ವಿಧವಾ ಪೂಜಾರಿಗಳು ನಾಪತ್ತೆ
ಇತ್ತೀಚಿನ ದಿನಗಳಲ್ಲೇ ಅತ್ಯಂತ ಹೆಚ್ಚು ಪ್ರಚಾರ ಗಳಿಸಿದ ದೊಡ್ಡ ಕ್ರಾಂತಿಯೊಂದರ ಭ್ರಾಂತಿ ಕಳಚಿದೆ. ಮಂಗಳೂರಿನ ಕುದ್ರೋಳಿ...
ಕನ್ನಡಪ್ರಭ ವಾರ್ತೆ , ಬೆಂಗಳೂರು , ಅ.27
ಇತ್ತೀಚಿನ ದಿನಗಳಲ್ಲೇ ಅತ್ಯಂತ ಹೆಚ್ಚು ಪ್ರಚಾರ ಗಳಿಸಿದ ದೊಡ್ಡ ಕ್ರಾಂತಿಯೊಂದರ ಭ್ರಾಂತಿ ಕಳಚಿದೆ.
ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನೇಮಕಗೊಂಡಿದ್ದ 'ವಿಧವಾ ಪೂಜಾರಿ'ಗಳು ಈಗ ಅಲ್ಲಿ ಕಾಣುತ್ತಲೇ ಇಲ್ಲ!
ವಿಧವೆಯರನ್ನು ಅರ್ಚಕರನ್ನಾಗಿ ನೇಮಕ ಮಾಡುವ ಮೂಲಕ ಅತ್ಯಂತ ದೊಡ್ಡ ಕ್ರಾಂತಿ ಮಾಡಲಾಗಿದೆ ಎಂದೇ ಬಿಂಬಿಸಲಾಗಿತ್ತು. ಕುದ್ರೋಳಿ ದೇವಸ್ಥಾನದಲ್ಲಿ ಇದೇ ಮೊದಲ ಬಾರಿಗೆ ವಿಧವೆಯರಿಗೆ ಅರ್ಚಕರಾಗುವ ಅವಕಾಶ ನೀಡುವ ಮೂಲಕ ಮಹಿಳೆಯರ ಮೇಲಿನ ದೌರ್ಜನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ ಎಂದು ಜನಾರ್ದನ ಪೂಜಾರಿ ಘೋಷಿಸಿದ್ದರು. ಆದರೆ 20 ದಿನಗಳಲ್ಲಿ ಹೆಜ್ಜೆ ತಪ್ಪಿಹೋಗಿದೆ!
ಆರಂಭದಲ್ಲಿ ಅಂದರೆ, ಮೊದಲ ದಿನ (ಅ.6ರಂದು) ವಿಧವಾ ಅರ್ಚಕರಿಗೆ ಮುಖ್ಯ ದೇವರ ಪೂಜೆ ಮಾಡಲು ಅವಕಾಶ ನೀಡಲಾಗಿತ್ತು. ಫೋಟೊ, ವೀಡಿಯೋ ಎಲ್ಲಾ ನಡೆಯಿತು. ತೀರ್ಥ, ಪ್ರಸಾದ ವಿತರಣೆಯೂ ಅವರದ್ದೇ. ಜನಾರ್ದನ ಪೂಜಾರಿ ಅವರೂ ಆ ಅರ್ಚಕರಿಂದ ಪ್ರಸಾದ ಸ್ವೀಕರಿಸಿದ್ದೂ ಆಯಿತು.
ಆದರೆ 2ನೇ ದಿನದಿಂದ ಇಬ್ಬರೂ ವಿಧವಾ ಅರ್ಚಕರನ್ನು ದತ್ತಾತ್ರೇಯ, ಸಾಯಿಬಾಬಾ ಮತ್ತು ನಾರಾಯಣ ಗುರುಗಳ ಮೂರ್ತಿಗೆ ಪೂಜೆ ಮಾಡಲು ಮಾತ್ರ ಸೀಮಿತಗೊಳಿಸಲಾಗಿತ್ತು. ಅಲ್ಲಿ ತೀರ್ಥ- ಪ್ರಸಾದ ವಿತರಣೆಗೆ ಮಾತ್ರ ಅವರನ್ನು ಕೂರಿಸಲಾಗುತ್ತಿತ್ತು. ಈಗ ಒಂದು ವಾರದಿಂದ ವಿಧವಾ ಪೂಜಾರಿಗಳು ಕುದ್ರೋಳಿ ದೇವಸ್ಥಾನದ ಅವರಣದಲ್ಲೇ ಕಾಣುತ್ತಿಲ್ಲ!
