ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

5 ವರ್ಷದಿಂದ ನನಸಾಗದ ಪಿಎಸ್‌ಐ ಕನಸು

Vishwanath S
Updated On : 26 Oct 2013, 12:01 pm

ಹುಬ್ಬಳ್ಳಿ: ಇದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೆನ್ನಬೇಕೋ ಅಥವಾ ಸಮಾಜಕ್ಕೆ ರಕ್ಷಣೆ ನೀಡುವಲ್ಲಿ ಅಸಡ್ಡೆ ಎನ್ನಬೇಕೋ ತಿಳಿಯುತ್ತಿಲ್ಲ. ಸರ್ಕಾರ ಕಳೆದ 5 ವರ್ಷದಿಂದ ಒಂದೇ ಒಂದು ಪಿಎಸ್‌ಐ(ಸಿವಿಲ್) ಹುದ್ದೆ ಭರ್ತಿ ಮಾಡಿಲ್ಲ. ಪರಿಣಾಮ ಪಿಎಸ್‌ಐ ಆಗಬೇಕೆಂದುಕೊಂಡವರ ಕನಸಿಗೆ ಕಲ್ಲು ಬಿದ್ದಿದೆ.
ಸಮಾಜಕ್ಕೆ ರಕ್ಷಣೆ ಕೊಡುವ ಜತೆಗೆ ನಿರುದ್ಯೋಗಿ ಯುವಕರ ಕೈಗೆ ಉದ್ಯೋಗ ನೀಡುವುದಾಗಿ ಪುಂಖಾನುಪುಂಖವಾಗಿ ಭಾಷಣ ಬಿಗಿಯುವ ಜನಪ್ರತಿನಿಧಿಗಳು ಸಮಾಜಕ್ಕೆ ರಕ್ಷಣೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿಯೇ ಇಲ್ಲ ಎಂಬುದಕ್ಕೆ ಇದೊಂದು ನಿದರ್ಶನ ಸಾಕು.  ರಾಜ್ಯ ಸರ್ಕಾರ 2009 ಜುಲೈ ಬಳಿಕ ಒಂದೇ ಒಂದು ಪಿಎಸ್‌ಐ ಹುದ್ದೆ ಭರ್ತಿ ಮಾಡಿಲ್ಲ. ಇದಕ್ಕೂ ಮುನ್ನ ಸರ್ಕಾರ ಇನ್ನಾವುದೇ ಇಲಾಖೆಯ ಹುದ್ದೆ ಭರ್ತಿಗೆ ಹಿಂಜರಿಕೆ ತೋರಿದರೂ ಪಿಎಸ್‌ಐ ಹುದ್ದೆ ಭರ್ತಿಗೆ ಮಾತ್ರ ಕಾಳಜಿ ತೋರಿದ್ದು ಕಂಡು ಬರುತ್ತದೆ. 2001, 2003, 2005, 2007 ತದನಂತರ 2009ರಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಸರ್ಕಾರ ಪಿಎಸ್‌ಐ(ಸಿವಿಎಲ್) ಹುದ್ದೆ ನೇಮಕ ಮಾಡಿದ್ದು ಕಂಡುಬರುತ್ತದೆ. ಆದರೆ, ಇದಾದ ಬಳಿಕ ಸರ್ಕಾರಕ್ಕೇನಾಯಿತೋ ಗೊತ್ತಿಲ್ಲ. 5 ವರ್ಷ ಕಳೆಯುತ್ತಾ ಬಂದರೂ ಪಿಎಸ್‌ಐ ಹುದ್ದೆ ಭರ್ತಿಗೆ ಆಸ್ಥೆ ತೋರಿಲ್ಲ.
ಅವಕಾಶ ವಂಚಿತರು
ಇಲ್ಲಿ ಗಮನಾರ್ಹ ಸಂಗತಿಯೆಂದರೆ, ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ರಾಷ್ಟ್ರಪತಿಗಳ ಅಂಕಿತ ಬಿದ್ದಿರುವುದರಿಂದ ಸರ್ಕಾರ ಇಷ್ಟರಲ್ಲಿಯೇ ಅಧಿಸೂಚನೆ ಹೊರಡಿಸಿ ಪಿಎಸ್‌ಐ ಹುದ್ದೆ ಭರ್ತಿ ಮಾಡಿಕೊಳ್ಳಬಹುದು. ಆದರೆ, ಪಿಎಸ್‌ಐ ಹುದ್ದೆ ಗಿಟ್ಟಿಸಿಕೊಳ್ಳಬೇಕೆಂದು ಕಳೆದ 5 ವರ್ಷದಿಂದ ಅರ್ಜಿ ಆಹ್ವಾನಕ್ಕಾಗಿ ಕಾಯುತ್ತಾ ಕುಳಿತ ಸಾವಿರಾರು ಯುವಕ-ಯುವತಿಯರಿಗೆ ಅನ್ಯಾಯವಾಗಲಿದೆ. ರಾಜ್ಯದಲ್ಲಿ ಪಿಎಸ್‌ಐ ಹುದ್ದೆಗೆ 26(ಸಾಮಾನ್ಯ ವರ್ಗ) ವರ್ಷ ವಯೋವುತಿ ನಿಗದಿಸಲಾಗಿದೆ. 21ನೇ ವಯಸ್ಸಿಗೆ ಪದವಿ ಮುಗಿಸಿ ಪಿಎಸ್‌ಐ ಹುದ್ದೆ ಗಿಟ್ಟಿಸಿಕೊಳ್ಳಬೇಕೆಂದು ಕನಸು ಕಟ್ಟಿಕೊಂಡು 2009ರಿಂದ 5 ವರ್ಷ ಕಾಲ ಕಾಯುತ್ತಾ ಕುಳಿತವರು ಈಗಾಗಲೇ 26 ವರ್ಷ ವಯಸ್ಸು ದಾಟಿದ್ದಾರೆ. ಇಂಥವರಿಗೆ ವಯೋವುತಿ ಮೀರಿದ್ದರಿಂದ ಅವಕಾಶ ಸಿಗುವುದು ಅಸಾಧ್ಯದ ಮಾತು.
