ಬಿಐಎಎಲ್‌ನಲ್ಲಿ ಟ್ಯಾಕ್ಸಿ ಚಾಲಕರ ಪ್ರತಿಭಟನೆ
ಬೆಂಗಳೂರು: ಟ್ಯಾಕ್ಸಿ ಚಾಲಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದು, ರು. 10 ಲಕ್ಷ ಪರಿಹಾರ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸಿಬ್ಬಂದಿ ಸೂಕ್ತ ಸಮಯಕ್ಕೆ ಆ್ಯಂಬುಲೆನ್ಸ್ ನೀಡದಿರುವುದನ್ನು ಖಂಡಿಸಿ ಚಾಲಕರು ಟ್ಯಾಕ್ಸಿ ಬಂದ್ ಮಾಡಿ ಪ್ರತಿಭಟಿಸಿದ್ದರಿಂದಾಗಿ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರು ಪರದಾಡುವಂತಾಯಿತು.
ಬಿಐಎಎಲ್ ತಾರತಮ್ಯ ನೀತಿ ಖಂಡಿಸಿ 500ಕ್ಕೂ ಹೆಚ್ಚು ಟ್ಯಾಕ್ಸಿ ಚಾಲಕರು ವಿಮಾನ ನಿಲ್ದಾಣದ ಆವರಣದಲ್ಲೇ ರಾತ್ರಿ ಸುಮಾರು 11 ಗಂಟೆವರೆಗೂ ಪ್ರತಿಭಟನೆ ಮುಂದುವರಿಸಿದ್ದರಿಂದಾಗಿ ತೀವ್ರ ಗೊಂದಲದ ವಾತಾವರಣ ಉಂಟಾಗಿತ್ತು. ಮಧ್ಯಾಹ್ನ ಸುಮಾರು 12.30ಕ್ಕೆ ಆರಂಭವಾದ ಪ್ರತಿಭಟನೆ ರಾತ್ರಿ ಬಹುಹೊತ್ತಿನವರೆಗೂ ಮುಂದುವರಿದಿದ್ದರಿಂದ ವಿಮಾನದಲ್ಲಿ ಆಗಮಿಸಿದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.
ಕೆಲವರು ಬಿಎಂಟಿಸಿ ಓಲ್ವೋ ಬಸ್‌ನಲ್ಲಿ ಸಂಚರಿಸಿದರೆ ಕೆಲವರು ಟ್ಯಾಕ್ಸಿಗಾಗಿ ಕಾದು ಕುಳಿತಿದ್ದರು.
ಭಾನುವಾರ ಬೆಳಿಗ್ಗೆ 10.45ರ ಸುಮಾರಿಗೆ ಮೆರು ಕ್ಯಾಬ್ ಚಾಲಕ ಮಾರುತಿ ಪ್ರಸನ್ನ (38) ತೀವ್ರ ಹೃದಯಾಘಾತವಾಗಿ ಕುಸಿದು ಬಿದ್ದರು. ಸಹ ಚಾಲಕರು ತಕ್ಷಣ ಬಿಐಎಎಲ್ ಆ್ಯಂಬುಲೆನ್ಸ್‌ಗೆ ಕರೆಮಾಡಿದರೂ ಸಿಬ್ಬಂದಿ ಆ್ಯಂಬುಲೆನ್ಸ್ ಕಳುಹಿಸಲಿಲ್ಲ. ತೀವ್ರ ಒತ್ತಾಯದ ನಂತರ ಸುಮಾರು 45 ನಿಮಿಷ ತಡವಾಗಿ ಆ್ಯಂಬುಲೆನ್ಸ್ ಕಳುಹಿಸಲಾಯಿತು. ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಮಾರುತಿ ಪ್ರಸನ್ನ ಅವರು ಮೃತಪಟ್ಟರು. ಇದರಿಂದ ಕುಪಿತರಾದ ಚಾಲಕರು ಪ್ರತಿಭಟನೆಗಿಳಿದರು.
ಮೂಲತಹ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯವರಾದ ಮಾರುತಿ ಪ್ರಸನ್ನ ಅವರು ಕಳೆದ ಕೆಲ ತಿಂಗಳುಗಳಿಂದ ಮೆರು ಕ್ಯಾಬ್‌ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಬಿಐಎಎಲ್ ಅಧಿಕಾರಿಗಳು ಇಲ್ಲಿ ಕ್ಯಾಬ್ ಚಾಲಕರಿಗೆ ನೀರು, ಶೌಚಾಲಯ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯ ಒದಗಿಸಿಲ್ಲ. ಕರೆ ಮಾಡಿದ ತಕ್ಷಣ ಆ್ಯಂಬುಲೆನ್ಸ್ ನೀಡಿದ್ದರೆ ಮಾರುತಿ ಪ್ರಸನ್ನ ಅವರು ಬದುಕುವ ಸಾಧ್ಯತೆ ಇತ್ತು ಎಂದು ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮಾರುತಿ ಪ್ರಸನ್ನ ಅವರ ಸಾವಿಗೆ ನೇರವಾಗಿ ಬಿಐಎಎಲ್ ಅಧಿಕಾರಿಗಳೇ ಹೊಣೆ ಎಂದು ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಸಂಘಟನೆ ಕಾರ್ಯದರ್ಶಿ ರಾಧಾಕೃಷ್ಣ ಹೊಳ್ಳ ಆರೋಪಿಸಿದರು.
ಆಗ್ನೇಯ ಡಿಸಿಪಿ ಸುರೇಶ್ ಮಾತನಾಡಿ, ಮಾರುತಿ ಪ್ರಸನ್ನ ಅವರದ್ದು ಸಹಜ ಸಾವು.
ಆದರೆ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ನೀಡಿಲ್ಲ ಎಂಬ ಕಾರಣಕ್ಕೆ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತು ಯಾರೂ ಕೂಡ ಪೊಲೀಸರಿಗೆ ದೂರು ನೀಡಿಲ್ಲ. ಆದರೆ ಸೂಕ್ತ ಪರಿಹಾರ ಕೇಳುತ್ತಿದ್ದಾರೆ ಎಂದು ಹೇಳಿದರು.
ಮಾರುತಿ ಪ್ರಸನ್ನ ಕುಟುಂಬದವರಿಗೆ ಮೆರು ಕ್ಯಾಬ್ ಸಂಸ್ಥೆ ಎರಡು ಲಕ್ಷ ಪರಿಹಾರ ನೀಡಲು ಒಪ್ಪಿಕೊಂಡಿದೆ.
ಆದರೆ ಚಾಲಕರು 10 ಲಕ್ಷ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ಅವರು ತಿಳಿಸಿದರು.