ಆಡಳಿತ ಮಂಡಳಿಯಲ್ಲಿ ಅಸಮಾಧಾನ: ಅರ್ಚಕರಾಗಿ ನೇಮಕಗೊಂಡಿದ್ದ ಲಕ್ಷ್ಮಿ ಶಾಂತಿ ಮತ್ತು ಇಂದಿರಾ ಶಾಂತಿ ಅವರು ಸಂಪೂರ್ಣವಾಗಿ ಅಥವಾ ಸಾಂಪ್ರದಾಯಿಕವಾಗಿ ಪೂಜೆ ಮಾಡುವುದನ್ನು ಮತ್ತು ಮಂತ್ರಗಳನ್ನು ಕಲಿತವರಲ್ಲ. ಇದರಿಂದಾಗಿ ಅವರು ಭಕ್ತಿಯಿಂದ ಪೂಜೆ ಮಾಡಬಲ್ಲವರಾಗಿದ್ದರೇ ಹೊರತು, ಮಂತ್ರ ಪಠಿಸಲು ಮತ್ತು ಪೂಜಾ ವಿಧಿ ವಿಧಾನಗಳನ್ನು ಪೂರೈಸಲು ಸಮರ್ಥರಾಗಿರಲಿಲ್ಲ. ಇದರಿಂದ ಅವರಿಗೇ ಕೊಂಚ ಹಿಂಜರಿಕೆ ಮತ್ತು ಇರಿಸುಮುರುಸಾಗುತ್ತಿತ್ತು ಎಂದು ಕುದ್ರೋಳಿ ದೇವಸ್ಥಾನಕ್ಕೆ ಸದಾ ಭೇಟಿ ನೀಡುವ ಭಕ್ತರೊಬ್ಬರು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದ್ದಾರೆ.
ಜನಾರ್ದನ ಪೂಜಾರಿ ಅವರು 'ಮಂತ್ರ ಮುಖ್ಯವಲ್ಲ. ಭಕ್ತಿ ಮುಖ್ಯ' ಎಂದು ಹೇಳಿರಬಹುದು. ಆದರೆ ದೇವಸ್ಥಾನಕ್ಕೆ ಬರುವ ಭಕ್ತರೆಲ್ಲರೂ ಅದೇ ಮನೋಭಾವ ಹೊಂದಿರುವುದಿಲ್ಲ. ಇದು ಕೂಡ ವಿಧವಾ ಅರ್ಚಕರಿಗೆ ಒತ್ತಡ ಉಂಟುಮಾಡಿತ್ತು.
ದೇವಸ್ಥಾನದಲ್ಲಿ ವಿಧವಾ ಅರ್ಚಕರನ್ನು ನೇಮಿಸುವುದಾಗಿ ಜನಾರ್ದನ ಪೂಜಾರಿ ಅವರು ಮಾಧ್ಯಮಗಳ ಮುಂದೆ ಘೋಷಿಸಿ ಬಿಟ್ಟಿದ್ದರು. ಆದರೆ ಈ ಬಗ್ಗೆ ಅವರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರ ಜತೆ ಚರ್ಚಿಸಿಯೇ ಇರಲಿಲ್ಲ. ಇದು ದೇವಸ್ಥಾನದ ಆಡಳಿತ ಮಂಡ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಅಸಮಾಧಾನ, ಮೊದಲೇ ದೇವಸ್ಥಾನದಲ್ಲಿದ್ದ ಅರ್ಚಕರ ಅಸಹಕಾರ, ಮೊದಲಿನಿಂದ ನಂಬಿಕೊಂಡು ಬಂದ ಪದ್ಧತಿಗಳು ಇವೆಲ್ಲ ವಿಧವಾ ಅರ್ಚಕರ ಪದ್ಧತಿಯ ವಿರುದ್ಧವಾಗಿದ್ದವು.
ಇದೆಲ್ಲ ಕಾರಣಗಳು ಒಟ್ಟಗೂಡಿ ವಿಧವಾ ಅರ್ಚಕರು ಕುದ್ರೋಳಿ ದೇವಸ್ಥಾನ ತೊರೆದಿರಬಹುದು ಎಂಬ ಅನುಮಾನವಿದೆ. ವಿಧವಾ ಅರ್ಚಕರು ಒಂದು ವಾರದಿಂದ ದೇವಸ್ಥಾನದಲ್ಲಿ ಕೆಲಸ ನಿರ್ವಹಿಸದೇ ಇರುವುದನ್ನು ದೇವಸ್ಥಾನ ಆಡಳಿತ ಮಂಡಳಿ ಮೂಲಗಳು ಕೂಡ ದೃಢಪಡಿಸಿವೆ.
-ವಿನಾಯಕ ಭಟ್ಟ ಮೂರೂರು