ಕೋಲ್ ಮಾಫಿಯಾ
ಕಲ್ಲಿದ್ದಲು ಹಗರಣವೀಗ ಹೊಸ ತಿರುವು ಪಡೆದುಕೊಂಡಿದೆ. ಹಗರಣದಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿರುವ, ಸಿಬಿಐ...
ನವದೆಹಲಿ: ಕಲ್ಲಿದ್ದಲು ಹಗರಣವೀಗ ಹೊಸ ತಿರುವು ಪಡೆದುಕೊಂಡಿದೆ. ಹಗರಣದಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿರುವ, ಸಿಬಿಐ ದಾಖಲಿಸಿರುವ ಎಫ್ಐಆರ್ನಲ್ಲಿ ಹೆಸರಿಸಲ್ಪಟ್ಟಿರುವ ಅಂದಿನ ಕಲ್ಲಿದ್ದಲು ಕಾರ್ಯದರ್ಶಿ ಪಿ.ಸಿ. ಪಾರಖ್ ಅವರು ಹಗರಣಕ್ಕೆ ಸಂಬಂಧಿಸಿ ಸರ್ಕಾರಕ್ಕೆ ಮಾ. 22, 2005ರಂದು ಬರೆದಿದ್ದ ಪತ್ರ ಇದೀಗ ಬಹಿರಂಗವಾಗಿದೆ. ಆ ಪತ್ರದಲ್ಲಿ 'ಕಲ್ಲಿದ್ದಲು ಮಾಫಿಯಾ ಸರ್ಕಾರದ ಹೊರಗಿಲ್ಲ, ಬದಲಾಗಿ ಕಲ್ಲಿದ್ದಲು ಸಚಿವಾಲಯದ ಒಳಗೇ ಇದೆ' ಎಂದು ಪಾರಖ್ ಆರೋಪಿಸಿದ್ದರು.
ಆಗಿನ ಕಲ್ಲಿದ್ದಲು ಸಚಿವ ಶಿಬುಸೊರೇನ್ ಅವರು ತಮ್ಮ ವರ್ಗಾವಣೆಗಾಗಿ ಬರೆದಿದ್ದ ಪತ್ರಕ್ಕೆ ಉತ್ತರವಾಗಿ ಆಗಿನ ಸಂಪುಟ ಕಾರ್ಯದರ್ಶಿ ಬಿ.ಕೆ. ಚತುರ್ವೇದಿ ಅವರಿಗೆ ಬರೆದಿದ್ದ ಈ 14 ಪುಟಗಳ ಪತ್ರದಲ್ಲಿ ಕಲ್ಲಿದ್ದಲು ಮಾಫಿಯಾ ಹಾಗೂ ಸರ್ಕಾರದ ಅಪವಿತ್ರ ಮೈತ್ರಿ ಕುರಿತ ವಿಸ್ತೃತ ಮಾಹಿತಿಯನ್ನು ಪಾರಖ್ ನೀಡಿದ್ದಾರೆ.
'ಸಂವಿಧಾನವನ್ನು ಎತ್ತಿಹಿಡಿಯುವುದಾಗಿ ಹೇಳಿ ಪ್ರಮಾಣವಚನ ಸ್ವೀಕರಿಸಿದ ಸಂಸದರು ತಮ್ಮ ವೈಯಕ್ತಿಕ ಹಿತಸಾಧನೆಗಾಗಿ ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕ ಸಂಸ್ಥೆಗಳ ಹಿರಿಯ ಅಧಿಕಾರಿಗಳನ್ನು ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂದು ಹೇಳಲು ಬೇಸರವಾಗುತ್ತಿದೆ. ಈ ರೀತಿಯ ದುರ್ವರ್ತನೆ ತಡೆಯಲು ದೇಶದಲ್ಲಿ ಯಾವುದೇ ಸಾಂಸ್ಥಿಕ ವ್ಯವಸ್ಥೆ ಇಲ್ಲದಿರುವುದು ದುರದೃಷ್ಟಕರ'.
'ಸದ್ಯದ ವ್ಯವಸ್ಥೆಯಲ್ಲಿ ಕಲ್ಲಿದ್ದಲು ಮೂಲಕ ದೊಡ್ಡ ಮಟ್ಟದಲ್ಲಿ ಅಕ್ರಮ ಹಣ ಸೃಷ್ಟಿಸಲಾಗುತ್ತದೆ. ಕಲ್ಲಿದ್ದಲು ಮಾಫಿಯಾದ ಜತೆಗೆ ವ್ಯವಹರಿಸಲು ಹಾಗೂ ಕಾನೂನು ಆಡಳಿತವನ್ನು ಕೇಂದ್ರ ಹಾಗೂ ರಾಜ್ಯಮಟ್ಟದಲ್ಲಿ ಅನುಷ್ಠಾನಕ್ಕೆ ತರಲು ಬಲಿಷ್ಠ ರಾಜಕೀಯ ಇಚ್ಛಾಶಕ್ತಿಯ ಅಗತ್ಯ ಇದೆ. ಆದರೆ ಸದ್ಯ ಈ ಇಚ್ಛಾಶಕ್ತಿಯ ಕೊರತೆ ಇದೆ' ಎಂದಿದ್ದರು ಪಾರಖ್.
ಸೊರೇನ್ ಮಾಡಿದ್ದ ಆರೋಪ ಏನು?: ಪಾರಖ್ ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ. ರಾಜಕೀಯ ನಾಯಕತ್ವಕ್ಕೆ ಯಾವುದೇ ಗೌರವ ನೀಡುವುದಿಲ್ಲ. ಕೆಲವು ವಿಚಾರಗಳಲ್ಲಿ ಸಚಿವರ ಆದೇಶವನ್ನು ಧಿಕ್ಕರಿಸಿದ್ದಾರೆ ಎಂದು ಫೆ. 7, 2005ರಂದು ಪ್ರಧಾನಿ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ ಶಿಬು ಸೊರೇನ್ ಆರೋಪಿಸಿದ್ದರು.
ಕಲ್ಲಿದ್ದಲು ಮಾಫಿಯಾವನ್ನು ನಿಭಾಯಿಸುವ ಹಾಗೂ ಹೊಸ ನೀತಿಗೆ ಸಂಬಂಧಿಸಿ ತಮ್ಮ ಅಭಿಪ್ರಾಯವೇನೆಂದು ಕೇಳಿ ಪಾರೇಖ್ರಿಗೆ ಟಿಪ್ಪಣಿ ಕಳುಹಿಸಿದ್ದೆ. ಆದರೆ, ಅವರು ಯಾವುದೇ ಉತ್ತರ ನೀಡಿರಲಿಲ್ಲ ಎಂದು ಸೊರೇನ್ ದೂರಿದ್ದರು.
ಆದರೆ, ಚತುರ್ವೇದಿ ಅವರಿಗೆ ಬರೆದ ಪತ್ರದಲ್ಲಿ ಕಲ್ಲಿದ್ದಲು ಮಾಫಿಯಾವನ್ನು ನಿಯಂತ್ರಿಸಲು ಅನೇಕ ನೀತಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದಿದ್ದ ಪಾರಖ್, ಇವುಗಳಲ್ಲಿ ಬಹುತೇಕವನ್ನು ಅನುಷ್ಠಾನಕ್ಕೆ ತರುವುದು ಸಾಧ್ಯವಾಗಲಿಲ್ಲ. ಇದಕ್ಕೆ ಕೆಲವು ನೀತಿಗಳಲ್ಲಿ ಪಾರದರ್ಶಕತೆ ಜಾರಿಗೆ ತರುವಲ್ಲಿ ಕಲ್ಲಿದ್ದಲು ಸಚಿವರು ತೋರಿದ ಅಸಮ್ಮತಿಯೇ ಕಾರಣ ಎಂದು ದೂರಿದ್ದರು.
ಮಧ್ಯಪ್ರವೇಶ: ಸರ್ಕಾರ ಭ್ರಷ್ಟರ ತನಿಖೆಯಲ್ಲಿ ಹೇಗೆ ಮಧ್ಯಪ್ರವೇಶಿಸುತ್ತದೆ ಎನ್ನುವುದನ್ನೂ ಪಾರಖ್ ತಮ್ಮ ಪತ್ರದಲ್ಲಿ ಬಹಿರಂಗಪಡಿಸಿದ್ದರು. ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿ.ನ ಮುಖ್ಯಸ್ಥ ಎಂ.ಕೆ. ಥಾಪರ್ ವಿರುದ್ಧ ಸಿಬಿಐ ಭ್ರಷ್ಟಾಚಾರ ಕಾಯ್ದೆ, ವಂಚನೆ ಮತ್ತು ಕ್ರಿಮಿನಲ್ ಸಂಚು ಆರೋಪದಡಿ ಪ್ರಕರಣ ದಾಖಲಿಸಲು ಉದ್ದೇಶಿಸಿತ್ತು.
ಥಾಪರ್ ವಿರುದ್ಧ 'ರೆಗ್ಯುಲರ್ ಕೇಸ್' ದಾಖಲಿಸಲು ನಾನು ಅನುಮತಿ ನೀಡಿದ್ದೆ. ಆದರೆ, ಈ ಸಲಹೆಗೆ ಕಲ್ಲಿದ್ದಲು ಸಚಿವರು ಒಪ್ಪಿಗೆ ನೀಡಲೇ ಇಲ್ಲ. ಇದರಿಂದ ಕೋಲ್ ಇಂಡಿಯಾ ಲಿ.ನ ಅಧಿಕಾರಿಗಳಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ರಾಜಕಾರಣಿಗಳ ಜತೆಗೆ ಉತ್ತಮ ಸಂಬಂಧ ಹೊಂದಿದ್ದರೆ ಏನೇ ತಪ್ಪು ಮಾಡಿದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು ಎನ್ನುವ ಭಾವನೆ ಬೆಳೆಯುತ್ತದೆ ಎಂದು ಪಾರಖ್ ಅಭಿಪ್ರಾಯಪಟ್ಟಿದ್ದರು.
ಇದೇ ವೇಳೆ, ರಾಜಕೀಯ ನಾಯಕರ ಆದೇಶಕ್ಕೂ ಕಿಮ್ಮತ್ತು ನೀಡುತ್ತಿಲ್ಲ ಎನ್ನುವ ಸೊರೇನ್ ಆರೋಪವನ್ನು ಪಾರಖ್ ಒಪ್ಪಿಕೊಂಡಿದ್ದಾರೆ. ಸಾರ್ವಜನಿಕರ ಹಿತಾಸಕ್ತಿ ಕಡೆಗಣಿಸಿ ವೈಯಕ್ತಿಕ ಹಿತಾಸಕ್ತಿಯನ್ನು ಹೇರಲು ಹೊರಟಾಗ ರಾಜಕೀಯ ನಾಯಕರ ಆದೇಶ ಧಿಕ್ಕರಿಸಿದ್ದೇನೆ ಎಂದಿದ್ದಾರೆ ಪಾರಖ್. ಆದರೆ, ಒಬ್ಬ ಕಾರ್ಯದರ್ಶಿಯಾಗಿ ಯಾವುದು ಸರಿ, ಯಾವುದು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ್ದು ಎಂಬುದನ್ನು ಸಚಿವರಿಗೆ ಸಲಹೆ ನೀಡುವ ಅಧಿಕಾರ ನನಗಿದೆ. ಆದರೆ, ಇದನ್ನು ಸ್ವೀಕರಿಸುವುದು, ಬಿಡುವುದು ಸಚಿವರಿಗೆ ಬಿಟ್ಟ ವಿಚಾರ ಎಂದು ಪಾರಖ್ ತಿಳಿಸಿದ್ದಾರೆ.
ಪ್ರಧಾನಿಗೆ ಅಸೋಚಾಂ ಪತ್ರ
ಕಲ್ಲಿದ್ದಲು ಹಗರಣದಲ್ಲಿ ಖ್ಯಾತ ಉದ್ದಿಮೆದಾರರ ಹೆಸರು ಎಳೆದುತರುವುದಕ್ಕೆ ಉದ್ಯಮ ಗುಂಪು ಅಸೋಚಾಂ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಅಸಾಚೋಂ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಖಾರವಾದ ಪತ್ರ ಬರೆದಿದೆ. ಈ ರೀತಿಯ ಪ್ರಕರಣಗಳಲ್ಲಿ ಪ್ರಧಾನಿ ಸಿಂಗ್ ಮಧ್ಯಪ್ರವೇಶಿಸುವಂತೆ ಆಗ್ರಹಿಸಿದೆ.
'ಸಾರ್ವಜನಿಕ ಹಿತಾಸಕ್ತಿ'ಉದ್ದೇಶ ಇರಲಿಲ್ಲ!
ಹಿಂಡಾಲ್ಕೋ ಕಂಪನಿಗೆ ಕಲ್ಲಿದ್ದಲು ಬ್ಲಾಕ್ ಹಂಚಿಕೆ ಮಾಡದಿರುವ ನಿಲುವನ್ನು ಬದಲಾಯಿಸುವಾಗ ಪಾರಖ್ ಅವರಿಗೆ ಯಾವುದೇ ಸಾರ್ವಜನಿಕ ಹಿತಾಸಕ್ತಿ ಉದ್ದೇಶ ಇರಲಿಲ್ಲ. ತಮ್ಮ ನಿಲುವು ಬದಲಾವಣೆಗೆ ಸಂಬಂಧಿಸಿ ನೀಡಿದ ಟಿಪ್ಪಣಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಉಲ್ಲೇಖ ಮಾಡಿಲ್ಲ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಪಾರಖ್ಗೆ ಚತುರ್ವೇದಿ ಬೆಂಬಲ
ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಸಿಬಿಐ ಎಫ್ಐಆರ್ನಲ್ಲಿ ಹೆಸರಿಸಲ್ಟಟ್ಟಿರುವ ಪಾರಖ್ ಅವರಿಗೆ ಸಚಿವ ಸಂಪುಟದ ನಿವೃತ್ತಿ ಕಾರ್ಯದರ್ಶಿ ಬಿ.ಕೆ. ಚತುರ್ವೇದಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಾರಖ್ ಅವರೊಬ್ಬ ನಿಷ್ಠಾವಂತ ಅಧಿಕಾರಿ. ಇದೇ ಕಾರಣಕ್ಕೆ ಅವರು ನಿವೃತ್ತಿಯ ವರೆಗೆ ಅದೇ ಸಚಿವಾಲಯದಲ್ಲಿ ಮುಂದುವರಿದರು. ಅವರ ವರ್ಗಾವಣೆಗೆ ಕೆಲವರು(ಶಿಬು ಸೊರೇನ್) ಪ್ರಯತ್ನಿಸಿದ್ದರು. ಆರೋಪವನ್ನೂ ಮಾಡಿದ್ದರು. ಆದರೆ ಅದು ನಿಜವೆಂದು ಸಾಬೀತಾಗದ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆ ಮಾಡಲಿಲ್ಲ ಎಂದು ಸದ್ಯ ಯೋಜನಾ ಆಯೋಗದ ಸದಸ್ಯರಾಗಿರುವ ಚತುರ್ವೇದಿ ತಿಳಿಸಿದ್ದಾರೆ.
ಕಡತ ಹಸ್ತಾಂತರ
ಹಿಂಡಾಲ್ಕೋ ಕಂಪನಿಗೆ ಸಂಬಂಧಿಸಿದ ಕಡತವನ್ನು ಪ್ರಧಾನಿ ಸಿಂಗ್ ಕಾರ್ಯಾಲಯ (ಪಿಎಂಒ)ಶುಕ್ರವಾರ ಸಿಬಿಐಗೆ ಹಸ್ತಾಂತರಿಸಿದೆ. ಹಿಂಡಾಲ್ಕೋ ಕಂಪನಿಗೆ ಕಲ್ಲಿದ್ದಲು ಹಂಚಿಕೆ ಮಾಡಿದ ಕಡತಗಳನ್ನು ಸಿಬಿಐ ಕೇಳಿತ್ತು. ಅದನ್ನೀಗ ನಾವು ಹಸ್ತಾಂತರಿಸಿದ್ದೇವೆ ಎಂದು ಪಿಎಂಒ ತಿಳಿಸಿದೆ. ಅಲ್ಲದೆ, ಹಿಂಡಾಲ್ಕೋ ಕಂಪನಿಗೆ ಕಲ್ಲಿದ್ದಲು ಹಂಚಿಕೆಗೆ ಸಂಬಂಧಿಸಿದ ಯಾವುದೇ ಮಾಹಿತಿ ನೀಡಲು ಸಿದ್ಧ ಎಂದು ಪಿಎಂಒ ಹೇಳಿದೆ.
- ಸಂಸದರ ವಿರುದ್ಧವೂ ಆರೋಪ
ಸೊರೇನ್ ಆರೋಪಕ್ಕೆ ಸಂಸದರ ಬೆಂಬಲವೂ ಇದೆ ಎನ್ನುವ ಆರೋಪಕ್ಕೂ ಸ್ಪಷ್ಟನೆ ನೀಡಿರುವ ಪಾರಖ್, ಸಂಸದರ ಸಹಿಯನ್ನು ಕೂಡ ಖರೀದಿಸಬಹುದು ಎಂದು ಹೇಳಿದ್ದಾರೆ. 'ನಾನು ಇದು ನಿಜವಾಗದಿರಲೆಂದು ಬಯಸುತ್ತೇನೆ. ಆದರೆ, ಕಳೆದೊಂದು ವರ್ಷದಿಂದ ಕಲ್ಲಿದ್ದಲು ಸಚಿವಾಲಯದಲ್ಲಿ ಕೆಲಸ ಮಾಡಿದ ಅನುಭವವು ಇದು ನಿಜ ಎನ್ನುವ ಭಾವನೆ ನನ್ನಲ್ಲಿ ಮೂಡಿಸಿದೆ' ಎಂದು ಪಾರಖ್ ತಿಳಿಸಿದ್ದಾರೆ.
ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿ ಸಿಬಿಐ ವಿಚಾರಣೆಗೆ ಸಿದ್ಧ ಎಂದು ಪ್ರಧಾನಿ ಮನಮೋಹನ ಸಿಂಗ್ ಹೇಳಿರುವುದರಲ್ಲಿ ಯಾವುದೇ ಅರ್ಥ ಇಲ್ಲ. ಯಾಕೆಂದರೆ ಸಿಬಿಐ ಮೇಲೆ ಪ್ರಧಾನಿ ಕಾರ್ಯಾಲಯದ ನಿಯಂತ್ರಣವಿದೆ. ಸಿಂಗ್ ಅವರು ಅಧಿಕಾರದಿಂದ ಕೆಳಗಿಳಿದು ವಿಚಾರಣೆಗೆ ಹಾಜರಾಗಬೇಕು. ಆಗ ಮಾತ್ರ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯ.
- ಯಶವಂತ್ ಸಿನ್ಹಾ, ಬಿಜೆಪಿ ಮುಖಂಡ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.