ವಯೋವುತಿ ಹೆಚ್ಚಿಸಲಿ
ಸರ್ಕಾರದ ವಿಳಂಬ ಧೋರಣೆಯಿಂದ ಅವಕಾಶ ವಂಚಿತರಾಗಲಿರುವ ಯುವಕ-ಯುವತಿಯರು ಪಿಎಸ್‌ಐ ನೇಮಕಾತಿಯಲ್ಲಿ ವಯೋವುತಿ ಹೆಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ. ಸಾಮಾನ್ಯ ವರ್ಗಕ್ಕೆ ವಯೋವುತಿಯನ್ನು 26ರಿಂದ 28, ಹಿಂದುಳಿದ ವರ್ಗಕ್ಕೆ 28ರಿಂದ 30 ವರ್ಷ ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಅವಕಾಶ ವಂಚಿತ ನಿರುದ್ಯೋಗಿಗಳು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಈ ವಿಷಯಚರ್ಚೆಗೊಳಪಟ್ಟು ಅವಕಾಶ ವಂಚಿತರಾಗಲಿರುವವರಿಗೆ ನ್ಯಾಯ ಕೊಡಿಸುವ ಕಾರ್ಯ ಸರ್ಕಾರದಿಂದಾಗಬೇಕಿದೆ.
ದೇಶದ ಇನ್ನಿತರ ರಾಜ್ಯಗಳು ಪಿಎಸ್‌ಐ ಹುದ್ದೆ ಭರ್ತಿಗೆ ವಯೋವುತಿಯಲ್ಲಿ ಉದಾರತೆ ತೋರಿದ್ದು ಕಂಡುಬರುತ್ತದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಬಿಹಾರದಲ್ಲಿ 32 ವರ್ಷ, ಕೇರಳದಲ್ಲಿ 30 ವರ್ಷ ವಯೋವುತಿ ಇದ್ದರೂ ಕರ್ನಾಟಕದಲ್ಲಿ ಅತಿ ಕಡಿಮೆ 26 ವರ್ಷ ವಯೋವುತಿ ನಿಗದಿಸಲಾಗಿದೆ. ವಯೋವುತಿ ಬದಲಾಯಿಸಬೇಕೆಂಬ ಕೂಗ ಕೇಳಿ ಬಂದಿದ್ದರೂ ಸರ್ಕಾರ ಈವರೆಗೆ ಗಮನ ಹರಿಸಿಲ್ಲ.
800ಕ್ಕೂ ಹೆಚ್ಚು ಹುದ್ದೆ ಖಾಲಿ
ಕೆಲವು ದಿನಗಳ ಹಿಂದೆ ಗೃಹ ಸಚಿವ ಕೆ.ಜೆ. ಜಾರ್ಜ್ ನೀಡಿದ ಹೇಳಿಕೆಯ ಪ್ರಕಾರ ರಾಜ್ಯದಲ್ಲಿ ಸುಮಾರು 800 ಪಿಎಸ್‌ಐ ಹಾಗೂ 8500 ಪೇದೆಗಳ ಹುದ್ದೆ ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಈ ಹಿಂದಿನ ಸರ್ಕಾರ ಹೇಳಿತ್ತಾದರೂ ಅದು ಕಾರ್ಯರೂಪಕ್ಕೆ ಬಾರಲೇ ಇಲ್ಲ. ಏತನ್ಮಧ್ಯೆ ಹೊಸ ಸರ್ಕಾರ ಕೂಡ ಹುದ್ದೆ ಭರ್ತಿ ಮಾಡುವುದಾಗಿ ಹೇಳಿತ್ತಾದರೂ ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನದ ಪ್ರಕ್ರಿಯೆಯಿಂದಾಗಿ (371ಜೆ) ನೇಮಕಾತಿ ಮತ್ತಷ್ಟು ವಿಳಂಬವಾಯಿತು.
ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದಾಗಿ ನಾವು ಅವಕಾಶ ವಂಚಿತರಾಗಲಿದ್ದೇವೆ. ಸರ್ಕಾರ ನಮ್ಮ ಬೇಡಿಕೆಯನ್ನು ಮನ್ನಿಸಿ ವಯೋವುತಿ ಹೆಚ್ಚಿಸಬೇಕು. ಪಿಎಸ್‌ಐ ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನ ಸರ್ಕಾರ ವಯೋವುತಿ ಪರಿಷ್ಕರಿಸದಿದ್ದರೇ ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗುತ್ತೇವೆ.
- ಭೀಮನಗೌಡ ಬಿರಾದಾರ, ಅಧ್ಯಕ್ಷ, ರಾಜ್ಯ ನಿರುದ್ಯೋಗಿ ಪದವೀಧರರ ಸಂಘ


-ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement