ಭಟ್ಕಳಕ್ಕೆ ಎನ್‌ಐಎ ತಂಡ ಹಠಾತ್ ಭೇಟಿ, ಪರಿಶೀಲನೆ
ಭಟ್ಕಳ: ರಾಷ್ಟ್ರೀಯ ತನಿಖಾದಳದವರು ಗುರುವಾರ ಭಟ್ಕಳಕ್ಕೆ 2ನೇ ಬಾರಿಗೆ ಹಠಾತ್ ಭೇಟಿ ನೀಡಿ, ಯಾಸಿನ್‌ನೊಂದಿಗೆ ನಂಟು ಹೊಂದಿರುವ ಕೆಲವರ ಮಾಹಿತಿ ಕಲೆ ಹಾಕಿ ಪುನಃ ಶುಕ್ರವಾರದಂದು ವಾಪಸ್ ತೆರಳಿದ್ದಾರೆ.
ಯಾಸೀನ್ ಭಟ್ಕಳ್ ಬಂಧನದಿಂದ ತೀವ್ರ ಯಶಸ್ಸು ಸಾಧಿಸಿರುವ ತನಿಖಾದಳ ಆತನೊಂದಿಗೆ ಭಟ್ಕಳದವರ ನಂಟು ಇತ್ತು ಎನ್ನುವ ಬಗ್ಗೆ ತನಿಖೆ ವೇಳೆಯಲ್ಲಿ ಮಾಹಿತಿ ಕಲೆ ಹಾಕಿದ್ದಾರೆ. ಡಿವೈಎಸ್ಪಿ ಮಂಡ್ಲಿ ನೇತೃತ್ವದ ತನಿಖಾ ತಂಡ ರಿಯಾಜ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್ ಅವರು ಭಟ್ಕಳ ಮೂಲದವರೇ ಆಗಿದ್ದರಿಂದ ಅವರೂ ಈತನೊಂದಿಗೆ ನಂಟು ಹೊಂದಿದ್ದಾರೆ ಎಂಬುವುದರ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದಾರೆ. ಮಗ್ದುಮ್ ಕಾಲೋನಿಯಲ್ಲಿರುವ ಯಾಸೀನ್ ಭಟ್ಕಳ್‌ನ ಮನೆಗೆ ಭೇಟಿ ನೀಡಿ, ಮನೆ ಸದಸ್ಯರೊಂದಿಗೆ ಯಾಸಿನ್‌ನ ಚಲನವಲನದ ಕುರಿತು ಮಾಹಿತಿ ಕಲೆ ಹಾಕಿದ ಎನ್‌ಐಎ ತಂಡ ಕೆಲವು ಸೂಕ್ಷ್ಮ ವಿಚಾರಗಳನ್ನೂ ಮನೆ ಸದಸ್ಯರೊಂದಿಗೆ ಚರ್ಚಿಸಿ ಖಚಿತಪಡಿಸಿಕೊಂಡಿದೆ. ಪುನಃ ತೆಂಗಿನಗುಂಡಿ ಕ್ರಾಸ್ ಬಳಿಯಲ್ಲಿರುವ ರಿಯಾಜ್ ಭಟ್ಕಳ್ ಹಾಗೂ ಇಕ್ಬಾಲ್ ಭಟ್ಕಳ್‌ನ ಮನೆ ಹಾಗೂ ಅವರ ಸಂಬಂಧಿಗಳ ಮನೆಗೆ ತೆರಳಿ ಅಲ್ಲಿಯೂ ಯಾಸಿನ್ ಮತ್ತು ರಿಯಾಜ್ ಭಟ್ಕಳ್ ಇವರ ಸಂಬಂಧಗಳ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿರುವ ಎನ್‌ಐಎ ತಂಡ ಹೆಚ್ಚಿನ ಮಾಹಿತಿಗಾಗಿ ಉಡುಪಿ ಮತ್ತು ಮಂಗಳೂರು ಕಡೆ ಪ್ರಯಾಣ ಬೆಳೆಸಿದ್ದಾರೆಂದು ತಿಳಿದು ಬಂದಿದೆ.