ಇಳಿ ವಯಸ್ಸಿನಲ್ಲೂ ಸೈಕಲ್ನಲ್ಲಿ ಪುಸ್ತಕ ಮಾರುವ ಕವಿ ಐರಸಂಗ
ಕನ್ನಡಪ್ರಭ ವಾರ್ತೆ , ಧಾರವಾಡ , ಅ. 25
ಜಾತಿ ಅಂತ ಬಡಕೋತಿಯಾಕ
ಆ ಕೋತಿಯೇ ಮನುಷ್ಯ ಆಗೇತಿ
ಕೋತಿಗಿಲ್ಲದ ಜಾತಿ ಈ ಮನುಷ್ಯನಿಗ್ಯಾಕ ಬೇಕಾಗೇತಿ?
ಸಮಾಜದಲ್ಲಿನ ಅಸಮಾನತೆ ವಿರುದ್ಧ ಸೌಮ್ಯವಾಗಿ ಚಾಟಿ ಬೀಸುವ ಈ ಸರಳ ಕವನದಂತೆಯೇ ಎಲೆ ಮರೆ ಕಾಯಿಯಾಗಿ ನಿರಂತರ ಕಾವ್ಯ ಕೃಷಿಯಲ್ಲಿ ತೊಡಗಿಕೊಂಡು ಕನ್ನಡ ಕಾವ್ಯಲೋಕವನ್ನು ಶ್ರೀಮಂತಗೊಳಿಸಿದ ಭಾವಗೀತೆಗಳ ಕವಿ ವಿ.ಸಿ. ಐರಸಂಗ.
'ಕನ್ನಡ ಕಾದಂಬರಿ ಪಿತಾಮಹ' ಎಂದೇ ಪರಿಗಣಿಸಲಾಗುವ ಗಳಗನಾಥರು ತಲೆ ಮೇಲೆ ಹೊತ್ತು ಪುಸ್ತಕ ಮಾರಿದ್ದನ್ನು ಕೇಳಿದ್ದೇವು. ಹಾಗೆಯೇ 82ರ ವಯೋವೃದ್ಧ ಕವಿ ಐರಸಂಗರು ತಮ್ಮ ಹಳೆಯ ಸೈಕಲ್ ಏರಿ ತಾವೇ ಬರೆದು, ಪ್ರಕಟಿಸಿದ ಪುಸ್ತಕಗಳನ್ನು ಇಂದಿಗೂ ಮಾರುತ್ತಿರುವುದು ಆಶ್ಚರ್ಯವಾದರೂ ಸತ್ಯ. ಸಾಹಿತಿಗಳ ತವರೆಂದೇ ಹೆಸರಾಗಿರುವ ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲೋನಿಯ ತಮ್ಮ ಮಗಳ ಮನೆಯಲ್ಲಿ ವಾಸಿಸುತ್ತಿರುವ ಈ ಸರಳ ಜೀವಿಯ ಕಾವ್ಯ ಸಂಪತ್ತನ್ನು ಸರಿಯಾಗಿ ಬಳಸಿಕೊಂಡಿದ್ದು ಧಾರವಾಡದ ಆಕಾಶವಾಣಿ ಕೇಂದ್ರ ಮಾತ್ರ. 1962ರಿಂದ ಕಾವ್ಯ ಕೃಷಿಯಲ್ಲಿ ತೊಡಗಿರುವ ಐರಸಂಗರ ಕವಿತೆಗಳನ್ನು ಆಕಾಶವಾಣಿ ನಾಲ್ಕು ದಶಕಗಳಿಂದ ಬಿತ್ತರಿಸುತ್ತಾ ಬಂದಿದೆ.
