ ದಾಳಿ
ಮಂಗಳವಾರ ರಾತ್ರಿ ಪಾಕಿಸ್ತಾನಿ ರೇಂಜರ್‌ಗಳು 50 ಗಡಿ ಔಟ್‌ಪೋಸ್ಟ್‌ಗಳ ಮೇಲೆ ಶೆಲ್ ದಾಳಿ ನಡೆಸಿದ್ದಾರೆ. ಇದು ಇತಿಹಾಸದಲ್ಲೇ ಅತ್ಯಂತ ದೊಡ್ಡ ದಾಳಿಯಾಗಿದೆ. ಈ ದಾಳಿಯಿಂದಾಗಿ ಭಾರತದ ಒಬ್ಬ ಬಿಎಸ್‌ಎಫ್ ಯೋಧ ಬಲಿಯಾಗಿ ಮತ್ತು ಇತರೆ 7 ಮಂದಿಗೆ ಗಾಯಗಳಾಗಿವೆ. ಈ ಸಂದರ್ಭದಲ್ಲಿ ಒಳನುಸುಳುವಿಕೆ ಪ್ರಯತ್ನವೂ ನಡೆದಿದೆ. ಜಮ್ಮು ಜಿಲ್ಲೆಯ ಅಖ್ನೂರ್‌ನಲ್ಲಿ ಗಡಿಯಲ್ಲಿ ಹಾಕಿರುವ ಬೇಲಿಯನ್ನೂ ನಾಶಮಾಡಲಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ಶಿಂದೆ ಉಗ್ರವಾಗಿ ಮಾತನಾಡಿದ್ದಾರೆ.
ಅಮೆರಿಕದ ಮಧ್ಯಸ್ಥಿಕೆ ಬೇಕೇಬೇಕು...
ಕಾಶ್ಮೀರ ವಿವಾದ ಬಗೆಹರಿಸುವಲ್ಲಿ ಅಮೆರಿಕದ ಮಧ್ಯಸ್ಥಿಕೆ ಬೇಕು ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಅವರು, ಅಧ್ಯಕ್ಷ ಬರಾಕ್ ಒಬಾಮ ಜೊತೆಗಿನ ಮಾತುಕತೆ ಸಂದರ್ಭದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ ಬಿಂದು ಅಲ್ಲ ಎಂದು ಪ್ರತಿಪಾದಿಸಿರುವ ಅವರು, ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥ ಮಾಡುವಲ್ಲಿ ಅಮೆರಿಕದ ಪಾತ್ರ ಪ್ರಮುಖವಾದದ್ದು ಎಂದಿದ್ದಾರೆ. ಆದರೆ ನವಾಜ್ ಷರೀಫ್ ಅವರ ಈ ಬೇಡಿಕೆಯನ್ನು ತಿರಸ್ಕರಿಸಿರುವ ಒಬಾಮ ಅವರು, ಎರಡೂ ದೇಶಗಳು ಸೌಹಾರ್ದಯುತವಾಗಿ ಈ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದಾರೆ. ಅಲ್ಲದೆ ಮೂರನೇ ದೇಶದ ಮಧ್ಯಸ್ಥಿಕೆ ಬೇಡ ಎಂದು ಪುನರುಚ್ಚರಿಸಿದ್ದಾರೆ. ಈ ಹಿಂದೆ ಕೂಡ ನವಾಜ್ ಷರೀಫ್ ಅವರ ಇಂಥ ಬೇಡಿಕೆಯನ್ನು ಒಬಾಮ ತಿರಸ್ಕರಿಸಿದ್ದರು.
ಕಠಿಣ ಪ್ರಶ್ನೆ ಎದುರಾದಾಗ...
ಹಫೀಜ್ ಸಯೀದ್ ನಿಮ್ಮಲ್ಲೇ ಇದ್ದಾನೆಯೇ? ಮುಂಬೈ ದಾಳಿಯಲ್ಲಿ ಲಷ್ಕರ್ ಎ ತೊಯ್ಬಾ ಸಂಘಟನೆಯ ಪಾತ್ರವೇನು?
ಅಮೆರಿಕ ಸದನದ ವಿದೇಶಾಂಗ ವ್ಯವಹಾರಗಳ ಸಮಿತಿ ನವಾಜ್ ಷರೀಫ್ ಅವರಿಗೆ ಕೇಳಿದ ಪ್ರಶ್ನೆಗಳಿವು. ಮುಂಬೈ ದಾಳಿ ಸಂಬಂಧ ವಿಚಾರಣೆ ನಡೆಸಿದ ಈ ಸಮಿತಿ ಷರೀಫ್‌ರಿಗೆ ಕಠಿಣ ಪ್ರಶ್ನೆಗಳನ್ನೇ ಮುಂದಿಟ್ಟಿತು. ಹಫೀಜ್ ಸಯೀದ್, ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಶ್ನೆ ಕೇಳಿ ದಂಗುಬಡಿಸಿತು.