30ಕ್ಕೂ ಹೆಚ್ಚು ಕವನ ಸಂಕಲನ: 'ನವರಸ', 'ಉದಯಗೀತ', 'ಮೋಹಿನಿ ಭಸ್ಮಾಸುರ', 'ಗೀತ ಮಂಜರಿ', 'ಕಾವ್ಯಸೌರಭ', 'ಶೃಂಗಾರ ಕಾವ್ಯ', 'ಪಯಣ', 'ಸುಪ್ರಭಾತ', 'ಪ್ರೀತಿಯೇ ಪ್ರೀತಿಯು', 'ಗುಬ್ಬಿಯ ಗೂಡು'... ಹೀಗೆ ಮೂವತ್ತಕ್ಕೂ ಹೆಚ್ಚು ಕವನ ಸಂಕಲನಗಳನ್ನು ಹೊರ ತಂದಿದ್ದು, ಮೂರು ಸಾವಿರಕ್ಕೂ ಹೆಚ್ಚು ಕವನಗಳನ್ನು ರಚಿಸಿದ್ದಾರೆ. ಇವರ ಮೊದಲ ಕವನ ಸಂಕಲನ 'ಸುಧಾಸರಿತ'ಕ್ಕೆ ಬೆಟಗೇರಿ ಕೃಷ್ಣಶರ್ಮ ಮುನ್ನುಡಿ ಬರೆದಿದ್ದಾರೆ. ಇವರ ಭಾವಗೀತೆಗಳು ರಾಗ ಹಾಗೂ ಲಯಬದ್ಧವಾಗಿರುವುದರಿಂದ ಹಲವಾರು ಖ್ಯಾತ ಗಾಯಕರು ಇವರ ಭಾವನೆಗಳಿಗೆ ಧ್ವನಿಯಾಗಿದ್ದಾರೆ. ಈ ಪೈಕಿ ಅನುರಾಧಾ ಧಾರೇಶ್ವರ, ಸಂಗೀತಾ ಕಟ್ಟಿ, ವಸಂತ ಕನಕಾಪುರ, ರಾಧಾ ದೇಸಾಯಿ, ಸುಲಭಾದತ್ತ ನೀರಲಗಿ, ಬಸವರಾಜ ಗೋನಾಳ, ಪಂ. ಪರಮೇಶ್ವರ ಹೆಗಡೆ, ಶ್ರೀಕಾಂತ ಕುಲಕರ್ಣಿ, ಕೃಷ್ಣಾ ಹಾನಗಲ್ ಪ್ರಮುಖರು.
ತನ್ನೊಳಗೆ ಬಿಟ್ಟುಕೊಳ್ಳದ ಸಾಹಿತ್ಯಲೋಕ : ಕನ್ನಡ ಸಾಹಿತ್ಯ ಲೋಕಕ್ಕೆ ನೂರಾರು ಭಾವಗೀತೆಗಳನ್ನು ಕೊಡುಗೆಯಾಗಿ ನೀಡಿದ ಐರಸಂಗರನ್ನು ಕನ್ನಡ ಸಾಹಿತ್ಯ ಲೋಕ ಮಾತ್ರ ತನ್ನೆಡೆಗೆ ಕರೆದುಕೊಳ್ಳಲಿಲ್ಲ. ಕನ್ನಡ ಸಾಹಿತ್ಯ-ಸಂಸ್ಕೃತಿ ಚಟುವಟಿಕೆಗಳ ಕೇಂದ್ರವಾಗಿರುವ ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ತಮ್ಮ ಸೈಕಲ್ ಸ್ಟ್ಯಾಂಡ್ ಹಚ್ಚಿ ಈಗಲೂ ತಮ್ಮ ಪುಸ್ತಕಗಳನ್ನು ಮಾರುವ ಐರಸಂಗ ಅವರಿಗೆ ಸಂಘದ ಬಾಗಿಲು ತೆರದೇ ಇಲ್ಲ. ಸಾಹಿತ್ಯ ಲೋಕಕ್ಕೆ ಭಾವಗೀತೆಗಳ ಕವಿ ಐರಸಂಗ ಇನ್ನೂ ದೂರವಾಗಿಯೇ ಇದ್ದಾರೆ.
ಇವರು ಬಿಜಾಪುರ ಜಿಲ್ಲೆಯವರು: ಐರಸಂಗ ಅವರು ಮೂಲತಃ ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಐರಸಂಗ ಗ್ರಾಮದವರು. ಬಿಎಸ್ಸಿ ಪದವೀಧರರು. ರೇಲ್ವೆ ಇಲಾಖೆಯಲ್ಲಿ ಮುಖ್ಯ ಗುಮಾಸ್ತರಾಗಿ ನಿವೃತ್ತಿ ಹೊಂದಿದ ಇವರ ಪತ್ನಿ ಹಲವು ವರ್ಷಗಳ ಹಿಂದೆಯೇ ನಿಧನರಾಗಿದ್ದಾರೆ. ಮೂವರು ಪುತ್ರಿಯರು, ಓರ್ವ ಪುತ್ರ ಇದ್ದಾರೆ. ಐರಸಂಗರು ಎಂದಿಗೂ ಪ್ರಶಸ್ತಿ-ಪುರಸ್ಕಾರಗಳ ಬೆನ್ನು ಹತ್ತಿದವರಲ್ಲ. ತಾವಾಯಿತು ತಮ್ಮ ಕಾವ್ಯ ಕೃಷಿಯಾಯ್ತು ಎಂದು ಸಂತನಂತೆ ಈ ಕವಿ ಬದುಕುತ್ತಿದ್ದಾರೆ. 2011ರಲ್ಲಿ ಧಾರವಾಡ ತಾಲೂಕು ಸಮ್ಮೇಳನದ ಅಧ್ಯಕ್ಷತೆ ಸೇರಿದಂತೆ ಸ್ಥಳೀಯ ಸನ್ಮಾನಗಳು ದೊರೆತಿವೆ.
-ಬಸವರಾಜ ಹಿರೇಮಠ